ಮನೆ ಮನೆ ಅಲೆಯುತ್ತಿದ್ದ ಸಿನ್ವರ್‌ನ ಹುಡುಕಿ ಹತ್ಯೆಗೈದ ಇಸ್ರೇಲ್‌- ಕೊನೇ ಕ್ಷಣ ಡ್ರೋನ್‌ ಕ್ಯಾಮೆರಾದಲ್ಲಿ ಸೆರೆ

By Kannadaprabha News  |  First Published Oct 19, 2024, 8:15 AM IST

ಹಮಾಸ್ ನಾಯಕ ಯಾಹ್ಯಾ ಸಿನ್ವರ್‌ನನ್ನು ಇಸ್ರೇಲ್ ಸೇನೆ ಹತ್ಯೆಗೈದ ರೋಚಕ ಕಾರ್ಯಾಚರಣೆಯ ವಿವರಗಳನ್ನು ಬಿಡುಗಡೆ ಮಾಡಿದೆ. ಮನೆಯಿಂದ ಮನೆಗೆ ಅಲೆಯುತ್ತಿದ್ದ ಸಿನ್ವರ್‌ನನ್ನು ಡ್ರೋನ್ ಮೂಲಕ ಪತ್ತೆ ಹಚ್ಚಿ ಹತ್ಯೆಗೈಯಲಾಗಿದೆ.


ಗಾಜಾ: 1200 ಇಸ್ರೇಲಿಗಳ ನರಮೇಧದ ಪ್ರಮುಖ ರೂವಾರಿ ಹಾಗೂ ಹಮಾಸ್‌ ಉಗ್ರಗಾಮಿ ಸಂಘಟನೆ ನಾಯಕ ಯಾಹ್ಯಾ ಸಿನ್ವರ್‌ನನ್ನು ಹುಡುಕಿ ಹತ್ಯೆ ಮಾಡಿದ್ದು ಹೇಗೆ ಎಂಬ ರೋಚಕ ಕಾರ್ಯಾಚರಣೆಯ ವಿವರವನ್ನು ಇಸ್ರೇಲ್‌ ಸೇನೆ ಶುಕ್ರವಾರ ನೀಡಿದೆ ಹಾಗೂ ಸಿನ್ವರ್‌ ಕೊನೇ ಕ್ಷಣಗಳ ಡ್ರೋನ್‌ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಸೇನೆ ವಕ್ತಾರ ಡೇನಿಯಲ್‌ ಹಗರಿ ಹೇಳಿಕೆ ನೀಡಿ, ‘ಗಾಜಾದಲ್ಲಿರುವ ನಮ್ಮ ಸೇನಾ ತುಕಡಿಯು ದಕ್ಷಿಣ ಗಾಜಾದಲ್ಲಿ ಇರುವುದನ್ನು ಪತ್ತೆ ಮಾಡಿತ್ತು. ಯಾರಿಗೂ ಸಿಗಬಾರದು ಎಂದು ಆತ ಮನೆಯಿಂದ ಮನೆಗೆ ತನ್ನ ಇಬ್ಬರು ಚೇಲಾಗಳ ಜತೆ ಸೇರಿಕೊಂಡು ಅಲೆಯುತ್ತಿದ್ದ. ಆಗ ಸೇನೆಯು ಈ ಮೂವರ ಮೇಲೂ ಗುಂಡಿನ ದಾಳಿ ಮಾಡಿತು. ಈ ವೇಳೆ ಇಬ್ಬರು ಚೇಲಾಗಳು ಸತ್ತರು. ಸಿನ್ವರ್‌ ಒಬ್ಬನೇ ಈಗಾಗಲೇ ವಾಯುದಾಳಿಯಲ್ಲಿ ಧ್ವಂಸವಾಗಿದ್ದ ಒಂದು ಮನೆಗೆ ನುಗ್ಗಿದ’ ಎಂದರು.

Tap to resize

Latest Videos

‘ಆಗ ನಾವು ಸಿನ್ವರ್ ಹೊಕ್ಕ ಮನೆಗೆ ಕ್ಯಾಮೆರಾ ಇದ್ದ ಡ್ರೋನ್‌ ಕಳಿಸಿದೆವು. ಈ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದ ಹಾಗೂ ಮೈ-ಕೈಗೆ ಧೂಳು ಮೆತ್ತಿಕೊಂಡಿದ್ದ ಸಿನ್ವರ್‌ ಕಂಡ. ಆತ ಧೂಳಾಗಿದ್ದ ಸೋಫಾ ಮೇಲೆ ಕೂತಿದ್ದ ಬಟ್ಟೆಯಿಂದ ಮುಖ ಮುಚ್ಚಿಕೊಂಡಿದ್ದ. ಡ್ರೋನ್‌ ನೋಡಿದ ಕೂಡಲೇ ಅದರತ್ತ ಬೆತ್ತ ಎಸೆದ. ಈ ವೇಳೆ ದಾಳಿ ನಡೆಸಿ ಆತನ ಹತ್ಯೆಗೈಯಲಾಯಿತು’ ಎಂದರು.

ಯುದ್ಧದ ಅಂತ್ಯಕ್ಕೆ ಆರಂಭ
ಹಮಾಸ್‌ ಉಗ್ರ ಸಂಘಟನೆಯ ನಾಯಕ ಯಾಹ್ಯಾ ಸಿನ್ವರ್‌ನ ಹತ್ಯೆಯು ಕಳೆದ ಒಂದು ವರ್ಷದಿಂದಲೂ ಪ್ಯಾಲೆಸ್ತೀನ್‌ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದ ಅಂತ್ಯಕ್ಕೆ ಆರಂಭ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶುಕ್ರವಾರ ತಿಳಿಸಿದ್ದಾರೆ. ಗುರುವಾರ ಇಸ್ರೇಲ್‌ ಸೇನೆ ದಕ್ಷಿಣ ಗಾಜಾ ಮೇಲೆ ನಡೆಸಿದ ದಾಳಿಯಲ್ಲಿ ಸಿನ್ವರ್‌ ಮೃತಪಟ್ಟಿದ್ದು, ಸೇನೆಯ ಕಾರ್ಯವನ್ನು ನೇತನ್ಯಾಹು ಶ್ಲಾಘಿಸಿದ್ದಾರೆ. ಈ ಹತ್ಯೆಯಿಂದ ಹಮಾಸ್‌ಗೆ ಭಾರಿ ಹೊಡೆತ ಬಿದ್ದಿದೆ. ಇದು ‘ಗಾಜಾ ಯುದ್ಧದ ಅಂತ್ಯಕ್ಕೆ ಆರಂಭ’ ಎಂದು ಹೇಳಿದ್ದಾರೆ.

ಸಿನ್ವರ್‌ ಹತ್ಯೆಯಿಂದ ಯುದ್ಧಕ್ಕೆ ಹೊಸ ರೂಪ: ಹಿಜ್ಬುಲ್ಲಾ ಎಚ್ಚರಿಕೆ
ಹಮಾಸ್‌ ನಾಯಕ ಯಾಹ್ಯಾ ಸಿನ್ವರ್‌ ಹತ್ಯೆ ಬಳಿಕ ಇಸ್ರೇಲ್‌ ವಿರುದ್ಧದ ಯುದ್ಧ ಉಲ್ಬಣಿಸಿ ಹೊಸ ಹಂತಕ್ಕೆ ತಲುಪಲಿದೆ ಎಂದು ಲೆಬನಾನ್‌ನ ಹಿಜ್ಬುಲ್ಲಾ ಉಗ್ರಸಂಘಟನೆ ಎಚ್ಚರಿಸಿದೆ. ಇರಾನ್‌ ಕೂಡ ಪ್ರತಿರೋಧವನ್ನು ಬಲಪಡಿಸಿಕೊಳ್ಳುವುದಾಗಿ ಹೇಳಿದೆ.

ಇರಾನ್‌ ವಿರುದ್ಧ ಪ್ರತೀಕಾರ ತೀರಿಸಲು ಮುಂದಾದ ಇಸ್ರೇಲ್‌ಗೆ ಅಮೆರಿಕದ ಥಾಡ್ ರಕ್ಷಣೆ

ಗಾಜಾ ಯುದ್ಧಕ್ಕೆ ನಾಂದಿ ಹಾಡಿದ 2023 ಅ.7ರ ದಾಳಿಯ ಮುಖ್ಯ ಸಂಚುಗಾರ ಯಾಹ್ಯಾ ಸಿನ್ವರ್‌ನನ್ನು ಪ್ಯಾಲೆಸ್ತೀನ್‌ನ ಗಾಜಾ ಪ್ರದೇಶದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಬುಧವಾರ ಹೊಡೆದುರುಳಿಸಲಾಗಿತ್ತು. ಈ ಬೆಳವಣಿಗೆಯನ್ನು ಪಾಶ್ಚಿಮಾತ್ಯ ದೇಶಗಳ ನಾಯಕರು ಯುದ್ಧದ ಕೊನೆ ಹಂತ ಎಂದರೆ, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮಾತ್ರ ಹಮಾಸ್‌ ಉಗ್ರರ ವಶದಲ್ಲಿರುವ ಎಲ್ಲಾ ಒತ್ತೆಯಾಳುಗಳ ಬಿಡುಗಡೆಯಾಗುವ ತನಕ ಸಮರ ಮುಂದುವರೆಯಲಿದೆ ಎಂದರು. ಜುಲೈನಲ್ಲಿ ನಡೆದ ಇಸ್ಮಾಯಿಲ್‌ ಹನಿಯೇ ಹತ್ಯೆ ಬಳಿಕ ಹಮಾಸ್‌ನ ಮುಂದಾಳತ್ವವನ್ನು ಸಿನ್ವರ್‌ ವಹಿಸಿಕೊಂಡಿದ್ದನು.

‘ಲೆಕ್ಕ ಚಿಕ್ತಾ, ಆದರೆ ಯುದ್ಧ ಮುಗಿದಿಲ್ಲ’
‘ಯಹ್ಯಾ ಸಿನ್ವರ್‌ನೊಂದಿಗೆ ನಮ್ಮ ಲೆಕ್ಕಾ ಚುಕ್ತಾ ಆಗಿದೆ. ಆದರೆ ಯುದ್ಧ ಇನ್ನು ನಿಂತಿಲ್ಲ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಹೇಳಿದ್ದಾರೆ. ಹಮಾಸ್‌ ನಾಯಕ ಯಹ್ಯಾ ಸಿನ್ವರ್‌ ಹತ್ಯೆ ಬಗ್ಗೆ ಮಾತನಾಡಿದ ನೇತನ್ಯಾಹು,‘ಯಹ್ಯಾ ಹತ್ಯೆಯು ಗಾಜಾದಲ್ಲಿ ಒತ್ತೆಯಾಳುಗಳಾಗಿರುವ ಇಸ್ರೇಲಿಗರನ್ನು ಮತ್ತೆ ಮನೆಗೆ ಕರೆತರುವಲ್ಲಿ ಅತ್ಯಂತ ಮಹತ್ವದ ಘಳಿಗೆಯಾಗಿದೆ. ಆದರೆ ನಮ್ಮ ಯುದ್ಧ ಇನ್ನು ಮುಗಿದಿಲ್ಲ. ಹಮಾಸ್‌ನವರು ಯಾರೇ ಆಗಲಿ ಶಸ್ತ್ರತ್ಯಾಗ ಮಾಡಿ ಗಾಜಾದಿಂದ ಇಸ್ರೇಲಿಗರನ್ನು ಸುರಕ್ಷಿತವಾಗಿ ಕರೆತಂದರೆ ಅವರನ್ನು ಸುರಕ್ಷಿತವಾಗಿ ಮತ್ತೆ ಗಾಜಾಗೆ ಕಳುಹಿಸಿಕೊಡುತ್ತೇವೆ ಎಂದು ಹೇಳಿದರು.

ಹಮಾಸ್‌ ಚೀಫ್‌ ಯಾಹ್ಯಾ ಸಿನ್ವಾರ್ ಹತ್ಯೆ: ಇಸ್ರೇಲ್‌ ಅಧಿಕೃತ ಘೋಷಣೆ

click me!