ಕೈ ಮೀರಿ ಹೋಗುತ್ತಿದೆ ಜಾಗತಿಕ ತಾಪಮಾನ: ಹೀಗಾದರೆ ಮನುಕುಲ ಉಳಿಯುವುದೇ ಅನುಮಾನ

By Suvarna NewsFirst Published Aug 10, 2021, 9:37 AM IST
Highlights

* ಅಂದಾಜಿಸಿದ ಮಟ್ಟದಾಟಲಿದೆ ಭೂಮಿಯ ತಾಪ

* ದಿನೇ ದಿನೇ ಏರುತ್ತಲೇ ಇದೆ ಜಾಗತಿಕ ಹವಾಮಾನ

* ಮಾನುಕುಲದ ಪಾಲಿಗೆ ಇದು ಅತ್ಯಂತ ಗಂಭೀರ

* 2030ಕ್ಕೆ ಬಿಸಿ ಮತ್ತಷ್ಟುಹೆಚ್ಚಳ: ವಿಶ್ವಸಂಸ್ಥೆ ತಜ್ಞರ ವರದಿ ಎಚ್ಚರಿಕೆ

ಬರ್ಲಿನ್‌(ಆ.10): ಯಾವ ಮಟ್ಟಕ್ಕೆ ಭೂಮಿಯ ಉಷ್ಣಾಂಶ ಏರುವುದನ್ನು ತಡೆಗಟ್ಟಬೇಕು ಎಂದು ವಿಜ್ಞಾನಿಗಳು ಈ ಹಿಂದೆ ಗುರಿ ಹಾಕಿಕೊಂಡಿದ್ದರೋ, ಆ ಉಷ್ಣಾಂಶದ ಮಟ್ಟವನ್ನು ಭೂಮಿ ಇನ್ನೊಂದು ದಶಕದಲ್ಲೇ ದಾಟಲಿದೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯೊಂದು ಎಚ್ಚರಿಸಿದೆ. ಜೊತೆಗೆ ಇದು ಮಾನವೀಯತೆ ಪಾಲಿಗೆ ಅತ್ಯಂತ ಗಂಭೀರ ಎಚ್ಚರಿಕೆ ಎಂದು ಹೇಳಿದೆ.

ಜಾಗತಿಕ ತಾಪಮಾನ ಏರಿಕೆ ಎಫೆಕ್ಟ್: ಮುಳುಗಲಿದೆ ಮಂಗಳೂರು, ಮುಂಬೈ!

ಹವಾಮಾನ ಬದಲಾವಣೆ ಕುರಿತಾದ ವಿಶ್ವಸಂಸ್ಥೆಯ ಸಮಿತಿಯು ತನ್ನ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಹವಾಮಾನ ಬದಲಾವಣೆಯು ಅತ್ಯಂತ ಸ್ಪಷ್ಟವಾಗಿ ಮಾನವ ನಿರ್ಮಿತ ಸಮಸ್ಯೆ. 2013ರಲ್ಲಿ ನಾವು ಅಂದಾಜಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಭೂಮಿಯ ಉಷ್ಣಾಂಶ ಹೆಚ್ಚುತ್ತಿದೆ. ಹೀಗಾಗಿ 21ನೇ ಶತಮಾನ ಇನ್ನಷ್ಟುಬಿಸಿಯಾಗುವುದು ಖಚಿತ ಎಂದು ವರದಿ ಹೇಳಿದೆ.

ಭೂಮಿಯ ಉಷ್ಣಾಂಶ ಏರಿಕೆಯನ್ನು ಕನಿಷ್ಠ 1.5 ಡಿ.ಸೆನಷ್ಟುತಡೆಯಲು 19ನೇ ಶತಮಾನದ ಆರಂಭದಿದಲೂ ವಿಜ್ಞಾನಿಗಳು ಯೋಜನೆಯನ್ನು ರೂಪಿಸುತ್ತಲೇ ಇದ್ದಾರೆ. ಆದರೆ ಕಳೆದ ಒಂದೂವರೆ ಶತಮಾನದ ಅವಧಿಯಲ್ಲಿ ಭೂಮಿಯ ಉಷ್ಣಾಂಶ ಈಗಾಗಲೇ 1.1 ಡಿ.ಸೆ.ನಷ್ಟುಏರಿಕೆಯಾಗಿದೆ. ಈ ಹಾದಿಯಲ್ಲೇ ನಾವು ಸಾಗಿದರೆ 2030ರ ವೇಳೆಗೆ ಭೂಮಿಯ ಉಷ್ಣಾಂಶವು 1.5 ಡಿ.ಸೆನಷ್ಟುಹೆಚ್ಚಾಗಲಿದೆ.

ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ಆದ ಬದಲಾವಣೆಯು ಅತ್ಯಂತ ವಿಸ್ತೃತ, ತ್ವರಿತ, ತೀವ್ರ ಮತ್ತು ಕಳೆದ ಸಾವಿರಾರು ವರ್ಷಗಳಲ್ಲೇ ಕಂಡುಕೇಳರಿಯದ ಪ್ರಮಾಣದ್ದು ಎಂದು ಸಮಿತಿಯ ಉಪಾಧ್ಯಕ್ಷ ಕೊ ಬಾರ್ರೆಟ್ಟ್ ಹೇಳಿದ್ದಾರೆ.

234 ವಿಜ್ಞಾನಿಗಳು ಸೇರಿ ರಚಿಸಿರುವ ಈ ವರದಿಯು ಭರ್ಜರಿ 3000 ಪುಟಗಳಷ್ಟಿದ್ದು, ಹವಾಮಾನ ಬದಲಾವಣೆಯು ಈಗಾಗಲೇ ಸಮುದ್ರದಲ್ಲಿ ನೀರಿನ ಮಟ್ಟಏರಿಕೆ, ನೀರ್ಗಲ್ಲು ಕುಸಿತ, ಬಿಸಿಗಾಳಿ, ಬರಗಾಲ, ಅತಿವೃಷ್ಟಿ, ಚಂಡಮಾರುತದಂಥ ಸಮಸ್ಯೆಗೆ ಕಾರಣವಾಗಿದೆ ಎಂದು ವರದಿ ಹೇಳಿದೆ.

ನೀರ್ಗಲ್ಲು ಕರಗದಂತೆ ತಡೆಗೆ ಬ್ಲಾಂಕೆಟ್‌ ಬಳಕೆ!

ಅಪಾಯ ಏಕೆ?:

ಉದಾಹರಣೆಗೆ 50 ವರ್ಷಗಳಿಗೊಮ್ಮೆ ಬೀಸುತ್ತಿದ್ದ ಬಿಸಿಗಾಳಿಯ ಅಲೆಗಳು ಇದೀಗ ದಶಕಕ್ಕೆ ಒಮ್ಮೆಯಂತೆ ಬೀಸುತ್ತಿದೆ. ಉಷ್ಣಾಂಶ ಇನ್ನೊಂದು ಡಿ.ಸೆ.ನಷ್ಟುಏರಿದರೆ ಅದು ಪ್ರತಿ 7 ವರ್ಷಕ್ಕೊಮ್ಮೆ ಎರಡು ಬಾರಿ ಬೀಸಲು ಆರಂಭವಾಗುತ್ತದೆ. ಭೂಮಿಯ ಉಷ್ಣಾಂಶ ಹೆಚ್ಚಿದಂತೆ ಅದು ಕೇವಲ ಗಂಭೀರ ವಾಯುಗುಣ ಬದಲಾವಣೆಗೆ ಮಾತ್ರ ಕಾರಣವಾಗದು, ಬದಲಾಗಿ ಒಂದೇ ಬಾರಿಗೆ ಹಲವು ರೀತಿಯ ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗುತ್ತದೆ. ಇದೀಗ ಅಮೆರಿಕದಲ್ಲಿ ಒಂದೇ ಬಾರಿಗೆ ಕಾಣಿಸಿಕೊಂಡಿರುವ ಬಿಸಿಗಾಳಿ, ಬರಗಾಲ, ಕಾಡ್ಗಿಚ್ಚು ಇದಕ್ಕೆ ಉದಾಹರಣೆ ಎಂದು ವರದಿ ಹೇಳಿದೆ.

ಜೊತೆಗೆ ಹವಾಮಾನ ಬದಲಾವಣೆಯ ಮತ್ತೊಂದು ಅಪಾಯವೆಂದರೆ, ಹಿಮಖಂಡಗಳಲ್ಲಿ ಮಂಜುಗಡ್ಡೆಯ ಪದರಗಳ ಪ್ರಮಾಣ ಇಳಿಕೆ. ಇದು ಪರೋಕ್ಷವಾಗಿ ಸಮುದ್ರದ ನೀರಿನಲ್ಲಿ ಆಮ್ಲಜನಕ ಮಟ್ಟಕಡಿಮೆಯಾಗಿ, ಆಮ್ಲೀಯ ಅಂಶ ಹೆಚ್ಚಳಕ್ಕೆ ಕಾರಣವಾಗಿ ಜೀವ ಸಂಕುಲದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವರದಿ ಎಚ್ಚರಿಸಿದೆ.

click me!