ಬೆಳಗಾವಿ(ಅ.20): ಗೋ ರಕ್ಷಣೆ ಹೆಸರಲ್ಲಿ ದೇಶದಲ್ಲಿ ಅಲ್ಲೊಂದು ಇಲ್ಲೊಂದು ಘಟನೆ ನಡೆದಿದೆ. ಪ್ರಧಾನಿ ಮೋದಿಯೇ ಇದನ್ನು ಖಂಡಿಸಿದ್ದಾರೆ. ನಾನು, ವಿಪಕ್ಷ ನಾಯಕ ಸಿದ್ದರಾಮಯ್ಯ ಇಬ್ಬರು ಸಗಣಿ ಎತ್ತಿದವರು. ಆದರೆ ನಮ್ಮ ಮನಸ್ಸು ಗೋ ರಕ್ಷಣೆ ಪರವಿದೆ. ಆದರೆ ಅವರ ಮನಸ್ಸು ಗೋ ಹತ್ಯೆ ಮಾಡುವವರ ಪರವಿದೆ. ಅಧಿಕಾರ ಸಿಕ್ಕ ತಕ್ಷಣ ಗೋ ಮೇಲಿನ ಪ್ರೀತಿ ಬದಲಾವಣೆಯಾಗಬಾರದು. ಹೀಗೆ ಬದಲಾವಣೆಯಾದರೆ ಗೋಮುಖ ವ್ಯಾಘ್ರವಾಗುತ್ತದೆ. ಸಿದ್ದರಾಮಯ್ಯ ಗೋಮುಖ ವ್ಯಾಘ್ರ ಆಗಬಾರದು ಎಂದು ಸಚಿವ ಸಿ.ಟಿ.ರವಿ ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ಬಂದ ಮೇಲೆ ಗೋ ರಕ್ಷಣೆ ಹೆಸರಿನಲ್ಲಿ ಗೋ ಹತ್ಯೆ ನಡೆಯುತ್ತಿದೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಗೋ ರಕ್ಷಣೆ ಹೆಸರಿನಲ್ಲಿ ಯಾರಾರ‍ಯರ ಸರ್ಕಾರದಲ್ಲಿ ಎಷ್ಟು ಹತ್ಯೆಯಾಗಿವೆ ಎಂದು ಸಿದ್ದರಾಮಯ್ಯ ಪಟ್ಟಿ ನೀಡಲಿ. ಬೇಜವಾಬ್ದಾರಿ ಹೇಳಿಕೆ ನೀಡುವುದು ಅವರ ಸ್ಥಾನಕ್ಕೆ ಶೋಭೆ ತರುವಂತಹದ್ದಲ್ಲ ಎಂದರು.

ರಾಮಮಂದಿರ ನಿರ್ಮಾಣ ಶತಃಸಿದ್ಧ:

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದು ಶತಃಸಿದ್ಧ. ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದೇವೆ. ಹೆತ್ತವರ ಬಗ್ಗೆ ನಂಬಿಕೆ ಇಲ್ಲದವರು ರಾಮಮಂದಿರದ ಬಗ್ಗೆ ಸಾಕ್ಷಿ ಕೇಳುತ್ತಾರೆ. ಇಡೀ ದೇಶದ ಜನರು ರಾಮಮಂದಿರ ನಿರ್ಮಾಣದ ಕನಸು ಕಾಣುತ್ತಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಮಂದಿರದ ನಿರ್ಮಾಣ ಕಾಮಗಾರಿ ಆರಂಭವಾಗುತ್ತದೆ ಎಂದು ಹೇಳಿದರು.

ರಾಜ್ಯಕ್ಕೆ ಮೋದಿ ಮೋಸ ಮಾಡಲ್ಲ:

ಪ್ರವಾಹದಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರದಿಂದ ನ್ಯಾಯಯುತವಾದ ಪರಿಹಾರ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯಾವ ರಾಜ್ಯಕ್ಕೂ ಮೋಸ ಮಾಡಿಲ್ಲ. ಮನಸ್ಥಿತಿ ಸರಿ ಇರದವರು ಅನುಮಾನದಿಂದ ನೋಡುತ್ತಿದ್ದಾರೆ. ವಿಶ್ವಾಸ ಇದ್ದ ಮೇಲೆ ಧೈರ್ಯದ ಪ್ರಶ್ನೆ ಉದ್ಬವಿಸಲ್ಲ. ದೇಶದ ಜನರ ವಿಶ್ವಾಸದ ಮೇಲೆ ಪ್ರಧಾನಿ ನರೇಂದ್ರ ಮೋದಿ ಆಯ್ಕೆಯಾಗಿದ್ದಾರೆ. ಧೈರ್ಯಸ್ಥರು ಎಂದು ಭಾವಿಸೋದು ಸೈನಿಕರನ್ನು. ಮಾಧ್ಯಮದವರ ಮುಂದೆ ಬಾಯಿಗೆ ಬಂದಂತೆ ಮಾತನಾಡುವವರು ಧೈರ್ಯವಂತರಲ್ಲ ಎಂದು ಅವರು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಕತ್ತಿ ಅಂದುಕೊಂಡಿದ್ದು ಆಗಿದೆಯಾ?:

ಶಾಸಕ ಉಮೇಶ ಕತ್ತಿ ಪ್ರತ್ಯೇಕ ರಾಜ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಉಮೇಶ ಕತ್ತಿ ನಮ್ಮ ಸ್ನೇಹಿತರು. ಪದೇ ಪದೆ ಪ್ರತ್ಯೇಕ ಕರ್ನಾಟಕದ ಬಗ್ಗೆ ಹೇಳುತ್ತ ಬಂದಿದ್ದಾರೆ. ಅವರು ಅಂದುಕೊಂಡಿದ್ದು ಆಗಿದೆಯಾ ಎಂದು ಪ್ರಶ್ನಿಸಿದ ಅವರು, ಸಿಎಂ ಯಡಿಯೂರಪ್ಪ ಅವರ ಅವಧಿ ಮುಗಿದ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಪಕ್ಷದ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಶೇ.99 ರಷ್ಟು ಕಬ್ಬಿನ ಬಾಕಿ ಬಿಲ್‌ನ್ನು ರೈತರಿಗೆ ಪಾವತಿಸಲಾಗಿದೆ. 84 ಕೋಟಿ ಬಾಕಿ ಉಳಿದುಕೊಂಡಿದ್ದು, ಶೀಘ್ರವೇ ಕಬ್ಬು ಪೂರೈಸಿದ ರೈತರಿಗೆ ಬಾಕಿ ಬಿಲ್‌ ನೀಡುವಂತೆ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.