ಕುಡುಕರ ತಾಣವಾದ ಹುನಗುಂದದ ತರಕಾರಿ ಮಾರುಕಟ್ಟೆ!
ಹಂದಿ, ಮದ್ಯವ್ಯಸನಿಗಳ ತಾಣವಾದ ಮಾರುಕಟ್ಟೆ| ಸೂಕ್ತ ನಿರ್ವಹಣೆ ಇಲ್ಲದೇ ತರಕಾರಿ ಮಾರುಕಟ್ಟೆ ಹಾಳು|15 ಲಕ್ಷ ನೀರಲ್ಲಿ ಹೋಮ|ಹುನಗುಂದ ಪಟ್ಟಣ ತಾಲೂಕು ಕೇಂದ್ರವಾದರೂ ಸುಸಜ್ಜಿತ ತರಕಾರಿ ಮಾರುಕಟ್ಟೆ ಇಲ್ಲದಿರುವುದು ಪಟ್ಟಣದ ಜನತೆ ತಲೆ ತಗ್ಗಿಸುವ ಸಂಗತಿ |ಜೂಜಾಟ, ಅನೈತಿಕ ಚಟುವಟಿಕೆಗಳಿಗೆ ಈ ಮಾರುಕಟ್ಟೆ ತಾಣವಾಗಿದೆ|
ಮಲ್ಲಿಕಾರ್ಜುನ ದರಗಾದ
ಹುನಗುಂದ(ಅ.27): ಲಕ್ಷಾಂತರ ರುಪಾಯಿ ಖರ್ಚು ಮಾಡಿ ಪಟ್ಟಣದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ, ಇದಕ್ಕೆ ಸೂಕ್ತ ನಿರ್ವಹಣೆ ಮತ್ತು ರಕ್ಷಣೆ ಇಲ್ಲದ ಕಾರಣ ಈ ಮಾರುಕಟ್ಟೆ ಹಂದಿ ಹಾಗೂ ಮದ್ಯವ್ಯಸನಿಗಳಿಗೆ ತಾಣವಾಗಿ ರೂಪಗೊಂಡಿದೆ.
ಪ್ರತಿ ಶನಿವಾರ ನಡೆಯುವ ವಾರದ ಸಂತೆ ಈ ಮೊದಲು ಪಟ್ಟಣದ ಮಹಾಂತೇಶ ವೃತ್ತದಲ್ಲಿ ನಡೆಯುತಿತ್ತು. ಸಂತೆ ನಡೆಯುವ ಸ್ಥಳದಲ್ಲಿಯೇ ರಾಯಚೂರ-ಬೆಳಗಾವಿ ರಾಜ್ಯ ಹೆದ್ದಾರಿ ಹಾಯ್ದು ಹೋಗಿರುವುದರಿಂದ ಸಂತೆ ದಿನದಂದು ಜನಸಂದಣಿ ಹೆಚ್ಚಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತಿತ್ತು. ಇದನ್ನು ತಪ್ಪಿಸಲು ಬಸ್ ನಿಲ್ದಾಣದ ಪಕ್ಕ ಇರುವ ಪುರಸಭೆ ಜಾಗದಲ್ಲಿ 2011 ರಲ್ಲಿಯೇ ಪುರಸಭೆಯಿಂದ ಸುಮಾರು 15 ಲಕ್ಷ ಖರ್ಚು ಮಾಡಿ ತರಕಾರಿ ಮಾರುಕಟ್ಟೆ ನಿರ್ಮಿಸಿ, ಪ್ರತಿ ಶನಿವಾರ ನಡೆಯುವ ಸಂತೆಯನ್ನು ಇಲ್ಲಿಗೆ ಸ್ಥಳಾಂತರಿಸಲಾಯಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಾರುಕಟ್ಟೆ ನಿರ್ಮಾಣವಾದ ಆರೇಳು ತಿಂಗಳುಗಳ ಕಾಲ ಇಲ್ಲಿ ವಾರದ ಸಂತೆ ನಡೆಯಿತು. ರಸ್ತೆಯಲ್ಲಿ ನಡೆಯುವ ವಾರದ ಸಂತೆಯನ್ನು ಇಲ್ಲಿಗೆ ಸ್ಥಳಾಂತರಿಸಿ ಟ್ರಾಫಿಕ್ ಕಿರಿಕಿರಿ ತಪ್ಪಿಸಿದರು ಎಂಬ ನೆಮ್ಮದಿ ಸಾರ್ವಜನಿಕರಲ್ಲಿ ಮೂಡಿತ್ತು. ಸಾರ್ವಜನಿಕರ ನೆಮ್ಮದಿ ಕೇವಲ ಆರೇಳು ತಿಂಗಳಲ್ಲಿ ಕಮರಿ ಹೋಗಿರುವುದು ಮಾತ್ರ ದುರಂತ.
ತರಕಾರಿ ಮಾರುಕಟ್ಟೆಗೆ ಸುರಕ್ಷತೆ ಇಲ್ಲ
ಸುಮಾರು 15 ಲಕ್ಷ ಖರ್ಚು ಮಾಡಿ ಕಟ್ಟೆಕಟ್ಟಿಸಿದ್ದನ್ನು ಬಿಟ್ಟರೆ ಈ ತರಕಾರಿ ಮಾರುಕಟ್ಟೆಗೆ ಯಾವುದೇ ಸುರಕ್ಷತೆ ಇಲ್ಲ. ಸುತ್ತುಗೋಡೆ ಇಲ್ಲದ ಕಾರಣ ಸಾರ್ವಜನಿಕರು ನಿತ್ಯ ಈ ಸ್ಥಳದಲ್ಲಿ ಮಲವಿಸರ್ಜನೆ ಮಾಡುತ್ತಿರುವುದರಿಂದ ಇಡೀ ಮಾರುಕಟ್ಟೆ ಸ್ಥಳ ಗಬ್ಬೆದ್ದು ನಾರುತ್ತಿದೆ. ಇದರಿಂದ ಹಂದಿಗಳ ಹಾವಳಿಯೂ ಹೆಚ್ಚಾಗಿದೆ. ಮಾರುಕಟ್ಟೆ ಪಕ್ಕದಲ್ಲಿಯೇ ಹಂದಿ ಸಾಕಾಣಿಕೆದಾರರ ಮನೆಗಳೂ ಇರುವುದರಿಂದ ಇದೇ ಸ್ಥಳದಲ್ಲಿ ಹಂದಿ ಗೂಡು ನಿರ್ಮಿಸಿ, ಅಲ್ಲಿ ಹಂದಿ ಸಾಕಾಣಿಕೆ ಮಾಡುತ್ತಿರುವುದು ಕಂಡು ಬಂದಿದೆ. ಇನ್ನು ಸಂಜೆಯಾದರೆ ಸಾಕು ಮಾರುಕಟ್ಟೆ ಸ್ಥಳದಲ್ಲಿ ಕುಡುಕರು ಜಮಾಯಿಸುವ ದೃಶ್ಯ ಮಾಮೂಲಾಗಿದೆ. ಕುಡುಕರು ಕುಡಿದು ಬಿಸಾಕಿದ ಮದ್ಯದ ಬಾಟಲ್‌ಗಳನ್ನು ಅಲ್ಲಿಯೇ ಎಸೆದು ಹೋಗುತ್ತಿರುವುದರಿಂದ ಮಾರುಕಟ್ಟೆಯ ತುಂಬ ಒಡೆದ ಮದ್ಯದ ಬಾಟಲ್‌ಗಳು ಕಾಣ ಸಿಗುತ್ತವೆ. ಇನ್ನು ಊರೂರು ಅಲೆಯುವ ಅಲೆಮಾರಿ ಜನಾಂಗದವರ ವಾಸ, ಜೂಜಾಟ ಸೇರಿ ಇತರೆ ಅನೈತಿಕ ಚಟುವಟಿಕೆಗಳಿಗೆ ಈ ಮಾರುಕಟ್ಟೆ ತಾಣವಾಗಿದೆ.
ಖಾಸಗಿ ಸ್ಥಳದಲ್ಲಿ ಸಂತೆ:
ಈ ಎಲ್ಲ ಕಾರಣಗಳಿಂದ ಪ್ರತಿ ಶನಿವಾರ ಬರುವ ವ್ಯಾಪಾರಿಗಳು ಈ ಕಟ್ಟೆಯಲ್ಲಿ ಕುಳಿತು ವ್ಯಾಪಾರ ಮಾಡುವುದು ವಿರಳ. ಬೆರಳೆಣಿಕೆ ವ್ಯಾಪಾರಿಗಳು ಕಟ್ಟೆಯಲ್ಲಿ ಕುಳಿತು ವ್ಯಾಪಾರ ಮಾಡಿದರೆ, ಬಹುಪಾಲು ವ್ಯಾಪಾರಿಗಳು ಈ ಮಾರುಕಟ್ಟೆ ಪಕ್ಕದಲ್ಲಿಯೇ ಇರುವ ಖಾಸಗಿ ವ್ಯಕ್ತಿಯೊಬ್ಬರ ಜಾಗದಲ್ಲಿ ಕುಳಿತು ವ್ಯಾಪಾರ ಮಾಡುವುದು ಸಾಮಾನ್ಯವಾಗಿದೆ. ಖಾಸಗಿ ವ್ಯಕ್ತಿಗಳ ಜಾಗದಲ್ಲಿ ಕುಳಿತು ವ್ಯಾಪಾರ ಮಾಡುವ ವ್ಯಾಪಾರಿಗಳಿಂದ ಆ ಜಾಗದ ಮಾಲೀಕನೇ ಹಣ ವಸೂಲಿ ಮಾಡುತ್ತಿರುವುದರಿಂದ ಪುರಸಭೆ ಆದಾಯಕ್ಕೆ ಹಿನ್ನಡೆಯಾಗಿರುವುದು ಸ್ಪಷ್ಟವಾಗಿದೆ.
ತರಕಾರಿ ಮಾರುಕಟ್ಟೆ ಕೊರತೆ:
ತಾಲೂಕು ಕೇಂದ್ರ ಸ್ಥಾನವಾದ ಹುನಗುಂದ ಪಟ್ಟಣ 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಪಟ್ಟಣದಲ್ಲಿ ತರಕಾರಿ ಮಾರುಕಟ್ಟೆಗೆ ಸೂಕ್ತ ಸ್ಥಳ ಇಲ್ಲದ ಕಾರಣ ತರಕಾರಿ ವ್ಯಾಪಾರಿಗಳು ಅಲ್ಲಲ್ಲಿ ಬಾಡಿಗೆ ಕಟ್ಟಡದಲ್ಲಿ ತಮ್ಮ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಪಟ್ಟಣದ ಮದ್ಯ ಸ್ಥಳದಲ್ಲಿರುವ ಈ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಿ, ಅದಕ್ಕೆ ಸುತ್ತುಗೋಡೆ ನಿರ್ಮಿಸಿ ಮಳಿಗೆಗಳನ್ನು ಕಟ್ಟಿಸಿ ಕೊಟ್ಟರೆ ಎಲ್ಲ ತರಕಾರಿ ವ್ಯಾಪಾರಿಗಳು ಇಲ್ಲಿಗೆ ಸ್ಥಳಾಂತರಗೊಳ್ಳುತ್ತಾರೆ. ಇದರಿಂದ ಪಟ್ಟಣದಲ್ಲೊಂದು ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಾಣವಾಗುವುದರ ಜೊತೆಗೆ ಪುರಸಭೆಗೂ ಆದಾಯ ಬರುತ್ತದೆ. ಆದರೆ, ಪುರಸಭೆಯ ಜನ ಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಕಾರ್ಯವಾಗದಿರುವುದು ಮಾತ್ರ ವಿಪರ್ಯಾಸವೇ ಸರಿ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಪುರಸಭೆ ಹುನಗುಂದ ಮುಖ್ಯಾಧಿಕಾರಿ ಐ.ಕೆ. ಗುಡದಾರಿ ಅವರು, ಸುತ್ತು ಗೋಡೆ ಇಲ್ಲದ ಕಾರಣ ಈ ತರಕಾರಿ ಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದೆ. ಸುತ್ತು ಗೋಡೆ ನಿರ್ಮಾಣ ಸೇರಿ ಕೆಲವು ವ್ಯಾಪಾರಿಗಳಿಂದ ಮಳಿಗೆ ನಿರ್ಮಿಸಿಕೊಡಬೇಕೆಂಬ ಬೇಡಿಕೆ ಇದ್ದು, ಈ ಕುರಿತು ಕ್ರಿಯಾ ಯೋಜನೆ ರೂಪಿಸಲಾಗಿದೆ. ಕ್ರಿಯಾಯೋಜನೆಗೆ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದುಕೊಂಡು ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ಹುನಗುಂದ ಪಟ್ಟಣ ತಾಲೂಕು ಕೇಂದ್ರವಾದರೂ ಸುಸಜ್ಜಿತ ತರಕಾರಿ ಮಾರುಕಟ್ಟೆ ಇಲ್ಲದಿರುವುದು ಪಟ್ಟಣದ ಜನತೆ ತಲೆ ತಗ್ಗಿಸುವ ಸಂಗತಿ. ಪಟ್ಟಣದ ಅಭಿವೃದ್ಧಿ ಕುರಿತು ಸ್ಥಳೀಯ ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿ ಕೊರತೆ ಇರವುದಿರುವುದೇ ಇದಕ್ಕೆ ಮೂಲ ಕಾರಣ ಎಂದು ಹುನಗುಂದ ನಗರದ ನಿವಾಸಿ ರಾಜು ಬಡಿಗೇರ ಅವರು ತಿಳಿಸಿದ್ದಾರೆ.