ಪವಾಡಗಳ ಆಗರ ಶ್ರೀ ಸಿಗಂದೂರು ಚೌಡೇಶ್ವರಿ
ಅದ್ಭತವಾದ ಪ್ರಕೃತಿ ಮಡಿಲಲ್ಲಿ, ಸುತ್ತಲೂ ನೀರು ಇರೋ ಸಿಗಂದೂರಿನ ಚೌಡೇಶ್ವರಿ ದೇವರ ಮೇಲೆ ಭಕ್ತರಿಗೆ ಭಕ್ತಿಯೊಂದಿಗೆ ಭಯವೂ ಇದೆ. ಇಂಥ ಅಪಾರ ಶಕ್ತಿ ಇರೋ ಸಿಗಂದೂರಿನ ದೇವಿ ಮಹಿಮೆ ಏನು?
ದೇವರನ್ನು ನಂಬದಿರುವ ಈ ಕಾಲದಲ್ಲಿಯೂ ತನ್ನ ಶಕ್ತಿ, ಮಹಿಮೆಯಿಂದ ಭಕ್ತರಲ್ಲಿ ಭಯವೂ ಹುಟ್ಟಿಸಿದ್ದಾಳೆ ಸಿಗಂದೂರಿನ ಚೌಡೇಶ್ವರಿ. ತನ್ನ ವಿಭಿನ್ನ ಶಕ್ತಿಯ ರೂಪದಲ್ಲಿ ಹಲವೆಡೆ ನೆಲೆಸಿರುವ ದೇವಿ ರೂಪಗಳಲ್ಲಿ ಈ ಚೌಡೇಶ್ವರಿಯೂ ಹೌದು.
ದೈವೀ ಶಕ್ತಿ ಪೀಠಗಳಲ್ಲಿ ಶ್ರೀ ಸಿಗಂದೂರು ಕ್ಷೇತ್ರವೂ ಒಂದು. ತನ್ನನ್ನು ಹುಡುಕಿಕೊಂಡು ಬರುವ ಭಕ್ತರಿಗೆ ಕೇಳಿದ್ದನ್ನೆಲ್ಲಾ ದಯ ಪಾಲಿಸೋ ಈ ದೇವಿಯ ಮಹಿಮೆ ಅಪಾರ. ಕಳ್ಳ ಕಾಕರೂ ಈ ದೇವಿ ಹೆಸರು ಹೇಳಿದರೆ ಬೆದರುತ್ತಾರೆ. ಅದಕ್ಕೆ, 'ಸಿಗಂದೂರು ಚೌಡೇಶ್ವರಿಯ ಕಾವಲಿದೆ, ಎಚ್ಚರಿಕೆ..' ಎಂಬ ಬೋರ್ಡ್ ಎಲ್ಲಡೆ ರಾರಾಜಿಸುವುದೂ ಸಾಮಾನ್ಯ.
ಆಸ್ತಿ ವಿಚಾರ, ಬೆಲೆ ಬಾಳುವ ವಸ್ತು ಕಳೆದುಕೊಂಡವರು ಹೆಚ್ಚಾಗಿ ಈ ದೇವಿಯ ಮೊರೆ ಹೋಗುತ್ತಾರೆ. ಸ್ಥಳಿಯರು ಹೇಳುವಂತೆ, ಸಾವಿರಾರು ಭಕ್ತರ ಸಮಸ್ಯೆ ಪರಿಹರಿಸಿದ್ದಾಳೆ.
ಎಲ್ಲಿದೆ?
ಚೌಡೇಶ್ವರಿ ನೆಲೆಸಿರುವುದು ಶಿವಮೊಗ್ಗ ಜಿಲ್ಲೆಯ ಸಾಗರದಿಂದ 35 ಕಿ.ಮೀ. ದೂರದಲ್ಲಿರುವ ಸಿಗಂದೂರಿನಲ್ಲಿ. ಈಕೆಯನ್ನು ಸಿಗಂದೂರಮ್ಮ ಎಂದೂ ಕರೆಯುತ್ತಾರೆ. ಸಾಗರದಿಂದ ಪ್ರತಿ ಗಂಟೆಗೊಮ್ಮೆ ಬಸ್ ಇದ್ದು, ಕೇವಲ 2 ಗಂಟೆಗಳಲ್ಲಿ ಈ ಕ್ಷೇತ್ರವನ್ನು ತಲುಪಬಹುದು. ಅದೂ ಲಾಂಚ್‌ನಲ್ಲಿ ದೇವಸ್ಥಾನವನ್ನು ತಲುಪಬೇಕಾಗಿದ್ದು, ಪ್ರಕೃತಿ ಸೌಂದರ್ಯವನ್ನು ಅನುಭವಿಸಲೂ ಇದು ಪ್ರಶಸ್ತ ಸ್ಥಳ.
500 ವರ್ಷದ ಇತಿಹಾಸವಿದೆ ದೇವಿಗೆ!
ಒಂದಾನೊಂದು ಕಾಲದಲ್ಲಿ ಶೇಷಪ್ಪ ಎಂಬಾತ ಭೇಟೆಯಾಡಲು ಸಿಗಂದೂರು ಕಾಡಿಗೆ ಹೋಗಿದ್ದನಂತೆ. ದಾರಿ ತಪ್ಪಿ ಕಳೆದು ಹೋಗದಂತೆ, ರಾತ್ರಿ ಅಲ್ಲಿಯೇ ವಿಶ್ರಾಂತಿ ಪಡೆಯಲು ಮರದ ಕೆಳಗೆ ಮಲಗಿದ್ದನಂತೆ. ಆತನ ಕನಸಿನಲ್ಲಿ ದೇವಿ ಬಂದು, ತಾನಿಲ್ಲಿ ನೆಲೆಸಿರುವುದಾಗಿ ಹೇಳಿ ಗುಡಿ ಕಟ್ಟಿಸಲು ಆಜ್ಞೆ ಮಾಡುತ್ತಾಳೆ. ಮರು ದಿನವೇ ಆತ ಊರಿಗೆ ಹೋಗಿ ನಡೆದ ಘಟನೆಯನ್ನು ಬ್ರಾಹ್ಮಣ ದುಗ್ಗಜ್ಜ ಬಳಿ ಹೇಳಿಕೊಂಡು, ಗುಡಿ ಕಟ್ಟಿಸುತ್ತಾನೆ.
ದೇವಸ್ಥಾನದ ಬಳಿಯೇ ಭೂತ (ವೀರಭದ್ರ) ಸ್ಥಾನವೂ ಇದ್ದು, ಈ ಸಿಗಂದೂರು ಜಾಗವನ್ನು ರಕ್ಷಿಸುತ್ತಾನೆಂಬ ನಂಬಿಕೆಯೂ ಇದೆ.
ದೇವಸ್ಥಾನದ ಸಮಯ:
ಪೂಜೆ ಮಾಡುವುದು ಬೆಳಗ್ಗೆ ಮಾತ್ರ. ಸಂಜೆ ದರ್ಶನ ಮಾಡಬಹುದು.
ಬೆಳಗ್ಗೆ 4.30-7.00 ಹಾಗೂ 9.00-2.00
ದರ್ಶನ ಸಂಜೆ 4.00 - 7.00