ಬೆಂಗಳೂರು (ನ.14):  ಕ್ಷೌರಿಕನ ಕೊಂದು ಕೆ.ಎಸ್.ಲೇಔಟ್‌ನ ನಾಗಪ್ಪ ಬ್ಲಾಕ್‌ನಲ್ಲಿ ಶವ ಎಸೆದು ಪರಾರಿಯಾಗಿದ್ದ ಪ್ರಕರಣ ಭೇದಿಸಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು ಮೃತನ ಸ್ನೇಹಿತನನ್ನು ಬಂಧಿಸಿದ್ದಾರೆ.

ಚಂದ್ರನಗರದ ನಿವಾಸಿ ಹನುಮಂತರಾಜು ಅಲಿಯಾಸ್ ಸುದರ್ಶನ್(27)ಬಂಧಿತ. ನ.11ರಂದು ರಾತ್ರಿ ಮದ್ಯದ ಅಮಲಿನಲ್ಲಿ ಕ್ಷೌರಿಕ ಶ್ರೀನಿವಾಸ ಮೂರ್ತಿ(33) ಎಂಬಾತನನ್ನು ಆರೋಪಿ ಹತ್ಯೆ ಮಾಡಿದ್ದ. ವಿಚ್ಛೇದಿತ ನಾಗಿದ್ದ ಶ್ರೀನಿವಾಸ್‌ಮೂರ್ತಿ ಮದ್ಯದ ಚಟಕ್ಕೆ ಬಿದ್ದು, ಕೆಲಸಕ್ಕೆ ಹೋಗುತ್ತಿರಲಿಲ್ಲ. 

ಒಂದೂವರೆ ವರ್ಷಗಳ ಹಿಂದೆ ಶ್ರೀನಿವಾಸ್‌ಗೆ ಆಟೋ ಚಾಲಕನಾಗಿದ್ದ ಹನುಮಂತರಾಜು ಪರಿಚಯವಾಗಿತ್ತು. ಇಬ್ಬರು ಸ್ನೇಹಿತರು ಆಗ್ಗಾಗ್ಗೆ ಒಟ್ಟಿಗೆ ಸೇರಿ ಶ್ರೀನಿವಾಸ್ ಮನೆಯಲ್ಲಿ ಮದ್ಯ ಸೇವಿಸುತ್ತಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸೋಮವಾರ ರಾತ್ರಿ ಚಂದ್ರನಗರದ ಮನೆಯಲ್ಲಿ ಇಬ್ಬರು ಕಂಠಪೂರ್ತಿ ಮದ್ಯ ಸೇವಿಸಿದ್ದು, ಮದ್ಯದ ನಶೆಯಲ್ಲಿ ಹನುಮಂತರಾಜು ಶ್ರೀನಿವಾಸಮೂರ್ತಿಯ ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ. ಇದರಿಂದ ಕೋಪಗೊಂಡ ಶ್ರೀನಿವಾಸ ಮೂರ್ತಿ, ಆರೋಪಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ಹನುಮಂತರಾಜು ಮನೆಯಲ್ಲಿಯೇ ಇದ್ದ ಕಬ್ಬಿಣದ ಸಲಾಕೆಯಿಂದ ಶ್ರೀನಿವಾಸ್ ಮೂರ್ತಿ ತಲೆಗೆ ಹೊಡೆದಿದ್ದ. 

ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲಿಯೇ  ಮೃತಪಟ್ಟಿದ್ದ. ಹನುಮಂತರಾಜು ಆಟೋದಲ್ಲಿ ಶವ ತೆಗೆದುಕೊಂಡು ಹೋಗಿ  ಕುಮಾರಸ್ವಾಮಿ ಲೇಔಟ್‌ನ ನಾಗಪ್ಪ ಬ್ಲಾಕ್‌ನ ರಸ್ತೆ ಬದಿ ಬಿಸಾಡಿ ಪರಾರಿಯಾಗಿದ್ದ.