ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದಾಗ ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಲಾಗಿದೆ. ಇದೇ ವರ್ಷದ ನವೆಂಬರ್ ನಲ್ಲಿ ಅಮೆರಿಕದಲ್ಲಿಮ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.
60 ವರ್ಷಗಳ ನಂತರ ಅಮೆರಿಕದಲ್ಲಿ ಅಧ್ಯಕ್ಷರಾಗಿದ್ದ ವ್ಯಕ್ತಿಯೊಬ್ಬರ ಹತ್ಯಾ ಯತ್ನ ನಡೆದಿದೆ. ಜಾನ್ ಎಫ್ ಕೆನಡಿ ಅಧ್ಯಕ್ಷರಾಗಿದ್ದಾಗಲೇ ಅವರನ್ನ ಹತ್ಯೆ ಮಾಡಲಾಗಿತ್ತು. ಇದಾದ ನಂತರ ಅಧ್ಯಕ್ಷ ಅಥವಾ ಮಾಜಿ ಅಧ್ಯಕ್ಷರ ಹತ್ಯಾ ಪ್ರಯತ್ನಗಳು ಅಮೆರಿಕದಲ್ಲಿ ನಡೆದಿರಲಿಲ್ಲ. ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದಾಗ ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಲಾಗಿದೆ. ಇದೇ ವರ್ಷದ ನವೆಂಬರ್ ನಲ್ಲಿ ಅಮೆರಿಕದಲ್ಲಿಮ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಡೊನಾಲ್ಡ್ ಟ್ರಂಪ್ ಈ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ.
ಇಂಥಾ ಸಂದರ್ಭದಲ್ಲೇ ಹತ್ಯಾ ಪ್ರಯತ್ನ ನಡೆದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಟ್ರಂಪ್ ಭಾಷಣ ಮಾಡ್ತಿದ್ದ ಜಾಗದಿಂದ 125 ಮೀಟರ್ ದೂರದಿಂದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂಬಾತ ಗುಂಡು ಹಾರಿಸಿದ್ದಾನೆ. ಈತ ಹಾರಿಸಿದ ಗುಂಡು ಟ್ರಂಪ ಅವರ ಕಿವಿ ಹರಿದುಹೋಗುವಂತೆ ಮಾಡಿದೆ. ಅದೃಷ್ಟವಶಾತ್ ಟ್ರಂಪ್ ಬದುಕುಳಿದಿದ್ದಾರೆ. ಹತ್ಯಾ ಪ್ರಯತ್ನಕ್ಕೆ ಕಾರಣ ಏನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಡೊನಾಲ್ಡ್ ಟ್ರಂಪ್ ಹತ್ಯೆಗೆ ನಡೆದ ಈ ಪ್ರಯತ್ನ, ಅಮೆರಿಕದ ಇತಿಹಾಸದಲ್ಲಿ ನಡೆದ ಎದೆ ನಡುಗಿಸುವ ಹತ್ಯೆಗಳನ್ನು ನೆನಪಿಸುತ್ತಿದೆ. ಅಮೆರಿಕದ ಇತಿಹಾಸ ಬದಲಿಸಿದ ಮತ್ತು ಜಗತ್ತು ದಿಗ್ಬ್ರಾಂತಿಯಿಂದ ನೋಡಿದ 5 ಹತ್ಯೆಗಳ ವಿವರ ಇಲ್ಲಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ್‍ಯಾಲಿ ವೇಳೆ ಗುಂಡಿನ ದಾಳಿ..!
ಅಮೆರಿಕ ಅಧ್ಯಕ್ಷ ಅಬ್ರಹಾಂ ಲಿಂಕನ್ ಹತ್ಯೆ- 1865
ಇಡೀ ಜಗತ್ತನ್ನ ಬೆಚ್ಚಿ ಬೀಳಿಸಿದ ಆ ಒಂದು ಘಟನೆ 1865ರ ಏಪ್ರಿಲ್ 14 ರಂದು ಅಮೆರಿಕದಲ್ಲಿ ನಡೆದಿತ್ತು. ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರನ್ನ ಹತ್ಯೆ ಮಾಡಲಾಗಿತ್ತು. ಒಂದು ದೇಶದ ಅಧ್ಯಕ್ಷರನ್ನ ಕೊಂದು ಹಾಕಿದ ಘಟನೆ ಹಿಂದ್ಯಾವತ್ತೂ ನಡೆದಿರಲಿಲ್ಲ. ರಾಜ ಮಹಾರಾಜರ ಹತ್ಯೆಗಳು ಇತಿಹಾಸಲ್ಲಿ ದಾಖಲಾಗಿದ್ದವಾದರೂ, ಆಧುನಿಕ ಜಗತ್ತಿನ ಒಂದು ದೇಶದ ಮುಖ್ಯಸ್ಥ ಹತ್ಯೆಯಾಗಿದ್ದು ಅದೇ ಮೊದಲು. ರಾಜಧಾನಿ ವಾಷಿಂಗ್ ಟನ್ ನಲ್ಲಿನ ರಂಗ ಮಂದಿರವೊಂದರಲ್ಲಿ ನಾಟಕ ನೋಡಲು ಬಂದಿದ್ದ ಅಬ್ರಹಾಂ ಲಿಂಕನ್ ಅವ್ರನ್ನ ಜಾನ್ ವಿಲ್ಕ್ಸ್ ಎಂಬ ರಂಗಭೂಮಿ ನಟ ಗುಂಡಿಟ್ಟು ಕೊಂದು ಹಾಕಿದ್ದ. ರಂಗಭೂಮಿ ನಟನಾಗಿದ್ದರಿಂದ ಅಧ್ಯಕ್ಷರ ಸಮೀಪಕ್ಕೆ ಹೋದರೂ ಭದ್ರತಾ ಸಿಬ್ಬಂದಿಗೆ ಯಾವ ಅನುಮಾನವೂ ಬಂದಿರಲಿಲ್ಲ. ಹಾಗೆ ಅಮೆರಿಕದ 16ನೇ ಅಧ್ಯಕ್ಷ 159 ವರ್ಷಗಳ ಹಿಂದೆ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದರು. ಅಬ್ರಹಾಂ ಲಿಂಕನ್ ಅಮೆರಿಕದಲ್ಲಿದ್ದ ಗುಲಾಮಗಿರಿಯನ್ನ ನಿಷೇಧಿಸುವ ಕಾನೂನು ತಂದು ಅಲ್ಲಿನ ಜಮೀನ್ದಾರರ ವಿರೋಧ ಕಟ್ಟಿಕೊಂಡಿದ್ದರು. ಜತೆಗೆ ಕಪ್ಪು ವರ್ಣೀಯರಿಗೆ ಮತದಾನದ ಹಕ್ಕು ಕೊಟ್ಟಿದ್ದರು. ಗುಲಾಮಗಿರಿಯನ್ನ ಬೆಂಬಲಿಸುತ್ತಿದ್ದವರು ಮತ್ತು ಜಮೀನ್ದಾರರ ಗುಂಪು ಅಬ್ರಹಾಂ ಲಿಂಕನ್ನರ ಕಾನೂನುಗಳನ್ನ ವಿರೋಧಿಸಿದರು. ಕಪ್ಪು ವರ್ಣೀಯರಿಗೆ ಮತದಾನದ ಹಕ್ಕು ಕೊಟ್ಟಿದ್ದು ಅವರನ್ನ ಸಿಟ್ಟಿಗೇಳಿಸಿತ್ತು. ಇದರ ಪರಿಣಾಮವಾಗೇ ಅಬ್ಹಾಂ ಲಿಂಕನ್ನರ ಹತ್ಯೆ ನಡೆದಿತ್ತು.
ಅಮೆರಿಕ ಅಧ್ಯಕ್ಷ ಜೇಮ್ಸ್ ಗಾರ್ ಫೀಲ್ಡ್ ಹತ್ಯೆ-1881
ಅಬ್ರಹಾಂ ಲಿಂಕನ್ ನಂತರ ಹತ್ಯೆಯಾದ ಮತ್ತೊಬ್ಬ ಅಧ್ಯಕ್ಷ ಜೇಮ್ಸ್ ಗಾರ್ ಫೀಲ್ಡ್. 1881ರ ಜುಲೈ 2ನೇ ತಾರೀಕು ಅಮೆರಿಕದ 20ನೇ ಅಧ್ಯಕ್ಷನಾಗಿದ್ದ ಜೇಮ್ಸ್ ಗಾರ್ ಫೀಲ್ಡ್ ಅವರ ಮೇಲೆ ಗುಂಡಿನ ದಾಳಿ ನಡೀತು. ದಾಳಿ ನಡೆದ 79 ದಿನಗಳ ನಂತರ ಸಾವು ಬದುಕಿನ ಹೋರಾಟ ನಡೆಸಿ ಸೆಪ್ಟಂಬರ್ 19ರಂದು ಜೀವ ಬಿಟ್ಟರು ಜೇಮ್ಸ್ ಗಾರ್ ಫೀಲ್ಡ್. ಚಾರ್ಲ್ ಜೆ ಎಂಬಾತ ಜೇಮ್ಸ್ ಗಾರ್ ಫೀಲ್ಡ್ ರನ್ನ ಹತ್ಯೆ ಮಾಡಿದ್ದ. ಜೇಮ್ಸ್ ಗಾರ್ ಫೀಲ್ಡ್ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದ ಚಾರ್ಲ್ಸ್ ತನಗೆ ಯಾವುದೇ ಸ್ಥಾನ ಮಾನ ನೀಡಲಿಲ್ಲ ಎಂಬ ಕಾರಣಕ್ಕೆ ಜೇಮ್ಸ್ ರನ್ನ ಹತ್ಯೆ ಮಾಡಿದ್ದ.
ಅಮೆರಿಕ ಅಧ್ಯಕ್ಷ ವಿಲಿಯಮ್ ಮೆಕೆನ್ ಲೀ ಹತ್ಯೆ-1901
ಅಬ್ರಹಾಂ ಲಿಂಕನ್, ಜೇಮ್ಸ್ ಗಾರ್ ಫೀಲ್ಡ್ ನಂತರ ಹತ್ಯೆಯಾದ ಮತ್ತೊಬ್ಬ ಅಮೆರಿಕಾ ಅಧ್ಯಕ್ಷ ವಿಲಿಯಮ್ ಮೆಕೆನ್ಲೀ. 1901ರ ಸೆಪ್ಟಂಬರ್ 14 ರಂದು ನ್ಯೂಯಾರ್ಕ್ ನಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಯ್ತು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಧ್ಯಕ್ಷ ವಿಲಿಯಮ್ ಅವರನ್ನ ಲಿಯೋನ್ ಜೋಲ್ಗಾಸ್ ಎಂಬಾತ ಗುಂಡು ಹಾರಿಸಿ ಕೊಂದುಹಾಕಿದ್ದ. 1893ರ ಆರ್ಥಿಕ ಹಿಂಜರಿತದ ಪರಿಣಾಮ ಕೆಲಸ ಕಳೆದುಕೊಂಡಿದ್ದ ಲಿಯೋನ್, ತನ್ನ ದೇಶದ ಅಧ್ಯಕ್ಷನ ಮೇಲೆ ಸಿಟ್ಟಿಗೆದ್ದು ಅವರನ್ನ ಹತ್ಯೆಗೈದಿದ್ದ.
ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿ ಹತ್ಯೆ-1963
ಅಮೆರಿಕದ ಅಧ್ಯಕ್ಷರಾಗಿದ್ದಾಗಲೇ ಕೊಲೆಯಾದ ನಾಲ್ಕನೆಯವರು ಜಾನ್ ಎಫ್ ಕೆನಡಿ. 1963ರ ನವೆಂಬರ್ 22 ರಂದು ಅಮೆರಿಕದ 35ನೇ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿಯನ್ನ ಗುಂಡಿಟ್ಟು ಹತ್ಯೆ ಮಾಡಲಾಯ್ತು. ಟೆಕ್ಸಾಸ್ ನ ರಾಜಧಾನಿ ಡಲ್ಲಾಸ್ ನಲ್ಲಿ ಮಧ್ಯಾಹ್ನ 12.30ರ ಸಮಯದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿದ್ದ ಕೆನಡಿಯನ್ನ ಹಂತಕನೊಬ್ಬ ಗುಂಡಿಟ್ಟು ಹತ್ಯೆ ಮಾಡಿದ್ದ. ಭಾರೀ ಜನಸ್ತೋಮದ ಮಧ್ಯೆ ತೆರೆದ ಕಾರಿನಲ್ಲಿ ಕುಳಿತಿದ್ದ ಕೆನಡಿ ಕುತ್ತಿಗೆಗೆ ತುಂಬಾ ಸಮೀಪದಿಂದ ಗುಂಡು ಹಾರಿಸಿ ಕೊಲ್ಲಲಾಯ್ತು. ಒಂದು ಗುಂಡು ತಲೆಗೆ, ಮತ್ತೊಂದು ಗುಂಡು ಕುತ್ತಿಗೆಯನ್ನ ಸೀಳಿತ್ತು. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ರೂ ಕೆನಡಿ ಬದುಕುಳಿಯಲಿಲ್ಲ. ಜಾನ್ ಎಫ್ ಕೆನಡಿ ಹತ್ಯೆಗೆ ಕಾರಣ ಏನು..? ಈ ಘಟನೆ ನಡೆದು 60 ವರ್ಷಗಳಾದರೂ ಈ ಪ್ರಶ್ನೆಗೆ ಉತ್ತರ ಕಂಡುಕೊಂಡಿಲ್ಲ ಅಮೆರಿಕ. ಜಾನ್ ಎಫ್ ಕೆನಡಿ ಹತ್ಯೆಗೆ ಕಾರಣ ಎಂದು ಲಿ ಹಾರ್ವೇ ಓಸ್ವಾಲ್ಡ್ ಎಂಬಾತನನ್ನ ಬಂಧಿಸಲಾಯ್ತು. ಕೆನಡಿ ಹತ್ಯೆಯಾದ ಎರಡೇ ದಿನಕ್ಕೆ ಪೊಲೀಸರ ವಶದಲ್ಲಿದ್ದ ಲಿ ಹಾರ್ವೆಯನ್ನ ಜಾಕ್ ರೂಬೇ ಎಂಬಾತ ಗುಂಡಿಟ್ಟು ಹತ್ಯೆ ಮಾಡಿದ. ಜಾನ್ ಎಫ್ ಕೆನಡಿ ಹತ್ಯೆ ಹಿಂದೆ ರಷ್ಯಾ ಕೈವಾಡ ಇದೆ ಅನ್ನೋ ಆರೋಪ ಕೇಳಿಬಂತು. ಆದರೆ ಅಮೆರಿಕದ ತನಿಖಾ ಸಂಸ್ಥೆಗಳು ಇದನ್ನು ಇಲ್ಲಿಯವರೆಗೂ ಖಚಿತಪಡಿಸಿಲ್ಲ. ಕೆನಡಿ ಹತ್ಯೆ ಬಗ್ಗೆ ಹಲವು ಕಾನ್ಸಿಪಿರೆಸಿ ಥಿಯರಿಗಳಿವೆಯೇ ಹೊರತು ಖಚಿತವಾಗಿ ಇಂಥಾ ಕಾರಣಕ್ಕೆ ಕೆನಡಿ ಹತ್ಯೆಯಾದ್ರು ಅನ್ನೋ ಮಾಹಿತಿ ಇಲ್ಲ.
ಪುರಿ ಜಗನ್ನಾಥನಿಂದಲೇ ಬದುಕುಳಿದ ಡೊನಾಲ್ಡ್ ಟ್ರಂಪ್! ಇದು 48 ವರ್ಷದ ಹಿಂದಿನ ಸಂಬಂಧ!
ಮಾರ್ಟಿನ್ ಲೂಥರ್ ಕಿಂಗ್ ಹತ್ಯೆ-1968
ಮಾರ್ಟಿನ್ ಲೂತರ್ ಕಿಂಗ್ ಜೂನಿಯರ್... ಮಹತ್ಮಾ ಗಾಂಧೀಜಿಯವರ ತತ್ವಗಳ ಅನುಯಾಯಿಯಾಗಿದ್ದ, ಅಮೆರಿಕದ ಮಾನವ ಹಕ್ಕುಗಳ ಹೋರಾಟಗಾರನಾಗಿದ್ದ ಮಾರ್ಟಿನ್ ಲೂಥರ್ ಕಿಂಗ್ ಅವರನ್ನ 1968ರ ಏಪ್ರಿಲ್ 4 ರಂದು ಗುಂಡಿಟ್ಟು ಹತ್ಯೆ ಮಾಡಲಾಯ್ತು. ಅಮರಿಕದಲ್ಲಿ ವರ್ಣಬೇಧ ನೀತಿಯ ವಿರುದ್ಧ, ಬಿಳಿಯರ ದೌರ್ಜನ್ಯದ ವಿರುದ್ಧ ದೊಡ್ಡ ಮಟ್ಟದ ಹೋರಾಟ ಸಂಘಟಿಸಿದ್ದವರು ಮಾರ್ಟಿನ್ ಲೂಥರ್ ಕಿಂಗ್. ಅಮೆರಿಕದ ಟೆನ್ನಿಸ್ಸೀ ರಾಜ್ಯದ ಮೆಮ್ ಪಿಸ್ ನಲ್ಲಿ ಹೋಟೆಲ್ ವೊಂದರ ಬಾಲ್ಕನಿಯಲ್ಲಿ ನಿಂತಿದ್ದ ಲೂತರ್ ಕಿಂಗ್ ಅವರನ್ನ ಗುಂಡು ಹಾರಿಸಿ ಕೊಲ್ಲಲಾಯ್ತು. ಜೇಮ್ಸ್ ರೇ ಎಂಬಾತ ಈ ಹತ್ಯೆ ಮಾಡಿದ್ದ. ಅಮೆರಿಕದಲ್ಲಿ ಕಪ್ಪು ವರ್ಣೀಯರನ್ನ ಒಗ್ಗೂಡಿಸಲು ಮಾರ್ಟಿನ್ ಲೂಥರ್ ಕಿಂಗ್ ನಡೆಸುತ್ತಿದ್ದ ಹೋರಾಟದ ಕಾರಣದಿಂದ ಅವರನ್ನ ಹತ್ಯೆ ಮಾಡಲಾಯ್ತು.