ಜಿಲ್ಲೆಯಲ್ಲಿ ಮತ್ತೆ ಎದುರಾದ ಪ್ರವಾಹದ ಭೀಥಿ| ಉಕ್ಕಿ ಹರಿಯುತ್ತಿರುವ ಕೃಷ್ಣಾ, ಭೀಮಾನದಿ ಪಾತ್ರಗಳು| ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನಾಲ್ಕು ಲಕ್ಷ ಕ್ಯುಸೆಕ್ ನೀರು ಬಿಡುಗಡೆ| ಮತ್ತೆ ಮುಳುಗಿದ ಕೊಳ್ಳೂರು ಸೇತುವೆಥಿ ರಾಜ್ಯ ಹೆದ್ದಾರಿ-15 ರಲ್ಲಿ ಸಂಚಾರ ಕಡಿತ|
ಯಾದಗಿರಿ[ಅ.24]: ಆಗಸ್ಟ್ ತಿಂಗಳಲ್ಲಿನ ನೆರೆ ಹಾವಳಿಯ ಭೀತಿ ಇನ್ನೂ ಕಣ್ಣಂಚಿನಿಂದ ಮಾಯವಾಗುವ ಮುನ್ನವೇ, ಇದೀಗ ಮತ್ತೆ ಪ್ರವಾಹದ ಆತಂಕ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಮಹರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ. ಹೀಗಾಗಿ, ಜಲಾಶಯದ ಮಟ್ಟ ಕಾಯ್ದಿಟ್ಟುಕೊಂಡು ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿರುವುದರಿಂದ, ಈ ಹಿಂದಿನಂತೆಯೇ ಈಗ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಭೀತಿಗೆ ಕಾರಣವಾಗಿದೆ.
ಯಾದಗಿರಿ ಜಿಲ್ಲೆಯ ಕೃಷ್ಣಾ ಹಾಗೂ ಭೀಮಾನದಿಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಅದರಲ್ಲೂ ಕೃಷ್ಣೆಯ ಅರ್ಭಟ ದಿನೇ ದಿನೆ ಹೆಚ್ಚಾಗುತ್ತಿದೆ. ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯದ ಮೂಲಕ ಕೃಷ್ಣಾ ನದಿಗೆ ಕಳೆದ ಮೂರು ದಿನಗಳಿಂದ ಹರಿ ಬಿಡುತ್ತಿರುವ ನೀರಿನ ಪ್ರಮಾಣ ಬುಧವಾರ ಸಂಜೆವರೆಗೆ 4 ಲಕ್ಷ ಕ್ಯುಸೆಕ್ ತಲುಪಿತ್ತು. ಕಳೆದೆರಡು ತಿಂಗಳ ಹಿಂದೆ ನೆರೆಯ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿ, ಪರಿಹಾರ ಕಾರ್ಯಗಳತ್ತ ಬಿಜಿಯಾಗಿದ್ದ ಜಿಲ್ಲಾಡಳಿತಕ್ಕೆ ಇದೀಗ ಮತ್ತೊಂದು ಸವಾಲು ಎದುರಾದಂತಾಗಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮಂಗಳವಾರ ದಿಢೀರ್ ಸಭೆ ನಡೆಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸೋಮವಾರದಿಂದಲೇ ನದಿಪಾತ್ರದ ಗ್ರಾಮಗಳಲ್ಲಿ ಪ್ರಕಟಣೆ ಹೊರಡಿಸಿ, ಡಂಗೂರ ಸಾರಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದ ಜಿಲ್ಲಾಡಳಿತ, ಬುಧವಾರ ನೀರಿನ ಹೊರಹರಿವು ಹೆಚ್ಚುತ್ತಿದ್ದಂತೆಯೇ ಅಧಿಕಾರಿಗಳ ತಂಡವನ್ನು ರಚಿಸಿ, ಕ್ರಮಕ್ಕೆ ಮುಂದಾಗಿದೆ.
ಮತ್ತೆ ಮುಳುಗಿದ ಕೊಳ್ಳೂರು ಸೇತುವೆ:
ಬಸವಸಾಗರ ಜಲಾಶಯದ 25 ಗೇಟುಗಳ ಮುಖಾಂತರ ಬುಧವಾರ ಸಂಜೆ ಕೃಷ್ಣಾ ನದಿಗೆ ನಾಲ್ಕು ಲಕ್ಷ ಕ್ಯುಸೆಕ್ ನೀರು ಬಿಡುಗಡೆಯಾಗಿದ್ದರಿಂದ ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಗ್ರಾಮದ, ರಾಜ್ಯ ಹೆದ್ದಾರಿ-15 ಮೇಲಿನ ಸೇತುವೆ ಮತ್ತೇ ಮುಳುಗಿದೆ. ಎರಡು ತಿಂಗಳಲ್ಲಿ ಮೂರು ಬಾರಿ ಈ ಸೇತುವೆ ಕೃಷ್ಣೆಯಲ್ಲಿ ಮುಳುಗೆದ್ದಂತಾಗಿದೆ. ಹೀಗಾಗಿ, ಕಲಬುಗರಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಸಂಪರ್ಕಿಸುವ ರಾಜ್ಯ ಹೆದ್ದಾರಿ-15 ರಲ್ಲಿ ಸಂಚಾರ ನಿಷೇಧಗೊಳಿಸಿ ಆದೇಶಿಸಿರುವ ಜಿಲ್ಲಾಡಳಿತ, ಇಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಪಹರೆ ಹಾಕಿದೆ.
ಕೊಳ್ಳೂರು ಸುತ್ತಮುತ್ತಲ ಹೊಲಗದ್ದೆಗಳಲ್ಲಿ ನೀರು ನುಗ್ಗಿ ಬೆಳೆಗಳು ಕೃಷ್ಣಾರ್ಪಣವಾಗಿದೆ. ಆಗಸ್ಟ್ ತಿಂಗಳಲ್ಲಿನ ನೆರೆಹಾವಳಿಯಿಂದಾಗಿ ಹತ್ತಿ ಹಾಗೂ ಮೆಣಸಿನಕಾಯಿ ಬೆಳೆ ನಾಶವಾಗಿದ್ದರೆ, ಈ ಬಾರಿಯಾದರೂ ಕೈಗೆ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿ ಹಾಕಿದ್ದ ಜೋಳ ಸಹ ಹಾಳಾದಂತಾಗಿ, ರೈತರ ಗೋಳು ಮುಗಿಲು ಮುಟ್ಟಿದಂತಾಗಿದೆ. ಕಕ್ಕೇರಾ ಸಮೀಪದ ನೀಲಕಂಠರಾಯನ ಗಡ್ಡೆಎಂದಿನಂತೆ ಜಲಾವೃತಗೊಂಡು, ಅಲ್ಲಿ ನೂರಾರು ಜನರು ಅತಂತ್ರದಲ್ಲಿದ್ದರೆ, ಹುಣಸಗಿ ಸಮೀಪದ, ಪುರಾಣ ಪ್ರಸಿದ್ಧ ಛಾಯಾ ಭಗವತಿ ದೇವಸ್ಥಾನನೀರಿನಲ್ಲಿ ಮುಳುಗಿದೆ. ಬುಧವಾರ ರಾತ್ರಿ ಮತ್ತಷ್ಟೂ ಹೊರಹರಿವು ಹೆಚ್ಚಬಹುದು ಎಂದು ಜಲಾಶಯದ ಅಧಿಕಾರಿಗಳ ಮೂಲಗಳು ತಿಳಿಸಿವೆ.