Asianet Suvarna News Asianet Suvarna News

ಅತ್ಯಾಚಾರ ಸಾಬೀತಿಗೆ ಸಂತ್ರಸ್ತೆಯ ಸಾಕ್ಷ್ಯ ಸಾಕು: ಹೈಕೋರ್ಟ್‌

ಸಂತ್ರಸ್ತೆಯ ಸಾಕ್ಷ್ಯ ಕೋರ್ಟ್‌ಗೆ ವಿಶ್ವಾಸ ಮೂಡಿಸುವಂತಿರಬೇಕು: ಹೈಕೋರ್ಟ್‌| ಲೈಂಗಿಕ ಕ್ರಿಯೆ, ದೌರ್ಜನ್ಯ ಪ್ರಕರಣದಲ್ಲಿ ವೈದ್ಯಕೀಯ ದೃಢೀಕರಣ ಅಗತ್ಯವಿಲ್ಲ| 2012ರ ಏ.4ರಂದು ಅಪ್ರಾಪ್ತೆ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ| ಒಬ್ಬಂಟಿ ಬಾಲಕಿ ಮೇಲೆ ಎರಗಿದ್ದ ಎನ್‌.ಆರ್‌. ಪುರ ವ್ಯಕ್ತಿ| ವೈದ್ಯಕೀಯ ಸಾಕ್ಷ್ಯ ಇಲ್ಲ ಎಂದು ತೀರ್ಪು ನೀಡಿದ್ದ ಅಧೀನ ಕೋರ್ಟ್‌| ವೈದ್ಯಕೀಯ ದೃಢೀಕರಣ ಅಗತ್ಯವಿಲ್ಲ ಎಂದು ಶಿಕ್ಷೆ ವಿಧಿಸಿದ ಹೈಕೋರ್ಟ್‌|

Victim's Evidence is enough for Prove Rape
Author
Bengaluru, First Published Oct 30, 2019, 7:53 AM IST

ವೆಂಕಟೇಶ್‌ ಕಲಿಪಿ

ಬೆಂಗಳೂರು[ಅ.30]: ಅತ್ಯಾಚಾರ ಪ್ರಕರಣ ಸಾಬೀತಿಗೆ ವೈದ್ಯಕೀಯ ಸಾಕ್ಷ್ಯಕ್ಕಿಂತ ಸಂತ್ರಸ್ತೆಯ ಸಾಕ್ಷ್ಯ ನ್ಯಾಯಾಲಯಕ್ಕೆ ವಿಶ್ವಾಸ ಮೂಡಿಸುವಂತಿದ್ದರೆ ಸಾಕು ಎಂಬ ಮಹತ್ವದ ತೀರ್ಪನ್ನು ಹೈಕೋರ್ಟ್‌ ನೀಡಿದೆ.

ಈ ತೀರ್ಪಿನ ಮೂಲಕ ವೈದ್ಯಕೀಯ ಸಾಕ್ಷ್ಯ ಇಲ್ಲ ಎಂಬ ಕಾರಣ ನೀಡಿ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದಿಂದ ಚಿಕ್ಕಮಗಳೂರಿನ ಎಸ್‌. ರಾಜು ಎಂಬಾತನನ್ನು ಖುಲಾಸೆಗೊಳಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಅಲ್ಲದೆ, ಅತ್ಯಾಚಾರ ಪ್ರಕರಣದಲ್ಲಿ ರಾಜು ದೋಷಿಯಾಗಿದ್ದಾನೆ ಎಂದು ನಿರ್ಧರಿಸಿ, ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಎರಡು ಲಕ್ಷ ರು. ದಂಡ ವಿಧಿಸಿದೆ. ದಂಡ ಮೊತ್ತವನ್ನು ಸಂತ್ರಸ್ತೆಗೆ ಪಾವತಿಸಬೇಕು. ದಂಡ ಮೊತ್ತ ಪಾವತಿಸುವಲ್ಲಿ ವಿಫಲವಾದರೆ, ದೋಷಿಯು ಮತ್ತೆ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ನಿರ್ದೇಶಿಸಿದೆ.

ತಾಯಿ ಕೂಲಿಗೆ ಹೋದಾಗ ಮಗಳ ಮೇಲೆ ರೇಪ್‌:

ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌.ಪುರ ನಿವಾಸಿ ಗೌರಮ್ಮ 2012ರ ಏ.4ರಂದು ಕೂಲಿ ಕೆಲಸಕ್ಕೆ ಹೋಗಿದ್ದರು. ಅಂದು ಮನೆಯಲ್ಲಿ ಒಬ್ಬಂಟಿಯಾಗಿದ್ದ ಆಕೆಯ 16 ವರ್ಷದ ಅಪ್ರಾಪ್ತ ಮಗಳು ಶೀಲಾ (ಇಬ್ಬರ ಹೆಸರು ಬದಲಿಸಲಾಗಿದೆ) ಮೇಲೆ ಪಕ್ಕದ ಮನೆಯ ಎಸ್‌.ರಾಜು ಅತ್ಯಾಚಾರ ಎಸಗಿದ್ದ. ಘಟನೆ ಬಗ್ಗೆ ಯಾರಿಗಾದರೂ ತಿಳಿಸಿದರೆ ಜೀವ ತೆಗೆಯುವುದಾಗಿಯೂ ಹೆದರಿಸಿದ್ದ.

ಈ ಕುರಿತು ಗೌರಮ್ಮ ನೀಡಿದ್ದ ದೂರು ದಾಖಲಿಸಿಕೊಂಡ ಎನ್‌.ಆರ್‌. ಪೊಲೀಸರು ತನಿಖೆ ಪೂರ್ಣಗೊಳಿಸಿ, ಅತ್ಯಾಚಾರ ಆರೋಪದಡಿ ರಾಜು ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಚಿಕ್ಕಮಗಳೂರು ಪ್ರಧಾನ ಸೆಷನ್ಸ್‌ ನ್ಯಾಯಾಲಯ, ಪ್ರಕರಣದಲ್ಲಿ ವೈದ್ಯಕೀಯ ಸಾಕ್ಷ್ಯಗಳು ಇಲ್ಲ. ಗೌರಮ್ಮ ಹಾಗೂ ರಾಜು ನಡುವೆ ಕೌಟುಂಬಿಕ ಕಲಹವಿದೆ. ಆ ದ್ವೇಷಕ್ಕೆ ರಾಜು ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಕಾರಣ ನೀಡಿ, ರಾಜುವನ್ನು ಖುಲಾಸೆಗೊಳಿಸಿ 2013ರ ಮಾ.5ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಎನ್‌.ಆರ್‌.ಪುರ ಪೊಲೀಸರು ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅತ್ಯಾಚಾರ ಆರೋಪ, ಸಂತ್ರಸ್ತೆ, ಆಕೆಯ ತಾಯಿ ಮತ್ತು ನೆರೆಹೊರೆಯವರ ಸಾಕ್ಷ್ಯವನ್ನು ತಳ್ಳಿಹಾಕಿದ ರಾಜು ಪರ ವಕೀಲರು, ಅಧೀನ ನ್ಯಾಯಾಲಯದ ಆದೇಶ ಪುರಸ್ಕರಿಸಲು ಕೋರಿದ್ದರು. ಸರ್ಕಾರಿ ವಕೀಲರು, ಶೀಲಾ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ರಾಜುವನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸುವಂತೆ ಕೋರಿದ್ದರು. ಮೇಲ್ಮನವಿಯ ವಿಚಾರಣೆ ನಡೆಸಿದ್ದ ನ್ಯಾ.ರವಿ ಮಳಿಮಠ ಮತ್ತು ನ್ಯಾ.ಎಚ್‌.ಪಿ.ಸಂದೇಶ ಅವರಿದ್ದ ವಿಭಾಗೀಯ ನ್ಯಾಯಪೀಠ ಇತ್ತೀಚೆಗೆ ಈ ಆದೇಶ ನೀಡಿದೆ.

ಸಂತ್ರಸ್ತೆಯ ಸಾಕ್ಷ್ಯ ಸ್ಪಷ್ಟವಾಗಿದೆ:

ವೈದ್ಯರು ನೀಡಿದ ವರದಿಯಲ್ಲಿ ಸಂತ್ರಸ್ತೆಯನ್ನು ದೈಹಿಕವಾಗಿ ಪರೀಕ್ಷೆ ನಡೆಸಿದಾಗ ಬಲವಂತದ ಲೈಂಗಿಕ ಕ್ರಿಯೆ ನಡೆದ ಬಗ್ಗೆ ಕುರುಹು ಸಿಕ್ಕಿಲ್ಲ ಎಂಬುದಾಗಿ ಹೇಳಿಲ್ಲ. ಬದಲಾಗಿ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ (ಆರ್‌ಎಫ್‌ಎಸ್‌ ಎಲ್‌) ವರದಿ ಆಧರಿಸಿ ವೈದ್ಯರು ವರದಿ ನೀಡಿದ್ದಾರೆ. ಇನ್ನು, ತನಿಖಾಧಿಕಾರಿ ಜಪ್ತಿ ಮಾಡಿದ ಸಂತ್ರಸ್ತೆ ಮತ್ತು ಆರೋಪಿಯ ಉಡುಪು (ಘಟನೆ ವೇಳೆ ಧರಿಸಿದ್ದ) ಬಗ್ಗೆ ಆರ್‌ಎಫ್‌ಎಸ್‌ಎಲ್‌ ವರದಿ ಯಾವುದನ್ನೂ ಸೂಚಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಲ್ಲದೆ, ಲೈಂಗಿಕ ಕ್ರಿಯೆ, ದೌರ್ಜನ್ಯ ಪ್ರಕರಣಗಳಲ್ಲಿ ವೈದ್ಯಕೀಯ ದೃಢೀಕರಣವು ಅಗತ್ಯವಿಲ್ಲ. ಸಂತ್ರಸ್ತೆಯ ಸಾಕ್ಷ್ಯ ನ್ಯಾಯಾಲಯದ ವಿಶ್ವಾಸವನ್ನು ಪ್ರೇರೇಪಿಸುವಂತಿದ್ದರೆ, ವೈದ್ಯಕೀಯ ಸಾಕ್ಷ್ಯದ ಅನುಪಸ್ಥಿತಿಯಲ್ಲೂ ಸಂತ್ರಸ್ತೆಯು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂದು ಕೋರ್ಟ್‌ ತೀರ್ಮಾನಕ್ಕೆ ಬರಬಹುದಾಗಿದೆ. ಪ್ರಕರಣದಲ್ಲಿ ಸಂತ್ರಸ್ತೆಯ ಸಾಕ್ಷ್ಯವು ಅತ್ಯಂತ ಸ್ಪಷ್ಟಹಾಗೂ ಸ್ಥಿರತೆಯಿಂದ ಕೂಡಿದೆ. ಅದು ನ್ಯಾಯಾಲಯದ ವಿಶ್ವಾಸವನ್ನು ಪ್ರೇರೇಪಿಸುತ್ತದೆ. ಆದ್ದರಿಂದ ರಾಜು ಅತ್ಯಾಚಾರ ಪ್ರಕರಣದ ದೋಷಿಯಾಗಿದ್ದಾನೆ ಎಂದು ಹೈಕೋರ್ಟ್‌ ಆದೇಶಿಸಿದೆ. 
 

Follow Us:
Download App:
  • android
  • ios