ನವದೆಹಲಿ(ಫೆ.01): ಕಳೆದೊಂದು ವರ್ಷದಿಂದ ಕೊರೋನಾಕ್ಕೆ ನಲುಗಿರುವ ದೇಶಕ್ಕೆ ಭರವಸೆಯ ಹೊಸ ಬೆಳಕು ತುಂಬಬಹುದು ಎಂಬ ನಂಬಿಕೆಯ ‘ಭರವಸೆಯ ಲಸಿಕೆ’ಯನ್ನು ಕೇಂದ್ರ ಸರ್ಕಾರ, ಸೋಮವಾರ ಮಂಡನೆ ಮಾಡಲಿರುವ ತನ್ನ ಬಜೆಟ್‌ನಲ್ಲಿ ನೀಡುವ ನಿರೀಕ್ಷೆ ಇದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ಬೆಳಗ್ಗೆ ತಮ್ಮ 3ನೇ ಬಜೆಟ್‌ ಮಂಡಿಸಲಿದ್ದಾರೆ. ಈ ಬಾರಿ ಹಿಂದೆಂದೂ ಕಂಡುಕೇಳರಿಯದ ಬಜೆಟ್‌ ಮಂಡಿಸುವುದಾಗಿ ಸ್ವತಃ ನಿರ್ಮಲಾ ಅವರೇ ಈಗಾಗಲೇ ಭರವಸೆ ನೀಡಿರುವ ಕಾರಣ, ಇಡೀ ದೇಶ ಅಂಥದ್ದೇ ಒಂದು ಕೌತುಕಕ್ಕಾಗಿ ಕಾದು ಕುಳಿತಿದೆ.

4 ದಶಕಗಳಲ್ಲೇ ಮೊದಲ ಬಾರಿ ದೇಶದ ಆರ್ಥಿಕತೆ ಋುಣಾತ್ಮಕ ಬೆಳವಣಿಗೆ ಕಂಡಿದ್ದು, ಈಗಿನ್ನೂ ಚೇತರಿಕೆಯ ಪುಟ್ಟಹೆಜ್ಜೆ ಇಡುತ್ತಿದೆ. ಇಂಥದ್ದೊಂದು ಹೆಜ್ಜೆಗೆ ನಿರ್ಮಲಾ ಅದ್ಯಾವ ಟಾನಿಕ್‌ ಮೂಲಕ ವೇಗದ ಗತಿ ನೀಡಲಿದ್ದಾರೆ ಎಂಬುದೀಗ ಭಾರೀ ಕುತೂಹಲದ ವಿಷಯ. ಹೀಗಾಗಿಯೇ 130 ಕೋಟಿ ಜನರ ನಿರೀಕ್ಷೆಗಳು ಇದೀಗ ಸಂಸತ್‌ ಭವನದಲ್ಲಿ ಬೆಳಗ್ಗೆ 11ಕ್ಕೆ ಮಂಡನೆಯಾಗುವ ಬಜೆಟ್‌ ಮೇಲೆ ನೆಟ್ಟಿದೆ.

ಕೊರೋನಾ ಕಾರಣ ಮೊತ್ತಮೊದಲ ಬಾರಿಗೆ ಕಾಗದರಹಿತ ಬಜೆಟ್‌ ಮಂಡಿಸಲಾಗುತ್ತಿದೆ. ನಿರ್ಮಲಾ ಬಜೆಟ್‌ ಮಂಡಿಸುತ್ತಿದ್ದಂತೆಯೇ ಅಂತರ್ಜಾಲದಲ್ಲಿ ಹಾಗೂ ಬಜೆಟ್‌ಗಾಗಿ ಸರ್ಕಾರ ಸಿದ್ಧಪಡಿಸಿರುವ ಬಜೆಟ್‌ ಆ್ಯಪ್‌ನಲ್ಲಿ ಮುಂಗಡಪತ್ರದ ಪ್ರತಿಗಳು ಲಭ್ಯವಾಗಲಿವೆ.

‘ಸಮತೋಲನದ ಆಟ’:

ಕೊರೋನಾದಿಂದಾಗಿ ದೇಶದ ಆರ್ಥಿಕತೆ ಕಳೆದ ವರ್ಷ ಪೂರ್ಣ ಕುಸಿದಿದೆ. ಕೃಷಿ, ಉದ್ಯಮ, ರಫ್ತು, ವಾಹನೋದ್ಯಮ ಸೇರಿದಂತೆ ಪ್ರತಿಯೊಂದು ವಲಯವೂ ಋುಣಾತ್ಮಕ ಬೆಳವಣಿಗೆ ದಾಖಲಿಸಿದೆ. ಪರಿಣಾಮ ಸರ್ಕಾರದ ಬೊಕ್ಕಸ ಬರಿದಾಗಿದೆ. ಮತ್ತೊಂದೆಡೆ ಹಂತಹಂತವಾಗಿ ಇದೀಗ ಆರ್ಥಿಕತೆ ಚೇತರಿಕೆಯ ಸುಳಿವು ನೀಡುತ್ತಿದೆ. ಈ ಹಂತದಲ್ಲಿ ಪ್ರತಿಯೊಂದು ವಲಯವೂ ಸರ್ಕಾರದಿಂದ ದೊಡ್ಡ ಮಟ್ಟದ ನೆರವಿನ ನಿರೀಕ್ಷೆ ಹೊತ್ತು ಕುಳಿತಿವೆ. ಆದರೆ ಮನಬಿಚ್ಚಿ ಖರ್ಚು ಮಾಡಲು ಕಾಸಿಲ್ಲದ ಸರ್ಕಾರ, ಎಲ್ಲರಿಗೂ ನೆರವು ನೀಡಲು ಏನು ಮ್ಯಾಜಿಕ್‌ ಮಾಡಲಿದೆ? ಆದಾಯ ಸಂಗ್ರಹಕ್ಕೆ ಹಿಂದಿನ ವರ್ಷಗಳಂತೆ ತೆರಿಗೆ ಹೇರುವುದು ಈ ಬಾರಿ ಕಷ್ಟಸಾಧ್ಯ. ಹೀಗಾಗಿ ಆದಾಯದ ಮೂಲಗಳನ್ನು ಸರ್ಕಾರ ಎಲ್ಲೆಲ್ಲಿ ಹುಡುಕಲಿದೆ ಎಂಬುದೇ ಇದೀಗ ಎಲ್ಲರ ಕುತೂಹಲದ ವಿಷಯ.

ಯಾರಿಗೆ ಮಣೆ:

‘ಸರ್ಕಾರವು ಈ ಸಾಲಿನಲ್ಲಿ ‘ಸ್ವಾವಲಂಬಿ ಭಾರತ’ (ಅತ್ಮನಿರ್ಭರ ಭಾರತ) ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಇದರಿಂದ ದೇಶೀ ಆರ್ಥಿಕತೆಗೆ ಬಲ ತುಂಬಬಹುದಾಗಿದೆ. ಮೂಲಸೌಕರ್ಯ, ಕೊರೋನಾ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರ, ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಕೃಷಿ, ಲಾಕ್‌ಡೌನ್‌ನಿಂದ ಕಂಗೆಟ್ಟಿರುವ ಗ್ರಾಮೀಣ ಹಾಗೂ ನಗರ ಆರ್ಥಿಕತೆ- ಮುಂತಾದವುಗಳ ಚೇತರಿಕೆಗೆ ಹಲವು ಘೋಷಣೆಗಳನ್ನು ಸಚಿವೆ ಮಾಡಲಿದ್ದಾರೆ’ ಎಂದು ಮೂಲಗಳು ಹೇಳಿವೆ. ಈ ಹಿಂದೆ ಕೇವಲ ‘ಹೊಸ ಬಾಟಲಿಯಲ್ಲಿ ಹಳೇ ಮದ್ಯ’ ಎಂಬಂತೆ ಹಲವು ಘೋಷಣೆಗಳ ಪುನರಾವರ್ತನೆಯೇ ನಡೆಯುತ್ತಿತ್ತು. ಆದರೆ ಈ ಸಲ ಹಾಗಾಗಲಿಕ್ಕಿಲ್ಲ ಎಂದು ತಜ್ಞರು ಆಶಾವಾದ ವ್ಯಕ್ತಪಡಿಸಿದ್ದಾರೆ.

ಕೊರೋನಾಕ್ಕೆ ವಿಶೇಷ ಆದ್ಯತೆ:

ಬಜೆಟ್‌ನಲ್ಲಿ ಕೊರೋನಾ ಕುರಿತು ವಿಶೇಷ ಪ್ರಸ್ತಾಪದ ನಿರೀಕ್ಷೆ ಇದೆ. ಲಸಿಕೆ ಸಂಶೋಧಕರಿಗೆ ನೆರವು, ಲಸಿಕೆ ವಿತರಣೆಗೆ ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕೆ ನಾನಾ ರೀತಿಯ ಯೋಜನೆ ಮೊದಲಾದ ವಿಷಯಗಳು ಪ್ರಮುಖ ಸ್ಥಾನ ಪಡೆಯಲಿದೆ ಎಂದು ಹೇಳಲಾಗಿದೆ.

ಭಾರೀ ಶ್ರೀಮಂತರ ಮೇಲೆ ಕೋವಿಡ್‌ ಸೆಸ್‌?

ಹಣದ ಕೊರತೆ ಎದುರಿಸುತ್ತಿರುವ ಕೇಂದ್ರ ಸರ್ಕಾರ ಕೋವಿಡ್‌ ಸೆಸ್‌ ಹೇರಬಹುದು ಎನ್ನಲಾಗುತ್ತಿದೆ. ಕೊರೋನಾ ಲಸಿಕೆ ಹಂಚಿಕೆಗೆ 60-65 ಸಾವಿರ ಕೋಟಿ ರು. ಬೇಕಾಗಿದೆ. ಇಷ್ಟೊಂದು ಹಣವನ್ನು ಏಕಾಂಗಿಯಾಗಿ ಕ್ರೋಡೀಕರಿಸಲು ಸರ್ಕಾರಕ್ಕೆ ಆಗುತ್ತಿಲ್ಲ. ಹೀಗಾಗಿ ಈ ಹಣವನ್ನು ಹೊಂದಿಸಲು ಭಾರೀ ಶ್ರೀಮಂತರ ಮೇಲೆ ಕೋವಿಡ್‌ ಸೆಸ್‌ ವಿಧಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ.