ಹೊಸ ವರ್ಷ 2024ರಲ್ಲಿ ನಿಮ್ಮ ರಾಶಿಯ ಭವಿಷ್ಯ ಹೇಗಿದೆ..?
ಶೋಭಕೃತ್ ನಾಮ ಮತ್ತು ಕ್ರೋಧಿ ಸಂವತ್ಸರದ ದ್ವಾದಶರಾಶಿಗಳ ಫಲಾಫಲಗಳು ಇಲ್ಲಿವೆ.
ವೀಣಾ ಚಿಂತಾಮಣಿ
ಈ ವರ್ಷದ ಆದಿಯಿಂದ ವರ್ಷದ ಕೊನೆಯವರೆಗೂ ಶನಿ ಕುಂಭರಾಶಿಯಲ್ಲಿ, ರಾಹು ಮೀನರಾಶಿಯಲ್ಲಿ ಹಾಗೂ ಕೇತು ಕನ್ಯಾರಾಶಿಯಲ್ಲಿ ಇರುತ್ತಾರೆ. 01.05.24ರಂದು ಗುರು ತಾನು ಇದುವರೆಗೂ ಇದ್ದ ಮೇಷರಾಶಿಯನ್ನು ಬಿಟ್ಟು ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ.
ಇದೇ 2024ರ ಏಪ್ರಿಲ್ 9ರಂದು ಯುಗಾದಿ ಹಬ್ಬ. ಶೋಭಕೃತ್ ಸಂವತ್ಸರ ಕಳೆದು ಕ್ರೋಧಿ ಸಂವತ್ಸರ ಪ್ರಾರಂಭವಾಗುತ್ತದೆ.
ಕ್ರೋಧ ಎಂದರೆ ಕೋಪ-ಕಿರಿಕಿರಿ-ಸಿಟ್ಟು ಹೀಗೆ ನಾನಾ ಅರ್ಥಗಳು ಇವೆ. ಅಂದರೆ ಕ್ರೋಧಿ ಸಂವತ್ಸರದಲ್ಲಿ ಜನಗಳು ಬೇಗ ಕೋಪ ಮಾಡಿಕೊಳ್ಳುತ್ತಾರೆ. ಕೋಪದಿಂದ ಜಗಳ, ಯುದ್ಧಗಳೇ ನಡೆಯಬಹುದು. ಹೆಸರೇ ಹೇಳುವಂತೆ ಕ್ರೋಧಿನಾಮ ಸಂವತ್ಸರ ಕೇಳಲು ಆಹ್ಲಾದಕರವಾಗಿ ಇಲ್ಲ. ಅಭಿವೃದ್ಧಿಗಿಂತ ಅನಾಹುತಗಳೇ ಹೆಚ್ಚು ಕಾಣಬರುತ್ತದೆ. ಪ್ರಕೃತಿ ವಿಕೋಪಕ್ಕೆ ಮಾನವ ಅಸಹಾಯಕ. ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಮಾನವ ತನ್ನ ಬುದ್ಧಿಯನ್ನು ಹತೋಟಿಯಲ್ಲಿ ಇಟ್ಟುಕೊಂಡು ಕ್ರೋಧವನ್ನು ನಿಯಂತ್ರಣ ಮಾಡಿಕೊಂಡರೆ, ತಾಳ್ಮೆ ಸಹನೆ ರೂಢಿಸಿಕೊಂಡರೆ ಲೋಕದಲ್ಲಿ ಸುಖಶಾಂತಿ ನೆಲೆಸುತ್ತದೆ. ಯಾರೊಂದಿಗೂ ಕ್ರೋಧಗೊಳ್ಳದೆ ತಾಳ್ಮೆಯಿಂದ ಸ್ನೇಹದಿಂದ ವರ್ತಿಸೋಣ. ನಮ್ಮ ಕ್ರೋಧದಿಂದ ಆಗುವ ಅನಾಹುತಗಳನ್ನು ಕಡಿಮೆ ಮಾಡೋಣ. ಲೋಕಕಲ್ಯಾಣಕ್ಕಾಗಿ ಶ್ರಮಿಸೋಣ.
ಈಗ ದ್ವಾದಶರಾಶಿಗಳ ಗೋಚಾರ ಫಲ:
ಮೇಷರಾಶಿ: ಗುರು ಈಗ ನಿಮ್ಮ ರಾಶಿಯಲ್ಲೇ ಇದ್ದು ಮಾನಸಿಕವಾಗಿ ಬಳಲಿಸುತ್ತಾನೆ, ದೈಹಿಕ ಶ್ರಮವೂ ಹೆಚ್ಚಾಗಿದೆ. ರಾಹು 12ನೇ ಮನೆಯಲ್ಲಿ ಇದ್ದು ಖರ್ಚುವೆಚ್ಚಗಳನ್ನು ಹೆಚ್ಚಿಸುತ್ತಾನೆ. ಶನಿ ಲಾಭಸ್ಥಾನದಲ್ಲಿ ಇರುವುದರಿಂದ ಹಣದ ಹರಿವೂ ಉತ್ತಮವಾಗಿದೆ. ಗುರುಬಲ ಇಲ್ಲದೆ ನೀವು ಅಂದುಕೊಂಡ ಕೆಲಸಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ಆದರೆ ಈ ವರ್ಷದ ಮೇ 1ನೇ ತಾರೀಖು ಗುರು ಮೇಷರಾಶಿಯನ್ನು ಬಿಟ್ಟು ವೃಷಭಕ್ಕೆ ಪ್ರವೇಶವಾದಾಗ ನಿಮಗೆ ಗುರುಬಲ ಲಭಿಸಿ ಎಲ್ಲ ಕೆಲಸ ಕಾರ್ಯಗಳು ವೇಗ ಪಡೆದುಕೊಳ್ಳುತ್ತವೆ. ಮಾನಸಿಕ ಚಿಂತೆ ದೂರವಾಗುತ್ತದೆ. ಶನಿ-ಗುರು ಇಬ್ಬರ ಅನುಗ್ರಹವೂ ದೊರೆಯುವುದರಿಂದ ಈ ವರ್ಷ ಮೇ ತಿಂಗಳ ನಂತರ ನೆಮ್ಮದಿಯ ಬದುಕು ನಿಮ್ಮದಾಗಲಿದೆ. ನಿಮ್ಮ ಗುರಿ ಸಾಧಿಸುವುದರಲ್ಲಿ ಯಶ ಕಾಣುತ್ತೀರಿ.
ವೃಷಭರಾಶಿ: ನಿಮಗೆ ಈಗ ರಾಹು ಲಾಭಸ್ಥಾನದಲ್ಲಿ ಇರುವುದೇ ಲಾಭಕರ. ಈ ವರ್ಷಪೂರ್ತಿ ರಾಹು ಲಾಭಸ್ಥಾನದಲ್ಲಿ ಇದ್ದು ನಿಮ್ಮ ಹಣದ ಹರಿವನ್ನು ಉತ್ತಮಪಡಿಸುತ್ತಾನೆ. ಸಾಹಸದಿಂದ ಪರಾಕ್ರಮದಿಂದ ಕೆಲಸಕಾರ್ಯಗಳು ಆಗುವಂತೆ ಮಾಡುತ್ತಾನೆ. ಮುನ್ನುಗ್ಗುವ ಛಾತಿ ಕೊಡುತ್ತಾನೆ. ಷೇರು ವಹಿವಾಟಿನಲ್ಲಿ ಹಣ ಹೂಡಿದರೆ ಉತ್ತಮ ಲಾಭ ಇದೆ. ಇನ್ನು ಗುರು ಈ ವರ್ಷದ ಮೇ ವರೆಗೂ ವ್ಯಯಸ್ಥಾನದಲ್ಲಿ ನಂತರ ವರ್ಷಪೂರ್ತಿ ನಿಮ್ಮ ರಾಶಿಯಲ್ಲೇ ಇರುವುದು ನಿಮಗೇನೂ ಲಾಭ ಕೊಡುವುದಿಲ್ಲ. ಕೊಂಚ ಮಾನಸಿಕ ಒತ್ತಡ, ಕಿರಿಕಿರಿ, ಖರ್ಚು ಇರುತ್ತದೆ. ಶನಿ ಹತ್ತನೇ ಮನೆಯಲ್ಲಿ ತಟಸ್ಥ. ಐದನೇ ಮನೆಯಲ್ಲಿ ಕೇತು ಇರುವುದು ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆ. ಶಿವನನ್ನು ಆರಾಧಿಸಿ.
ಮಿಥುನರಾಶಿ: ಈಗ ಮೇ ತನಕ ಗುರು ಲಾಭಸ್ಥಾನದಲ್ಲಿ ಇದ್ದು ಪೊರೆಯುತ್ತಾನೆ. ನಂತರ ಗುರು ವರ್ಷಪೂರ್ತಿ 12ನೇ ಮನೆಗೆ ವ್ಯಯಸ್ಥಾನದಲ್ಲಿ ಇರುತ್ತಾನೆ. ಇದು ನಿಮಗೆ ಜಾಗ ಬದಲಾವಣೆ ಹಾಗೂ ಕೊಂಚ ಮಾನಸಿಕ ಕಿರಿಕಿರಿ ಒತ್ತಡಗಳನ್ನು ಸೂಚಿಸುತ್ತದೆ. ರಾಹು ಹತ್ತನೇ ಮನೆಯಲ್ಲಿ ಇರುವುದರಿಂದ ಈ ರಾಶಿಯ ರಾಸಾಯನಿಕ/ಔಷಧಿ ವ್ಯಾಪಾರಿಗಳು, ವೈದ್ಯರು ಇವರಿಗೆ ಶುಭಫಲಗಳು ದೊರೆಯುತ್ತದೆ. ನಾಲ್ಕನೇ ಮನೆಯಲ್ಲಿ ಕೇತು ಇರುವುದು ತಾಯಿಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಅವರಿಗೆ ಒತ್ತಡ ಹೆಚ್ಚಾಗುತ್ತದೆ. ಭೂಮಿಗೆ ಸಂಬಂದ ಪಟ್ಟ ವ್ಯವಹಾರ ಈ ವರ್ಷ ಯಾವುದೂ ಮಾಡಬೇಡಿ. ನಷ್ಟವಾಗುತ್ತದೆ. ವಾಹನದಿಂದಲೂ ನಷ್ಟವಿದೆ. ವೈಯುಕ್ತಿಕವಾಗಿ ನಿಮಗೂ ಈ ವರ್ಷ ಒತ್ತಡಗಳಿಂದ ಕೂಡಿರುತ್ತದೆ. ಗಣಪತಿಯನ್ನು ಪೂಜಿಸಿ.
ಕಟಕರಾಶಿ: ಈಗ ಒಂದು ವರ್ಷದಿಂದ ಅಷ್ಟಮಶನಿಯ ಪ್ರಭಾವದಿಂದ ಬಹಳ ಬಳಲಿದ್ದೀರಿ. ಕಳೆದ ವರ್ಷ ಗುರುಬಲವೂ ಇಲ್ಲದೆ ಸಾಕಷ್ಟು ಅನುಭವಿಸಿದ್ದೀರಿ. ಆದರೆ ಈಗ ಮೇ ನಂತರ ಗುರುಬಲ ಬರಲಿದ್ದು ನಿಮ್ಮ ಕಷ್ಟಗಳಿಗೆ ಒಂದು ಕೊನೆ/ಪರಿಹಾರ ದೊರೆಯುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಆಗಲಿದೆ. ಬಡ್ತಿ ದೊರೆಯಬಹುದು. ಕಾರ್ಯಕ್ಷೇತ್ರದಲ್ಲಿ ಉತ್ತಮಫಲ ಸಿಗುತ್ತದೆ. ಖರ್ಚುವೆಚ್ಚಗಳ ಮೇಲೆ ನಿಯಂತ್ರಣ ಸಾಧಿಸುತ್ತೀರಿ. ಹಣದ ಹರಿವು ಉತ್ತಮವಾಗುತ್ತದೆ. ಆರೋಗ್ಯ ಸುಧಾರಿಸುತ್ತದೆ. ಯಾವುದೋ ನಿಂತು ಹೋಗಿದ್ದ ಕೆಲಸ ಮತ್ತೆ ಚಾಲನೆ ಪಡೆದುಕೊಳ್ಳುತ್ತದೆ. ಮನಸ್ಸಿಗೆ ಆಹ್ಲಾದ ಸಿಗುತ್ತದೆ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಮೂರನೇ ಮನೆಯಲ್ಲಿ ಇರುವ ಕೇತು ಸಹ ನಿಮಗೆ ಬೆಂಬಲವಾಗಿ ನಿಲ್ಲುತ್ತಾನೆ. ಶಕ್ತಿ ಸಾಹಸ ಕೊಡುತ್ತಾನೆ.
ಸಿಂಹರಾಶಿ: ಈ ವರ್ಷಾದಿಯಿಂದ ವಷಾಂತ್ಯದವರೆಗೂ ಶನಿ ಏಳನೇ ಮನೆಯಲ್ಲಿ, ರಾಹು ಎಂಟನೇ ಮನೆಯಲ್ಲಿ, ಕೇತು ಎರಡನೇ ಮನೆಯಲ್ಲಿ ಸಂಚರಿಸುತ್ತಾರೆ. ಶನಿ ಏಳರಲ್ಲಿ ತಟಸ್ಥ, ರಾಹು ಎಂಟನೇ ಮನೆಯಲ್ಲಿ ಅನಾರೋಗ್ಯ ಕೊಡುತ್ತಾನೆ. ಆಹಾರದ ವಿಷಯದಲ್ಲಿ ಎಚ್ಚರವಾಗಿ ಇರಿ. ರಾಸಾಯನಿಕಗಳು, ವಿಷವಸ್ತುಗಳು ನಿಗೂಢವಾಗಿ ನಿಮ್ಮ ದೇಹ ಸೇರಿ ಅನಾರೋಗ್ಯಕ್ಕೆ ಕಾರಣ ಆಗಬಹುದು. ಕೇತು ಎರಡನೇ ಮನೆಯಲ್ಲಿ ಇದ್ದು ಕೌಟುಂಬಿಕವಾಗಿ ಕೊಂಚ ಕಿರಿಕಿರಿಯನ್ನು ಕೊಡುತ್ತಾನೆ. ಗುರು ಮೇ 1ರ ತನಕ ಒಂಬತ್ತನೇ ಮನೆಯಲ್ಲಿ ಇದ್ದು ಬಹಳ ಸಹಕಾರ ನೀಡುತ್ತಾನೆ. ಕಾರ್ಯಸಾಫಲ್ಯತೆ ಇರುತ್ತದೆ. ಆದರೆ ಮೇ 1 ನಂತರ ಹತ್ತನೇ ಮನೆಗೆ ಗುರು ಪ್ರವೇಶ ಅಷ್ಟು ಒಳ್ಳೆಯದಲ್ಲ. ವೃತ್ತಿಯಲ್ಲಿ ಕೊಂಚ ಏರುಪೇರು ಆಗಬಹುದು. ಸ್ಥಾನಮಾನ ಕುಸಿಯಬಹುದು. ಎಚ್ಚರಿಕೆಯಿಂದ ಇರಿ. ಗುರುಗಳ ಅನುಗ್ರಹಕ್ಕಾಗಿ ಪ್ರಾರ್ಥನೆ ಮಾಡಿ.
ಕನ್ಯಾರಾಶಿ: ಈ ವರ್ಷಪೂರ್ತಿ ಶನಿ ಆರನೇ ಮನೆಯಲ್ಲಿ ಇದ್ದು ವಿಪುಲವಾದ ಧನಲಾಭ ಕೊಡಿಸುತ್ತಾನೆ. ಯಾವುದೇ ಕೆಲಸ ಪರಿಪೂರ್ಣವಾಗುವ ಹಾಗೆ ಅನುಕೂಲ ಮಾಡಿಕೊಡುತ್ತಾನೆ. ಆದರೆ ಮೇ ಒಂದರ ತನಕ ಗುರುಬಲ ಇಲ್ಲ. ಕೊಂಚ ನಿಧಾನಗತಿಯ ಪ್ರಗತಿ. ಮೇ 1 ನಂತರ ಗುರು ಭಾಗ್ಯಸ್ಥಾನಕ್ಕೆ ಪ್ರವೇಶವಾಗಲಿದ್ದು ನಿಮಗೆ ಭಾಗ್ಯೋದಯವಾಗುವ ಕಾಲ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ನೌಕರಿಯಲ್ಲಿ ಬಡ್ತಿ ಇದೆ. ವಿದೇಶಪ್ರವಾಸ ಯೋಗ ಇದೆ. ಸ್ತಿರಾಸ್ತಿ, ಚರಾಸ್ತಿ ಕೊಳ್ಳುವ ಯೋಗ ಇದೆ. (ಮನೆ-ವಾಹನ) ಯಾವುದಾದರೂ ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಮೇ ನಂತರ ಚಾಲನೆ ಪಡೆದುಕೊಂಡು ನಿಮಗೆ ಸಂತೋಷ ತಂದುಕೊಡುತ್ತದೆ. ಆದರೆ ರಾಹು ಏಳನೇ ಮನೆಯಲ್ಲಿ ಇದ್ದಾನೆ, ಕೇತು ನಿಮ್ಮ ರಾಶೀಯಲ್ಲೇ ಇದ್ದಾನೆ. ಇದು ನಿಮ್ಮ ವೈಯುಕ್ತಿಕ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಂಗಾತಿಯೊಡನೆ ಕೊಂಚ ಮನಸ್ತಾಪ ಬರಬಹುದು. ಜಾಣತನದಿಂದ ನಿಭಾಯಿಸಿ. ದುರ್ಗೆಯನ್ನು ಪೂಜಿಸಿ.
ತುಲಾರಾಶಿ: ಈ ವರ್ಷ ಪೂರ್ತಿ ರಾಹು ನಿಮಗೆ ಆರನೇ ಮನೆಯಲ್ಲಿ ಇದ್ದು ಧೈರ್ಯ-ಪರಾಕ್ರಮಗಳನ್ನು ಹೆಚ್ಚಿಸುತ್ತಾನೆ. ಮುನ್ನುಗ್ಗಿ ಕೆಲಸ ಮಾಡುವ ತಾಕತ್ತು ಕೊಡುತ್ತಾನೆ. ಸಾಕಷ್ಟು ಧನಲಾಭವನ್ನೂ ಕೊಡುತ್ತಾನೆ. ಕೇತು 12ನೇ ಮನೆಯಲ್ಲಿ ಇರುವುದರಿಂದ ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಬಹುದು. ಶನಿ ಐದನೇ ಮನೆಯಲ್ಲಿ ವರ್ಷಪೂರ್ತಿ ಇರುತ್ತಾನೆ. ಪಂಚಮ ಶನಿ ಅಷ್ಟು ಒಳ್ಳೆಯದಲ್ಲ. ಆರೋಗ್ಯ ಹಣಕಾಸು ಸ್ಥಿತಿಗೆ ಕೊಂಚ ಧಕ್ಕೆಯಾಗುತ್ತದೆ. ಮೇ ವರೆಗೂ ಗುರುಬಲವೂ ಚೆನ್ನಾಗಿ ಇದ್ದು ನೀವು ಎಣಿಸಿದ ಕೆಲಸಕಾರ್ಯಗಳು ವಿಘ್ನವಿಲ್ಲದೆ ನೆರವೇರುತ್ತದೆ. ಅವಿವಾಹಿತರಿಗೆ ಮೇ ಒಳಗೆ ವಿವಾಹಯೋಗ ಇದೆ. ಮೇ ನಂತರ ಗುರು ಎಂಟನೇ ಮನೆಗೆ ಬರುವುದರಿಂದ ಸರಾಗ ಜೀವನದಲ್ಲಿ ಕೊಂದ ಅಡೆತಡೆ-ವಿಘ್ನ ಎದುರಾಗುತ್ತದೆ. ಗುರುಗಳನ್ನು ಪ್ರಾರ್ಥನೆ ಮಾಡಿಕೊಳ್ಳಿ.
ವೃಶ್ಚಿಕರಾಶಿ: ಮೇ ವರೆಗೂ ಕೆಲಸಗಳು ನಿಧಾನ ಹಾಗೂ ಒಂಥರಾ ಕಿರಿಕಿರಿ. ಗುರುಬಲ ಇಲ್ಲ. ಮೇ 1ರ ನಂತರ ಗುರು ಏಳನೇ ಮನೆಗೆ ಬರುತ್ತಾನೆ. ಕಳೆದ ವರ್ಷದ ಒಂದು ನಷ್ಟ ಬಹಳ ಮಟ್ಟಿಗೆ ಈ ವರ್ಷ ತುಂಬಿಕೊಡುತ್ತದೆ. ವಿದೇಶಕ್ಕೆ ಹೋಗಲು ಬಯಸುವವರು ಮೇ ನಂತರ ಪ್ರಯತ್ನ ಮಾಡಬಹುದು. ಅವಿವಾಹಿತರಿಗೂ ಮೇ ನಂತರ ವಿವಾಹಯೋಗ ಇದೆ. ವಿದ್ಯಾರ್ಥಿಗಳಿಗೆ ಮುನ್ನಡೆ ಇದೆ. ಕಾರ್ಯಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಪ್ರಾಪ್ತಿ ಇದೆ. ಹಣಕಾಸಿನ ಹರಿವು ಉತ್ತಮವಾಗುತ್ತದೆ. ಗುರುಬಲದ ಜೊತೆಗೆ ಈಗ ಕೇತುವೂ ವರ್ಷದ ಆದಿಯಿಂದ ಕೊನೆಯ ವರೆಗೂ ಲಾಭಸ್ಥಾನವಾದ ಹನ್ನೊಂದನೇ ಮನೆಯಲ್ಲಿ ಇರುತ್ತಾನೆ. ಇದು ನಿಮಗೆ ಬಹಳ ಅಭಿವೃದ್ಧಿ ಅದೃಷ್ಟ ಸೂಚಿಸುತ್ತದೆ. ಐದನೇ ಮನೆಯಲ್ಲಿ ರಾಹು ಗಂಡು ಮಕ್ಕಳ ಪ್ರಗತಿಗೆ ಕೊಂಚ ಹಿನ್ನಡೆ ಕೊಡುತ್ತಾನೆ. ಮಕ್ಕಳ ಫಲ ಅಪೇಕ್ಷಿಸುವವರು ಕಾಳಹಸ್ತಿಗೆ ಹೋಗಿ ರಾಹು ಶಾಂತಿ ಮಾಡಿಸಿದರೆ ಶುಭಸುದ್ದಿ ಪಡೆಯಬಹುದು. ಈಶ್ವರನನ್ನು ಪೂಜಿಸಿ.
ಧನಸ್ಸುರಾಶಿ: ಈಗ ಗುರುಬಲ ನಿಮಗೆ ಮೇ ತನಕ ಮಾತ್ರ ಇರುತ್ತದೆ. ಆದರೆ ಶನಿಬಲ ಈ ವರ್ಷಪೂರ್ತಿ ಇರುತ್ತದೆ. ರಾಹು ಕೇತುಗಳು ಈ ವರ್ಷಪೂರ್ತಿ ನಾಲ್ಕು ಹಾಗೂ ಹತ್ತನೇ ಮನೆಯಲ್ಲಿ ಇರುತ್ತಾರೆ. ಶನಿ ಮೂರನೇ ಮನೆಯಲ್ಲಿ ಇದ್ದು, ಕೆಲಸಕಾರ್ಯಗಳಲ್ಲಿ ಏನೇ ಅಡ್ಡಿ ಆತಂಕ ಬಂದರೂ ನಿವಾರಿಸುತ್ತಾನೆ. ಹಣದ ಹರಿವನ್ನು ಉತ್ತಮಪಡಿಸುತ್ತಾನೆ. ಆದರೆ ನಾಲ್ಕನೇ ಮನೆಯ ರಾಹು ಕೊಂಚ ತಲೆಬಿಸಿ, ಕಿರುಕುಳಗಳನ್ನು ಕೊಡುತ್ತಾನೆ. ಸುಖವಾದ ಜೀವನಕ್ಕೆ ಆಗಾಗ ಅಡ್ಡಿ ಪಡಿಸುತ್ತಾನೆ. ವಾಹನ ಸ್ಥಾನದಲ್ಲಿ ರಾಹು ಇರುವುದರಿಂದ ವಾಹನದಿಂದ ನಷ್ಟ ಆಗುತ್ತದೆ. ಆಸ್ತಿ ಕ್ರಯವಿಕ್ರಯ ಯಾವುದಿದ್ದರೂ ಮುಂದಕ್ಕೆ ಹಾಕಿ. ಈ ವ್ಯವಹಾರ ನಷ್ಟವನ್ನೇ ತರುತ್ತದೆ. ಮೇ ನಂತರ ಆರನೇ ಮನೆಗೆ ಗುರು ಪ್ರವೇಶವಾದಾಗ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಬೇಡದ ಯೋಚನೆಗಳು ಬೇಡದ ಹಗರಣಗಳು ಎದ್ದು ನಿಲ್ಲುತ್ತದೆ. ಶನಿಬಲ ಇರುವುದರಿಂದ ಈ ವರ್ಷ ಅಂಥ ಋಣಾತ್ಮಕ ಪರಿಣಾಮಗಳು ಏನೂ ಹೆಚ್ಚಿಗೆ ಇರುವುದಿಲ್ಲ. ಆದರೂ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರಬೇಕು. ದತ್ತಾತ್ರೇಯನನ್ನು ಪೂಜಿಸಿ.
ಮಕರರಾಶಿ: ಈ ವರ್ಷ ನಿಮಗೆ ರಾಜಯೋಗವೆಂದೇ ಹೇಳಬಹುದು. ಸಾಡೆಸಾತಿಯ ಕಹಿ-ಕಪಿ ಮುಷ್ಟಿಯಲ್ಲಿ ಸಿಕ್ಕು ಸುಮಾರು ಏಳುವರ್ಷದಿಂದ ಬಹಳ ಕಷ್ಟ ಪಟ್ಟಿದ್ದೀರಿ. ಆ ಕಷ್ಟಗಳಿಗೆಲ್ಲ ಕೊನೆಯನ್ನು ಈ ವರ್ಷ ಕಾಣುತ್ತೀರಿ. ಜೂನ್ ನಂತರ ಸಾಡೆಸಾತಿಯ ಪ್ರಭಾವ ಸಹ ಕಡಿಮೆಯಾಗುತ್ತದೆ. ರಾಹು ಮೂರನೇ ಮನೆಯಲ್ಲಿ ವರ್ಷಪೂರ್ತಿ ಇದ್ದು ಪರಾಕ್ರಮವನ್ನು ಧೈರ್ಯ ಸಾಹಸವನ್ನೂ ಹೆಚ್ಚಿಸುತ್ತಾನೆ. ಗುರು ಮೇ ತಿಂಗಳಲ್ಲಿ ಐದನೇ ಮನೆಗೆ ಪ್ರವೇಶವಾಗುತ್ತಾನೆ. ಇದು ನಿಮಗೆ ಅಭೂತಪೂರ್ವ ಯಶಸ್ಸನ್ನು ತಂದುಕೊಡುತ್ತದೆ. ನಿರುದ್ಯೋಗಿಗಳಿಗೆ ಅವರ ಅರ್ಹತೆಗನುಸಾರವಾಗಿ ಉದ್ಯೋಗ ದೊರೆಯುತ್ತದೆ. ಅವಿವಾಹಿತರಿಗೆ ವಿವಾಹಪ್ರಾಪ್ತಿ ಇದೆ. ಸಾಲಸೋಲಗಳಿಂದ ಕಂಗೆಟ್ಟವರು ಸಾಲ ತೀರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತೀರಿ. ಅಧಿಕಾರ, ಸಾಮಾಜಿಕ ಸನ್ಮಾನ ಗೌರವ ಎಲ್ಲವೂ ಸಿಗುತ್ತದೆ. ಹಣದ ಹರಿವು ಉತ್ತಮವಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ಶಾಂತಿ ಸಂತಸ ನೆಲೆಸುತ್ತದೆ. ಆರೋಗ್ಯ ಸುಧಾರಿಸುತ್ತದೆ. ನಿಮಗೆ ನಿಮ್ಮ ಮಾತಿಗೆ ಮಹತ್ವ ಬರುತ್ತದೆ. ಧೈರ್ಯ- ದೃಢ ನಂಬಿಕೆಯಿಂದ ಮುಂದುವರೆಯಿರಿ.
ಕುಂಭರಾಶಿ: ನಿಮಗೆ ಯಾವ ಗ್ರಹಬಲವೂ ಬೆಂಬಲ ಕೊಡುತ್ತಿಲ್ಲ. ನಿಮ್ಮ ರಾಶಿಯಲ್ಲೇ ಶನಿ, ಎರಡನೇ ಮನೆಯಲ್ಲಿ ರಾಹು, ಎಂಟನೇ ಮನೆಯಲ್ಲಿ ಕೇತು ಈ ವರ್ಷ ಪೂರ್ತಿ ಇದ್ದು ನಿಮ್ಮನ್ನು ಕಂಗೆಡಿಸುತ್ತಾರೆ. ಗುರು ಮೇ ತಿಂಗಳಲ್ಲಿ ನಾಲ್ಕನೇ ಮನೆಗೆ ಪ್ರವೇಶವಾಗುವುದು ಕೂಡ ನಿಮ್ಮ ಪಾಲಿಗೆ ಹಿತಕರ ಅಲ್ಲ. ರಾಜಕೀಯ ನಾಯಕರು ಮೇ ನಂತರ ಬಹಳಷ್ಟು ಹಗರಣಗಳಲ್ಲಿ ಸಿಲುಕಿಕೊಳ್ಳುತ್ತಾರೆ ಅಥವಾ ಹಗರಣ ಮಾಡಿಕೊಳ್ಳುತ್ತಾರೆ. ಈ ರಾಶಿಯ ಜನರಿಗೆ ಈಗ ಗಂಭೀರವಾದ ಸಮಯ. ಕೌಟುಂಬಿಕವಾಗಿ ಅಶಾಂತಿ, ಹಣದ ವಿಪರೀತ ಖರ್ಚು, ಮಾನಸಿಕ ಕಿರುಕುಳ, ಯಾವುದೋ ಹಳೆಯ ಪ್ರಕರಣಗಳು ಈಗ ಎದ್ದು ನಿಂತು ನಿಮ್ಮನ್ನು ಹಿಂಸಿಸುತ್ತದೆ. ಕಾರ್ಯಕ್ಷೇತ್ರದಲ್ಲಿ ಕಿರುಕುಳ ಇದೆ. ಆದಷ್ಟು ಸತ್ಯ-ನ್ಯಾಯದಿಂದ ನಡೆದುಕೊಳ್ಳಿ. ಯಾರನ್ನೂ ವಿನಾಕಾರಣ ದೂಷಿಸಬೇಡಿ. ನಿಮ್ಮ ಮಾತೇ ನಡೆಯಬೇಕೆಂಬ ಹಟ ಬೇಡ. ಈ ವರ್ಷ ಆದಷ್ಟು ಮೌನ ಹಾಗೂ ತಟಸ್ಥ ಮನೋಭಾವ ಒಳ್ಳೆಯದು. ಆಂಜನೇಯನ ದರ್ಶನ ಪೂಜೆ ಮಾಡಿ.
ಮೀನರಾಶಿ: ನಿಮಗೆ ಸಾಡೆಸಾತಿ ಪ್ರಾರಂಭಿಕ ಹಂತದಲ್ಲಿ ಇದೆ. ಆದರೂ ಮೇ ತನಕ ಗುರುಬಲ ಇದ್ದು ಸಾಡೆಸಾತಿಯ ಬಿಸಿ ಅಷ್ಟಾಗಿ ತಾಕುವುದಿಲ್ಲ. ಈ ವರ್ಷಪೂರ್ತಿ ಶನಿ 12ನೇ ಮನೆಯಲ್ಲಿ, ರಾಹು ನಿಮ್ಮ ರಾಶಿಯಲ್ಲಿ ಹಾಗೂ ಕೇತು ಏಳನೇ ಮನೆಯಲ್ಲಿ ಇರುತ್ತಾರೆ. ಗುರು ಮೇ ನಂತರ ಮೂರನೇ ಮನೆಗೆ ಪ್ರವೇಶವಾಗುತ್ತಾನೆ. ಮೂರರ ಗುರು ಕೆಟ್ಟದ್ದನ್ನೂ ಮಾಡದಿದ್ದರೂ ಒಳ್ಳೆಯ ಫಲವೂ ಇಲ್ಲ. ತಟಸ್ಥ. 12ರ ಶನಿ ಬಹಳ ಖರ್ಚುಗಳನ್ನು ಕೊಡುತ್ತಾನೆ. ನಿಮ್ಮ ರಾಶಿಯಲ್ಲೇ ಇರುವ ರಾಹು ಅನಾರೋಗ್ಯ ಸೂಚಿಸುತ್ತಾನೆ. ಚರ್ಮದ ಅಲರ್ಜಿ, ಕಣ್ಣಿನ ತೊಂದರೆ, ವಿಷಾಹಾರ ಸೇವನೆ ಈರೀತಿಯ ತೊಂದರೆಗಳು ಬರಬಹುದು. ಕಾಲುಗಳಿಗೆ ಏಟು ಬೀಳುವ ಸಂಭವ ಇದೆ. ಓಡಾಡುವಾಗ, ವಾಹನ ಚಲಾಯಿಸುವಾಗ ಆದಷ್ಟು ಜಾಗ್ರತೆ ವಹಿಸಿ. ದೂರದ ಊರಿಗೆ ವರ್ಗಾವಣೆ ಆಗಬಹುದು. ಮರೆತೇ ಹೋಗಿದ್ದ ಯಾವುದೋ ತೊಂದರೆ ಮತ್ತೆ ಮೇಲೇಳಬಹುದು. ಆದಷ್ಟು ಯಾರಿಗೂ ತೊಂದರೆಯಾಗದಂತೆ ಯಾರ ಮನಸ್ಸೂ ನೋಯಿಸದೆ ನಡೆದುಕೊಳ್ಳಿ. ಗೊತ್ತಿದ್ದೂ ತಪ್ಪು ಮಾಡಲು ಹೋಗಬೇಡಿ. ಹಿರಿಯರ ಸಲಹೆ ಸೂಚನೆ ಪಾಲಿಸಿ. ದತ್ತಾತ್ರೇಯ ದರ್ಶನ ಮಾಡಿ.