ಆತ್ಮೀಯರ ಮನೆಗೆ ಮೊಟ್ಟ ಮೊದಲ ಬಾರಿಗೆ ಭೇಟಿ ನೀಡಿದಾಗ ನಿಮ್ಮ ಕಣ್ಣು ಮೊದಲು ನೆಡುವುದು ಗೋಡೆ ಮೇಲೆಯೇ. ಗೋಡೆಯ ಬಣ್ಣ, ತೂಗು ಹಾಕಿರುವ ಫೋಟೋಗಳು, ಹ್ಯಾಂಗಿಂಗ್ಸ್, ಪೇಂಟಿಂಗ್ಸ್....ಎಲ್ಲವೂ ಗಮನ
ಸೆಳೆಯುತ್ತವೆ. ಈಗಂತೂ ಗೋಡೆಗಳ ಮೇಲೆ ನಾನಾ ವಿಧದ ಚಿತ್ತಾರಗಳನ್ನು ಮೂಡಿಸುವುದು ಫ್ಯಾಷನ್ ಆಗಿದೆ. ಮನೆಯವರ ಆಸಕ್ತಿ, ಅಭಿರುಚಿಗಳಿಗೆ ಗೋಡೆಗಳೇ ಕನ್ನಡಿ .ಮನೆಗೆ ಬರುವ ಅತಿಥಿಗಳು, ಕುಟುಂಬ ಸದಸ್ಯರು
ಎಲ್ಲರೂ ಕೂತು ಮಾತನಾಡುವ ಸ್ಥಳ ಲಿವಿಂಗ್ ರೂಮ್. ಹೀಗಾಗಿ ಆ ರೂಮ್‍ನ ಗೋಡೆಗಳು ಅತಿಥಿಗಳು ಹಾಗೂ ಮನೆಯವರೊಂದಿಗೆ ತುಸು ಹೆಚ್ಚೇ ಸಂಪರ್ಕದಲ್ಲಿರುವ ಕಾರಣ ಅವುಗಳ ಬಣ್ಣ, ಅಲಂಕಾರ ಎಲ್ಲವೂ
ಮುಖ್ಯವಾಗುತ್ತವೆ. ಲಿವಿಂಗ್ ರೂಮ್ ಗೋಡೆಗಳ ಆಕರ್ಷಣೆ ಹೆಚ್ಚಿಸಲು ಹೀಗೆಲ್ಲ ಮಾಡಬಹುದು:

1. ಒಲವಿನ ಬಣ್ಣ:  ಮೂಡ್ ಮೇಲೆ ಪ್ರಭಾವ ಬೀರುವ ಶಕ್ತಿ ಬಣ್ಣಕ್ಕಿದೆ. ಕೆಲವೊಂದು ಬಣ್ಣಗಳು ಕಣ್ಣಿಗೆ ತಂಪು ನೀಡುವ ಜೊತೆಗೆ ಮನಸ್ಸಿಗೆ ಹಿತವೆನಿಸುತ್ತವೆ. ಇನ್ನೂ ಕೆಲವು ಮನಸ್ಸನ್ನು ಕದಡಿಸುತ್ತವೆ. ಅಷ್ಟೇ ಅಲ್ಲ,
ನಕಾರಾತ್ಮಕ ಪರಿಣಾಮ ಬೀರುವ ಮೂಲಕ ಮನೆ ಸದಸ್ಯರ ನಡುವೆ ವೈಮನಸ್ಸು ಹೆಚ್ಚಲು ಮೂಲವಾಗಬಲ್ಲವು ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಆದಕಾರಣ ಲಿವಿಂಗ್ ರೂಮ್‍ಗೆ ಬಳಸುವ ಬಣ್ಣ ಮನಸ್ಸಿಗೆ ಹಿತ
ಹಾಗೂ ಶಾಂತಿ ನೀಡುವಂತಿರಲಿ. ಏಕೆಂದರೆ ಮನೆಯ ಸದಸ್ಯರೆಲ್ಲರೂ ಒಟ್ಟಾಗಿ ಕುಳಿತು ಹೆಚ್ಚಿನ ಸಮಯ ಕಳೆಯುವ ತಾಣ ಇದಾಗಿರುವ ಕಾರಣ ಸಾಮರಸ್ಯ ಮೂಡಿಸುವ, ಬಾಂಧವ್ಯ ಹೆಚ್ಚಿಸಬಲ್ಲ ಬಣ್ಣಕ್ಕೆ ಆದ್ಯತೆ ನೀಡಿ. ಗಾಢ
ವರ್ಣಕ್ಕಿಂತ ತಿಳಿ ಬಣ್ಣ ಹೆಚ್ಚು ಸೂಕ್ತ. ತಿಳಿ ವರ್ಣವಿದ್ದರೆ ಅದರ ಮೇಲೆ ಅಳವಡಿಸುವ ಇಲ್ಲವೆ ತೂಗು ಹಾಕುವ ಡೆಕೋರೇಟಿವ್ ವಸ್ತುಗಳು ಆಕರ್ಷಕವಾಗಿ ಕಾಣಿಸುತ್ತವೆ. ಗಾಢ ವರ್ಣವಾದರೆ ಈ ಲುಕ್ ಕಾಣಿಸದೆ ಇರಬಹುದು. 

ಚಳಿಗಾಲದಲ್ಲಿ ಬೆಚ್ಚನೆಯ ಗೂಡು ನಿಮ್ಮದಾಗಬೇಕೆ? ಈ ಟಿಪ್ಸ್ ಟ್ರೈ ಮಾಡಿ

2.ಫೋಟೋ ಮೂಲಕವೇ ಪ್ರೀತಿ ಹಂಚಿ: ಹಾಲ್ ಗೋಡೆಗಳ ಮೇಲೆ ಕುಟುಂಬ ಸದಸ್ಯರ ಫೋಟೋಗಳನ್ನು ತೂಗು ಹಾಕುವ ಅಭ್ಯಾಸ ಹಿಂದಿನಿಂದಲೂ ಇದೆ. ಈಗಂತೂ ನಾನಾ ವಿನ್ಯಾಸದ, ಆಕರ್ಷಕ ಫೋಟೋ
ಫ್ರೇಮ್‍ಗಳು ಗೋಡೆಯ ಅಂದಕ್ಕೆ ಮೆರುಗು ನೀಡಬಲ್ಲವು. ಇವು ನಿಮ್ಮ ಬದುಕಿನ ಸಂತೋಷದ ಕ್ಷಣಗಳಿಗೆ ಕನ್ನಡಿ ಹಿಡಿಯುವ ಜೊತೆಗೆ ಕುಟುಂಬ ಸದಸ್ಯರ ನಡುವಿನ ಪ್ರೀತಿ ಹಾಗೂ ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ.

 3. ಕನ್ನಡಿಯೊಳಗಿನ ಗಂಟು:  ಲಿವಿಂಗ್ ರೂಮ್ ಗೋಡೆಗೆ ಕಡಿಮೆ ವೆಚ್ಚದಲ್ಲಿ ರಿಚ್ ಲುಕ್ ನೀಡಲು ಕನ್ನಡಿ ಬಳಸಬಹುದು. ಅದರಲ್ಲೂ ನಿಮ್ಮ ಲಿವಿಂಗ್ ರೂಮ್ ಪುಟ್ಟದಾಗಿದ್ದರೆ, ಅಗತ್ಯವಾಗಿ ಕನ್ನಡಿ ಹಾಕಿ. ಇದು ರೂಮ್
ದೊಡ್ಡದಾಗಿ ಕಾಣಿಸುವಂತೆ ಮಾಡಬಲ್ಲದು. ಬೆಳಕು ಕನ್ನಡಿಯಲ್ಲಿ ಪ್ರತಿಫಲನಗೊಳ್ಳುವ ಕಾರಣ ರೂಮ್ ಪ್ರಕಾಶಮಾನವಾಗಿ ಕಾಣಿಸುತ್ತದೆ. ಸ್ಟೈಲಿಷ್ ಆಗಿರುವ ಫ್ರೇಮ್‍ಗಳನ್ನೊಳಗೊಂಡಿರುವ ಕನ್ನಡಿಗಳು ಮಾರ್ಕೆಟ್‍ನಲ್ಲಿ ಲಭ್ಯವಿವೆ.
ಇವುಗಳ ಮೂಲಕ ನೀವು ಲಿವಿಂಗ್ ರೂಮ್ ಗೋಡೆಗಳ ಅಂದವನ್ನು ಹೆಚ್ಚಿಸಬಹುದು.

 ಹ್ಯಾಂಡ್‍ಬ್ಯಾಗ್ ಬಣ್ಣದಲ್ಲಿದೆ ನಿಮ್ಮ ಲಕ್, ಖರೀದಿಸುವಾಗ ನೆನಪಿರಲಿ ಜನ್ಮ ಸಂಖ್ಯೆ

4.ಆಸಕ್ತಿಯನ್ನು ಬಿಂಬಿಸಲಿ: ನಿಮಗೆ ಗಿಟಾರ್ ನುಡಿಸುವುದೆಂದರೆ ತುಂಬಾ ಇಷ್ಟವಿರಬಹುದು. ಮೋಟಾರ್ ಸೈಕಲ್ಸ್  ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್ ಇರಬಹುದು. ನಿಮ್ಮ ಈ ಎಲ್ಲ ಅಸಕ್ತಿಗಳನ್ನು ಲಿವಿಂಗ್ ರೂಮ್ ಗೋಡೆಗಳ ಮೇಲೆ
ಪ್ರತಿಬಿಂಬಿಸಿ. ಅಂದ್ರೆ ಗಿಟಾರ್ ಅನ್ನು ಗೋಡೆಗೆ ತೂಗು ಹಾಕುವುದು. ನಾನಾ ವಿನ್ಯಾಸದ ಪುಟ್ಟ ಪುಟ್ಟ ಮೋಟಾರ್ ಸೈಕಲ್ಗಳನ್ನು ಕೂಡ ಗೋಡೆಗೆ ಅಂಟಿಸಬಹುದು. ಇದೇ ರೀತಿ ಸ್ಟೈಲಿಷ್ ಆಗಿರುವ ಬಾಟಲ್‍ಗಳು, ಹ್ಯಾಟ್‍ಗಳು, ಕೀ
ಬಂಚ್‍ಗಳು... ಹೀಗೆ ನಿಮ್ಮಿಷ್ಟದ ವಸ್ತುಗಳನ್ನು ಗೋಡೆಗೆ ಅಂಟಿಸಿ. ಇದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ. ಮನೆಗೆ ಭೇಟಿ ನೀಡುವ ಗೆಸ್ಟ್ಗಳಿಗೂ ಇವು ನಿಮ್ಮ ಆಸಕ್ತಿ, ಹವ್ಯಾಸಗಳನ್ನು
ಪರಿಚಯಿಸುತ್ತವೆ.

5. ಕೂಲ್ ಕೂಲ್ ಗ್ರೀನ್: ಗೋಡೆ ಮೇಲಿನ ಸ್ಟೋರೇಜ್‍ಗಳಲ್ಲಿ ಹಸಿರು ಗಿಡ ಅಥವಾ ಬಳ್ಳಿಗಳ ಕುಂಡಗಳನ್ನಿಡುವ ಮೂಲಕ ಲಿವಿಂಗ್ ರೂಮ್‍ಗೆ ಗ್ರೀನ್ ಟಚ್ ನೀಡಬಹುದು. ಗಿಡ, ಬಳ್ಳಿಗಳ ಹಸಿರು ಕಣ್ಣಿಗೆ ತಂಪು ನೀಡುವ
ಮೂಲಕ ಮನೆ ಪ್ರವೇಶಿಸುವ ವ್ಯಕ್ತಿಗಳಿಗೆ ಆಹ್ಲಾದಕರ ಅನುಭವ ನೀಡುತ್ತವೆ. 

6. ಬೆಳಕು ಬೆಳಗಲಿ: ಇತ್ತೀಚಿನ ದಿನಗಳಲ್ಲಿ ಒಳಾಂಗಣ ವಿನ್ಯಾಸದಲ್ಲಿ ಲೈಟಿಂಗ್ ಟೆಕ್ನಾಲಜಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಾಲ್ ಡೆಕೋರೇಷನ್‍ಗೆ ಸಂಬಂಧಿಸಿ ಪ್ಯಾನಲ್ ಲೈಟ್ಸ್ ಸೇರಿದಂತೆ ನಾನಾ ವಿನ್ಯಾಸದ, ಬಣ್ಣಗಳ
ಲೈಟ್‍ಗಳು ಲಭ್ಯವಿದ್ದು, ಲಿವಿಂಗ್ ರೂಮ್‍ನ ಕಳೆ ಹೆಚ್ಚಿಸುತ್ತವೆ.

ಮನೆ ಶಿಫ್ಟಿಂಗ್ ತಲೆನೋವಿಗೆ ಪ್ಲ್ಯಾನಿಂಗ್ಯೇ ರಾಮಬಾಣ!

7. ಗೋಡೆಯಲ್ಲೊಂದಿಷ್ಟು ಕೋಣೆಗಳಿರಲಿ: ಗೋಡೆಗಳಲ್ಲಿ ಮರದ ಸ್ಟೋರೇಜ್‍ಗಳನ್ನು ನಿರ್ಮಿಸಿ ಅದರಲ್ಲಿ ಗಿಡಗಳು, ಪುಸ್ತಕಗಳು, ದೇವರ ಮೂರ್ತಿ, ಶಿಲ್ಪಗಳು, ಶೋ ಪೀಸ್ ಮುಂತಾದವುಗಳನ್ನಿಡುವುದು ಇತ್ತೀಚೆಗೆ ಟ್ರೆಂಡ್
ಆಗಿದೆ.

8.ಬ್ಯೂಟಿ ಹೆಚ್ಚಿಸುವ ವಿನ್ಯಾಸ: ಟೆಕ್ಚರ್ ವಾಲ್‍ಪೇಪರ್ಸ್, ಬಿಕ್ಸ್, ಮರ, ಶಿಲೆಗಳ ಮೂಲಕ ಲಿವಿಂಗ್ ರೂಮ್ ಗೋಡೆಗಳನ್ನು ವಿನ್ಯಾಸಗೊಳಿಸಬಹುದು. ಇವು ಲಿವಿಂಗ್ ರೂಮ್ ಆಕರ್ಷಣೆಯನ್ನು ಹೆಚ್ಚಿಸುತ್ತವೆ. 

.