ಮುಂಬೈ[ಸೆ.06]: ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿ-ಕೆರೆಗಳಂತಾದ ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ವಾಹನಗಳ ಸವಾರರು ಭಾರೀ ಪರಿಪಾಟಿಲು ಅನುಭವಿಸುತ್ತಿದ್ದಾರೆ. ಅಲ್ಲದೆ, ಈ ರಸ್ತೆಯಲ್ಲಿ ಕೋಟ್ಯಂತರ ರು. ಬೆಲೆಬಾಳುವ ಜಾಗ್ವಾರ್‌ ಕಾರೊಂದು ಮಳೆಯ ನೀರಿನಲ್ಲಿ ಚಲಿಸಲಾಗದ ಸ್ಥಿತಿಯಲ್ಲಿ ನಿಂತಿರುವ ಮತ್ತು ಹೊಂಡದಂತಹ ಇದೇ ರಸ್ತೆಯಲ್ಲಿ ಮಹಿಂದ್ರಾ ಕಂಪನಿಯ ಬೊಲೆರೋ ಕಾರು ಬಾಸ್‌ ರೀತಿ ಸಲೀಸಾಗಿ ಚಲಿಸುತ್ತಿರುವ ಫೋಟೋವೊಂದನ್ನು ಮಹಿಂದ್ರಾ ಕಾರು ಕಂಪನಿ ಮಾಲೀಕ ಆನಂದ್‌ ಮಹೀಂದ್ರಾ ಅವರು ಟ್ವೀಟ್‌ ಮಾಡಿದ್ದಾರೆ.

ಅಲ್ಲದೆ, ಇದಕ್ಕೆ ತಾವೇಕೆ ಬೊಲೆಲೋ ಕಾರನ್ನು ಇಷ್ಟಪಡುತ್ತೇನೆ ಎಂಬುದರ ಬಗ್ಗೆಯೂ ವಿವರಣೆ ನೀಡಿದ್ದಾರೆ. ಮುಂಬೈ ಪ್ರವಾಹದಲ್ಲಿ ಜಾಗ್ವಾರ್‌ ಕಾರು ಚಲಿಸಲು ಪರದಾಡುತ್ತಿದೆ. ಆದರೆ, ಬೊಲೆರೋ ಬಾಸ್‌ ರೀತಿಯಾಗಿ ಚಲಿಸುತ್ತಿದೆ. ಅಲ್ಲದೆ, ಬೊಲೆರೋ ಕಾರು ಯಾವುದೇ ರೀತಿಯ ರಸ್ತೆಯಲ್ಲೂ ನಿರಾಯಾಸವಾಗಿ ಚಲಿಸುತ್ತದೆ. ಇದಕ್ಕಾಗಿಯೇ ನಾನು ಬೊಲೆರೋ ಕಾರನ್ನೇ ಇಷ್ಟಪಡುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಇದಕ್ಕೆ ಹಲವು ಟ್ವೀಟಿಗರು ಧ್ವನಿಗೂಡಿಸಿದರೆ, ಮತ್ತೆ ಕೆಲವರು ತಮ್ಮ ಕಂಪನಿಯ ಕಾರನ್ನು ಮಾರ್ಕೆಂಟಿಂಗ್‌ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.