ಭಾರತದ ನಡೆಗೆ ತತ್ತರಿಸಿದ ಚೀನಾ: ಇದು ಸರಿಯಲ್ಲ ಎಂದು ಅರಚಾಟ!

ಭಾರತದಲ್ಲಿ ಚೀನಾದ ಎಫ್‌ಡಿಐಗೆ ಸರ್ಕಾರದ ಬ್ರೇಕ್‌| ಇನ್ನೇನಿದ್ದರೂ ಕೇಂದ್ರದ ಅನುಮತಿ ಪಡೆದೇ ಚೀನಾ ಹೂಡಿಕೆ ಮಾಡಬೇಕು| ದೇಶದ ಆರ್ಥಿಕ ಕುಸಿತದ ಲಾಭ ಚೀನಾ ಪಡೆಯದಂತೆ ಮಾಡಲು ಈ ಕ್ರಮ| ಭಾರತದ ನಡೆಗೆ ಚೀನಾ ಆಕ್ರೋಶ

China Slams India New FDI Rules Calls It Discriminatory

ನವದೆಹಲಿ(ಏ.20): ಕೊರೋನಾ ವೈರಸ್‌ ಸಮಸ್ಯೆಯಿಂದಾಗಿ ಭಾರತದ ಆರ್ಥಿಕತೆ ಹಿಂಜರಿಕೆಯಲ್ಲಿರುವುದರಿಂದ ಚೀನಾ ಇದರ ಲಾಭ ಪಡೆಯಲು ಯತ್ನಿಸಬಹುದೆಂಬ ಕಾರಣಕ್ಕೆ ಕೇಂದ್ರ ಸರ್ಕಾರ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ನೀತಿಯನ್ನೇ ಬದಲಿಸಿದೆ. ಹೀಗಿರುವಾಗ ಭಾರತದ ಈ ನಡೆಯಿಂದ ಚಡಪಡಿಸುತ್ತಿರುವ ಚೀನಾ, ಈ ನಡೆಯನ್ನು ಖಂಡಿಸಿದೆ. ಅಲ್ಲದೇ ಭಾರತದ ಈ ನಿರ್ಧಾರ ವಿಶ್ವಸಂಸ್ಥೆಯ ನಿಯಮಗಳ ವಿರುದ್ಧವಾಗಿದೆ ಎಂದಿದ್ದಾರೆ.

ಚೀನಾಗೆ ಕೇಂದ್ರದ ಶಾಕ್: ಭಾರತದಲ್ಲಿ ಹೂಡಿಕೆಗೆ ಬ್ರೇಕ್!

ದೆಹಲಿಯಲ್ಲಿರುವ ಚೀನಾದ ರಾಯಭಾರಿ ಕಚೇರಿಯ ವಕ್ತಾರ ಜೀ ರಾಂಗ್‌ ಈ ಸಂಬಂಧ ನೀಡಿರುವ ಹೇಳಿಕೆಯಲ್ಲಿ ಭಾರತ ಇಂತಹ ಭೇದ ಭಾವದ ನೀತಿಯನ್ನು ಹಿಂಪಡೆಯುತ್ತದೆ ಅಥವಾ ಬದಲಾಯಿಸುತ್ತದೆ.  ಈ ಮೂಲಕ ವಿವಿಧ ದೇಶಗಳ ಹೂಡಿಕೆ ವಿಚಾರವಾಗಿ ಒಂದೇ ರೀತಿಯಾಗಿ ಪರಿಗಣಿಸುತ್ತದೆ ಎಂಬ ಆಶಾಭಾವ ಇದೆ ಎಂದಿದ್ದಾರೆ. ಅಲ್ಲದೇ ಭಾರತ ಹೇರಿರುವ ಈ ತಡೆ ವಿಶ್ವಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿದೆ ಹಾಗೂ ಜಿ-20ರ ಸಾಮಾನ್ಯ ಒಪ್ಪಂದದ ವಿರುದ್ಧವಾಗಿದೆ ಎಂದಿದ್ದಾರೆ.

ಅಲ್ಲದೇ ಕಂಪನಿಗಳು ಎಲ್ಲಿ ಹೂಡಕೆ ಮಾಡುತ್ತವೆ ಎಂಬುವುದು ಅಲ್ಲಿನ ಉದ್ಯಮದ ವಾತಾವರಣ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿರುತ್ತದೆ. ಕೊರೋನಾ ವೈರಸ್‌ನಿಂದ ನಿರ್ಮಾಣವಾಗಿರುವ ಕೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ದೇಶಗಳು ಒಂದಾಗಿ ಶ್ರಮಿಸಬೇಕು ಎಂದಿದ್ದಾರೆ.

ಚೀನಾ ಹೂಡಿಕೆ ಭಾರತದಲ್ಲಿ ಉದ್ಯೋಗ ಹಾಗೂ ಅಭಿವೃದ್ಧಿಗೆ ಕಾರಣವಾಗಿದೆ. ನಮ್ಮ ಕಂಪನಿಗಳು ಕೊರೋನಾ ವಿರುದ್ಧ ಭಾರತ ಹೂಡಿರುವ ಸಮರದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಹಾಯ ಮಾಡಿವೆ. ಹೀಗಿರುವಾಗ ಭಾರತ ಇಂತ ಬೇದ ಭಾವ ಮಾಡುವುದು ಸರಿಯಲ್ಲ ಎಂಬುವುದು ಜೀ ರಾಂಗ್ ಮಾತಾಗಿದೆ.

ಭಾರತ ತಂದ ಬದಲಾವಣೆ ಏನು?

ಹೊಸ ನೀತಿಯ ಪ್ರಕಾರ, ಭಾರತದ ಜೊತೆಗೆ ಗಡಿ ಹಂಚಿಕೊಳ್ಳುವ ಯಾವುದೇ ದೇಶಗಳು ಇನ್ನುಮುಂದೆ ಭಾರತದ ಕಂಪನಿಗಳಲ್ಲಿ ನೇರವಾಗಿ ಬಂಡವಾಳ ಹೂಡಿಕೆ ಮಾಡುವಂತಿಲ್ಲ. ಬದಲಿಗೆ, ಕೇಂದ್ರ ಸರ್ಕಾರದ ಮೂಲಕವೇ ಹೂಡಿಕೆ ಮಾಡಬೇಕು. ಈ ನಿಯಮ ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್‌ ಹಾಗೂ ಮ್ಯಾನ್ಮಾರ್‌ಗೆ ಅನ್ವಯಿಸಲಿದೆ. ಈ ಹಿಂದೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಮಾತ್ರ ಭಾರತ ಈ ನಿರ್ಬಂಧ ವಿಧಿಸಿತ್ತು. ಈಗ ವಿಶೇಷವಾಗಿ ಚೀನಾವನ್ನು ಗಮನದಲ್ಲಿಟ್ಟುಕೊಂಡು ಭಾರತದ ಜೊತೆ ಗಡಿ ಹಂಚಿಕೊಳ್ಳುವ ಎಲ್ಲಾ ದೇಶಗಳಿಗೂ ವಿಸ್ತರಿಸಿದೆ.

ದೇಶದಲ್ಲಿ ಆರ್ಥಿಕ ಹಿಂಜರಿಕೆ ಇರುವುದರಿಂದ ಚೀನಾ ದೊಡ್ಡ ಪ್ರಮಾಣದಲ್ಲಿ ಇಲ್ಲಿನ ಕಂಪನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಿ, ನಂತರ ಈ ಕಂಪನಿಗಳನ್ನು ಪೂರ್ಣ ಪ್ರಮಾಣದಲ್ಲಿ ಕೈವಶ ಮಾಡಿಕೊಳ್ಳುವ ಅಪಾಯವಿದೆ. ಈ ಕುರಿತು ಸಣ್ಣ ಹಾಗೂ ಮಧ್ಯಮ ಗಾತ್ರದ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದ್ದವು. ಅದರಂತೆ ಕೇಂದ್ರ ಸರ್ಕಾರ ಶನಿವಾರ ನಿಯಮ ಬದಲಿಸಿ ಆದೇಶ ಹೊರಡಿಸಿದೆ.

ಭಾರತದಲ್ಲಿ ಚೀನಿ ಕಂಪನಿಗಳ ಹೂಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. 2014ರಲ್ಲಿ ಕೇವಲ 12,160 ಕೋಟಿ ರು. ಇದ್ದ ಚೀನಾದ ಹೂಡಿಕೆ ಈಗ ಸುಮಾರು 2 ಲಕ್ಷ ಕೋಟಿ ರು. ಆಗಿದೆ. ಇತ್ತೀಚೆಗಷ್ಟೆಚೀನಾದ ಪೀಪಲ್ಸ್‌ ಬ್ಯಾಂಕ್‌ ಭಾರತದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸುಮಾರು 3000 ಕೋಟಿ ರು. ಮೌಲ್ಯದ ಷೇರುಗಳನ್ನು ಖರೀದಿಸಿತ್ತು.

Latest Videos
Follow Us:
Download App:
  • android
  • ios