ಫೇರ್ ವರ್ಕ್ ಇಂಡಿಯಾ -2023 ರೇಟಿಂಗ್ಸ್ ಪ್ರಕಟ, ಬಿಗ್ ಬಾಸ್ಕೆಟ್ ಗೆ ಅಗ್ರ ಸ್ಥಾನ;ಓಲಾ, ಪೋರ್ಟರ್ ಗೆ ಶೂನ್ಯ ಅಂಕ
ಭಾರತದ ಡಿಜಿಟಲ್ ಪ್ಲಾಟ್ ಫಾರ್ಮ್ ಗಳು ತಾತ್ಕಾಲಿಕ ಉದ್ಯೋಗಿಗಳಿಗೆ ಸಂಬಂಧಿಸಿ ಅನುಸರಿಸುತ್ತಿರುವ ನೀತಿಗಳ ಕುರಿತು ಫೇರ್ ವರ್ಕ್ ಇಂಡಿಯಾ ಅಧ್ಯಯನ ನಡೆಸಿ ವರದಿ ಪ್ರಕಟಿಸಿದೆ. ಈ ಅಧ್ಯಯನದಲ್ಲಿ ಸಂಸ್ಥೆಗಳಿಗೆ ರೇಟಿಂಗ್ಸ್ ನೀಡಲಾಗಿದ್ದು, ಬಿಗ್ ಬಾಸ್ಕೆಟ್ ಮೊದಲ ಸ್ಥಾನ ಗಳಿಸಿದ್ದರೆ, ಓಲಾ ಹಾಗೂ ಪೋರ್ಟರ್ ಶೂನ್ಯ ಅಂಕ ಗಳಿಕೆ ಮೂಲಕ ಕೊನೆಯ ಸ್ಥಾನಗಳಲ್ಲಿವೆ.
ನವದೆಹಲಿ (ಅ.31): ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ತಾತ್ಕಾಲಿಕ ಉದ್ಯೋಗಿಗಳಿಗೆ (ಗಿಗ್ ವರ್ಕರ್ಸ್ ಗೆ) ಸಂಬಂಧಿಸಿ ಅನುಸರಿಸುತ್ತಿರುವ ಕಾರ್ಮಿಕ ನೀತಿಗಳ ಬಗ್ಗೆ ನಡೆದ ಅಧ್ಯಯನವೊಂದರಲ್ಲಿ ಓಲಾ ಹಾಗೂ ಪೋರ್ಟರ್ ಶೂನ್ಯಅಂಕ ಗಳಿಸಿವೆ. ಈ ವರದಿ ಅನ್ವಯ ಟಾಟಾ ಗ್ರೂಪ್ ಒಡೆತನದ ಬಿಗ ಬಾಸ್ಕೆಟ್ ಅತ್ಯಧಿಕ ಅಂಕ ಗಳಿಸುವ ಮೂಲಕ ನಂ.1 ಸ್ಥಾನದಲ್ಲಿದೆ. ಬಿಗ್ ಬಾಸ್ಕೆಟ್ 10ರಲ್ಲಿ 6 ಅಂಕಗಳನ್ನು ಗಳಿಸುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಫೇರ್ ವರ್ಕ್ ಇಂಡಿಯಾ ಎಂಬ ಸಂಸ್ಥೆ ಸ್ಥಳ ಆಧಾರಿತ ಸೇವೆಗಳನ್ನು ನೀಡುವ ಒಟ್ಟು 12 ಪ್ಲಾಟ್ ಫಾರ್ಮ್ ಗಳ ಕಾರ್ಮಿಕ ನೀತಿ, ನಿಯಮಗಳ ಕುರಿತು ಅಧ್ಯಯನ ನಡೆಸಿ ಈ ವರದಿ ಸಿದ್ಧಪಡಿಸಿದೆ. ಗೃಹ ಹಾಗೂ ವೈಯಕ್ತಿಕ ಕಾಳಜಿ, ಲಾಜಿಸ್ಟಿಕ್ಸ್, ಫುಡ್ ಡೆಲಿವರಿ ಹಾಗೂ ಸಾರಿಗೆಗೆ ಸಂಬಂಧಿಸಿ ಸೇವೆಗಳನ್ನು ನೀಡುವ ಪ್ಲಾಟ್‌ಫಾರ್ಮ್‌ಗಳ ಕಾರ್ಮಿಕ ನೀತಿಗಳನ್ನು ಫೇರ್ ವರ್ಕ್ ಇಂಡಿಯಾ ಸಂಸ್ಥೆ ಪರಿಶೀಲನೆ ನಡೆಸಿದೆ. ಬಹುತೇಕ ಡಿಜಿಟಲ್ ಪ್ಲಾಟ್ ಫಾರ್ಮ್ ಗಳು ತಾತ್ಕಾಲಿಕ ಉದ್ಯೋಗಿಗಳ ಕನಿಷ್ಠ ವೇತನ ನೀತಿಯನ್ನು ಪಾಲಿಸುತ್ತಿಲ್ಲ ಎಂದು ಈ ವರದಿ ತಿಳಿಸಿದೆ.
ಫೇರ್ ವರ್ಕ್ ಇಂಡಿಯಾ ಪರಿಶೀಲನೆ ನಡೆಸಿದ ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲಿ ಅಮೆಜಾನ್ ಫ್ಲೆಕ್ಸ್, ಬಿಗ್‌ಬಾಸ್ಕೆಟ್, ಬ್ಲೂಸ್ಮಾರ್ಟ್, ಡೊನ್ಜೊ, ಫ್ಲಿಪ್‌ಕಾರ್ಟ್, ಓಲಾ, ಪೋರ್ಟರ್, ಸ್ವಿಗ್ಗಿ, ಉಬರ್, ಅರ್ಬನ್ ಕಂಪನಿ, ಝೆಪ್ಟೋ ಮತ್ತು ಜೊಮ್ಯಾಟೋ ಸೇರಿವೆ. ಇವುಗಳಲ್ಲಿ ಕೇವಲ ಬಿಗ್ ಬಾಸ್ಕೆಟ್, ಫ್ಲಿಪ್ ಕಾರ್ಟ್ ಹಾಗೂ ಅರ್ಬನ್ ಕಂಪನಿ ಮಾತ್ರ ತಾತ್ಕಾಲಿಕ ಉದ್ಯೋಗಿಗಳ ಕನಿಷ್ಠ ವೇತನ ನೀತಿ ಪಾಲಿಸುತ್ತಿವೆ ಎಂದು ಈ ಅಧ್ಯಯನ ತಿಳಿಸಿದೆ. ಈ ಸಂಸ್ಥೆಗಳ ಉದ್ಯೋಗಿಗಳು ಗಂಟೆಗಳ ಆಧಾರದಲ್ಲಿ ಸ್ಥಳೀಯ ಕನಿಷ್ಠ ವೇತನ ಪಡೆಯುತ್ತಿದ್ದಾರೆ ಎಂದು ವರದಿ ಹೇಳಿದೆ. ಇತರ ಕಂಪನಿಗಳು ಈ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಹೇಳಿದೆ. ಅಲ್ಲದೆ, ಗಿಗ್ ಕೆಲಸಗಾರರಿಗೆ ಕನಿಷ್ಠ ವೇತನ ನೀಡುತ್ತಿರುವ ಬಗ್ಗೆ ಯಾವುದೇ ಪುರಾವೆಗಳು ಕೂಡ ಸಿಕ್ಕಿಲ್ಲ ಎಂದು ಹೇಳಿದೆ.
ಓಲಾದಿಂದ ಬೈಕ್ ಟ್ಯಾಕ್ಸಿ ಆರಂಭ: ಆಟೋ ಚಾಲಕರಲ್ಲಿ ನಷ್ಟದ ಭೀತಿ
ಇನ್ನು ಉದ್ಯೋಗಿಗಳ ಸುರಕ್ಷತೆ, ಆರೋಗ್ಯ ವಿಮೆ ಸೌಲಭ್ಯ ಸೇರಿದಂತೆ ಮೂಲಭೂತವಾದ ಸೌಲಭ್ಯಗಳನ್ನು ನೀಡುವ ವಿಚಾರಗಳಲ್ಲಿ ಕೂಡ ಏಕಸಾಮ್ಯತೆ ಇಲ್ಲ. ವಿವಿಧ ಪ್ಲಾಟ್ ಫಾರ್ಮ್ ಗಳ ನಡುವೆ ಈ ವಿಚಾರದಲ್ಲಿ ಅಂತರವಿದೆ ಎಂದು ವರದಿ ಹೇಳಿದೆ. ಇನ್ನು ಕಾರ್ಮಿಕರಿಗೆ ತಮ್ಮ ಹಕ್ಕುಗಳ ಸಂರಕ್ಷಣೆಗೆ ಸಂಬಂಧಿಸಿ ಯಾವುದೇ ಸಂಘಟನೆಗಳು ಇಲ್ಲ. ಹೀಗಾಗಿ ಅವರಿಗೆ ಸೂಕ್ತವಾದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ವರದಿ ತಿಳಿಸಿದೆ.
ಈ ವರ್ಷ ಯಾವುದೇ ಪ್ಲಾಟ್ ಫಾರ್ಮ್ 10ರಲ್ಲಿ 6ಕ್ಕಿಂತ ಅಧಿಕ ಅಂಕ ಗಳಿಸಿಲ್ಲ ಎಂದು ವರದಿ ತಿಳಿಸಿದೆ. ಬಿಗ ಬಾಸ್ಕೆಟ್ ಇತರ ಎಲ್ಲ ಪ್ಲಾಟ್ ಫಾರ್ಮ್ ಗಳಿಗಿಂತ ಅಧಿಕ ಅಂಕ ಗಳಿಸಿದೆ. 10ರಲ್ಲಿ 6 ಅಂಕಗಳನ್ನು ಬಿಗ್ ಬಾಸ್ಕೆಟ್ ಗಳಿಸಿದೆ. ಇನ್ನು ಬ್ಲೂಮಾರ್ಟ್, ಸ್ವಿಗ್ಗಿ, ಅರ್ಬನ್ ಕಂಪನಿ ಹಾಗೂ ಝೊಮ್ಯಾಟೋ 10ರಲ್ಲಿ 5 ಅಂಕಗಳನ್ನು ಗಳಿಸಿವೆ. ಇನ್ನು ಝೆಪ್ಟೋ 10ರಲ್ಲಿ 4 ಅಂಕಗಳನ್ನು ಗಳಿಸಿದ್ದರೆ, ಫ್ಲಿಪ್ ಕಾರ್ಟ್ 10ರಲ್ಲಿ 3, ಅಮೆಜಾನ್ ಫ್ಲೆಕ್ಸ್ 10ರಲ್ಲಿ 2, ಡುನ್ಜೋ ಹಾಗೂ ಊಬರ್ 10ರಲ್ಲಿ 1 ಅಂಕ ಗಳಿಸಿವೆ. ಇನ್ನು ಓಲಾ ಹಾಗೂ ಪೋರ್ಟರ್ ಶೂನ್ಯ ಅಂಕ ಗಳಿಸಿವೆ.
ನ್ಯಾಯಯುತ ವೇತನ, ನ್ಯಾಯಯುತ ವಾತಾವರಣ, ಒಪ್ಪಂದಗಳು, ನಿರ್ವಹಣೆ ಹಾಗೂ ಪ್ರಾತಿನಿಧ್ಯ ಎಂಬ ಐದು ಅಂಶಗಳನ್ನು ಆಧರಿಸಿ ಫೇರ್ ವರ್ಕ್ ಇಂಡಿಯಾ ಡಿಜಿಟಲ್ ಪ್ಲಾಟ್ ಫಾರ್ಮ್ ಗಳ ಮೌಲ್ಯಮಾಪನ ಮಾಡಿದೆ.