ತುಮಕೂರು(ಮಾ.29): ಕೊರೋನಾ ವೈರಸ್ ಹರಡುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ಮಾಡಿದ್ದಾರೆ. ಇಷ್ಟಾದರೂ ಜನರೂ ಓಡಾಟ ಮಾಡುತ್ತಲೇ ಇದ್ದಾರೆ. ಇದಕ್ಕಾಗಿ ಪದೇ ಪದೇ ಜನರಲ್ಲಿ ಮನವಿ ಮಾಡಲಾಗುತ್ತಿದೆ. ಇತ್ತ ಜನರಿಗೆ ತಿಳಿ ಹೇಳಬೇಕಾದ ನಾಯಕರೇ ನಿಯಮ ಉಲ್ಲಂಘಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ಗುಬ್ಬಿ ಕ್ಷೇತ್ರದ ಜೆಡಿಎಸ್ ನಾಯಕ ಎಸ್ ಆರ್ ಶ್ರೀನಿವಾಸ್ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಟೀಕೆಗೆ ಗುರಿಯಾಗಿದ್ದಾರೆ. ಬಿಹೆಡ್ ರೋಡ್‌ನಲ್ಲಿರುವ ಪೊಲೀಸ್ ಠಾಣೆಯ ಸಮೀಪವೇ ಶ್ರೀನಿವಾಸ್ ರೆಡ್ಡಿ ತಮ್ಮ ಮೊಮ್ಮಗನ ಜೊತೆ ಆಟವಾಡಿದ್ದಾರೆ. ಲಾಕ್‌ಡೌನ್ ಕಾರಣ ರಸ್ತೆಯಲ್ಲಿ ಯಾವುದೇ ವಾಹನಗಳಿರಲಿಲ್ಲ. ಇತ್ತ ರಿಮೂಟ್ ಕಂಟ್ರೋಲ್ ಆಟಿಕೆ ಕಾರಿನಲ್ಲಿ ಮೊಮ್ಮಗನ್ನೂ ಕೂರಿಸಿಕೊಂಡು ರಸ್ತೆಯಲ್ಲಿ ಎಸ್ ಆರ್ ಶ್ರೀನಿವಾಸ್ ಗೌಡ ಆಟವಾಡಿದ್ದಾರೆ. ಅದೂ ಕೂಡ ಪೊಲೀಸ್ ಸೂಪರಿಡೆಂಟ್ ಮುಂದೆಯೇ ಈ ಘಟನೆ ನಡೆದಿದೆ.

ಲಾಕ್‌ಡೌನ್ ಆದೇಶದ ಬಳಿಕ ರಸ್ತೆಗಳಿದೆ ಬಹುತೇಕರು ಪೊಲೀಸರ ಲಾಠಿ ರುಚಿ ಅನುಭವಿಸಿದ್ದಾರೆ. ಇನ್ನು ಹಲವರಿಗೆ ದುಬಾರಿ ದಂಡ ಹಾಕಲಾಗಿದೆ. ಹಲವರ ವಾಹನಗಳು ಸೀಝ್ ಆಗಿದೆ. ಆದರೆ ಜೆಡಿಎಸ್ ನಾಯಕ ಯಾವುದೇ ಸಮಸ್ಯೆ ಇಲ್ಲದೆ ಪೊಲೀಸರ ಮುಂದೆ ಲಾಕ್‌ನಿಯಮ ಉಲ್ಲಂಘಿಸಿದ್ದಾರೆ. ಜನರಿಗೆ ಮಾದರಿಯಾಗಬೇಕಿದ್ದ ನಾಯಕರೇ ಈ ರೀತಿ ವರ್ತಿಸಿರುವುದು ಆತಂಕಕಾರಿಯಾಗಿದೆ.

 

ಲಾಕ್‌ಡೌನ್ ನಿಯಮ ಮಾತ್ರವಲ್ಲ, ಭಾರತೀಯ ಮೋಟಾರು ವಾಹನ ಕಾಯ್ದೆ ಪ್ರಕಾರ, ಮಕ್ಕಳ ಆಟಿಕೆ ವಾಹನಗಳನ್ನು ಮುಖ್ಯ ರಸ್ತೆಯಲ್ಲಿ ಓಡಿಸುವಂತಿಲ್ಲ. ಸುರಕ್ಷತೆಯ ದೃಷ್ಟಿಯಿಂದ ವಾಹನಗಳು ಓಡಾಡುವ ರಸ್ತೆಯಲ್ಲಿ ಮಕ್ಕಳ ಆಟಿಕೆ ವಾಹನಗಳು ಓಡಿಸಬಾರದು. ಹೀಗೆ ಮಾಡಿದರಲ್ಲಿ ಪೋಷಕರಿಗೆ ದುಬಾರಿ ದಂಡ ಹಾಕಲಾಗುತ್ತದೆ. ಇಲ್ಲಿ ಎಸ್ ಆರ್ ಶ್ರೀನಿವಾಸ್ ಗೌಡ ಎರಡೆರಡು ನಿಯಮ ಉಲ್ಲಂಘಿಸಿದ್ದಾರೆ.