ಕೈಲಾಸ ವಾಸಿ ಶಿವನನ್ನು ಕೋಟಿ ಕೋಟಿ ಭಕ್ತರು ಪೂಜಿಸುವ ಮಹಾಶಿವರಾತ್ರಿಯನ್ನು ಮಾರ್ಚ್ 4ರ ಸೋಮವಾರದಂದೇ ಈ ವರ್ಷ ಆಚರಿಸಲಾಗುತ್ತಿದೆ. ಸೋಮವಾರದಂದೇ ಶಿವನನ್ನು ವಿಷೇಷವಾಗಿ ಆರಾಧಿಸುವಂತಾಗಿರುವುದು ಈ ವರ್ಷದ ವಿಶೇಷ. ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಭಕ್ತರು ಭಕ್ತಿಯ ಪರಾಕಾಷ್ಠೆ ತಲುಪುವಂಥ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಲಿದೆ. 

ಪ್ರತೀ ವರ್ಷದಂತೆ ಕೊಯಮತ್ತೂರಿನಲ್ಲಿ ಇಶಾ ಫೌಂಡೇಷನ್ ವತಿಯಿಂದ ಆದಿಯೋಗಿ ಶಿವ ಮಂದಿರದಲ್ಲಿ ಮಹಾ ಶಿವರಾತ್ರಿಯನ್ನು ಆಚರಿಸಲಿದೆ. ಈ ವಿಶೇಷ ಸಂದರ್ಭದಲ್ಲಿ ಎಲ್ಲರೂ ಪ್ರತ್ಯಕ್ಷವಾಗಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ನೀಡುವ ಲೈವ್ ಕಾರ್ಯಕ್ರಮದ ಮೂಲಕ ಪಾಲ್ಗೊಳ್ಳಬಹುದು.

"

ತನ್ನನ್ನು ನಂಬಿದ ಭಕ್ತರಿಗೆ ಎಂದಿಗೂ ನಿರಾಸೆ ಮಾಡದ ಶಿವನನ್ನು ದೇಶದೆಲ್ಲೆಡೆ ವಿಧ ವಿಧವಾಗಿ ಭಕ್ತಿ ಭಾವದಿಂದ ಪೂಜಿಸಲಾಗುತ್ತದೆ. ದಿನವಿಡೀ ಉಪವಾಸ ಮಾಡಿ, ರಾತ್ರಿ ಫಲಾಹಾರ ತಿಂದು ಜಾಗರಣೆ ಮಾಡುವುದು ಈ ಹಬ್ಬದ ವಿಶೇಷ. ಇಂಥ ವಿಶೇಷ ದಿನದಂದು ನಡೆಯುವ ಮಹಾ ಪೂಜೆ, ವಿಶೇಷ ಕಾರ್ಯಕ್ರಮಗಳನ್ನು ಇಶಾ ಫೌಂಡೇಷನ್ ಕೊಯಮತ್ತೂರಿನಲ್ಲಿ ಹಮ್ಮಿಕೊಳ್ಳುತ್ತಿದೆ. 

ಸಾಮಾನ್ಯವಾಗಿ ಶಿವ ಸೇರಿದಂದೆ ಎಲ್ಲ ದೇವಾನು ದೇವತೆಗಳಿಗೆ ನಸುಕಿನಲ್ಲಿ ಅಥವಾ ಹಗಲಿನಲ್ಲಿ ಪೂಜೆ ನಡೆದರೆ, ಶಿವರಾತ್ರಿಯಂದು ರಾತ್ರಿಯೇ ಈಶ್ವರನಿಗೆ ಶ್ರೇಷ್ಠ. ರಾತ್ರಿ ಇಡೀ ಪೂಜೆ, ಭಜನೆ, ಹೋಮ, ಹವನಗಳನ್ನು ನಡೆಸುವ ಮೂಲಕ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ರಾತ್ರಿ ಎಂದರೆ ಕತ್ತಲು. ಕತ್ತಲೆಂದರೆ ಅಜ್ಞಾನ. ಈ ಅಜ್ಞಾನವನ್ನು ಕಳೆದು, ಬೆಳಿಗಿಸು ಎಂದು ಶಿವನನ್ನು ಪೂಜಿಸಿ, ಪ್ರಾರ್ಥಿಸಿಕೊಳ್ಳುವುದೇ ಶಿವರಾತ್ರಿಯ ವಿಶೇಷ. ಇದರಿಂದ ಶಿವ ಎಲ್ಲೆಡೆ ಜ್ಞಾನ ಪಸರುವಂತೆ ಮಾಡುತ್ತಾನೆಂದೇ ಭಕ್ತರು ನಂಬಿದ್ದಾರೆ.