ಗಬ್ಬೆದ್ದು ನಾರುತ್ತಿರುವ ಜಮಖಂಡಿ ತರಕಾರಿ ಮಾರ್ಕೆಟ್!

ಪಾದಚಾರಿಗಳಿಗೆ ಸಂಚಕಾರವಾದ ತರಕಾರಿ ಮಾರುಕಟ್ಟೆ ರಸ್ತೆ | ಎಲ್ಲೆಂದರಲ್ಲಿ ಕಸದ ರಾಶಿ| ಸಂಚಾರಕ್ಕೆ ಹಾಗೂ ವ್ಯಾಪಾರಕ್ಕೆ ತೊಂದರೆ| ಪ್ರತಿ ಗುರುವಾರ ಸಂತೆ ಇದ್ದು, ಹೊರಗಿನಿಂದ ಹೆಚ್ಚಿನ ಕಸದ ರಾಶಿ ಬೀಳುತ್ತದೆ|

Garbage in Jamakhandi Vegetable Market

ಗುರುರಾಜ ವಾಳ್ವೇಕರ 

ಜಮಖಂಡಿ[ನ.3]: ಜಮಖಂಡಿ ರಾಜ ಮಹಾರಾಜರು ನಗರೀಕರಣಕ್ಕೆ ಹೆಚ್ಚಿನ ಅನುಕೂಲವಾಗಲೆಂದು ತರಕಾರಿ ಮಾರುಕಟ್ಟೆಗೆ ಪ್ರತ್ಯೇಕ ಕಟ್ಟಡ ನಿರ್ಮಿಸಿ ವ್ಯಾಪಾಸ್ಥರಿಗೆ ಸುವ್ಯವಸ್ಥೆ ಮಾಡಿಕೊಟ್ಟಿದ್ದರು. ಮುಂದೆ ಸಂಸ್ಥಾನಗಳು ಹೋಗಿ ರಾಜ್ಯ ಸರ್ಕಾರದ ಅಧೀನದಲ್ಲಿ ತರಕಾರಿ ಮಾರುಕಟ್ಟೆಗೆ ಯಾವುದೇ ಮೂಲಭೂತ ಸೌಲಭ್ಯ ನೀಡದ್ದಕ್ಕೆ ತರಕಾರಿ ವ್ಯಾಪಾರಸ್ಥರು ರಸ್ತೆ ಬದಿಗೆ ಬಂದು ತಮ್ಮ ವ್ಯಾಪಾರ ವಹಿವಾಟು ನಡೆಸಿದ್ದರಿಂದ ವಾಹನ, ಪಾದಚಾರಿಗಳ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಗರದ ಮಧ್ಯಭಾಗದಲ್ಲಿ ನಿರ್ಮಿತಗೊಂಡ ರಾಣಿ ಚನ್ನಮ್ಮಾ ತರಕಾರಿ ಮಾರುಕಟ್ಟೆ ಕೇವಲ ಕಾಯಿಪಲ್ಯೆ ಮಾರಾಟಕ್ಕೆ ಸೀಮಿತಗೊಳಿಸಲಾಗಿತ್ತು. ಆದರೆ, ಅಲ್ಲಿ ಕೆಲವು ಸೀರೆ ವ್ಯಾಪಾರಸ್ಥರು ಸ್ಥಳ ಗಿಟ್ಟಿಸಿಕೊಂಡು, ತರಕಾರಿ ವ್ಯಾಪಾರಸ್ಥರನ್ನು-ಕಾಯಿಪಲ್ಯೆ ದಲ್ಲಾಳಿಗಳನ್ನು ಹೊರ ಹಾಕಿದ್ದು, ಗ್ರಾಮೀಣ ಪ್ರದೇಶದಿಂದ ರೈತರು ತಂದ ತರಕಾರಿಗಳನ್ನು ರಸ್ತೆ ಮೇಲೆ ಸವಾಲು ಮಾಡಲಾಗುತ್ತಿತ್ತು. ಜನಸಂಖ್ಯೆ ಹೆಚ್ಚಳಗೊಂಡಂತೆ ಸ್ಥಳದ ಅಭಾವದಿಂದ ತರಕಾರಿ ವ್ಯಾಪಾರಸ್ಥರು, ಗ್ರಾಮೀಣ ಭಾಗದ ರೈತಾಪಿ ಪುರುಷ-ಮಹಿಳೆಯರು ಕೂಡಾ ಮುಖ್ಯ ರಸ್ತೆ ಮೇಲೆ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ಸಂಚಾರಕ್ಕೆ ಹಾಗೂ ವ್ಯಾಪಾರಕ್ಕೆ ತೊಂದರೆ ಉಂಟಾಗಿದೆ.

ಕಸದ ರಾಶಿ: 

ಪ್ರತಿ ಗುರುವಾರ ನಡೆಯುವ ಸಂತೆಯಲ್ಲಿ ಗ್ರಾಮೀಣ ಬರುವ ಹೆಚ್ಚಿನ ತರಕಾರಿ ಮಾರಾಟವಾಗದಿದ್ದರೆ ಅವನ್ನೆಲ್ಲ ಮುಖ್ಯ ರಸ್ತೆ ಮೇಲೆ ಎಸೆದು ಹೋಗುವ ರೂಢಿ ಇಂದು ನಿನ್ನೆಯದಲ್ಲ.ಕಸದ ರಾಶಿ ಸ್ಚಚ್ಛಗೊಳಿಸುವುದು ನಗರಸಭೆಗೆ ದೊಡ್ಡತಲೆ ನೋವಾಗಿದೆ. ಕೊಳೆತ ತರಕಾರಿಯಿಂದಾಗಿ ಎಲ್ಲಿ ನೋಡಿದಲ್ಲಿ ಗಬ್ಬು ವಾಸನೆ, ಅಷ್ಟೇ ಅಲ್ಲದೇ ಬಿಡಾಡಿ ದನಕರು, ಕತ್ತೆ, ಹಂದಿಗಳ ಕಾಟದಿಂದ ಸಂಚಾರಕ್ಕೆ ತುಂಬಾ ಅಡಚಣೆ ಉಂಟಾಗುತ್ತಿದೆ. 

ಸಂಚಾರ ಕಠಿಣ;

ನಗರದ ಮುಖ್ಯ ರಸ್ತೆ ಹನುಮಾನ ವೃತ್ತದಲ್ಲಿ ನಡೆಯುವ ಸಂತೆಯಿಂದಾಗಿ ಈ ರಸ್ತೆಯಲ್ಲಿ ವಾಹನವಗಲಿ, ಪಾದಚಾರಿಗಳಾಗಲಿ ಸಂಚರಿಸಲು ಹರಸಾಹಸ ನಡೆಸಬೇಕು. ವಯೋವೃದ್ಧರು, ಗರ್ಣಿಣಿಯರು, ಮಕ್ಕಳನ್ನು ಕರೆದುಕೊಂಡು ಹೋಗುವ ಮಹಿಳಾ ಮಣಿಗಳ ಕಷ್ಟ ಹೇಳಲಾರದು. ಮುಧೋಳ ರಸ್ತೆ ,ವರ್ತಕ ಗಲ್ಲಿ, ಹುಲ್ಯಾಳಕರ ಗಲ್ಲಿ, ಬಸವೇಶ್ವರ ಚೌಕ, ಶಿವಾಜಿ ವೃತ್ತ, ರಾಮದೇವ ಗಲ್ಲಿ ಹೀಗೆ ಇನ್ನಿತರರ ಬಡಾವಣೆ ಗಳಲ್ಲಿ ನಡೆಯುವ ಸಂತೆ ಸ್ಥಳದಲ್ಲಿ ನಡೆದಾಡಲು ಕೂಡಾ ಅಸಾಧ್ಯವಾಗುತ್ತದೆ. 

ಅನೈತಿಕ ಚಟುವಟಿಕೆ: 

ನಗರ ಮಧ್ಯದಲ್ಲಿರುವ ರಾಣಿಚನ್ನಮ್ಮ ತರಕಾರಿ ಮಾರುಕಟ್ಟೆಯನ್ನು ನವೀಕರಣಗೊಳಿಸಿ, ಲಕ್ಷಾಂತರ ರು. ಸುರಿದು ಮೂರು ಅಂತಸ್ತಿನ ಕಟ್ಟಡ ಕಟ್ಟಿದರೂ ವ್ಯಾಪಾರಸ್ಥರಿಗಾಗಲಿ, ಸಾರ್ವಜನಿಕರಿಗಾಗಲೀ ಯಾವುದೇ ಪ್ರಯೋಜನವಾಗಿಲ್ಲ. ಸಾವಿರಾರು ರು.ಬಾಡಿಗೆಗೆ ಲೀಲಾವು ಆಗಿ ಹಿಡಿದ ಅಂಗಡಿಗಳನ್ನು ಪ್ರಾರಂಭಿಸಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಜಕಾತಿ ವಸೂಲಿಗೆ ಬೀದಿ ವ್ಯಾಪಾರಸ್ಥರು, ತಳ್ಳುಗಾಡಿ ವ್ಯಾಪಾರಸ್ಥರು, ಬುಟ್ಟಿ ಇಟ್ಟು ತರಕಾರಿ ಮಾರಾಟ ಮಾಡುವ ಸುಮರು 900 ಕ್ಕೂ ಹೆಚ್ಚಿನ ವ್ಯಾಪಾರಸ್ಥರಿಂದ ಪ್ರತಿ ದಿನ 5 ದಿಂದ 10 ರಷ್ಟು ವಸೂಲಿ ಮಾಡಲಾಗುತ್ತದೆ. ಪ್ರತಿ ವರ್ಷಕ್ಕೆ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಗುತ್ತಿಗೆ ಹಣ ನಗರಸಭೆಗೆ ಜಮಾ ಆಗುತ್ತದೆ. ಈ ನೂತನ ಕಟ್ಟಡದ ಮಹಡಿಮೇಲೆ ಅನೈತಿಕ ಚಟುವಟಿಕೆಗಳು ದಿನನಿತ್ಯ ನಡೆಯುತ್ತಿದ್ದು, ಇಲ್ಲಿ ಪೊಲೀಸ್ ಸಿಬ್ಬಂದಿ-ನಗರಸಭೆ ಸಿಬ್ಬಂದಿ ನೇಮಕವಾಗಿಲ್ಲ.

ಪ್ರತಿ ಗುರುವಾರ ಸಂತೆ ಇದ್ದು, ಹೊರಗಿನಿಂದ ಹೆಚ್ಚಿನ ಕಸದ ರಾಶಿ ಬೀಳುತ್ತದೆ. ಬೀದಿ ವ್ಯಾಪಾಸ್ಥರಿಗೆ, ಬುಟ್ಟಿ ತರಕಾರಿ ವ್ಯಾಪಾರಸ್ಥರಿಗೆ, ತಳ್ಳು ಗಾಡಿ ವ್ಯಾಪಾರಸ್ಥರಿಗೆ ರಸ್ತೆ ಮೇಲೆ ಕಸ ಚಲ್ಲದಂತೆ ತಿಳಿವಳಿಕೆ ನೀಡಲಾಗಿದೆ. ನಗರಸಭೆ ನಿಯಮ ಉಲ್ಲಂಘಿಸಿದ ವ್ಯಾಪಾರಸ್ಥರಿಗೆ ನೋಟಿಸ್ ನೀಡಿ ದಂಡ ವಸೂಲಿ ಮಾಡಲಾಗುತ್ತದೆ ಎಂದು ಜಮಖಂಡಿ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ರವಿ ಶಿರಗುಪ್ಪಿ ಅವರು ಹೇಳಿದ್ದಾರೆ.

ವ್ಯಾಪಾರಸ್ಥರಿಂದ ನಗರಸಭೆ ಸಾಕಷ್ಟು ಹಣ ಬಾಡಿಗೆ ರೂಪದಲ್ಲಿ ವಸೂಲಿ ಮಾಡಿದರೂ ವ್ಯಾಪಾರಸ್ಥರಿಗೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ.ರಸ್ತೆಯಲ್ಲಿ ವ್ಯಾಪಾರ ಮಾಡುವವರಿಗೆ ಯಾವುದೇ ಕಡಿವಾಣವಿಲ್ಲ. ಪೊಲೀಸ್‌ ಸಿಬ್ಬಂದಿಯೊಂದಿಗೆ ನಗರಸಭೆ ಸಿಬ್ಬಂದಿ ಸೇರಿ ಜನದಟ್ಟಣೆ ಕಡಿವಾಣ ಹಾಕಬೇಕು ಎಂದು ಜಮಖಂಡಿಯ ತರಕಾರಿ ವ್ಯಾಪಾರಸ್ಥ ಗುರುಪಾದ ಮೆಂಡಿಗೇರಿ ಅವರು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios