- ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಶ್ರೀ ಪೇಜಾವರ ಆಧೋಕ್ಷಜ ಮಠ ಉಡುಪಿ

ಆಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ನ ವಿಶ್ವಸ್ಥರು

ವಾಲ್ಮೀಕಿ ರಾಮಾಯಣ ಪ್ರಾರಂಭವಾಗುವುದೇ ಹೀಗೆ,

ಒಮ್ಮೆ ವಾಲ್ಮೀಕಿ ಮಹರ್ಷಿಗಳಿಗೆ ನಾರದರ ಭೇಟಿಯಾಗುತ್ತದೆ, ತ್ರಿಲೋಕ ಸಂಚಾರಿಯಾದ ನಾರದರಲ್ಲಿ ವಾಲ್ಮೀಕಿ ಮಹರ್ಷಿ, ಎಲ್ಲಾ ಸದ್ಗುಣಗಳನ್ನು ಪಟ್ಟಿಮಾಡಿ, ‘ನಾರದರೇ ಇವತ್ತಿನ ದಿವಸಕ್ಕೂ ಕೂಡಾ ಇಂತಹ ಎಲ್ಲಾ ಸದ್ಗುಣಗಳುಳ್ಳ ಒಬ್ಬ ವ್ಯಕ್ತಿ ಇದ್ದಾನೋ ?’ ಎಂದು ಪ್ರಶ್ನಿಸುತ್ತಾರೆ.

ಅದಕ್ಕೆ ನಾರದರು ಉತ್ತರಿಸುತ್ತಾ, ‘ಇದ್ದಾರೆ ಮಹರ್ಷಿಗಳೇ ಇಷ್ಟೇ ಏನು, ಇದಕ್ಕಿಂತಲೂ ಮಿಗಿಲಾಗಿರುವ ಇನ್ನಷ್ಟುಸದ್ಗುಣಗಳುಳ್ಳ ಒಬ್ಬನೇ ವ್ಯಕ್ತಿ ಇವತ್ತಿಗೂ ಇದ್ದಾನೆ, ಅವನೇ ಶ್ರೀರಾಮಚಂದ್ರ’ ಎಂದರು.

ಶ್ರೀಮದ್‌ ವಾಲ್ಮೀಕಿ ರಾಮಾಯಣ ನಮಗೆ ಒದಗಿಸಿಕೊಟ್ಟಿರುವ ಶ್ರೀರಾಮಚಂದ್ರ ಯಾರೋ ಒಬ್ಬ ವ್ಯಕ್ತಿಯಲ್ಲ, ಎಲ್ಲಾ ‘ಸದ್ಗುಣಗಳ ಗಣಿ’ ಆ ಶ್ರೀರಾಮಚಂದ್ರ. ನಾವು ನೀವು ನಮ್ಮ ವೈಯುಕ್ತಿಕ ಜೀವನದಲ್ಲಿ, ಸಾಮಾಜಿಕ ಬದುಕಿನಲ್ಲಿ, ಕೌಟುಂಬಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಅನೇಕ ಸದ್ಗುಣಗಳು ಶ್ರೀರಾಮಚಂದ್ರನಲ್ಲಿದ್ದವು.

ಇಚ್ಛಾಮರಣಿಗಳಾಗಿದ್ದ ಮಧುಕೈಟಭರು ಶ್ರೀಹರಿಯಿಂದ ಸಂಹಾರವಾಗಿದ್ದು ಹೀಗೆ

ಉದಾಹರಣೆಗೆ ಶ್ರೀರಾಮಚಂದ್ರ ಸ್ಮಿತಪೂರ್ವಭಾಷಿ ಅಂದರೇ ಶ್ರೀರಾಮಚಂದ್ರ ಮತ್ತೊಬ್ಬರು ಭೆಟ್ಟಿಯಾದಾಗ, ‘ನಾನೊಬ್ಬ ರಾಜ, ನಾನಾಗಿ ಯಾಕೆ ಮುಂದೆ ಹೋಗಿ ಅವನನ್ನು ಮಾತನಾಡಿಸಬೇಕು, ಅವನೇ ಮೊದಲಾಗಿ ಮಾತನಾಡಿಸಲಿ’ ಎಂಬಂತಹ ಬಿಗುಮಾನ ಅವನಲ್ಲಿ ಇರಲಿಲ್ಲ. ಎದುರಿಗೆ ಬಂದವರನ್ನು ತಾನೇ ಮೊದಲು ಮಾತನಾಡಿಸುತಿದ್ದ, ಅದೂ ಹೇಗೆಂದರೇ ‘ಸ್ಮಿತಪೂರ್ವಭಾಷಿ’ಯಾಗಿ, ಮೊದಲು ಒಂದು ಮಂದಹಾಸ ಮುಖದಲ್ಲಿ, ಆ ಬಳಿಕ ಎದುರಿಗಿದ್ದವರ ಜೊತೆ ಮಾತು.

ಇವತ್ತು ಸಮಾಜದಲ್ಲಿ, ನಾವು ಯಾವುದೋ ಒಂದು ಎತ್ತರದ ಸ್ಥಾನಮಾನ ಪಡೆದ ತಕ್ಷಣ, ‘ನಾವೇ ಯಾಕೆ ಕೆಳಗಿಳಿದು ಹೋಗಿ ಬೇರೆಯವರನ್ನು ಮುಂದಾಗಿ ಮಾತನಾಡಿಸಬೇಕು, ಅವರೇ ಮೊದಲು ನಮ್ಮನ್ನು ಮಾತನಾಡಿಸಲಿ’ ಎಂದುಕೊಳ್ಳುತ್ತೇವೆ, ಎದುರಿದ್ದವರೂ ಕೂಡ ಹಾಗೆ ಆಲೋಚಿಸುತ್ತಾರೆ. ಇದರಿಂದ ಪರಿಚಯ ಇದ್ದ ವ್ಯಕ್ತಿಯೂ ಕೂಡ ಮಾತುಕತೆ ಇಲ್ಲದೇ ಹಾಗೆ ಮುಂದೆ ಹೋಗಿ ಬಿಡುತ್ತಾರೆ. ಇದರಿಂದ ‘ಅವನಿಗೆ ಕೊಬ್ಬು ಅಹಂಕಾರ ಜಾಸ್ತಿ ಆಗಿದೆ’ ಎಂದು ನಾವು ಅಂದುಕೊಳ್ಳುತ್ತೇವೆ, ಅವನೂ ನಮ್ಮ ಬಗ್ಗೆ ಹಾಗೇ ಅಂದಕೊಳ್ಳುತ್ತಾನೆ, ಇದ್ದ ಸ್ನೇಹ ಇಂತಹ ದುರ್ನಡತೆಯಿಂದಾಗಿ ಅದು ಅಲ್ಲಿಯೇ ಮುರಿದು ಹೋಗುತ್ತದೆ, ವೈರತ್ವಕ್ಕೆ ಕಾರಣವಾಗುತ್ತದೆ.

ಶ್ರೀರಾಮಚಂದ್ರ ಹೀಗೆ ಯಾವತ್ತೂ ಕೂಡ ಮೊತ್ತಮೊದಲು ತನ್ನನ್ನು ಮಾತನಾಡಿಸಲಿ ಎಂದು ಕಾಯುತ್ತಿರಲಿಲ್ಲ, ತಾನೇ ಮಂದಹಾಸ ಪೂರ್ವಕವಾಗಿ ಮತ್ತೊಬ್ಬರ ಯೋಗಕ್ಷೇಮ ವಿಚಾರಿಸುತಿದ್ದ, ರಾಜ್ಯದಲ್ಲಿ ಎಲ್ಲೆ ಹೋದರೂ ತನ್ನ ಪ್ರಜೆಗಳನ್ನೆಲ್ಲಾ ವಿಚಾರಿಸಿಕೊಳ್ಳುತ್ತಿದ್ದ, ಹಿರಿಯರು ಎದುರಾದರೇ ‘ಮಕ್ಕಳು ನಿಮ್ಮ ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತಿದ್ದಾರೇನೂ ?’ ವಿಚಾರಿಸುತಿದ್ದ, ಗುರುಗಳು ಎದುರಾದರೇ ‘ಶಿಷ್ಯರೆಲ್ಲರೂ ಚೆನ್ನಾಗಿ ನಡೆದುಕೊಳ್ಳುತಿದ್ದಾರೇನೂ?’ ಎಂದು ಕೇಳುತಿದ್ದ.

ಕಲ್ಯಾಣ ರಾಮನ ಕಲ್ಯಾಣ ಚರಿತೆ

ಪ್ರಜೆಗಳನ್ನೆಲ್ಲಾ ತನ್ನ ಮಕ್ಕಳಂತೆ ಕಾಣುತಿದ್ದ ಶ್ರೀರಾಮಚಂದ್ರ ಅವರ ಸುಖದಲ್ಲಿ ತನ್ನ ಸುಖವನ್ನು ಕಾಣುತಿದ್ದ, ಅವರು ದುಖದಲ್ಲಿದ್ದರೇ ತಾನು ತುಂಬಾ ನೊಂದುಕೊಳ್ಳುತಿದ್ದ, ತನ್ನ ಬದುಕನ್ನು ಪರಾರ್ಥಕ್ಕೋಸ್ಕರ ಮೀಸಲಿಟ್ಟು ‘ಸ್ವಾರ್ಥವನ್ನು ಇಲ್ಲವೇ ಇಲ್ಲ’ ಎಂದು ಮಾಡಿಕೊಂಡುಬಿಟ್ಟಿದ್ದ.

ಇನ್ನೊಂದು ಉದಾಹರಣೆ, ರಾಮನಿಗೂ ಭರತನಿಗೂ ವಿವಾದ ನಡೆಯಿತು, ಏನೆಂದರೇ ‘ರಾಜ್ಯ ನಿನಗಿರಲಿ ನನಗೆ ಬೇಡ’ ಎಂದು.

ಇವತ್ತು ಸಮಾಜದಲ್ಲಿ ಅಣ್ಣತಮ್ಮಂದಿರೊಳಗೂ ವಿವಾದ ಆಗುತ್ತದೆ, ‘ಆಸ್ತಿ ನನಗೆ ಬೇಕು ನಿನಗೆ ಬೇಡ’ ಎಂದು.

ಶ್ರೀರಾಮಚಂದ್ರ ಜೊತೆಗೆ ಇದ್ದವರಷ್ಟೂಮಂದಿ ಪರಾರ್ಥಕೊಸ್ಕರ ತಮ್ಮ ಬದುಕನ್ನು ಮೀಸಲಿಟ್ಟದ್ದು ರಾಮಾಯಣದಲ್ಲಿ ಕಾಣುತ್ತೇವೆ, ಇದಕ್ಕೆ ಕಾರಣ ಶ್ರೀರಾಮಚಂದ್ರ

‘ರಾಮ’ ಅನ್ನುವ ಶಬ್ದಕ್ಕೇನೇ, ಯಾರಿಂದಾಗಿ ಸಮಸ್ತ ಜಗತ್ತು ಕೂಡಾ ಆರಾಮವನ್ನು ಅನುಭವಿಸ್ತಾ ಇದೆಯೋ ಅವನೇ ರಾಮ ಎಂದರ್ಥ

ದುಃಖ ಎಲ್ಲಿ ಇದ್ದರೂ ಅದು ತನಗಿರಲಿ, ಸಮಾಜ ಸಂತೋಷದಿಂದ ಇರಲಿ ಎಂದು ಶ್ರೀರಾಮಚಂದ್ರ ಹೀಗೆ ಬಯಸಿದವ.

ಇಂತಹ ‘ಶ್ರೀರಾಮಚಂದ್ರನ ಆರಾಧನೆ ಎಂದರೇ ಅದು ಸದ್ಗುಣಗಳ ಆರಾಧನೆ, ಸಚ್ಚಾರಿತ್ರ್ಯದ ಆರಾಧನೆ, ರಾಮನಿಗೆ ತಲೆಬಾಗುವುದು ಅಂತಂದರೇ ಸದ್ಗುಣಗಳಿಗೆ ತಲೆಬಾಗುವುದು’ ಅಂತರ್ಥ.

ನಮ್ಮಿಂದ ಎಷ್ಟುಸಾಧ್ಯವೋ ಅಷ್ಟುಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು, ದುರ್ಗುಣಗಳನ್ನು ದೂರ ಮಾಡಿಕೊಳ್ಳಬೇಕು, ಅದೇ ಶ್ರೀರಾಮಚಂದ್ರನ ಅರಾಧನೆ.

ರಾಮನವಮಿಯ ಈ ಪರ್ವಕಾಲ ನಮಗೆ ಇಂತಹ ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವುದಕ್ಕೆ ಪ್ರೇರಣೆ ನೀಡಿತು ಅಂತಾದರೇ ಆವಾಗ ನಮ್ಮ ರಾಮನವಮಿಯ ಉತ್ಸವ ಸಾರ್ಥಕ ಆಗುತ್ತದೆ.

ಎಲ್ಲಾ ಸದ್ಗುಣಗಳಿಗೆ ಶ್ರೀರಾಮಚಂದ್ರ ಪ್ರತೀಕನಾಗಿದ್ದಾನೆ, ಅಂತಹ ರಾಮನ ಸದ್ಗುಣಗಳನ್ನು ಮೈದುಂಬಿಸಿಕೊಳ್ಳುವ ಮೂಲಕ ಆರಾಧಿಸೋಣ ರಾಮನನ್ನು ನಮ್ಮೊಳಗೆ ತುಂಬಿಸಿಕೊಳ್ಳೋಣ, ಅಂದು ರಾಮನ ರಾಜ್ಯ ಇದ್ದಂತೆ ಇಂದು ಪುನಃ ನಮ್ಮ ರಾಜ್ಯವನ್ನು ರಾಮರಾಜ್ಯ ಮಾಡುವುದಕ್ಕೆ ನಾಂದಿ ಹಾಡೋಣ.

‘ಇದಕ್ಕಾಗಿ ನಮಗೆ ರಾಮಾಯಣ ಬೇಕು’

ರಾಮನಿಗೆ ವಿರುದ್ಧವಾದವ ರಾವಣ, ಸುಖವೇನಿದ್ದರೂ ನನಗೆ ಬರಲಿ, ಸಮಾಜ ಎಷ್ಟೇ ದುಃಖಕ್ಕೆ ಈಡಾದರೂ ಚಿಂತೆ ಇಲ್ಲ ಎಂಬಂತಿದ್ದ ರಾವಣ, ಪರರ ಮನೆಯ ಹೆಣ್ಣುಮಕ್ಕಳನ್ನೂ ಕೂಡ ಕಸಿದುಕೊಂಡು ಹೋಗಲಿಕ್ಕೆ ಹಿಂದೆ ಮುಂದೆ ನೋಡಲಿಲ್ಲ, ಕೊನೆಗಾತ ಏನಾದ ಸರ್ವನಾಶವಾದ!

ಇವತ್ತು ಮಕ್ಕಳು ತಮ್ಮ ಹಿರಿಯರಿಂದ, ತಂದೆತಾಯಂದಿರಿಂದ ಬೇಕಾದೆಲ್ಲವನ್ನೂ ಪಡೆದುಕೊಂಡು, ಅವರು ಅಸಾಹಾಯಕ ಸ್ಥಿತಿ ತಲುಪಿದಾಗ ಅವರು ಹೇಗೆ ಬೇಕಾದರೂ ಇರಲಿ, ನಾವು ಮಾತ್ರ ವಿದೇಶದಲ್ಲಿ ಮಜವಾಗಿರೋಣ ಅಂತ ಭಾವಿಸುವ ಸಾಕಷ್ಟುಉದಾಹರಣೆಗಳಿವೆ, ಇದು ರಾವಣನ ಆದರ್ಶ.

ನಮಗೆ ರಾಮನ ಆದರ್ಶ ಬೇಕು, ರಾವಣನದ್ದಲ್ಲ . ಇದಕ್ಕೋಸ್ಕರ ನಾವು ರಾಮನ ಸಂಸ್ಕೃತಿಯನ್ನು ಎಳವೆಯಲ್ಲಿಯೇ ನಮ್ಮ ಮಕ್ಕಳಲ್ಲಿ ತುಂಬಬೇಕು, ಅದಕ್ಕೋಸ್ಕರ ನಮಗೆ ರಾಮಾಯಣ ಬೇಕು, ಶ್ರೀರಾಮಚಂದ್ರ ನಮಗೆ ಬೇಕು.

ರಾಮಾಯಣವೆಂಬ ವೇದದಲ್ಲಿ ರಾಮನೆಂಬ ಪರಬ್ರಹ್ಮ

‘ತಾಯಿ, ತಾಯಿಭೂಮಿ ಬೇಕು ಎಂದ ರಾಮ...’

‘ಜನನಿ ಜನ್ಮಭೂಮಿಶ್ಚ ಸ್ವರ್ಗದಪಿ ಗರಿಯಸಿ’ ಅಂತ ಶ್ರೀರಾಮಚಂದ್ರ ಉದ್ಘೋಷಿಸಿದ.

ರಾವಣನ ಸಂಹಾರ ಆಗಿತ್ತು, ಇನ್ನೇನೂ ಆಯೋಧ್ಯೆಗೆ ಹೋರಡಬೇಕು ಅನ್ನುವಾಗ ಲಕ್ಷ್ಮಣ ಹೇಳಿದ, ಅಣ್ಣಾ ನಾವು ಈ ಲಂಕೆಯಲ್ಲೇ ಇದ್ದು ಬಿಡೋಣ, ಬಂಗಾರಮಯವಾಗಿದೆ ಈ ಪಟ್ಟಣ, ಇದನ್ನೇ ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯವನ್ನು ಆಳೋಣ ಎಂದ.

ಆಗ ಶ್ರೀರಾಮಚಂದ್ರ, ಯಾರಾದರೂ ‘ನಿನಗೆ ತಾಯಿ ಬೇಕೋ ಸ್ವರ್ಗ ಬೇಕೋ ಎಂದು ಕೇಳಿದರೇ ನಾನು ನಮ್ಮ ತಾಯಿಯನ್ನು ಆಯ್ದುಕೊಳ್ಳುತ್ತೇನೆ, ಜನ್ಮಭೂಮಿ ಬೇಕೋ ಸ್ವರ್ಗ ಬೇಕೋ ಎಂದರೇ ನಾನು ಆಯ್ದುಕೊಳ್ಳುವುದು ಜನ್ಮಭೂಮಿಯನ್ನು’ ಎನ್ನುತ್ತಾನೆ ಶ್ರೀರಾಮಚಂದ್ರ.

ಇಂತಹ ಮಾತಿನ ಮೂಲಕ ಶ್ರೀರಾಮಚಂದ್ರ ನಮ್ಮ ತಾಯಂದಿರ ಕುರಿತಾಗಿ ನಮ್ಮ ಮಾತೃಭೂಮಿಯ ಕುರಿತಾಗಿ ನಮಗೆ ಗೌರವಾದರ ಹೇಗಿರಬೇಕು ಎಷ್ಟರಿಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾನೆ, ಶ್ರೀರಾಮಚಂದ್ರ ತೋರಿಸಿಕೊಟ್ಟಇಂತಹ ಆದರ್ಶವೇ ನಮಗೆ ಇಂದು ಬೇಕಾಗಿರುವುದು.