-ಜ್ಯೋತಿರ್ವಿದ್ವಾನ್ ಪ್ರಶಾಂತ್ ಕೋಣೆಮನೆ
8971311527

ಅಚಿಂತ್ಯಾ ವ್ಯಕ್ತರೂಪಾಯ ನಿರ್ಗುಣಾಯ ಗುಣಾತ್ಮನೇ |
ಸಮಸ್ತ ಜಗದಾಧಾರಮೂರ್ತಯೇ ಬ್ರಹ್ಮಣೇ ನಮಃ ॥

ಗುರುವನ್ನು, ಇಷ್ಟ ದೇವರನ್ನು, ಕುಲದೇವರನ್ನು ಮನಸ್ಸಿನಲ್ಲಿ ಸ್ಮರಿಸುತ್ತ ಯುಗ ಫಲವನ್ನು ಚಿಂತಿಸೋಣ.

ಶ್ರೀಮನ್ ನಾರಾಯಣನ ನಾಭಿಕಮಲ ಸಂಜಾತ ಬ್ರಹ್ಮನ ಪರಮಾಯು ಪ್ರಯಾಣದ 100೦ ವರ್ಷಗಳಲ್ಲಿ ಪದ್ಮ ಕಲ್ಪವೆಂಬುವಂತಹ ಪ್ರಥಮ ಭಾಗವು ಮುಗಿದು, ದ್ವಿತೀಯ ಪರಾರ್ಧದ 51ನೇ ವರ್ಷದ ಮೊದಲ ಹಗಲಾದ ಶ್ವೇತ ವರಾಹ ಕಲ್ಪದಲ್ಲಿ ಸ್ವಾಯಂಭುವಾದಿ 6 ಮನ್ವಂತರಗಳು ಕಳೆದು ಏಳನೇ ವೈವಸ್ವತ ಮನ್ವಂತರದ 27 ಮಹಾಚಕ್ರಗಳು ಕಳೆದು 28ನೇ ಮಹಾಯುಗದ ಮೂರು ಯುಗಗಳು ಮುಗಿದು, ಕಲಿಯುಗದ ನಾಲ್ಕನೇ ಪಾದ ಬಂದಿದ್ದು, ಅದರಲ್ಲಿಯೂ 5121 ವರ್ಷಗಳು ಗತಿಸಿ, 1943ನೇ ಶಾಲಿವಾಹನ ವರ್ಷದ ಶಾರ್ವರಿ ಸಂವತ್ಸವರವು ಬಂದಿದೆ. 

ಭವಿಷ್ಯಂ ನೈವ ಚಿಂತಯೇತ್ ಎಂದರೂ ಸಹ ಗ್ರಹಗಳ ಚಲನೆಯನ್ನು ಚಿಂತಿಸಲೇಬೇಕು. ನ ಏವ ಚಿಂತಯೇತ್ ಎಂದರೆ ಒಂದೇ ಭಾಗದಿಂದ ಯೋಚಿಸಬೇಡಿ ಎಂದರ್ಥವನ್ನಾಗಿಸಿಕೊಂಡು ನಮ್ಮಲ್ಲಿ ಆಚರಣೆಯಲ್ಲಿದ್ದ ಸೌರ ಚಾಂದ್ರಾದಿ ಮಾನಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಹೆಚ್ಚಾಗಿ ಸೌರಮಾನದ ರೀತಿಯಲ್ಲಿ ಋಷಿ ಮುನಿಗಳು ತಮ್ಮ ಜ್ಞಾನ ಚಕ್ಷುವಿನಿಂದ ಅರಿತು ನಮಗೆ ಬಳುವಳಿಯಾಗಿ ನೀಡಿದ ಸಂಹಿತಾ, ಹೋರಾಗಳನ್ನು ಬಳಸಿ ಗ್ರಹಗಳ ಫಲಾಫಲವನ್ನು ಚಿಂತಿಸೋಣ.
ಪ್ರಭವಾದಿ ಸಂವತ್ಸರ ಚಕ್ರದಲ್ಲಿ ಶಾರ್ವರೀ ಸಂವತ್ಸರದಲ್ಲಿ ರಾಜರು ಬುಧ ಚಂದ್ರರಾಗಿದ್ದು, ಚಾಂದ್ರ ಪಕ್ಷದಲ್ಲಿ ಚಂದ್ರ ಬುಧರು ಆಗಿರುವರು. ಇದೇ ಕ್ರಮದಲ್ಲಿ ನವ ನಾಯಕರು ಬರುತ್ತಾರೆ. ಮೊದಲನೆಯದಾಗಿ ಬುಧನ ರಾಜನ ಫಲ ಹೇಗಿರುತ್ತದೆ ಎಂದರೆ,

‘ಬುಧಸ್ಯ ರಾಜ್ಞೆ, ಸಜಲಂ ಮಹೀತಲಂ 
ಗೃಹೇಗೃಹೇ ತೂರ್ಯ ವಿವಾಹ ಮಂಗಳಂ |
ಪ್ರಕುರ್ವತೇ ದಾನದಯಾ ಜನೋಪಿ ಚ
ಸ್ವಾಸ್ಥ್ಯಂ ಸುಭಿಕ್ಷಂ ಧನಧಾನ್ಯ ಸಂಕುಲಂ ॥

ಬುಧನು ರಾಜನಾಗಿರುವಾಗ ಭೂ ಭಾಗದಲ್ಲೆಲ್ಲಾ ಸಮೃದ್ಧ ಬೆಳೆಗಳು ಉತ್ತಮವಾಗಿ ಫಲಿಸುತ್ತವೆ. ಜನಗಳು ಅಂತಃಕರಣ ಉಳ್ಳವರಾಗಿ ದಾನ ಧರ್ಮಾದಿ ಸತ್ಕರ್ಮಗಳಲ್ಲಿ ತೊಡಗುವರು. ಜನರ ಆರೋಗ್ಯ ಭಾಗ್ಯಾದಿಗಳು ವೃದ್ಧಿ ಹೊಂದುತ್ತವೆ. ಆದಿಯಲ್ಲಿ ಸಾಂಕ್ರಾಮಿಕ ರೋಗ ಕಾಡುತ್ತವೆ. ಪ್ರತಿ ಮನೆಯಲ್ಲಿ ವಿವಾಹಾದಿ ಮಂಗಲ ಕಾರ್ಯ ಜರುಗುವುದು. ಸುಭಿಕ್ಷೆ ಉಂಟಾಗಿ ಜನನಾಯಕರು ಸ್ವತಂತ್ರರಾಗಿ ಇರುವರು.

ಚಂದ್ರನು ಮಂತ್ರಿಯಾಗಿರುವುದರಿಂದ ಸಕಾಲಕ್ಕೆ ಮಳೆಯಾಗುವುದರಿಂದ ಸಸ್ಯಗಳು ಸಮೃದ್ಧಿಯಾಗಿ ಫಲಿಸುವವು. ಭೂ ಮಂಡಲದಲ್ಲಿ ಸುಖ ಸಂತೋಷ ನೆಲೆಗೊಳ್ಳುತ್ತದೆ. ಹುಲ್ಲು, ಮೇವು ಸಮೃದ್ಧಿ ಆಗುವುದರಿಂದ ಹೈನುಗಾರಿಕೆ, ಪ್ರಾಣಿ ವರ್ಗ ಸಮೃದ್ಧಿಯಿಂದ ಇರುತ್ತದೆ. ಜನರು ಸಸ್ಯ ಶಾಮಲತ್ವದಿಂದ ಸದಾ ಆನಂದದಿಂದ ಇರಲಿರುವರು.

ಈ ರಾಶಿಯವರಿಗೆ ಕೊರೋನಾ ಭಾರಿ ಡೇಂಜರು!

ಗುರುವು ಸಸ್ಯಾಧಿಪತಿಯಾಗಿರುವುದರಿಂದ ಮೇಘಗಳು ಕಾಲಕಾಲಕ್ಕೆ ಮಳೆಗರೆಯುತ್ತವೆ. ಬೆಳೆಗಳ ಸಮೃದ್ಧಿ ಇದೆ. ಯಳ್ಳು, ಕಡಲೆ, ಅಗಸೆ, ಶೇಂಗಾ, ಔಡಲ ಮೊದಲಾದ ಎಣ್ಣೆಕಾಳುಗಳು, ಕಬ್ಬು ಮತ್ತು ರಸ ಪದಾರ್ಥಗಳು ಹೆಚ್ಚು ಉತ್ಪಾದನೆ ಆಗುತ್ತವೆ. ಹೈನು ಸಮೃದ್ಧಿ ಇರುತ್ತದೆ. ಬ್ರಾಹ್ಮಣರು ನಿತ್ಯಕರ್ಮ ನಿರತರಾಗುವರು.
ಕುಜನು ಧಾನ್ಯಾಧಿಪತಿಯಾಗಿರುವುದರಿಂದ ಕೆಂಪು ಭೂಮಿಯಲ್ಲಿ ಧಾನ್ಯ ಸಮೃದ್ಧಿ ಇರುತ್ತದೆ. ಮತ್ತು ಶುಷ್ಕ ಧಾನ್ಯಗಳು ತೇಜಿ ಇರುತ್ತವೆ. ಅಕ್ಕಿ, ಕಬ್ಬು. ತುಪ್ಪ, ಎಳ್ಳು, ಶೇಂಗಾ, ಅಗಸೆ, ಹತ್ತಿ, ಕೊಬ್ಬರಿ, ರಸ ಪದಾರ್ಥಗಳು ತುಟ್ಟಿ ಆಗುತ್ತವೆ. ಗುಡುಗು, ಸಿಡಿಲು, ಆರ್ಭಟ ಇರುತ್ತದೆ. ಅಲ್ಲಲ್ಲಿ ಅಗ್ನಿ ಜ್ವಾಲೆ ಭೀತಿ ಆಗುವುದು, ವಂಚಕರು ಹೆಚ್ಚಾಗುತ್ತಾರೆ.

ಚಂದ್ರನು ಮೇಘಾಧಿಪತಿಯಾಗಿರುವುದರಿಂದ ಭೂ ಭಾಗದಲ್ಲಿ ಸಮೃದ್ಧಿ ಆಗಿ ತನ್ಮೂಲಕ ಸಸ್ಯ ಸಮೃದ್ಧಿ ಆಗುವುದು. ಸ್ತ್ರೀಯರು ಅಪಾರ ಸೌಖ್ಯ ಅನುಭವಿಸುವರು. ಶನಿಯು ರಸಾಧಿಪತಿಯಾಗಿರುವುದರಿಂದ ಇಲ್ಲಿ ಶನಿಯು ಬುಧನ ಫಲಕ್ಕೂ ಚಂದ್ರನ ಫಲಕ್ಕೂ ಸ್ವಲ್ಪ ಹಿನ್ನಡೆಯನ್ನು ನೀಡುವುದರಿಂದ ವೃಷ್ಟಿಯ ಮೂಲಕ ಬೆಳೆ ಬಂದರೂ ಅತ್ಯಲ್ಪವಾಗಿ ಫಲಿಸುವುದು. ಕತ್ತೆ, ಒಂಟೆ ಮುಂತಾದ ಪ್ರಾಣಿಗಳು ರೋಗದಿಂದ ಬಳಲುವವು. ರಸ ಪದಾರ್ಥದ ವ್ಯಾಪಾರದಿಂದ ವರ್ತಕರು ನಷ್ಟ ಅನುಭವಿಸಬಹುದು.

ಗುರುವು ನಿರಸಾಧಿಪತಿಯಾಗಿರುವುದರಿಂದ ಹಳದಿ ಬಣ್ಣದ ಬಟ್ಟೆಗಳು, ಹಿತ್ತಾಳೆ, ಬಂಗಾರ, ಕರ್ಪೂರ, ಕಸ್ತೂರಿ, ಜವಳಿ, ಶಂಖ ಮೊದಲಾದ ವಸ್ತುಗಳ ಮಾರಾಟದಿಂದ ಲಾಭ. ಸಮುದ್ರದಲ್ಲಿ ಸಂಚರಿಸುವ ನಾವೆಗಳಿಗೆ ಆಪತ್ತು, ಸಮುದ್ರದ ಭಯವಿರುತ್ತದೆ. ಸಮುದ್ರವಿರುವ ದೇಶದಲ್ಲೆಲ್ಲಾ ಸುವೃಷ್ಟಿ ಆಗುವುದರಿಂದ ಸರ್ವ ಸಸ್ಯ ಸಮೃದ್ಧಿಯಾಗುವುದು. ಜನರು ಹಾಗೂ ಪಶುಗಳು ಸುಖದಿಂದ ಇರುವರು. ಪಶುಗಳು ರೋಗರಹಿತವಾಗುತ್ತವೆ.

ರವಿ: ವ್ಯಾಪಾರಾಧಿಪ, ಧನಾಧಿಪ, ತೃಣಾಧಿಪ
ಚಂದ್ರ: ಅಪರ ಸಸ್ಯಾಧಿಪ, ಆಜ್ಞಾಧಿಪ, ಯುದ್ಧಾಧಿಪ, ಸರ್ವಾಧಿಪ, ರತ್ನಾಧಿಪ, ಸ್ತ್ರೀ ಅಧಿಪ, ಗಜಾಧಿಪ, ವಾಗಾಧಿಪ
ಬುಧ: ಅಶ್ವಾಧಿಪ
ಗುರು: ಪೂರ್ವ ಸಸ್ಯಾಧಿಪ, ಅಗ್ರಧಾನ್ಯಾಧಿಪ, ಛತ್ರಾಧಿಪ, ನರಾಧಿಪ, ಕೋಶಾಧಿಪ, ಉಷ್ಟ್ರಾಧಿಪ, ಬರಾಧಿಪ
ಶುಕ್ರ: ವಸ್ತ್ರಾಧಿಪ, ವ್ಯವಹಾರಾಧಿಪ
ಶನಿ: ಮಹಿಷಾಧಿಪ, ಮಾಂಗಲ್ಯಾಧಿಪ

ಈ ವರ್ಷ ಜಗತ್ತಿನಲ್ಲಿ ಸಸ್ಯ ಸಮೃದ್ಧಿಯಾಗಿ, ಬಿರುಗಾಳಿ, ತಣ್ಣನೆಯ ಗಾಳಿಯಿಂದ ಅಲ್ಲಲ್ಲಿ ವಿಪತ್ತುಗಳು ಜರುಗುತ್ತವೆ. ಅಧಿಕಾರಿ ವರ್ಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡೀತು. ವರ್ಷದ ಮಧ್ಯಭಾಗದವರೆಗೂ ಸಾಂಕ್ರಮಿಕ ರೋಗ ಹಿನ್ನಡೆ ಕೊಡಲಿದೆ. ರಕ್ತವರ್ಣದ ಧಾನ್ಯ ವೃದ್ಧಿಸಿ, ಕಪ್ಪುಧಾನ್ಯ ಬೆಳೆ ಕಳೆದುಕೊಳ್ಳಬೇಕಾಗುತ್ತದೆ. 

ವೃಷ್ಟಿ ಸಮೃದ್ಧಿ ಇರುವುದರಿಂದ ಭೂಮಿ, ಸಸ್ಯಶಾಮಲಳಾಗುವಳು. ಪೂರ್ವ, ದಕ್ಷಿಣ ದೇಶಕ್ಕೆ ಭಯದ ವಾತಾವರಣ ಇರುವುದರಿಂದ ಮತ್ತು ಗುರುವಿಗೆ ಈ ಸಂವತ್ಸರದಲ್ಲಿ ಮೂರು ರಾಶಿಯ ಸಂಪರ್ಕ ಇರುವುದರಿಂದ ಕ್ಷಾಮ ಮುಂತಾದ ವಿಪತ್ತುಗಳು ಘಟಿಸುವುವು. ಕಾರಣ ನೀಚ ರಾಶಿಯ ಗುರು, ಶನಿಯ ಮಕರ ಸಂಚಾರದಿಂದ ದ್ವಿಜ, ವೃದ್ಧರಿಗೆ ಕ್ಲೇಶ, ಯೌವನದಲ್ಲಿ ಕ್ಲೇಶ ಉಂಟಾಗಬಹುದು. ರಾಜ್ಯಾಧಿಕಾರಿಗಳು, ಕಲಾವಿದರು, ಸೇನಾ ಪ್ರಮುಖರು, ಯಮುನೆಯ ಉತ್ತರ ದೇಶಸ್ಥರು ಬಾಧೆಗೆ ಒಳಗಾಗುತ್ತಾರೆ. ಇನ್ನು ‘ಧ್ವಾಂಕ್ಷಿ’ ಎಂಬ ಸಂಕ್ರಾಂತಿ ಪುರುಷ ಈ ಬಾರಿ ಜಲಸಮೃದ್ಧಿಯನ್ನು, ಬೆಲೆ ಏರಿಕೆಯನ್ನು, ರೋಗ ರುಜಿನಗಳನ್ನು, ಕಳ್ಳಕಾಕರ ಭಯವನ್ನೂ ಉಂಟುಮಾಡಿಯಾನು. ಅಷ್ಟ ಭುಜಗಳ ಉದ್ದ ಮೂಗಿನ, ತೊಂಡೆ ತುಟಿಯ, ಕರಿ ಬಣ್ಣದ, ಮೂರು ಕಣ್ಣಿನ ಕೋರೆ ಹಲ್ಲಿ, ಡೊಳ್ಳು ಹೊಟ್ಟೆಯ, ವಿಕಾರ ರೂಪದ ಕಾಲ ಪುರುಷನು ಕರ್ಪೂರದ ಎಣ್ಣೆಯನ್ನು ಹಚ್ಚಿಕೊಂಡು, ಕೃಷ್ಣಾ ನದಿಯಲ್ಲಿ ಮಿಂದು ಚರ್ಮಧಾರಿಯಾಗಿ ಗಂಧ ಲೇಪನ ಸ್ಫಟಿಕ ಮಣಿ ಧರಿಸಿ, ಮಾಧಲು ಕುಸುಮಗಳಿಂದ ಏರಿ ಲಗಾಮು ಹಿಡಿದು, ವೀಣೆಯ ನಾದವನ್ನು ಕೇಳುತ್ತಾ ಚಿಂತಾ ಮುದ್ರಿತನಾಗಿ ಪಶ್ಚಿಮಕ್ಕೆ ಹೊರಟಿರುವನು. ಈತನು ತಿಂದ ಪದಾರ್ಥ, ಹೋದ ಕಡೆ ನಷ್ಟ, ಬಳಸಿದ ವಸ್ತುಗಳು ಬೆಲೆ ಕಳೆದುಕೊಳ್ಳುವವು, ತುಟ್ಟಿಯಾಗುವವು. 

ಸಂಭ್ರಮದ ಯುಗಾದಿ ವೇಳೆ ಹೂ ಹಣ್ಣುಗಳ ಮಾರುಕಟ್ಟೆ ದರವೇನು..?

ಸಮಸ್ತ ಓದುಗರಿಗೆ ಶಾರ್ವರೀ ಸಂವತ್ಸರ ಸುಖ, ಸಮೃದ್ಧಿಯನ್ನು ಉಂಟುಮಾಡಲಿ.

ಶಾರ್ವರೀ ಸಂವತ್ಸರದ ರಾಶಿ ವರ್ಷ ಭವಿಷ್ಯ ಫಲ

* ಸೂಚನೆ: ಈ ಫಲಾಫಲಗಳು ತಾತ್ಕಾಲಿಕ ಗೃಹಗತಿ ಮತ್ತು ದಶಾವರ್ಷಕ್ಕೆ ಅನುಗುಣವಾಗಿ ಸಂಭವಿಸುತ್ತವೆ

ಮೇಷ ರಾಶಿ

ಶನಿಯ ಹತ್ತನೇ ಮನೆಯ ಸಂಚಾರದಿಂದಾಗಿ ಕೆಲಸದ ಹಿನ್ನಡೆ, ದಾರಿದ್ರ್ಯ, ಆರ್ಥಿಕ ಹಿಂಜರಿತದಿಂದ ಸ್ವಲ್ಪ ಕಂಗೆಡಬಹುದು. ಆರಂಭದ ಮೂರು ತಿಂಗಳು ಗುರುವಿನ ಅನುಗ್ರಹವಿರುವುದರಿಂದ ಆರ್ಥಿಕತೆಯ ಸಂಕಷ್ಟವನ್ನು ದೂರ ಮಾಡುತ್ತಾನೆ. ಜನವರಿಯ ತನಕ ನವಮದ ಗುರುವು ಧರ್ಮಕಾರ್ಯ, ಗೃಹ ಸುಖ, ಮಾತೃ ಸುಖ ನೀಡುತ್ತಾನೆ. ಸ್ತ್ರೀ, ಪುತ್ರಾದಿ ಲಾಭದಿಂದ ಸುಖ, ಶಾಂತಿಯನ್ನೂ ನೀಡುತ್ತಾನೆ. ಇನ್ನು ಸನ್ಮಾನಾದಿಗಳು, ಪ್ರಶಂಸೆಯೂ ಸೇರಿಕೊಳ್ಳುತ್ತವೆ. ವಿದ್ವಜ್ಜನರಿಗೆ ಸನ್ಮಾನ. ಇನ್ನು ವರ್ಷದ ಕೊನೆಯ ಭಾಗದಲ್ಲಿ ಕೇತುವಿನ ಎಂಟರ ಸಂಚಾರ ಅನಾರೋಗ್ಯದ ಭೀತಿಯನ್ನು ನೀಡುತ್ತದೆ. ಏಪ್ರಿಲ್ ೧೫ರಿಂದ ೩೦ರ ತನಕ ರವಿಯು ದೇಹಕ್ಕೆ ಪಿತ್ತ, ಉಷ್ಣ ಪೀಡೆ, ಸಿಟ್ಟು ತರುತ್ತಾನೆ. ಗುರು ಹಿರಿಯರೊಡನೆ ಸಂವಾದದಿಂದ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಕೃಷಿ ಭೂಮಿ ಲಾಭ ಉಂಟಾಗಬಹುದು. ಇದಕ್ಕೆ ಧನವಿಯೋಗ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ. ಮೇ ೧೫ರ ಸಮಯದಲ್ಲಿ ಅಧಿಕಾರಿ ವರ್ಗದವರಿಂದ ಮೆಚ್ಚುಗೆ ದೊರಕಲಿದೆ. ಸಾಮಾಜಿಕ ಗೌರವ ವೃದ್ಧಿ. ಜುಲೈಯಲ್ಲಿ ಒಡಹುಟ್ಟಿದವರೊಡನೆ ಅಸಮಾಧಾನ, ಕುಟುಂಬ ಕ್ಲೇಶ. ದಶಮ ಶನಿಯ ಸಂಚಾರದಿಂದ ತಂದೆಗೆ ಆರೋಗ್ಯ ಹಾನಿ. ಆಗಸ್ಟ್ ತಿಂಗಳಲ್ಲಿ ಉತ್ತರ ದೇಶಾದಿಗಳ ಪ್ರವಾಸ ಯಾತ್ರಾ ಸಂಭವನೀಯತೆ ಇರುತ್ತದೆ. ಸ್ಥಾನಭ್ರಂಶವಾದರೂ ಆಶ್ಚರ್ಯವಿಲ್ಲ. ಸೆಪ್ಟೆಂಬರ್‌ನಲ್ಲಿ ಕ್ರೀಡಾ ಲೋಕದಲ್ಲಿರುವವರಿಗೆ ಉತ್ಕೃಷ್ಟತೆ. ಕಲೆ, ಸಾಹಿತ್ಯ ಲೋಕದಲ್ಲಿರುವವರಿಗೆ ನಿಮ್ಮನ್ನು ಗುರುತಿಸುವ ಕಾರ‌್ಯವಾದೀತು. ಮಿತ್ರರು, ಆತ್ಮೀಯರು, ಬಂಧುಗಳು ನಿಮ್ಮ ಸಹಾಯ ಅಪೇಕ್ಷಿಸಿ ಆಗಮಿಸಿಯಾರು. ಅಕ್ಟೋಬರ್‌ನಲ್ಲಿ ಅವಿವಾಹಿತರಿಗೆ ವಿವಾಹ ಸುಖ. ವಿವಾಹಿತರಿಗೆ ಸಂತಸ. ಕೃಷಿ ತೋಟಗಾರಿಕೆ, ಹೈನುಗಾರಿಕೆ, ಜಲ ಸಂಬಂಧದಿಂದ ಆದಾಯ ವೃದ್ಧಿ ಆಗಲಿದೆ. ನವೆಂಬರ್‌ನಲ್ಲಿ ನೂತನ ವಸ್ತುಗಳ ಖರೀದಿ, ಆರ್ಥಿಕವಾಗಿ ಸ್ವಲ್ಪ ತಲ್ಲಣ. ವಿವಾಹಿತರಿಗೆ ಮಕ್ಕಳ ವಿದ್ಯಾ ಪ್ರಗತಿಯಿಂದ ಸಂತಸ. ಡಿಸೆಂಬರ್‌ನಲ್ಲಿ ತಾಯಿಯ ಆರೋಗ್ಯ ಭೀತಿ. ಜನವರಿಯಲ್ಲಿ ಬಂಧುಗಳ ಆಗಮನದಿಂದ ಮನಸ್ಸಿಗೆ ಮುದ. ಹೆಂಡತಿಗೆ ವಾತ ಸಂಬಂಧೀ ರೋಗ. ದೇವತಾ ಆರಾಧನೆಯಿಂದ ಪುಷ್ಟಿ. ಫೆಬ್ರವರಿಯಲ್ಲಿ ಪ್ರವಾಸ, ಹಿತಾನುಭವ, ಕರಕುಶಲತೆಗೆ ಪ್ರೋತ್ಸಾಹ. ಸಾಲಗಳಿಗೆ ಅವಕಾಶ ಕೊಡಬೇಡಿ. ಮಾರ್ಚ್‌ನಲ್ಲಿ ಜಲೋತ್ಪತ್ತಿ ಉದ್ಯೋಗದಿಂದ ಲಾಭ. ತಾಳ್ಮೆಯಿಂದ ಕಾರ‌್ಯ ಸಿದ್ಧಿ. 
ಶುಭದಿಕ್ಕು- ದಕ್ಷಿಣ
ಶುಭ ರತ್ನ- ಹವಳ
ಶುಭ ವರ್ಣ- ಕೆಂಪು
ಶುಭ ದಿನಾಂಕ- 1, 10, 17
ಶುಭ ಸಂಖ್ಯೆ- 1, 3, 9, 4
ಈಶ್ವರ ಅಥವಾ ಆಂಜನೇಯ ಆರಾಧನೆಯಿಂದ ಇಷ್ಟ ಪ್ರಾಪ್ತಿ

ವೃಷಭ ರಾಶಿ

ಈ ವರ್ಷ ನಿಮಗೆ ಶುಭಾಶುಭ ಮಿಶ್ರಫಲ ಲಭಿಸುತ್ತದೆ. ಆರೋಗ್ಯ ನಿಮಗೆ ಬಹುಪಾಲು ತೊಂದರೆ ಕೊಡುತ್ತದೆ. ಎಂಟರ ಗುರು, ಧರ್ಮಕಾರ‌್ಯಕ್ಕೆ ವಿಘ್ನ, ಆದಾಯ ತೊಡಕು, ಮನಸ್ಸಿಗೆ ದುಗುಡ, ಕುಟುಂಬ ಕಲಹ, ಉದ್ಯೋಗದಲ್ಲಿ ವಂಚನೆ, ವೃಥಾ ವಾದ-ವಿವಾದ ಇತ್ಯಾದಿಗಳು ಮಾನಸಿಕ ವ್ಯಥೆಗೆ ಕಾರಣ. ರಾಹುವು ಚರ್ಮರೋಗ, ವಾತ, ಅಪಕೀರ್ತಿ, ಅಪಹಾಸ್ಯಕ್ಕೆ ಒಳಪಡಿಸುತ್ತಾನೆ. ಇನ್ನು ನವೆಂಬರ್ ನಂತರ ಆಕಸ್ಮಿಕ ಧನಾಗಮನದಿಂದ ಮನಸ್ಸು ಸಂತೋಷವಾದೀತು. ಏಪ್ರಿಲ್ ತಿಂಗಳಲ್ಲಿ ವಾಹನಗಳಿಂದ ಸಂಕಷ್ಟ. ವೃಥಾ ತಿರುಗಾಟ, ಜ್ವರಾದಿ ಬಾಧೆ. ಮಾತೃ ಕ್ಲೇಶಕ್ಕೂ ದಾರಿ ಆದೀತು ಎಚ್ಚರವಿರಲಿ. ಮೇನಲ್ಲಿ ಪಿತ್ತ ದೋಷ, ವಿವಾಹಿತರಿಗೆ ಪತ್ನಿ ಆರೋಗ್ಯ ಹಿನ್ನಡೆ, ಉದ್ಯೋಗದಲ್ಲಿ ಉತ್ಕೃಷ್ಟತೆ. ಜೂನ್‌ನಲ್ಲಿ ವ್ಯವಹಾರಲ್ಲಿ ಇಷ್ಟಸಿದ್ಧಿ. ನೂತನ ಧನವಿನಿಯೋಗಕ್ಕೆ ಆತುರ ಪಡಬೇಡಿ. ಕುಟುಂಬದಲ್ಲಿ ಮನಸ್ತಾಪ. ಜುಲೈನಲ್ಲಿ ಆತ್ಮೀಯರಿಂದ ಹರ್ಷ, ಪ್ರವಾಸದಿಂದ ಸಂತೃಪ್ತಿ, ಮನೆಯ ಭಾಗ್ಯದ ಅವಕಾಶವಿದೆ. ಆಗಸ್ಟ್‌ನಲ್ಲಿ ನೂತನ ವಸ್ತುಗಳ ಖರೀದಿ. ಸೆಪ್ಟೆಂಬರ್‌ನಲ್ಲಿ ಸರ್ಕಾರಿ ವರ್ಗದವರಿಂದ ಭೀತಿ. ಧನ ಹಾನಿಯಾದೀತು. ಹಿರಿಯರಿಗೆ ಆರೋಗ್ಯ ಹಿನ್ನಡೆ, ಮಕ್ಕಳ ವಿದ್ಯಾಭ್ಯಾಸ ಸಂತೋಷ. ಅಕ್ಟೋಬರ್‌ನಲ್ಲಿ ವ್ಯವಹಾರಗಳಲ್ಲಿ ಉತ್ಕೃಷ್ಟತೆ, ಉದ್ಯೋಗದಲ್ಲಿ ಸಂತೋಷ. ನವೆಂಬರ್‌ನಲ್ಲಿ ಉದರ ವ್ಯಾಧಿ, ಮಗನಿಗೆ ವಿದ್ಯಾಭ್ಯಾಸ ಹಿನ್ನಡೆ, ತಂದೆಯಿಂದ ಲಾಭ. ಡಿಸೆಂಬರ್‌ನಲ್ಲಿ ದೇವತಾಕಾರ‌್ಯ ನಡೆಯುವ ಸಂಭವವಿದೆ. ಜನವರಿಯಲ್ಲಿ ವ್ಯವಹಾರದಲ್ಲಿ ಆದಾಯ ಕಡಿಮೆ. ಬಂಡವಾಳ ಹಾಕುವ ಸಮಯವಿದಲ್ಲ. ಫೆಬ್ರವರಿಯಲ್ಲಿ ಮಂಗಳ ಕಾರ‌್ಯ ಸಾಧ್ಯತೆ, ಪೂರ್ಣಕಾರ‌್ಯ ಜರುಗುವ ಸಮಯ. ಮಾರ್ಚ್‌ನಲ್ಲಿ ವ್ಯವಹಾರ ಭಯ ಬೇಡ. ಬೆಳ್ಳಿ, ಬಂಗಾರ, ಖರೀದಿ ಮಾಡಬಹುದು. ವರ್ಷದ ಆರಂಭ ಕಷ್ಟದಿಂದ ಕೂಡಿದ್ದರೂ ಕೊನೆಯ ಭಾಗ ಲಾಭದಿಂದ, ಮನಸ್ಸಿಗೆ ಮುದ ನೀಡಿ ಹರ್ಷದಿಂದ ಬೀಗುವಿರಿ. ಆದರೆ ಎಚ್ಚರಿಕೆ ಇರಲಿ.
ಶುಭ ವಾರ- ಬುಧ, ಶುಕ್ರ, ಶನಿ
ಶುಭ ದಿಕ್ಕು- ಆಗ್ನೇಯ
ಶುಭ ರತ್ನ- ವಜ್ರ
ಶುಭ ದಿನಾಂಕ- 6, 9, 15, 14, 27೭
ಶುಭ ಸಂಖ್ಯೆ- ೫, ೬, ೮
ವಿಷ್ಣು, ನಾರಾಯಣ ಆರಾಧನೆ, ವಿಷ್ಣು ಸಹಸ್ರನಾಮ ಪಠಣ ಮಾಡಿ

ವಿಳಂಬಿ ನಾಮ ಸಂವಸ್ಸರದ ಫಲಾಫಲಗಳು ಹೀಗಿವೆ

ಮಿಥುನ ರಾಶಿ

ವರ್ಷದ ಆರಂಭದಲ್ಲಿ ಗುರು, ಶನಿ ಅಷ್ಟಮ ಭಾವದ ಸಂಚಾರದಿಂದ ದುಃಖ ದುಮ್ಮಾನ, ಆರೋಗ್ಯ ಹಾನಿ ಉಂಟು ಮಾಡೀತು. ಆದರೆ ಮಧ್ಯ ಭಾಗದಲ್ಲಿ ಸ್ವಲ್ಪ ಚೇತರಿಕೆ ನೀಡಿ, ಇಷ್ಟಾರ್ಥ ಸಿದ್ಧಿಸುವುದು. ಪುನಃ ನವೆಂಬರ್ ಸಮಯಕ್ಕೆ ವಿಧಿ ಅದೇ ಸಂಕಷ್ಟಕ್ಕೆ ಸಿಲುಕಿಸುತ್ತದೆ. ಆರೋಗ್ಯ ನಷ್ಟ, ಮನಃ ಕ್ಲೇಶ ವರ್ಷದ ಉದ್ದಕ್ಕೂ ಜನ್ಮದಲ್ಲಿರುವ ರಾಹುವು ದೇಹಾರೋಗ್ಯ ಬಾಧೆ ಮೂಲಕ ಬೆಂಬಿಡದೆ ಕಾಡುವನು. ಪದೇ ಪದೇ ಋತುಪೀಡೆ ಉಂಟುಮಾಡುತ್ತಾನೆ. ಏಪ್ರಿಲ್‌ನಲ್ಲಿ ಆಗಲೇಬೇಕಾದ ಕೆಲಸದಲ್ಲಿ ಯಶಸ್ಸು, ಗೃಹ ಭಾಗ್ಯ ಲಭಿಸುವುದು. ಮೇನಲ್ಲಿ ದೂರದ ಊರಿಗೆ ಪ್ರಯಾಣ ಸಾಧ್ಯತೆ. ಹಿರಿಯರಿಗೆ ಪುಣ್ಯಲಾಭ. ಮೇಲಧಿಕಾರಿಗಳ ಪ್ರಶಂಸೆ, ವಿದ್ಯಾರ್ಥಿಗಳಿಗೆ ಯಶಸ್ಸು ಮತ್ತು ಸಂತಸ. ಜೂನ್‌ನಲ್ಲಿ ವಿದೇಶಿ ಪ್ರವಾಸಕ್ಕೆ ಅವಕಾಶ, ವಿವಾಹ ಭಾಗ್ಯ, ಹೆಂಡತಿಯ ಇಚ್ಛೆ ಈಡೇರಿಸುವಿರಿ, ಸತಿಯ ಸಹಕಾರ ದೂರವಾದೀತು. ಪಿತ್ತದ ಉಲ್ಬಣದಿಂದ ಆರೋಗ್ಯ ಹಾನಿ. ಕಳ್ಳಕಾಕರ ಭಯವಿದೆ. ಜುಲೈನಲ್ಲಿ ಕಾರ‌್ಯ ಒತ್ತಡದಿಂದ ಬಿ.ಪಿ, ಶುಗರ್ ಬರುವ ಸಾಧ್ಯತೆ, ಮನಸ್ಸು ಹಿಡಿತದಲ್ಲಿ ಇರಲಿ. ದ್ರವ ಪದಾರ್ಥ ವ್ಯಾಪಾರಗಳು ನಷ್ಟ ಅನುಭವಿಸಲಿದ್ದಾರೆ. ಆಗಸ್ಟ್‌ನಲ್ಲಿ ಆದಾಯವೂ ಆಕಸ್ಮಿಕ ಹಾನಿ, ಆಕಸ್ಮಿಕ ಧಾನ್ಯ ಸಂಗ್ರಹ, ಸಂಬಾರ ಪದಾರ್ಥ ವ್ಯಾಪಾರದಿಂದ ಲಾಭ. ಸೆಪ್ಟೆಂಬರ್‌ನಲ್ಲಿ ರಕ್ಷಣಾ ಇಲಾಖೆಯವರಿಗೆ ಉತ್ಕೃಷ್ಟತೆ, ರಾಜಕೀಯದಲ್ಲಿ ಆಸಕ್ತಿ ಮತ್ತು ಸಕಾರಾತ್ಮಕ ಸಹಾಯಯೋಗ. ಅಕ್ಟೋಬರ್‌ನಲ್ಲಿ ಹೊಸ ಕಾರ‌್ಯದ ಆರಂಭ. ಮನಸ್ಸಿನಲ್ಲಿ ವಿಘ್ನದ ಭೀತಿ. ಕೃಷಿ ಕಾರ‌್ಯದಲ್ಲಿ ಬಾಧೆ ಇಲ್ಲ. ವ್ಯಾಪಾರದಲ್ಲಿ ಲಾಭ. ನವೆಂಬರ್‌ನಲ್ಲಿ ಸಂಗೀತ, ಕಲಾವಿದರಿಗೆ ವಿಶೇಷ ಕೀರ್ತಿ. ಶಾಲು ಹೊದೆಸಿಕೊಳ್ಳುವ ಭಾಗ್ಯ. ಜಲ ಪದಾರ್ಥ, ದ್ರವ ಪದಾರ್ಥ ವ್ಯಾಪಾರಿಗಳಿಗೆ ಲಾಭ ಕಡಿಮೆ. ಡಿಸೆಂಬರ್‌ನಲ್ಲಿ ಗೃಹ ವಸ್ತುಗಳ ತಯಾರಿಕೆ, ಯಂತ್ರ ಸ್ಥಾವರಗಳ ಕೆಲಸ ಇದರಲ್ಲಿ ಆದಾಯ ಗಳಿಸಬಹುದು. ಆರೋಗ್ಯ ಹಾನಿ. ಜನವರಿಯಲ್ಲಿ ಕಠಿಣ ಪರಿಶ್ರಮ ವಹಿಸಬೇಕು. ಶೂನ್ಯ ಸಂಪಾದನೆ. ಫೆಬ್ರವರಿಯಲ್ಲಿ ವಿದ್ಯಾಭ್ಯಾಸದಲ್ಲಿ ಆಲಸ್ಯ, ಪ್ರಗತಿ ಹಿನ್ನಡೆ. ದೈವಾನುಕೂಲವಿಲ್ಲ. ಮಾರ್ಚ್‌ನಲ್ಲಿ ವಾದ-ವಿವಾದದಿಂದ ಕೋರ್ಟು ಕಚೇರಿ ಹತ್ತಬೇಕಾಗುತ್ತದೆ. ಹಲವು ಬಗೆಯ ಕಷ್ಟ, ವ್ಯಥೆಯಿಂದ ಕಳಾಹೀನರಾಗುವಿರಿ.
ಶುಭವಾರ- ಬುಧ, ಶುಕ್ರ, ಭಾನುವಾರ 
ಶುಭ ಸಂಖ್ಯೆ- 3, 5, 6, 8, 4
ಶುಭ ರತ್ನ- ಪಚ್ಚೆ
ಶುಭ ದಿಕ್ಕು- ಉತ್ತರ 
ಶುಭ ವರ್ಣ- ಹಸಿರು
ಶುಭ ದಿನಾಂಕ- 5, 14, 23, 18
ಈಶ್ವರ ಆರಾಧನೆ, ನರಸಿಂಹ ಉಪಾಸನೆಯಿಂದ ಒಳಿತು

ಕರ್ಕರಾಶಿ

ವರ್ಷದ ಆರಂಭ ಶುಭದಾಯಕವಾಗಿದ್ದು, ಗುರುವಿನ ಅನುಗ್ರಹದಿಂದ ಶುಭಕಾರ‌್ಯ ಸಫಲತೆ, ಸಂಚಾರ, ಸಂಪತ್ತನ್ನು ತರಲಿದೆ. ಆಪತ್ತೂ ಇದೆ ಎಚ್ಚರದಿಂದ ಇರಬೇಕು. 7ರ ಗುರು, ಶನಿ ಮತ್ತು ೧೨ರಲ್ಲಿ ರಾಹು ಪತ್ನಿಗೆ ಮಿಶ್ರಫಲ ನೀಡುತ್ತಾನೆ. ರಾಹು ಪ್ರಯಾಣದ ಪ್ರಯಾಸ ನೀಡುತ್ತಾನೆ. ಹೆಜ್ಜೆಯನ್ನು ನೋಡಿ ಇಡಿ. ಏಪ್ರಿಲ್‌ನಲ್ಲಿ ಕಾರ‌್ಯ ಇಷ್ಟಕಾರ್ಯ ಸಿದ್ಧಿ, ಧನ ಸಂಪತ್ತಿನ ದ್ವಿಗುಣತೆ. ತಂದೆಯ ಹಣ ನಿಮ್ಮನ್ನು ಉತ್ಸಾಹಿಸಲಿದೆ. ಅಹಂಕಾರ ಸುಳಿಯದಂತೆ ಜಾಗ್ರತೆ ವಹಿಸಿ. ದುರ್ವ್ಯಸನದ ದಾಸರಾಗದಿರಿ. ಎಚ್ಚರ. ಮೇನಲ್ಲಿ ಸ್ವಲ್ಪ ಅಹಂಕಾರ ಇಳಿದೀತು, ಸ್ವಲ್ಪ ಹಿನ್ನಡೆ. ಜೂನ್‌ನಲ್ಲಿ ಸ್ಥಿರ ಆಸ್ತಿಗೆ ಹಿನ್ನಡೆ. ಜುಲೈನಲ್ಲಿ ಬಂಧನ ಭೀತಿ. ದೇವತಾ ಆರಾಧನೆಯಿಂದ, ಕಾರ‌್ಯತಂತ್ರದಿಂದ ಸಫಲತೆ. ಆಗಸ್ಟ್‌ನಲ್ಲಿ ತಂದೆಯ ಆರೋಗ್ಯ ಹಿನ್ನಡೆ, ಮಕ್ಕಳ ವಿದ್ಯೆಗೆ ಖರ್ಚು. ಅತಿಥಿ ಸತ್ಕಾರ ಭಾಗ್ಯ, ಹೆಂಡತಿಯ ಸಹಾಯದಿಂದ ಸೋಲಿಂದ ಪಾರು. ಸೆಪ್ಟೆಂಬರ್‌ನಲ್ಲಿ ವ್ಯವಹಾರಕ್ಕಾಗಿ ಸಂಚಾರ, ನಿದ್ರಾಹೀನತೆ, ಕಾರ‌್ಯ ಸಿದ್ಧಿ. ಪುನಃ ಬಾಧೆ ಮರುಕಳಿಸೀತು ಎಚ್ಚರವಿರಲಿ. ಮಕ್ಕಳ ಉನ್ನತ ವ್ಯಾಸಂಗ, ಮಿತ್ರನ ಸಹಾಯ ಸಕಾಲಕ್ಕೆ ದೊರಕದೆ ಸಮಸ್ಯೆ. ವಿದೇಶಿಗರಿಗೆ ಸರ್ಕಾರಿ ಅಧಿಕಾರಿಗಳಿಂದ ಭಯ. ರಾಜಕಾರಣಿಗಳಿಗೂ ಸಹ. ಅಕ್ಟೋಬರ್‌ನಲ್ಲಿ ಕಲಾ ಪ್ರೇಮಿಗಳು ಇದ್ದುದರಲ್ಲೇ ತೃಪ್ತಿ ಪಡುವುದು ಒಳಿತು. ಚೋರಾಗ್ನಿ ಭೀತಿ. ಯಕ್ಷಗಾನದವರಿಗೆ ಯಶಸ್ಸು, ಸಿನಿಮಾ ರಂಗದವರಿಗೆ ಒಳಿತಿನ ಕೊರತೆ. ನವೆಂಬರ್‌ನಲ್ಲಿ ಕೃಷಿ ಚಟುವಟಿಕೆಯಲ್ಲಿ ಹರ್ಷ, ಆದಾಯ ತಂದೀತು. ಯಾತ್ರೆ ಶುಭ ಫಲ. ಡಿಸೆಂಬರ್‌ನಲ್ಲಿ ತಾಂತ್ರಿಕ ಕೃತ್ಯ ಅಪಜಯ ನೀಡೀತು. ಕಾರ‌್ಯ ಹಿನ್ನಡೆ. ಜನವರಿಯಲ್ಲಿ ಕ್ಲೇಶ ದ್ವಿಗುಣ. ಎಣಿಕೆಯಂತೆ ಕಾರ‌್ಯ ಸಾಧನೆ. ಫೆಬ್ರವರಿಯಲ್ಲಿ ಕುಟುಂಬದಲ್ಲಿ ಆರೋಗ್ಯ ಬಾಧೆ, ಮನಸ್ಸಿಗೆ ದುಃಖ ದುಮ್ಮಾನ. ಮಾರ್ಚ್‌ನಲ್ಲಿ ಕಾರ‌್ಯ ಸಿದ್ಧಿ. ಗೃಹ ಸಂಭ್ರಮ, ಹಿಡಿದ ಕಾರ‌್ಯ ಯಶಸ್ಸು. 
ಶುಭವಾರ- ಸೋಮ, ಗುರು, ಮಂಗಳ 
ಶುಭದಿಕ್ಕು- ವಾಯುವ್ಯ 
ಶುಭರತ್ನ- ಹವಳ 
ಶುಭ ವರ್ಣ- ಬಿಳಿ
ಶುಭ ಸಂಖ್ಯೆ- 2, 3, 9
ಶುಭ ದಿನಾಂಕ- 2, 7, 16, 20, 22, 25
ದುರ್ಗಾ, ಗಣಪತಿ ಆರಾಧನೆಯಿಂದ ಶು

ಸಿಂಹ ರಾಶಿ

ಈ ಸಂವತ್ಸರವು ನಿಮ್ಮ ಪಾಲಿಗೆ ಶುಭಾಶುಭ ಎಲ್ಲಾ ರೀತಿಯ ಸಮ್ಮಿಶ್ರ ಫಲವಿರುತ್ತದೆ. ಆರನೇ ಮನೆಯ ಗುರು ಶತ್ರು ಬಾಧಕನಾದರೆ, ಆರರ ಶನಿಯೂ ಅರಿ ಸಮೂಹವನ್ನು ತಂದಿಟ್ಟು ಮಜಾ ನೋಡಿಯಾನು. ಆರಂಭದಲ್ಲಿ ಆರೋಗ್ಯ ಹಿನ್ನಡೆ, ಮಧ್ಯಭಾಗದಲ್ಲಿ ಸುಧಾರಣೆ ಆಗುತ್ತದೆ. ವರ್ಷದ ಅಂತ್ಯದಲ್ಲಿ ಧನ ನಷ್ಟ, ಉದರ ವ್ಯಾಧಿ, ಪಿತೃಬಾಧೆ. ಮಿತ್ರರೂ ಅಹಿತರಾಗುವರು. ಕೋರ್ಟ್ ವ್ಯವಹಾರ ಚಿಂತೆ, ಭ್ರಾತೃಭಾವ ಚೆನ್ನಾಗಿ ಇರುವುದರಿಂದ ಕಷ್ಟನಷ್ಟ. ಬಂಧುಗಳಿಂದ ಕಿರಿಕಿರಿ. ವಾಹನದಿಂದ ಖರ್ಚು. ಜೂನ್‌ನಲ್ಲಿ ತಂದೆಯ ಆರೋಗ್ಯದ ಕಡೆಗೆ ಗಮನವಿರಲಿ. ಗೃಹ ನಿರ್ಮಾಣ ಅಂತ್ಯವಾಗುತ್ತದೆ. ಜುಲೈನಲ್ಲಿ ಕೃಷಿ ವಿಚಾರದಲ್ಲಿ ವಿಘ್ನ, ಹೆಂಡತಿಯೊಡನೆ ಮನಸ್ತಾಪ. ಆಗಸ್ಟ್‌ನಲ್ಲಿ ಆದಾಯದಲ್ಲಿ ವೃದ್ಧಿ, ಆದಾಯದ ಮಾರ್ಗ ಬೇರೆ ದೊರೆಯುತ್ತದೆ. ಯಾತ್ರೆ ಪ್ರವಾಸಗಳಿಂದ ಸಂತಸ. ಸೆಪ್ಟೆಂಬರ್‌ನಲ್ಲಿ ಸಂಗೀತ, ನಾಟ್ಯ ಇವುಗಳಿಗೆ ಪರೋಪಕಾರ. ಅಕ್ಟೋಬರ್‌ನಲ್ಲಿ ವಿದ್ಯಾ ಹಿನ್ನಡೆ, ಮಕ್ಕಳಿಗೆ ಅಸೌಖ್ಯ. ನವೆಂಬರ್‌ನಲ್ಲಿ ಗೃಹ ವಸ್ತುಗಳ ಖರೀದಿ. ಮನೆಯನ್ನು ಅಲಂಕರಿಸುವಿರಿ. ಡಿಸೆಂಬರ್‌ನಲ್ಲಿ ಕೃಷಿ ಆದಾಯ ಸ್ವಲ್ಪ. ವಾಣಿಜ್ಯ ತಾಂತ್ರಿಕ ವಿದ್ಯಾರ್ಥಿಗಳಿಗೆ ಸಹಾಯ ಸಿಗುತ್ತದೆ. ಜನವರಿಯಲ್ಲಿ ಮಂಗಳ ಕಾರ‌್ಯಕ್ಕೆ ನಾಂದಿ, ಬೇರೆಯವರ ಸಹಾಯ ಸಿಗುತ್ತದೆ. ಹಳೆ ವ್ಯವಹಾರದಿಂದ ಧನಪ್ರಾಪ್ತಿ. ಫೆಬ್ರವರಿಯಲ್ಲಿ ಒಳ್ಳೆಯ ಸನ್ಮಾನಾದಿಗಳ ಪ್ರಾಪ್ತಿ. ಮಾರ್ಚ್‌ನಲ್ಲಿ ಬಿಡುವಿಲ್ಲದ ಕೆಲಸ ಆದಾಯ ತಂದೀತು. 
ಶುಭವಾರ- ಬುಧವಾರ, ಸೋಮವಾರ, ಮಂಗಳವಾರ, ಗುರುವಾರ
ಶುಭರತ್ನ- ಮಾಣಿಕ್ಯ
ಶುಭ ದಿಕ್ಕು- ಪೂರ್ವ
ಶುಭ ದಿನಾಂಕ- 1, 4, 13, 21, 3
ಶುಭ ವರ್ಣ- ಕೆಂಪು, ಹಳದಿ, ಬಿಳಿ 
ಶುಭ ಸಂಖ್ಯೆ- 1, 3, 5, 9
ಈಶ್ವರ ಆರಾಧನೆ, ಆದಿತ್ಯ ಹೃದಯ ಪಠಣ ಒಳಿತು

ಈ ಗ್ರಾಮದಲ್ಲಿ ಯುಗಾದಿ ಎಂದರೆ ಮರೀಚಿಕೆ: ಗ್ರಾಮದಲ್ಲಿ ಯುಗಾದಿಗೆ ಬ್ರೇಕ್ ಬೀಳಲು ಕಾರಣವೇನು?

ಕನ್ಯಾರಾಶಿ

ವರ್ಷವಿಡೀ ಕಾಡುವ ಪಂಚಮ ಶನಿ, ಸ್ವಲ್ಪ ಧನ ವೃದ್ಧಿ ನೀಡುವ ಗುರು, ಬಂಧು ಕ್ಲೇಶ, ಕಾರ‌್ಯ ಭಂಗ, ಹಣದ ನಷ್ಟ, ಇದೂ ಸಾಲದೆಂದು ರಾಹು-ಕೇತುವಿನ ಕಾಟ ಒಂದೇ ಎರಡೇ. ಇವು ನಿಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಆದರೆ ಜನ್ಮಾಧಿಪತಿ ಬುಧನು ನಿಮ್ಮ ಪಾಲಿಗೆ ಮರುಭೂಮಿಯ ಓಯಸಿಸ್. ಏಪ್ರಿಲ್ ಸಮಯದಲ್ಲಿ ರವಿಯು ಪಿತ್ತ, ಉಷ್ಣ, ರಕ್ತದೋಪಾದಿಗಳಿಂದ ತೊಂದರೆ. ವೃತ್ತಿಯಲ್ಲಿ ನೆಮ್ಮದಿ ಮತ್ತು ಲಾಭವಿದೆ. ಮೇನಲ್ಲಿ ಕೊಂಚ ಪ್ರವಾಸ, ಮನಸ್ಸಿಗೆ ಮುದ. ರಾಜ ಕಾರ‌್ಯದಲ್ಲಿ ಇರುವವರಿಗೆ ಸ್ವತಃ ಅಲ್ಲೋಲಕಲ್ಲೋಲ. ನಿಮ್ಮ ಸಿದ್ಧಾಂತದಲ್ಲಿ ಇಲಿ ದೈವಾನುಗ್ರಹವಿದೆ. ಜೂನ್‌ನಲ್ಲಿ ವಿದೇಶ ಪ್ರವಾಸ ರದ್ದು, ವಿದ್ಯಾರ್ಥಿಗಳಿಗೆ ಶುಭ ಲಾಭವಿದೆ. ಧನ ವಿನಿಯೋಗ ಅಷ್ಟೊಂದು ಶುಭವಲ್ಲ. ಪ್ರವೃತ್ತಿಯಿಂದ ಧನಾಗಮನವಾಗುತ್ತದೆ. ಜುಲೈನಲ್ಲಿ ಉತ್ತಮ ಆದಾಯವಿದೆ, ಕೀರ್ತಿಯೂ ಇದೆ. ಜೂಜು ಇಂತಹ ಹವ್ಯಾಸವಿದ್ದರೆ ಎಚ್ಚರದಿಂದ ಇರಿ. ಆಗಸ್ಟ್‌ನಲ್ಲಿ ಗೃಹ ಭಾಗ್ಯ. ಸಾಲದಿಂದ ಅನಿರೀಕ್ಷಿತ ಶುಭವಾರ್ತೆ. ಮಾತೃ ವಿರೋಧ. ಹೆಂಡತಿಗೆ ಆಭರಣ ಖರೀದಿಯ ಚಿಂತೆ. ಸೆಪ್ಟೆಂಬರ್‌ನಲ್ಲಿ ವಿವಾಹಿತರಿಗೆ ಸತ್‌ಸಂತಸ ಪ್ರಾಪ್ತಿ. ಸಣ್ಣ ಅಪರಾಧದಿಂದ ದೊಡ್ಡ ದಂಡ. ಅಕ್ಟೋಬರ್‌ನಲ್ಲಿ ದೇವತಾ ಕಾರ‌್ಯಗಳಿಗೆ ವಿಘ್ನ, ಮನೆಯಲ್ಲಿ ಆರೋಗ್ಯ ಹಾನಿ. ನವೆಂಬರ್‌ನಲ್ಲಿ ಶಿಕ್ಷಣ ಪ್ರಗತಿ. ಡಿಸೆಂಬರ್‌ನಲ್ಲಿ ಶತ್ರು ಪೀಡೆ, ದೇವತಾ ಕಾರ‌್ಯದಿಂದ ಯಶಸ್ಸು ಸಾಧಿಸಬಹುದು. ಜನವರಿಯಲ್ಲಿ ವಿದ್ಯಾ ಲಾಭ, ಸನ್ಮಾನ. ಫೆಬ್ರವರಿಯಲ್ಲಿ ಕಳ್ಳಕಾಕರ ಭೀತಿ, ಪರೋಪಕಾರ ಪ್ರಾಣ ಸಂಕಟ. ನಿವ್ವಳಕ್ಕಿಂತ ಕಳೆಯುವುದೇ ಹೆಚ್ಚು. ಮಾರ್ಚ್‌ನಲ್ಲಿ ದೇಹ ಪೀಡೆ, ಪುತ್ರ ಚಿಂತೆ, ಬಂಧು ದ್ವೇಷ, ಅಧಿಕಾರಿ ವರ್ಗದ ದ್ವೇಷ.

ಶುಭ ದಿಕ್ಕು- ಉತ್ತರ
ಶುಭ ದಿನಾಂಕ- 5, 14, 24
ಶುಭ ವಾರ- ಬುಧ, ಶುಕ್ರ, ರವಿ
ಶುಭ ಸಂಖ್ಯೆ-3, 5 ,6, 8
ಶುಭ ರತ್ನ- ಪಚ್ಚೆ
ಶುಭ ವರ್ಣ- ಹಸಿರು, ಕೆಂಪು
ರುದ್ರಾರಾಧನೆ, ವಿಷ್ಣುವಿನ ಆರಾಧನೆ ಮಾಡಿ

ತುಲಾರಾಶಿ

ಈ ವರ್ಷ ಗುರು, ಶನಿ ಅಶುಭದಾಯಕವಾಗಿರುವುದರಿಂದ ನಿಮ್ಮ ಕಷ್ಟ ತೀರದು. ಗುರು, ಶನಿ ನಾಲ್ಕನೇ ಮನೆಯಲ್ಲಿ ಇರುವ ಕಾಲದಲ್ಲಿ ಶುಭ ಫಲ ನೀಡುತ್ತಾರೆ. ಒಂಭತ್ತರ ರಾಹು ಧನಹಾನಿಗೆ ಕಾರಣನಾಗುತ್ತಾನೆ. ತೃತೀಯ ಕೇತು ಶುಭ ಫಲ ನೀಡುತ್ತಾನೆ. ಧನ ವೃದ್ಧಿ ಆಗುವುದು. ತೃತೀಯ ಕೇತು ಅಷ್ಟೇ ಅನಿಷ್ಟ ಫಲದಾಯಕನೂ ಹೌದು, ಎಚ್ಚರ. ವೃತ್ತಿಯ ಉತ್ತುಂಗತೆ ಶುಭ ತರಲಿದೆ. ಸಂಸಾರ ಮನಸ್ಸಿಗೆ ಹಿತವನ್ನು ನೀಡದೇ ಇರಬಹುದು. ಕುಜನು ಆಗಾಗ ಶುಭ ಸುದ್ದಿ ನೀಡುತ್ತಾನೆ. ಮೇನಲ್ಲಿ ಹೃದಯ ತೊಂದರೆ ಗೋಚರಿಸೀತು. ಪತಿಯ ಹಿನ್ನಡೆಯಿಂದ ಮಾಸವೆಲ್ಲಾ ಅಧಿಕ ವೆಚ್ಚ. ಜೂನ್‌ನಲ್ಲಿ ಸಾಲಬಾಧೆ, ಬಂಧು ಕಲಹ, ರಾಜಿ ವಿಚಾರದಲ್ಲಿ ಪರದಾಟ. ಜುಲೈನಲ್ಲಿ ಕೃಷಿ ವಿಘ್ನ, ಮಿತ್ರರ ಸಹಾಯ ಪರರ ಪಾಲು, ಸ್ತ್ರೀ ಸೌಖ್ಯ, ಮಕ್ಕಳ ವಿದ್ಯಾಭ್ಯಾಸ ನೆಮ್ಮದಿ ತಂದೀತು. ಆಗಸ್ಟ್‌ನಲ್ಲಿ ಸ್ಥಾನ ಪಲ್ಲಟ, ತುಸು ಹೊಸ ಪ್ರದೇಶ. ಸೆಪ್ಟೆಂಬರ್‌ನಲ್ಲಿ ಕಾರ‌್ಯ ಆಯಾಸ, ಮನರಂಜನೆ, ಕನಸಿನಲ್ಲಿ ಕನ್ನಡಿಯ ಗಂಟು. ಅಕ್ಟೋಬರ್‌ನಲ್ಲಿ ಹಣದ ಮುಗ್ಗಟ್ಟು. ನವೆಂಬರ್‌ನಲ್ಲಿ ಪ್ರಯಾಣ, ಮಕ್ಕಳಿಗೆ ಸಂತಸ, ತೀರ್ಥಕ್ಷೇತ್ರ ದರ್ಶನ. ಡಿಸೆಂಬರ್‌ನಲ್ಲಿ ಸಾಲಬಾಧೆ ಕಾಡುತ್ತದೆ, ಕೃಷಿ ಹಿನ್ನಡೆ. ಜನವರಿಯಲ್ಲಿ ಮಕ್ಕಳಿಗೆ ಆರೋಗ್ಯ ಹಾನಿ, ಸ್ವಲ್ಪ ವಿದ್ಯಾ ಹಿನ್ನಡೆ, ಸ್ತ್ರೀ ಅಪವಾದ ಬೇರೆ. ಫೆಬ್ರವರಿಯಲ್ಲಿ ಧನ ಪ್ರಾಪ್ತಿ, ಮಂಗಳ ಕಾರ‌್ಯ, ಮಿತ್ರರ ಸಹಾಯ ಮನಸ್ಸಿಗೆ ಮುದ ತಂದೀತು. ಮಾರ್ಚ್‌ನಲ್ಲಿ ಕಾರ‌್ಯದ ಪೂರ್ಣತೆ, ಮನಸ್ಸಿಗೆ ಸ್ವಲ್ಪ ನೆಮ್ಮದಿ. 
ಶುಭ ವಾರ- ಬುಧ, ಶುಕ್ರ, ಶನಿ
ಶುಭ ದಿಕ್ಕು- ಆಗ್ನೇಯ
ಶುಭ ರತ್ನ- ವಜ್ರ
ಶುಭ ಸಂಖ್ಯೆ- 5, 6, 8
ಶುಭ ವರ್ಣ- ಬಿಳಿ
ಶುಭ ದಿನಾಂಕ- 6, 9, 15, 18, 27
ಈಶ್ವರ ಆರಾಧನೆ, ಆಂಜನೇಯ ಆರಾಧನೆಯಿಂದ ಉತ್ಕೃಷ್ಟಿ

ವೃಶ್ಚಿಕರಾಶಿ

ಈ ವರ್ಷ ಶನಿಮಹಾತ್ಮನ ಪೂರ್ವ ಅನುಗ್ರಹವಿದ್ದು, ರಾಹು ಮತ್ತು ಗುರು ಹಣದ ವಿಚಾರಕ್ಕೆ ಆಗಾಗ್ಗೆ ನಷ್ಟವನ್ನು ನೀಡುತ್ತಾ ಇರುತ್ತಾರೆ. ಆಸೆಯ ಗಂಟು ದೊಡ್ಡದಾಗಿರುವುದರಿಂದ ಎಷ್ಟು ಬಂದರೂ ಕೊರತೆ ನೀಗದು. ಕುಟುಂಬದವರು, ಪುತ್ರಸ್ಥಾನ ಆಶ್ರಿತ ವರ್ಗದವರು ಒಂದಲ್ಲಾ ಒಂದು ನಿವೇದನೆ ತರುವುದರಿಂದ ಮನಸ್ಸಿಗೆ ಕಿರಿ ಕಿರಿ ಆಗಬಹುದು. ಸ್ಥಾನ ಭ್ರಂಶ ಯೋಗ ಇದ್ದರೂ ಹಿನ್ನಡೆಯಾಗದು. ತಾಳಿದವನು ಬಾಳಿಯಾನು. ಏನನ್ನು ಕಳೆದುಕೊಂಡರೂ ತಾಳ್ಮೆ ಕಳೆದುಕೊಳ್ಳದಿರಿ. ವರ್ಷದ ಮೊದಲೆರಡು ವಾರ ಆರೋಗ್ಯದ ಕೊರತೆ ಇಲ್ಲ. ಮೇನಲ್ಲಿ ವಾಹನ ಖರೀದಿ. ಹಿರಿತನದ ಅಲಕ್ಷ್ಯ ಸಲ್ಲದು. ಸಹೋದರ ವಿರೋಧವಾದೀತು. ಮಡದಿಯ ಉದ್ದನೆಯ ಲಿಸ್ಟ್ ಸಂಕಷ್ಟಕ್ಕೆ ತಳ್ಳಬಹುದು. ಜೂನ್‌ನಲ್ಲಿ ತಾತನ ಆರೋಗ್ಯ ನಷ್ಟ, ಸಿಟ್ಟು ಜಾಸ್ತಿ, ಉದ್ಯೋಗ ಬಡ್ತಿ ಸಿಗಬಹುದು. ಜುಲೈನಲ್ಲಿ ಅಕ್ಕಪಕ್ಕದವರು, ಭೂ ವಿಚಾರದಲ್ಲಿ ಜಾಗೃತರಾಗಿರಿ, ನ್ಯಾಯಾಲಯದ ಮೆಟ್ಟಿಲು ಏರಿಸಿಯಾರು. ಆಗಸ್ಟ್‌ನಲ್ಲಿ ತೆರಿಗೆ, ಅಧಿಕಾರಿಗಳು, ಸರ್ಕಾರಿ ವಿಚಾರದಲ್ಲಿ ಕಾಟ. ಸೆಪ್ಟೆಂಬರ್‌ನಲ್ಲಿ ಪ್ರಯಾಣದಿಂದ ಮನಸ್ಸಿಗೆ ಮುದ. ವಿವಾಹ ಭಾಗ್ಯ ಕೂಡಿ ಬಂದೀತು. ಅವಿವಾಹಿತರಿಗೆ, ಉದ್ಯೋಗ, ವಿವಾಹ ಸುಖ ಇದೆ. ಅಕ್ಟೋಬರ್‌ನಲ್ಲಿ ತಾಯಿಯ ಆರೋಗ್ಯ ಹಿನ್ನಡೆ, ಆರ್ಥಿಕ ಕೊರತೆ ತೋರದು. ನವೆಂಬರ್‌ನಲ್ಲಿ ಧರ್ಮಕಾರ್ಯದ ಪ್ರವೃತ್ತಿಗೆ ಧನ ವಿನಿಯೋಗ, ವಿದ್ಯೆ ಪ್ರಗತಿ. ಡಿಸೆಂಬರ್‌ನಲ್ಲಿ ಆದಾಯಕ್ಕೆ ಹಿನ್ನಡೆ ಇರದು. ಜನವರಿಯಲ್ಲಿ ನೂತನ ಮಿತ್ರಪ್ರಾಪ್ತಿ. ಹಳೆ ಗೆಳೆಯರ ಸಂಪರ್ಕ ಸಂತೋಷ ನೀಡೀತು. ಫೆಬ್ರವರಿಯಲ್ಲಿ ಆರೋಗ್ಯ ನಷ್ಟ, ವಾತ ದೋಷ, ಮಕ್ಕಳಾದವರಿಗೆ ಆಲಸ್ಯ. ಮಾರ್ಚ್‌ನಲ್ಲಿ ಹಳೆ ಬಾಕಿ ದೊರಕೀತು. ಆದಾಯದ ಸ್ಥಿತಿ ಉತ್ತಮ. 
ಶುಭವಾರ: ಭಾನು, ಮಂಗಳ, ಗುರು
ಶುಭ ದಿಕ್ಕು: ದಕ್ಷಿಣ
ಶುಭ ವರ್ಣ: ಕೆಂಪು
ಶುಭ ದಿನಾಂಕ: 1, 10, 27
ಶುಭ ಸಂಖ್ಯೆ: 1, 2, 3, 9
ಗಣಪತಿ, ದುರ್ಗಾರಾಧನೆ ಮಾಡಿ

ಧನುರ್‌ರಾಶಿ

ಶನಿಪೀಡೆ ತಪ್ಪಿತೆಂಬ ಭಾವನೆ ಸಲ್ಲದು. ವರ್ಷದ ಪ್ರಾರಂಭದಲ್ಲಿ ಗುರು ಧನಲಾಭಕ್ಕೆ ಕಾರಣನಾದರೆ, ನಂತರದ ದಿನದಲ್ಲಿ ದೇಹಾರೋಗ್ಯದಲ್ಲಿ ಹಿನ್ನಡೆ, ಗೃಹ ಕಲಹ, ಧನ ಹಾನಿ ನೀಡಬಹುದು. ಕೇತು ಕೆಲವೊಂದು ಅನಿಷ್ಟ ಫಲಕ್ಕೆ ಕಾರಣ. ಮೇನಲ್ಲಿ ಮಿತ್ರ ಸಹಾಯದಿಂದ ಹಿಡಿದ ಕೆಲಸ ಪೂರ್ಣತೆ. ಜೂನ್‌ನಲ್ಲಿ ವಿವಾಹ, ಮಂಗಳ ಕಾರ್ಯದಲ್ಲಿ ತೊಡಗುವಿಕೆ. ಗೃಹ ನಿರ್ಮಾಣ ಭಾಗ್ಯ. ಜುಲೈನಲ್ಲಿ ಕೃಷಿ ಚಟುವಟಿಕೆಯಲ್ಲಿ ನಷ್ಟ. ಅಧಿಕಾರ ವರ್ಗದವರೊಡನೆ ಜಗಳ. ಆಗಸ್ಟ್‌ನಲ್ಲಿ ಹಿಡಿದ ಕಾರ್ಯ ಸ್ಥಗಿತವಾದೀತು. ಸಹಾಯಕರ ಕೊರತೆ ಉಂಟಾಗಲಿದೆ. ವೃಥಾ ನಿಷ್ಠುರ. ಸೆಪ್ಟೆಂಬರ್‌ನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಿನ್ನಡೆ, ಮಕ್ಕಳ ವಿದ್ಯಾಭ್ಯಾಸ ನಷ್ಟವಾದೀತು. ಅಕ್ಟೋಬರ್‌ನಲ್ಲಿ ಸ್ವಲ್ಪ ಲಾಭ ತಂದೀತು ಉದ್ಯೋಗ. ತೆಂಗು-ಕಂಗು ಕೆಲಸ ಹಿನ್ನಡೆ, ನೌಕರ ವರ್ಗಕ್ಕೆ ಪರಸ್ಪರ ವಾದ. ನವೆಂಬರ್‌ನಲ್ಲಿ ಮಾಡುವ ಕೆಲಸದಲ್ಲಿ ಅವ್ಯವಹಾರ ತೋರೀತು ಎಚ್ಚರಿಕೆ. ಡಿಸೆಂಬರ್‌ನಲ್ಲಿ ಶಿಕ್ಷಣ ವಿಭಾಗದವರಿಗೆ ಸಂತೋಷ. ಹಣದ ವಿಚಾರದಲ್ಲಿ ಆದಾಯವೂ ಹೆಚ್ಚು. ಜನವರಿಯಲ್ಲಿ ಜಲ ಸಂಬಂಧೀ ಉದ್ಯೋಗದಿಂದ ಲಾಭದ ಪ್ರಮಾಣ ಹೆಚ್ಚು. ವಂಚನೆಯ ಸಂಚಿಗೆ ಒಳಗಾಗುವ ಭೀತಿ ಇದೆ. ಫೆಬ್ರವರಿಯಲ್ಲಿ ಮನೆಯಲ್ಲಿ ಹಿರಿಜನರ ಆರೋಗ್ಯ ಏರುಪೇರು. ಖರ್ಚು ದ್ವಿಗುಣ. ಮನೆಯಲ್ಲಿ ಮಂಗಳ ಕಾರ್ಯ. ಮಾರ್ಚ್‌ನಲ್ಲಿ ಆರೋಗ್ಯ ಸುಧಾರಣೆ, ಧನ ವಿಚಾರ ಚೇತರಿಕೆ. 
ಶುಭವಾರ: ಭಾನು, ಮಂಗಳ, ಗುರು
ಶುಭ ಸಂಖ್ಯೆ: 1, 3, 8, 9
ಶುಭ ರತ್ನ: ಹವಳ
ಶುಭವರ್ಣ: ಕೆಂಪು
ಶುಭ ದಿನಾಂಕ: 3, 9, 12, 18, 30 
ಶುಭ ದಿಕ್ಕು: ಈಶಾನ್ಯ
ವಿಷ್ಣು, ಈಶ್ವರನ ಆರಾಧನೆಯಿಂದ ಸುಖ

ಮಕರ ರಾಶಿ

ಸಾಡೇ ಸಾತಿ ಶನಿಯ ದೋಷದಿಂದ ಈ ವರ್ಷವೂ ಬಿಡುಗಡೆ ದೊರೆಯದು. ಸೇವಕ ವರ್ಗದವರಿಂದ ಕಷ್ಟ, ದುಮ್ಮಾನ. ಆರ್ಥಿಕ ಹಿನ್ನಡೆ. ಆದಾಯ ಇಲ್ಲದೆ ಇದ್ದರೂ ವೃಥಾ ಖರ್ಚು, ಮನಃಕ್ಲೇಶ, ಪತಿ-ಸುತರ ವಿರಹತ್ವ, ಆರೋಗ್ಯ ಖಿನ್ನತೆ. ಮಿತ್ರರ ನೆರವು ಸಿಗಲಿದೆ. ಶ್ರಮಕ್ಕೆ ತಕ್ಕ ಫಲವಿಲ್ಲದೆ ಮನಸ್ಸಿಗೆ ದುಮ್ಮಾನ. ಮೇ ತಿಂಗಳಲ್ಲಿ ಸ್ಥಾನಮಾನಕ್ಕಾಗಿ ಹೋರಾಟ. ಅತಿಶ್ರಮದಿಂದ ಕಾರ್ಯ ಸಾಧನೆ. ತಾಳ್ಮೆ ಕಳೆದುಕೊಳ್ಳಬೇಡಿ. ಪುತ್ರರಿಗೆ ಕಳಂಕದ ಭಯ. ಶತ್ರುಗಳು ಮೈತ್ರಿ ನಾಟಕ ಆಡಿಯಾರು. ಜೂನ್‌ನಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಧನ ವಿನಿಯೋಗ. ಜನರಿಂದ ಆಕಸ್ಮಿಕ ಧನ ಆದಾಯ. ಇದರಲ್ಲಿ ವಿಶ್ವಾಸ ಬೇಡ. ಆಸೆ ತೋರಿಸಿ ಧನ ವಂಚಿಸಬಹುದು. ತಾಯಿ ಆರೋಗ್ಯದಲ್ಲಿ ಹಿನ್ನಡೆ. ಕ್ಲೇಶ, ಉಷ್ಣ ದೋಷದಿಂದ ಆರೋಗ್ಯದಲ್ಲಿ ಹಿನ್ನಡೆ. ಜುಲೈನಲ್ಲಿ ಸಹೋದರ ಸಹಕಾರದಿಂದ ವ್ಯಾಪಾರ ಉತ್ಕೃಷ್ಟ. ರಸ ಪದಾರ್ಥ ವ್ಯಾಪಾರ ಉತ್ಕೃಷ್ಟ. ಧಾನ್ಯ ವ್ಯವಹಾರವು ಲಾಭಕ್ಕೆ ಕಾರಣ ಆಗುವುದು. ಆಗಸ್ಟ್‌ನಲ್ಲಿ ಯಾತ್ರೆ ಸಂಭವ. ಅಧಿಕಾರದಲ್ಲಿ ಬದಲಾವಣೆ. ವಾಹನಗಳಿಂದ ಹಿನ್ನಡೆ. ಸೆಪ್ಟೆಂಬರ್‌ನಲ್ಲಿ ಶಿಕ್ಷಣದಲ್ಲಿ ಉತ್ಕೃಷ್ಟತೆ. ಆದಾಯದಲ್ಲಿ ಸ್ವಲ್ಪ ಚೇತರಿಕೆ. ಯಂತ್ರಗಳಿಂದ ಹಿನ್ನಡೆ. ಅಕ್ಟೋಬರ್‌ನಲ್ಲಿ ಸ್ತ್ರೀಯರಿಗೆ ಆರೋಗ್ಯ ಹಾನಿ. ಮಕ್ಕಳಿಗೆ ವಿದ್ಯೆಯಲ್ಲಿ ಹಿನ್ನಡೆ. ನವೆಂಬರ್‌ನಲ್ಲಿ ವಾಹನಗಳಿಂದ ನಷ್ಟ. ಅಪಘಾತ ಭೀತಿ. ಡಿಸೆಂಬರ್‌ನಲ್ಲಿ ಶರೀರಕ್ಕೆ ವಾತರೋಗ. ಸೇವಕ ವರ್ಗದವರಿಂದ ಅಸಹಕಾರ. ಕೃಷಿ, ಮಾಡುವ ಉದ್ಯೋಗದಲ್ಲಿ ಸ್ವಲ್ಪ ನಷ್ಟ. ಜನವರಿಯಲ್ಲಿ ಮೂಲ ಆದಾಯದಲ್ಲಿ ಲಾಭ. ಮನಸ್ಸಿಗೆ ನೆಮ್ಮದಿ, ಭೂ ಪ್ರಾಪ್ತಿ. ಫೆಬ್ರವರಿಯಲ್ಲಿ ಹಳೆ ಚಿನ್ನ, ಬೆಳ್ಳಿ ಆಭರಣಗಳ ರಿಪೇರಿ. ಹೆಂಡತಿ ಆರೋಗ್ಯದಲ್ಲಿ ಹಿನ್ನಡೆ. ಮಾರ್ಚ್‌ನಲ್ಲಿ ವೃಥಾ ಖರ್ಚು. ಗೇಣು ಹುಲಿದರೆ, ಮೂರು ಹಲಿಯುವುದು ಇದು ನಿಮಗಾಗುವ ಗತಿ.
ಶುಭ ವಾರ: ಬುಧ, ಶುಕ್ರ
ಶುಭ ಸಂಖ್ಯೆ: 5, 6, 8
ಶುಭ ರತ್ನ: ನೀಲಿ
ಶುಭ ದಿಕ್ಕು: ಪಶ್ಚಿಮ
ಶುಭ ವರ್ಣ: ನೀಲಿ ಮಿಶ್ರಿತ ಬಣ್ಣ
ಹರಿ-ಹರರ ನೆನೆದು ಕಷ್ಟಕ್ಕೆ ಮುಕ್ತಿ ನೀಡಿ

ಕುಂಭ ರಾಶಿ

ಪಂಚಮದಲ್ಲಿ ರಾಹು ಇರುವುದರಿಂದ ಕೆಲವು ದುಡುಕಿನ ನಿರ್ಧಾರ ತೆಗೆದುಕೊಳ್ಳುವಿರಿ. ಕೇತುವು ಕಾರ್ಯ ಹಿನ್ನಡೆಗೆ ಕಾರಣ ಆಗುವನು. ಕಾರ್ಯದಲ್ಲಿ ವಿಘ್ನ. ಆತುರದ ನಿರ್ಧಾರ ಬೇಡ. ತಣ್ಣೀರನ್ನಾದರೂ ತಣ್ಣಗೆ ಮಾಡಿ ಕುಡಿಯಿರಿ ಎಂಬುದನ್ನು ನೀವು ಆಚರಿಸಬೇಕು. ಹಣದ ದುಂದು ವೆಚ್ಚ, ಕೆಲಸದ ಪರಾಜಯ, ಆಸೆಗೆ ಹಿನ್ನಡೆ. ಶುಕ್ರ ಆಗಾಗ ಶುಭ ಫಲಕ್ಕೆ ಕಾರಣವಾಗುತ್ತಾನೆ. ಸಂಚಾರದಲ್ಲಿ ಸಂತೋಷ. ಆದರೆ, ಅದು ಬೇರೆಯವರಿಗೆ ಆದೀತು. ಸಾಂಕ್ರಾಮಿಕ ರೋಗದ ಕಾಟದಿಂದ ನಿಮಗೂ ಬಾಧೆಯಾದೀತು. ಮೇನಲ್ಲಿ ಬೇರೆಯವರಿಗಾಗಿ ಹಣ ನೀರಿನಂತೆ ವ್ಯಯವಾದೀತು. ವಿವಾಹ ಆಗದವರಿಗೆ ವಿವಾಹ ಭಾಗ್ಯ ಅಥವಾ ಸ್ತ್ರೀ ಲಾಭ. ದಾಂಪತ್ಯ ಸುಖ ನೆಮ್ಮದಿ ತಂದೀತು. ಜೂನ್‌ನಲ್ಲಿ ಸ್ಥಳ ಬದಲಾವಣೆ, ಅಲಂಕಾರ ವಸ್ತುಗಳ ಖರೀದಿ. ಚೋರ ಭಯ, ಸೇವಾ ಕಾರ್ಯ ಭಾಗ್ಯ, ಶತ್ರು ಬಾಧೆ. ಮಾನ ಹಾನಿಯಾದೀತು. ಜುಲೈನಲ್ಲಿ ಕೃಷಿ, ಪಶು ಸಂಗೋಪನೆಯಿಂದ ಮನಸ್ಸಿಗೆ ತೃಪ್ತಿ. ಉದ್ಯೋಗದಲ್ಲಿ ಲಾಭ. ಆಶಾದಾಯಕ ಫಲ. ವಿದೇಶ ಪ್ರಯಾಣ. ಆಗಸ್ಟ್‌ನಲ್ಲಿ ಮನೆಯವರಿಗೆ ಸಾಂಕ್ರಾಮಿಕ ರೋಗ ಬಾಧೆ. ವ್ಯವಹಾರದಲ್ಲಿ ತೊಡಗಿಸಿದ ಹಣಕ್ಕೆ ಬಾಧೆ. ಸೆಪ್ಟೆಂಬರ್‌ನಲ್ಲಿ ತಾಯಿ ಆರೋಗ್ಯದಲ್ಲಿ ಹಿನ್ನಡೆ. ಸಹೋದರರ ಅಸಹಕಾರ ಅಥವಾ ದ್ವೇಷ. ಸ್ಥಾನ ಬದಲಾವಣೆ ಯೋಗ. ಆದಾಯದಲ್ಲಿ ಹಿನ್ನಡೆ. ಅಕ್ಟೋಬರ್‌ನಲ್ಲಿ ದುಡುಕು ವರ್ತನೆಯಿಂದ ಮನೆಯವರ ವಿರೋಧ. ಮಕ್ಕಳ ಶಿಕ್ಷಣದಲ್ಲಿ ಹಿನ್ನಡೆ. ಆಭರಣ ಪ್ರಾಪ್ತಿ ಅಥವಾ ಖರೀದಿ. ಸ್ಥಿರ ಆಸ್ತಿ ವಿಚಾರದಲ್ಲಿ ವಿರಸ. ನವೆಂಬರ್‌ನಲ್ಲಿ ಈ ಅವಧಿಯಲ್ಲಿ ಹಿನ್ನಡೆಯಿಲ್ಲ. ಶಾಂತಿ, ನೆಮ್ಮದಿ. ಹಣದ ಕೊರತೆ ಉಂಟಾಗುವುದಿಲ್ಲ. ಡಿಸೆಂಬರ್‌ನಲ್ಲಿ ವ್ಯವಹಾರ, ಉದ್ಯೋಗದಲ್ಲಿ ಲಾಭವಿದೆ. ರಾಜಕೀಯ ಕಾಟ ನಿಮ್ಮನ್ನು ಬೆಂಬಿಡದು. ಎಚ್ಚರ ತಪ್ಪಿದರೆ ಕಂಬಿ ಎಣಿಸಬೇಕಾದೀತು. ಜನವರಿಯಲ್ಲಿ ಉದ್ಯೋಗ ನೆಮ್ಮದಿ ತಂದೀತು. ಕೆಲಸದಲ್ಲಿ ಉತ್ಕೃಷ್ಟತೆ. ಫೆಬ್ರವರಿಯಲ್ಲಿ ಧರ್ಮ ಕಾರ್ಯದಿಂದ ನೆಮ್ಮದಿ. ದೇವತಾ ವಿನಿಯೋಗ, ಯಾತ್ರೆಗಳಿಂದ ಸಾಫಲ್ಯ. ಪ್ರತಿಭೆಗೆ ತಕ್ಕ ಪುರಸ್ಕಾರ. ಕ್ರೀಡಾಪಟುಗಳಿಗೆ ಭಾಗ್ಯೋದಯ. ಮಾರ್ಚ್‌ನಲ್ಲಿ ಸಮಯಕ್ಕೆ ಕೆಲಸ ಸಾಧಿಸಲು ಆಗದೇ ಹಪಹಪಿಸುವಿಕೆ. ಹಿರಿಯರ ಹಿತವಚನದಲ್ಲಿ ಅಲಕ್ಷ್ಯ ಬೇಡ. ದ್ರವ್ಯ ನಾಶಕ್ಕೆ ದಾರಿ ಆದೀತು. 
ಶುಭ ವಾರ: ಬುಧ, ಶುಕ್ರ
ಶುಭ ರತ್ನ: ಇಂದ್ರ ನೀಲಿ
ಶುಭ ದಿಕ್ಕು: ಪಶ್ಚಿಮ
ಶುಭ ವರ್ಣ: ನೀಲಿ, ಹಳದಿ
ಶುಭ ಸಂಖ್ಯೆ: 5, 6, 8
ಶುಭ ದಿನಾಂಕ: 7, 10, 19, 22 
ಶಿವಾರಾಧನೆಯಿಂದ ಶುಭ

ಮೀನ ರಾಶಿ

ಅತಿಯಾದ ಯಶಸ್ಸಿನಿಂದ ಮನಸ್ಸಿಗೆ ಸಂತೋಷ. ಗುರು, ಶನಿಯ ಅನುಗ್ರಹ ನಿಮ್ಮ ಪಾಲಿಗಿದೆ. ಮುಟ್ಟಿದ್ದೆಲ್ಲಾ ಚಿನ್ನ. ನಾಲ್ಕರಲ್ಲಿ ರಾಹುವು ಮಾನ ಹಾನಿ, ಧನ ಹಾನಿ, ಮಾತೃ ಹಿನ್ನಡೆ ಉಂಟುಮಾಡುತ್ತಾನೆ. ಈ ವರ್ಷದಲ್ಲಿ ಯಶಸ್ಸಿನ ಹಾದಿಯಲ್ಲಿರುವ ನಿಮಗೆ ಹಣದ ಅಪವ್ಯಯ ಗೋಚರಿಸದು. ಕೆಲಸ ನಿಧಾನ. ಶರೀರದ ಆರೋಗ್ಯ ಏರುಪೇರು ಆದೀತು. ಮೇ ತಿಂಗಳಲ್ಲಿ ಋತುಭಾದೆ ನಿಮ್ಮನ್ನು ಕಾಡುತ್ತದೆ. ಸ್ಥಾನಪಲ್ಲಟದ ಭಯ ಆದರೂ ಸ್ಥಾನದಲ್ಲಿ ಅವನತಿ ಇಲ್ಲ. ಕುಟುಂಬದ ಅನ್ಯೋನ್ಯತೆ ಬೇರೆಯವರ ಅಸೂಯೆಗೆ ಕಾರಣ ಆದೀತು. ವಂಶಪಾರಂಪರ್ಯದ ಶಾರೀರಿಕ ವೇದನೆ ಹಿನ್ನಡೆ ನೀಡೀತು. ಜೂನ್‌ನಲ್ಲಿ ವಿವಾಹಿತರಿಗೆ ಪುತ್ರಾಗಮನ. ಹೊಸ ವ್ಯಕ್ತಿಗಳ ಆಗಮನ. ಸಂಪತ್ತಿನ ಸಂಗ್ರಹ. ಕುಟುಂಬದ ಸಹಾಯ ನಿಮ್ಮ ಧೈರ್ಯವನ್ನು ಹೆಚ್ಚಿಸುತ್ತದೆ. ಅಧಿಕಾರಿ ವರ್ಗದ ಭಯ. ಹೊಸ ಜವಾಬ್ದಾರಿ ಪ್ರಾಪ್ತಿ. ಜುಲೈನಲ್ಲಿ ಬಹ್ಮಚಾರಿಗಳಿಗೆ ದಾಂಪತ್ಯದಲ್ಲಿ ಸುಯೋಗ. ಹಿಡಿದ ಕೆಲಸದಲ್ಲಿ ವಿಜಯ. ಬಂಧುಗಳ ಮನೆಯಲ್ಲಿ ಪ್ರಾಣಾಂತಿಕ ಅಪಾಯ. ದೈವಾನುಗ್ರಹವಿದೆ. ಆಗಸ್ಟ್‌ನಲ್ಲಿ ಸಂತಸ, ಆಗಾಗ ಪ್ರವಾಸ. ಸೆಪ್ಟೆಂಬರ್‌ನಲ್ಲಿ ಕೃಷಿ ವಿಭಾಗದಲ್ಲಿ ಬಾಧೆ. ಕೆಲಸದಲ್ಲಿ ತೊಡಕಿನ ಅನುಭವ. ವ್ಯವಹಾರದಲ್ಲಿ ಲಾಭ ಹೆಚ್ಚಳ. ನೌಕರ ವರ್ಗಕ್ಕೆ ಮುಂಬಡ್ತಿ. ಅಕ್ಟೊಂಬರ್‌ನಲ್ಲಿ ಸ್ಥಾನಪಲ್ಲಟದಿಂದ ಲಾಭ. ವಿದೇಶ ಪ್ರವಾಸ. ಕೀರ್ತಿಯ ಉತ್ಕೃಷ್ಟತೆ, ಆರೋಗ್ಯಕ್ಕೆ ಹಿನ್ನಡೆ. ನವೆಂಬರ್‌ನಲ್ಲಿ ಆರ್ಥಿಕತೆಯ ನಾಗಾಲೋಟ. ಡಿಸೆಂಬರ್‌ನಲ್ಲಿ ಜಲ ವೃತ್ತಿ ಲಾಭ. ಖರ್ಚು ಹೆಚ್ಚಾದರೂ ಅರ್ಥ ವ್ಯವಸ್ಥೆಯಲ್ಲಿ ಕೊರತೆ ಇಲ್ಲ. ಜನವರಿಯಲ್ಲಿ ಆಲಸ್ಯದಿಂದ ಪ್ರಗತಿ ಹಿನ್ನಡೆ. ಆರೋಗ್ಯ ಹಾನಿ. ಫೆಬ್ರವರಿಯಲ್ಲಿ ಆಪ್ತರ ವಿರಹ. ದಾಂಪತ್ಯ ಕಲಹ ಆದರೂ ಆದಾಯಕ್ಕೆ ಹಿನ್ನಡೆ ಇಲ್ಲ, ನಾಗಲೋಟ ಇರುತ್ತದೆ. ಮಾರ್ಚ್‌ನಲ್ಲಿ ವಿವಾಹಿತರಿಗೆ ಪುತ್ರ ಪ್ರಾಪ್ತಿ, ಹರ್ಷ. ಹೊಸ ಉದ್ಯೋಗ ಲಾಭ. ವಿದೇಶ ಪ್ರವಾಸದ ಅವಕಾಶ. 
ಶುಭವಾರ: ಭಾನು, ಗುರು
ಶುಭ ರತ್ನ: ಪುಷ್ಯರಾಗ
ಶುಭ ದಿಕ್ಕು: ಈಶಾನ್ಯ
ಶುಭ ವರ್ಣ: ಹಳದಿ
ಶುಭ ಸಂಖ್ಯೆ: 1, 3, 8, 11
ಶುಭ ದಿನಾಂಕ: 3, 9, 12, 18, 21
ಹರಿಹರ ಆರಾಧನೆ ಮಾಡುವುದು ಒಳ್ಳೆಯದು