ಬೆಂಗಳೂರು :  ಖಾಸಗಿ ಕಂಪನಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಯುವಕನೊಬ್ಬ ತಾಯಿಯ ಸ್ನೇಹಿತೆ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿ ವಿಕೃತಿ ಮೆರೆದಿರುವ ಘಟನೆ ನಗರ ಪ್ರತಿಷ್ಠಿತ ಪಂಚತಾರ ಹೋಟೆಲ್‌ವೊಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಕೊಲ್ಕತ್ತಾದ ಮುಖರ್ಜಿ (23) ಎಂಬಾತನನ್ನು ಆರ್‌ಎಂಸಿ ಯಾರ್ಡ್‌ ಪೊಲೀಸರು ಭಾನುವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಎಂಜಿನಿಯರಿಂಗ್‌ ಪದವೀಧರನಾಗಿರುವ ಮುಖರ್ಜಿ ಕೊಲ್ಕತ್ತಾದದಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದಾನೆ. 39 ವರ್ಷದ ಸಂತ್ರಸ್ತೆ ಹಾಗೂ ಆರೋಪಿಯ ತಾಯಿ ಸ್ನೇಹಿತರಾಗಿದ್ದಾರೆ. ಕೊಲ್ಕತ್ತಾ ಮೂಲದ ಕಂಪನಿಯು ನಗರದ ಯಶವಂತಪುರದಲ್ಲಿರುವ ‘ತಾಜ್‌’ ಹೋಟೆಲ್‌ನಲ್ಲಿ ‘ಪೀಟರ್‌ ಇಂಗ್ಲೆಂಡ್‌ ಕಾನ್ಸೆಪ್ಟ್‌’ ಹೆಸರಿನಡಿ ಕಾರ್ಯಕ್ರಮ ಆಯೋಜಿಸಿತ್ತು.

ಆರೋಪಿ ತನ್ನ ತಾಯಿ ಜತೆ ಕಾರ್ಯಕ್ರಮಕ್ಕೆ ಬಂದಿದ್ದ. ಇದೇ ಕಂಪನಿಯಲ್ಲಿ ಕೆಲಸ ಮಾಡುವ ಕೊಲ್ಕತ್ತಾದ ಮಹಿಳೆ ಕೂಡ ನಗರಕ್ಕೆ ಬಂದಿದ್ದು ಹೋಟೆಲ್‌ನಲ್ಲಿ ತಂಗಿದ್ದರು. ಶುಕ್ರವಾರ ರಾತ್ರಿ 11.45ರ ಸುಮಾರಿಗೆ ಸಂತ್ರಸ್ತ ಮಹಿಳೆ ಕೊಠಡಿಗೆ ನೀರು ಕುಡಿಯುವ ನೆಪದಲ್ಲಿ ಬಂದಿದ್ದ. ಕಂಠಪೂರ್ತಿ ಮದ್ಯ ಸೇವಿಸಿದ್ದ ಮುಖರ್ಜಿಗೆ ನೀರು ಕೊಡಲು ಸಂತ್ರಸ್ತೆ ಮುಂದಾದ ವೇಳೆ ಮಹಿಳೆಯನ್ನು ಬಲವಂತವಾಗಿ ಹಿಡಿದು ದೈಹಿಕ ಸಂಪರ್ಕ ಸಾಧಿಸಲು ಯತ್ನಿಸಿದ್ದಾನೆ. ನಂತರ ಬಲವಂತವಾಗಿ ಬಾತ್‌ ರೂಮ್‌ಗೆ ಎಳೆದುಕೊಂಡು ಹೋಗಿ ಕೊಠಡಿ ಬಾಗಿಲು ಹಾಕಿ ಸಿಗರೆಟ್‌ ಸೇದುತ್ತಾ ಮಹಿಳೆ ಬಳಿ ಬಲವಂತವಾಗಿ ಸಿಗರೆಟ್‌ ಸೇದಿಸಿ ವಿಕೃತಿ ಮೆರೆದಿದ್ದಾನೆ. 

ಬಳಿಕ ಮಹಿಳೆಯ ಬಟ್ಟೆಬಿಚ್ಚಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಆರೋಪಿಗೆ ‘ನಾನು ನಿನ್ನ ತಾಯಿ ಸಮಾನ ಇದ್ದೇನೆ ಬಿಟ್ಟು ಬಿಡು’ ಎಂದು ಅಂಗಲಾಚಿದ್ದಾರೆ. ಆರೋಪಿ ಎಷ್ಟುವಯಸ್ಸಾದರೇನು ನಿನ್ನ ಜತೆ ದೈಹಿತ ಸಂಪರ್ಕ ಮಾಡಲೇಬೇಕು. ಅದಕ್ಕಾಗಿ ಸಂಜೆಯಿಂದ ಮದ್ಯ ಸೇವಿಸುತ್ತಾ ಕುಳಿತಿದ್ದೇನೆ ಎಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಲ್ಲದೆ, ಮಹಿಳೆ ಚೀರಿಕೊಂಡಾಗ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಯಾರಿಗೂ ಹೇಳದೇ ಸುಮ್ಮನೆ ಇದ್ದರೆ, ರೂಮ್‌ನಿಂದ ಹೊರಗೆ ಹೋಗುವುದಾಗಿ ಹೇಳಿದ ಆರೋಪಿ, ಮಹಿಳೆಯನ್ನು ಬಲವಂತವಾಗಿ ಹಿಡಿದುಕೊಂಡು ಮುತ್ತು ಕೊಟ್ಟು ಸ್ಥಳದಿಂದ ಕಾಲ್ಕಿತ್ತಿದ್ದ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.

ಈ ಬಗ್ಗೆ ಮಹಿಳೆ ಕೊಲ್ಕತ್ತಾದಲ್ಲಿರುವ ತನ್ನ ಪತಿ ಗಮನಕ್ಕೆ ತಂದು ಆರ್‌ಎಂಸಿ ಯಾರ್ಡ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮುಖರ್ಜಿಯನ್ನು ಭಾನುವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.