ಜಗತ್ತಿನ ಮೊದಲ ಖಾಸಗಿ ಗಗನನೌಕೆ ಭೂಮಿಗೆ ವಾಪಸ್‌!

By Kannadaprabha News  |  First Published Aug 4, 2020, 10:41 AM IST

ಜಗತ್ತಿನ ಮೊದಲ ಖಾಸಗಿ ಗಗನನೌಕೆ ಭೂಮಿಗೆ ವಾಪಸ್‌!| ಇಬ್ಬರು ಗಗನಯಾತ್ರಿಗಳೊಂದಿಗೆ ಯಶಸ್ವಿಯಾಗಿ ಬಂದಿಳಿದ ಸ್ಪೇಸೆಕ್ಸ್‌ ನೌಕೆ| ಅಮೆರಿಕದಿಂದ 2 ತಿಂಗಳ ಹಿಂದೆ ಬಾಹ್ಯಾಕಾಶಕ್ಕೆ ತೆರಳಿದ್ದ ಖಾಸಗಿ ಕ್ಯಾಪ್ಸೂಲ್‌| ಮೆಕ್ಸಿಕನ್‌ ಕೊಲ್ಲಿ ಸಮುದ್ರದಲ್ಲಿ ಇಳಿದು, ಹಡಗಿನ ಮೂಲಕ ಭೂಮಿಗೆ


ಕೇಪ್‌ ಕೆನವೆರಲ್‌ (ಆ.04): ಬಾಹ್ಯಾಕಾಶಕ್ಕೆ ಜನರನ್ನು ಕರೆದುಕೊಂಡು ಹೋಗಿ ಬರುವ ಪ್ರವಾಸೋದ್ದಿಮೆಯನ್ನು ಆರಂಭಿಸಲು ಪ್ರಯೋಗಾರ್ಥವಾಗಿ ಅಮೆರಿಕದ ಖಾಸಗಿ ಸ್ಪೇಸೆಕ್ಸ್‌ ಸಂಸ್ಥೆ ಎರಡು ತಿಂಗಳ ಹಿಂದೆ ಬಾಹ್ಯಾಕಾಶಕ್ಕೆ ಕಳುಹಿಸಿದ್ದ ಇಬ್ಬರು ಗಗನಯಾನಿಗಳು ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾಕ್ಕೆ ಸೇರಿದ ಇಬ್ಬರು ಗಗನಯಾನಿಗಳನ್ನು ಹೊತ್ತ ಖಾಸಗಿ ಸ್ಪೇಸ್‌ ಕ್ಯಾಪ್ಸೂಲ್‌ ‘ಎಂಡೆವರ್‌’ ಭಾನುವಾರ ಮೆಕ್ಸಿಕನ್‌ ಕೊಲ್ಲಿ ಸಮುದ್ರದಲ್ಲಿ ಬಂದಿಳಿದಿದೆ.

ಇದರೊಂದಿಗೆ, ಬಾಹ್ಯಾಕಾಶಕ್ಕೆ ಜನರನ್ನು ಕರೆದುಕೊಂಡು ಹೋಗಿ ಬರುವ ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್‌ ಅವರ ಸ್ಪೇಸೆಕ್ಸ್‌ ಕಂಪನಿಯ ಕನಸು ನನಸಾಗಿದೆ. ಮುಂದಿನ ತಿಂಗಳು ಸ್ಪೇಸೆಕ್ಸ್‌ ಸಿಬ್ಬಂದಿಯನ್ನು ಬಾಹ್ಯಾಕಾಶಕ್ಕೆ ಪ್ರಯೋಗಾರ್ಥವಾಗಿ ಕಳುಹಿಸಿ, ನಂತರ ಮುಂದಿನ ವರ್ಷದಿಂದ ಜನರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಪ್ರವಾಸೋದ್ದಿಮೆಯನ್ನು ಎಲಾನ್‌ ಮಸ್ಕ್‌ ಆರಂಭಿಸುವ ಸಾಧ್ಯತೆಯಿದೆ.

Tap to resize

Latest Videos

undefined

45 ವರ್ಷಗಳ ಹಿಂದೆ ನಾಸಾದ ಗಗನನೌಕೆಯಲ್ಲಿ ಕೊನೆಯ ಬಾರಿ ಈ ರೀತಿ ಗಗನಯಾತ್ರಿಗಳು ಸಮುದ್ರಕ್ಕೆ ಬಂದಿಳಿದಿದ್ದರು. ಸ್ಪೇಸ್‌ ಕ್ಯಾಪ್ಸೂಲ್‌ನಲ್ಲಿ ಕುಳಿತು ಗಗನಯಾತ್ರಿಗಳು ಭೂಮಿಗೆ ಮರಳುವಾಗ ಕ್ಯಾಪ್ಸೂಲ್‌ನ ವೇಗವನ್ನು ತಗ್ಗಿಸಲು ಅದಕ್ಕೆ ಕಟ್ಟಿರುವ ಪ್ಯಾರಾಚೂಟ್‌ಗಳು ಬಿಚ್ಚಿಕೊಂಡು, ನಂತರ ಕ್ಯಾಪ್ಸೂಲ್‌ ಸಮುದ್ರಕ್ಕೆ ಬಂದು ಬೀಳುತ್ತದೆ. ಇದನ್ನು ಸ್ಪಾ$್ಲಷ್‌ಡೌನ್‌ ಎನ್ನುತ್ತಾರೆ. ಸ್ಪೇಸೆಕ್ಸ್‌ನ 15 ಅಡಿ ಉದ್ದದ, ‘ಎಂಡೆವರ್‌’ ಹೆಸರಿನ ಡ್ರಾಗನ್‌ ಕ್ಯಾಪ್ಸೂಲ್‌ ಕೂಡ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಒಂದು ದಿನದ ಹಿಂದೆ ಹೊರಟು ಭಾನುವಾರ ಇದೇ ರೀತಿ ಮೆಕ್ಸಿಕನ್‌ ಕೊಲ್ಲಿಯಲ್ಲಿ, ಅಮೆರಿಕದಿಂದ 40 ಮೈಲು ದೂರದಲ್ಲಿ ಸ್ಪಾ$್ಲಷ್‌ಡೌನ್‌ ಆಯಿತು. ನಂತರ ಅದನ್ನು ಹಡಗಿನ ಮೇಲೆ ಹೇರಿಕೊಂಡು ದಡಕ್ಕೆ ತರಲಾಯಿತು. ಅಲ್ಲಿ ಅದರೊಳಗಿನಿಂದ ಟೆಸ್ಟ್‌ ಪೈಲಟ್‌ಗಳಾದ ಡಫ್‌ ಹರ್ಲೆ ಹಾಗೂ ಬಾಬ್‌ ಬೆನ್‌ಕೆನ್‌ ಹೊರಬಂದರು.

ಬಾಹ್ಯಾಕಾಶ ಕೇಂದ್ರದಿಂದ ಹೊರಟ ಕ್ಯಾಪ್ಸೂಲ್‌ ಗಂಟೆಗೆ 28,000 ಕಿ.ಮೀ. ವೇಗದಲ್ಲಿ ಭೂಮಿಯತ್ತ ಧಾವಿಸಿ, ಗಂಟೆಗೆ 560 ಕಿ.ಮೀ. ವೇಗದಲ್ಲಿ ಭೂಮಿಯ ವಾತಾವರಣವನ್ನು ಪ್ರವೇಶಿಸಿತ್ತು. ನಂತರ ಪ್ಯಾರಾಚೂಟ್‌ ಬಿಚ್ಚಿಕೊಂಡು 24 ಕಿ.ಮೀ. ವೇಗದಲ್ಲಿ ಸಮುದ್ರಕ್ಕೆ ಬಂದು ಅಪ್ಪಳಿಸಿತು. ನೌಕೆಯು ದಡಕ್ಕೆ ಬರುವುದನ್ನು ಕಾಯುತ್ತಿದ್ದ ಸ್ಪೇಸೆಕ್ಸ್‌ ಮುಖ್ಯಸ್ಥ ಎಲಾನ್‌ ಮಸ್ಕ್‌ ಹಾಗೂ ಇತರರು ಗಗನಯಾತ್ರಿಗಳನ್ನು ಸ್ವಾಗತಿಸಿದರು. ‘ಎಂಡೆವರ್‌’ ಕ್ಯಾಪ್ಸೂಲ್‌ ಭೂಮಿಗೆ ಇಳಿಯುವಾಗ ಅದರ ಸುತ್ತಲಿನ ಉಷ್ಣತೆ 3500 ಡಿಗ್ರಿ ಸೆಲ್ಸಿಯಸ್‌ವರೆಗೂ ಹೋಗಿತ್ತು. ಕ್ಯಾಪ್ಸೂಲ್‌ ಸಮುದ್ರದ ನೀರಿಗೆ ಬಿದ್ದಾಗ ಕಾದಿದ್ದ ಅದರ ಹೊರಕವಚ ತಣ್ಣಗಾಯಿತು.

ಇಷ್ಟುವರ್ಷ ಅಮೆರಿಕದಲ್ಲಿ ಬಾಹ್ಯಾಕಾಶ ಯಾನ ಕೈಗೊಳ್ಳುತ್ತಿದ್ದ ಸಂಸ್ಥೆ ಸರ್ಕಾರಿ ಸ್ವಾಮ್ಯದ ನಾಸಾ ಮಾತ್ರ ಆಗಿತ್ತು. ಈಗ ಖಾಸಗಿ ಸ್ಪೇಸೆಕ್ಸ್‌ ಸಂಸ್ಥೆಯೂ ತಾನೇ ತಯಾರಿಸಿದ ಕ್ಯಾಪ್ಸೂಲ್‌ನಲ್ಲಿ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಗಗನಯಾತ್ರಿಕರನ್ನು ಕಳಿಸಿ, 2 ತಿಂಗಳು ಬಾಹ್ಯಾಕಾಶ ಕೇಂದ್ರದಲ್ಲಿ ಇರಿಸಿ, ನಂತರ ಯಶಸ್ವಿಯಾಗಿ ವಾಪಸ್‌ ಕರೆಸಿಕೊಂಡಿದೆ. ಹೀಗಾಗಿ ಬಾಹ್ಯಾಕಾಶ ಪ್ರವಾಸೋದ್ಯಮದ ಹೊಸ ಶಕೆ ಜಗತ್ತಿನಲ್ಲಿ ಆರಂಭವಾಗುವುದು ನಿಚ್ಚಳವಾಗಿದೆ.

click me!