ನವದೆಹಲಿ[ನ.30]: ವಾಹನ ಮಾಲೀಕರಿಗೊಂದು ಸಿಹಿಸುದ್ದಿ. ಆನ್‌ಲೈನ್‌ ಮೂಲಕ ಹೆದ್ದಾರಿಗಳ ಟೋಲ್‌ ಶೇಖರಣೆಗಾಗಿ ಎಲ್ಲ ರೀತಿಯ ವಾಹನಗಳಿಗೂ ಕಡ್ಡಾಯಗೊಳಿಸಲಾಗಿರುವ ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಅಳವಡಿಕೆ ಗಡುವು ಅವಧಿಯನ್ನು ಕೇಂದ್ರ ಸರ್ಕಾರ ಡಿ.1ರಿಂದ ಡಿ.15ಕ್ಕೆ ವಿಸ್ತರಿಸಿದೆ.

ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ ಟೋಲ್‌ ಪ್ಲಾಜಾಗಳಲ್ಲಿ ಟೋಲ್‌ ಪಾವತಿಗಾಗಿ ಏರ್ಪಡುವ ವಾಹನಗಳ ಉದ್ದದ ಸಾಲುಗಳ ನಿವಾರಣೆ ಮತ್ತು ಡಿಜಿಟಲ್‌ ಪಾವತಿ ಉತ್ತೇಜಿಸುವ ನಿಟ್ಟಿನಲ್ಲಿ ಫಾಸ್ಟ್‌ಟ್ಯಾಗ್‌ ಕಡ್ಡಾಯ ನಿಯಮ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ, ಸ್ಟಿಕ್ಕರ್‌ ಅಳವಡಿಕೆಗೆ ಡಿ.1ರ ಗಡುವು ನೀಡಿತ್ತು. ಆದರೆ, ಫಾಸ್ಟ್‌ಟ್ಯಾಗ್‌ ಖರೀದಿ ಹೆಚ್ಚಿದ ಹಿನ್ನೆಲೆ ಮತ್ತು ಬೇಡಿಕೆಗೆ ತಕ್ಕಷ್ಟುಫಾಸ್ಟ್‌ಟ್ಯಾಗ್‌ ಪೂರೈಕೆ ಆಗುತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಇದೀಗ ಡಿ.1ರ ಗಡುವನ್ನು ಡಿ.15ಕ್ಕೆ ವಿಸ್ತರಿಸಲಾಗಿದೆ.

ಡಿ.1ರಿಂದ ಫಾಸ್ಟ್‌ಟ್ಯಾಗ್‌ ಹೊಂದಿಲ್ಲದ ವಾಹನಗಳು ಟೋಲ್‌ಪ್ಲಾಜಾದಲ್ಲಿ ದುಪ್ಪಟ್ಟು ಶುಲ್ಕ ನೀಡಬೇಕು ಎಂದು ಸರ್ಕಾರ ಸೂಚಿಸಿತ್ತು. ಆದರೆ ಗ್ರಾಹಕರು ಇಂತ ಫಾಸ್ಟ್‌ಟ್ಯಾಗ್‌ ಖರೀದಿಗೆ ಮುಂದಾಗಿದ್ದರೂ, ಬೇಡಿಕೆಗೆ ತಕ್ಕಷ್ಟುಪೂರೈಕೆ ಆಗುತ್ತಿಲ್ಲ ಎಂಬ ದೂರು ಕೇಳಿಬಂದಿತ್ತು. ಅದರ ಬೆನ್ನಲ್ಲೇ ಗಡುವು ವಿಸ್ತರಣೆ ಮಾಡಲಾಗಿದೆ.

ಇದುವರೆಗೂ ದೇಶಾದ್ಯಂತ 70 ಲಕ್ಷಕ್ಕೂ ಹೆಚ್ಚು ಫಾಸ್ಟ್‌ಟ್ಯಾಗ್‌ಗಳನ್ನು ವಿತರಿಸಲಾಗಿದ್ದು, ಮಂಗಳವಾರ ಒಂದೇ ದಿನ ಸುಮಾರು 1.36 ಲಕ್ಷ ಫಾಸ್ಟ್‌ಟ್ಯಾಗ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಸೋಮವಾರ 1.03 ಲಕ್ಷ ಫಾಸ್ಟ್‌ಟ್ಯಾಗ್‌ಗಳು ಮಾರಾಟವಾಗಿವೆ. ಅಲ್ಲದೆ, ಇದೇ ವರ್ಷದ ಜುಲೈನಲ್ಲಿ ದಿನವೊಂದಕ್ಕೆ ಸರಾಸರಿ 8000 ಫಾಸ್ಟ್‌ಟ್ಯಾಗ್‌ಗಳು ಮಾರಾಟವಾಗಿದ್ದವು. ಆದರೆ, ಡಿಸೆಂಬರ್‌ 1ರಿಂದ ಫಾಸ್ಟ್‌ಟ್ಯಾಗ್‌ ಅಳವಡಿಕೆ ಕಡ್ಡಾಯ ಎಂದು ಘೋಷಣೆಯಾದ ಬಳಿಕ ನವೆಂಬರ್‌ ತಿಂಗಳಿನಲ್ಲಿ ದಿನಕ್ಕೆ ಸರಾಸರಿ 35 ಸಾವಿರ ಫಾಸ್ಟ್‌ಟ್ಯಾಗ್‌ಗಳು ಮಾರಾಟವಾಗಿವೆ. ಈ ಮೂಲಕ ಫಾಸ್ಟ್‌ಟ್ಯಾಗ್‌ಗಳ ಮಾರಾಟ ಪ್ರಮಾಣ ಶೇ.330ರಷ್ಟುಹೆಚ್ಚಿದೆ ಎಂದು ವರದಿಯೊಂದು ತಿಳಿಸಿದೆ.