*ಅಮೆರಿಕದ ಸಂಸತ್ತಿಗೆ ಗುಪ್ತಚರ ಸಂಸ್ಥೆಯ ವರದಿ
*ಯುದ್ಧ ಮುಂದುವರೆದರೆ ಪುಟಿನ್‌ಗೆ ತೀವ್ರ ಇಕ್ಕಟ್ಟು
*ಆಗ ಅಣ್ವಸ್ತ್ರ ಕೈಗೆತ್ತಿಕೊಳ್ಳುವ ಬೆದರಿಕೆಯೊಡ್ಡಬಹುದು
*ಜೆಲೆನ್‌ಸ್ಕಿಗೆ ನೊಬೆಲ್ ಶಾಂತಿ ಪ್ರಶಸ್ತಿ: ಯುರೋಪ್ ನಾಯಕರ ಆಗ್ರಹ
*2022ನೇ ಸಾಲಿನ ಪಟ್ಟಿಯನ್ನು ಮರುಪರಿಶೀಲಿಸಲು ಒತ್ತಾಯ
ಮಾಸ್ಕೋ (ಮಾ. 19): ಉಕ್ರೇನ್ ವಿರುದ್ಧದ ಯುದ್ಧ ಇನ್ನಷ್ಟುಕಾಲ ಮುಂದುವರೆದರೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪಾಶ್ಚಾತ್ಯ ರಾಷ್ಟ್ರಗಳಿಗೆ ಅಣ್ವಸ್ತ್ರ ಬಳಸುವ ಬೆದರಿಕೆಯೊಡ್ಡಬಹುದು ಎಂಬ ಆತಂಕಕಾರಿ ಸಂಗತಿಯನ್ನು ಅಮೆರಿಕದ ಗುಪ್ತಚರ ಇಲಾಖೆ ಹೊರಗೆಡವಿದೆ. ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಪೆಂಟಗನ್‌ನ ರಕ್ಷಣಾ ಗುಪ್ತಚರ ಸಂಸ್ಥೆ 67 ಪುಟಗಳ ವರದಿಯೊಂದನ್ನು ಅಮೆರಿಕದ ಸಂಸತ್ತಿಗೆ ಸಲ್ಲಿಸಿದೆ. ಅದರಲ್ಲಿ, ರಷ್ಯಾದ ದಾಳಿಗೆ ಉಕ್ರೇನ್‌ನ ಪ್ರತಿರೋಧ ಹೀಗೇ ಮುಂದುವರೆದರೆ ರಷ್ಯಾ ಸೇನೆಯಲ್ಲಿ ಮಾನವ ಸಂಪನ್ಮೂಲ ಹಾಗೂ ಯುದ್ಧದ ಸಾಮಗ್ರಿಗಳು ಖಾಲಿಯಾಗುತ್ತಾ ಹೋಗುತ್ತವೆ.
ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧವಿರುವುದರಿಂದ ತಕ್ಷಣವೇ ಯುದ್ಧದ ಸಾಮಗ್ರಿಗಳನ್ನು ಉತ್ಪಾದನೆ ಮಾಡಿಕೊಳ್ಳುವುದು ರಷ್ಯಾಕ್ಕೆ ಅಸಾಧ್ಯವಾಗುತ್ತದೆ. ಆರ್ಥಿಕ ನಿರ್ಬಂಧವೂ ಇರುವುದರಿಂದ ರಷ್ಯಾಕ್ಕೆ ಯುದ್ಧ ಮುಂದುವರೆಸುವುದು ಕಷ್ಟವಾಗುತ್ತದೆ. ಆಗ ಪುಟಿನ್ ಅಣ್ವಸ್ತ್ರ ಬಳಸುವ ಬೆದರಿಕೆ ಹಾಕಬಹುದು ಎಂದು ಹೇಳಲಾಗಿದೆ.
ಪಾಶ್ಚಾತ್ಯ ರಾಷ್ಟ್ರಗಳ ಜೊತೆಗೂ ಘರ್ಷಣೆ: ಯುದ್ಧದ ಪರಿಣಾಮವಾಗಿ ರಷ್ಯಾದ ಬಲ ಕ್ಷೀಣಿಸುತ್ತಾ ಹೋಗುತ್ತದೆ. ಆಗ ರಷ್ಯಾ ತನ್ನ ಅಣ್ವಸ್ತ್ರಗಳ ಮೇಲೆ ಅವಲಂಬಿತವಾಗುವ ಸ್ಥಿತಿ ಬರಬಹುದು. ವಿದೇಶಗಳಿಗೆ ಹಾಗೂ ಸ್ವತಃ ರಷ್ಯಾದ ಪ್ರಜೆಗಳಿಗೆ ತನ್ನ ಶಕ್ತಿ ತೋರಿಸಲು ಪುಟಿನ್ ಅಣ್ವಸ್ತ್ರಗಳನ್ನು ಝಳಪಿಸಬಹುದು. ಈಗಾಗಲೇ ಅವರು ರಷ್ಯಾದ ಅಣ್ವಸ್ತ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Russia Ukraine war: ತಾನೇ ಮಾಡಿಕೊಂಡ ಎಡವಟ್ಟು...ಪುಟಿನ್‌ಗೆ ಸೌಂದರ್ಯವರ್ಧಕ ಸಿಗುತ್ತಿಲ್ಲ!
ಉಕ್ರೇನ್ ಮೇಲಿನ ದಾಳಿಯಲ್ಲಿ ರಷ್ಯಾ ಸಫಲವಾಗದಂತೆ ನೋಡಿಕೊಳ್ಳುವ ಅಮೆರಿಕದ ಪ್ರಯತ್ನ ಹಾಗೂ ಅಮೆರಿಕ ದುರ್ಬಲವಾಗುತ್ತಿದೆ ಎಂಬ ತಮ್ಮದೇ ಕಲ್ಪನೆಯಿಂದಾಗಿ ಪುಟಿನ್ ಕೇವಲ ಉಕ್ರೇನ್‌ನಲ್ಲಿ ಮಾತ್ರವಲ್ಲ, ಪಾಶ್ಚಾತ್ಯ ರಾಷ್ಟ್ರಗಳ ಜೊತೆಗೂ ಘರ್ಷಣೆಗೆ ಇಳಿಯಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಣ್ವಸ್ತ್ರ ಸನ್ನದ್ಧತೆಗೆ ಪುಟಿನ್ ಆದೇಶ: ಉಕ್ರೇನ್ ಮೇಲೆ ಹಾಗೂ ಇನ್ನಿತರ ಮಾಜಿ ಸೋವಿಯತ್ ಒಕ್ಕೂಟದ ರಾಷ್ಟ್ರಗಳ ಮೇಲೆ ತಮ್ಮ ಪ್ರಭಾವ ಮರುಸ್ಥಾಪನೆ ಮಾಡಿಕೊಳ್ಳುವ ಬಯಕೆಯೇ ಪುಟಿನ್‌ಗೆ ಅಣ್ವಸ್ತ್ರಗಳತ್ತ ಗಮನ ಹರಿಸಲು ಪ್ರಚೋದನೆ ನೀಡಬಹುದು. ನಿರೀಕ್ಷೆಗಿಂತ ಹೆಚ್ಚು ಪ್ರತಿರೋಧವನ್ನು ಉಕ್ರೇನ್ ತೋರಿದ್ದರೂ ಹಾಗೂ ರಷ್ಯಾಕ್ಕೆ ತಾನು ಅಂದುಕೊಂಡಿದ್ದಕ್ಕಿಂತ ಹೆಚ್ಚು ನಷ್ಟವಾಗಿದ್ದರೂ ಉಕ್ರೇನ್ ಮಂಡಿಯೂರುವವರೆಗೆ ತೀವ್ರತರ ದಾಳಿ ಮುಂದುವರೆಸಲು ಪುಟಿನ್ ನಿರ್ಧರಿಸಿರುವಂತಿದೆ. ಸಂದರ್ಭ ಬಂದರೆ ತಕ್ಷಣ ಅಣ್ವಸ್ತ್ರಗಳನ್ನು ಬಳಸಲು ಸಿದ್ಧರಿರಬೇಕು ಎಂದು ಫೆಬ್ರವರಿಯಲ್ಲೇ ಪುಟಿನ್ ತಮ್ಮ ದೇಶದ ರಕ್ಷಣಾ ಪಡೆಗಳಿಗೆ ಆದೇಶ ನೀಡಿದ್ದಾರೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಜೆಲೆನ್‌ಸ್ಕಿಗೆ ನೊಬೆಲ್ ಶಾಂತಿ ಪ್ರಶಸ್ತಿ: ಯುರೋಪ್ ನಾಯಕರ ಆಗ್ರಹ: ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಅವರಿಗೆ 2022ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಬೇಕು ಎಂದು ಯುರೋಪ್‌ನ ಹಲವು ದೇಶಗಳ ಹಾಲಿ ಮತ್ತು ಮಾಜಿ ರಾಜಕಾರಣಿಗಳು ನಾರ್ವೆಯ ನೊಬೆಲ್ ಸಮಿತಿಯನ್ನು ಒತ್ತಾಯಿಸಿದ್ದಾರೆ. ಇದಕ್ಕಾಗಿ ಈ ವರ್ಷದ ನೊಬೆಲ್ ನಾಮನಿರ್ದೇಶನದ ದಿನಾಂಕವನ್ನು ಮಾ.31ರವರೆಗೆ ವಿಸ್ತರಿಸಬೇಕು ಎಂದು ಅವರು ಕೋರಿದ್ದಾರೆ.
‘ಈ ಬಾರಿಯ ನೊಬೆಲ್ ಪ್ರಶಸ್ತಿಯ ನಾಮನಿರ್ದೇಶನ ದಿನಾಂಕವನ್ನು ವಿಸ್ತರಿಸಬೇಕು ಮತ್ತು ಪಟ್ಟಿಯನ್ನು ಮರುಪರಿಶೀಲನೆ ನಡೆಸಬೇಕು. 2022ರ ನೊನೆಲ್ ಶಾಂತಿ ಪ್ರಶಸ್ತಿಯನ್ನು ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಮತ್ತು ಉಕ್ರೇನಿನ ಜನರಿಗೆ ನೀಡಬೇಕು’ ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.ಈ ವರ್ಷದ ನೊಬೆಲ್ ಪ್ರಶಸ್ತಿಗಳನ್ನು ಅ.3ರಿಂದ 10ರವರೆಗೆ ನೀಡಲಾಗುತ್ತದೆ. ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗೆ 251 ವ್ಯಕ್ತಿಗಳು ಮತ್ತು 92 ಸಂಸ್ಥೆಗಳು ಅರ್ಜಿ ಸಲ್ಲಿಸಿವೆ.
ಇದನ್ನೂ ಓದಿ: India Russia Oil Deal: ರಷ್ಯಾದಿಂದ ತೈಲ ಖರೀದಿಗೆ ಟೀಕೆ: ಭಾರತ ತಿರುಗೇಟು
ಭಾರತೀಯ ಔಷಧ ಕಂಪನಿಗಳಿಗೆ ರಷ್ಯಾ ಆಹ್ವಾನ: ಪಾಶ್ಚಿಮಾತ್ಯ ದೇಶಗಳ ಔಷಧಿ ತಯಾರಕರು ರಷ್ಯಾದ ಮಾರುಕಟ್ಟೆಯಿಂದ ನಿರ್ಗಮಿಸಿದ ಹಿನ್ನೆಲೆಯಲ್ಲಿ, ಆ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಭಾರತೀಯ ಔಷಧಿ ತಯಾರಿಕಾ ಕಂಪನಿಗಳಿಗೆ ರಷ್ಯಾ ಮುಕ್ತ ಆಹ್ವಾನವನ್ನು ನೀಡಿದೆ.
‘ಭಾರತವು ಜಾಗತಿಕ ಔಷಧಾಲಯ ಎಂದು ಪ್ರಸಿದ್ಧಿ ಪಡೆದಿದೆ. ಭಾರತ ಸ್ವದೇಶಿ ಕೋವಿಡ್ ಲಸಿಕೆ ತಯಾರಿಸಿ, ತನ್ನ ನಾಗರಿಕರಿಗೆ ಪೂರೈಸಿದ್ದಲ್ಲದೇ ವ್ಯಾಕ್ಸಿನ್ ಮೈತ್ರಿ ಯೋಜನೆಯ ಮೂಲಕ ಹಲವಾರು ದೇಶಗಳಿಗೆ ಔಷಧಿ ಪೂರೈಸಿ ತನ್ನ ಸಾಮರ್ಥ್ಯವನ್ನು ತೋರಿಸಿದೆ. ಈಗಾಗಲೇ ಹಲವಾರು ಪಾಶ್ಚಿಮಾತ್ಯ ಕಂಪನಿಗಳು ರಷ್ಯಾದ ಮಾರುಕಟ್ಟೆಯನ್ನು ತೊರೆದಿರುವುದರಿಂದ ಆ ಸ್ಥಳಗಳನ್ನು ಭಾರತದ ಔಷಧ ತಯಾರಿಕಾ ಕಂಪನಿಗಳು ಆಕ್ರಮಿಸಿಕೊಳ್ಳಬಹುದು’ ಎಂದು ರಷ್ಯಾದ ರಾಯಭಾರಿ ಡೆನೀಸ್ ಅಲಿಪೊವ್ ಶುಕ್ರವಾರ ಹೇಳಿಕೆ ನೀಡಿದ್ದಾರೆ ಎಂದು ಸ್ಪುಟ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉಕ್ರೇನಲ್ಲಿರುವ 20 ಭಾರತೀಯರಿಗೆ ರಾಯಭಾರ ಕಚೇರಿ ನೆರವು: ಯುದ್ಧ ಪೀಡಿತ ಉಕ್ರೇನಿನಲ್ಲಿ ಇನ್ನೂ ಸಿಲುಕಿರುವ 20 ಭಾರತೀಯರು, ನೆರವಿಗಾಗಿ ತಾತ್ಕಾಲಿಕವಾಗಿ ಪೋಲೆಂಡಿನ ವಾರ್ಸಾದಿಂದ ಕಾರ್ಯನಿರ್ವಹಿಸುವ ಉಕ್ರೇನಿನ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಗುರುವಾರ ರಾಯಭಾರ ಕಚೇರಿ ಹೊರಡಿಸಿದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಉಕ್ರೇನಿನಲ್ಲಿ ಯುದ್ಧದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಸುರಕ್ಷತಾ ಕಾರಣಗಳಿಂದಾಗಿ ಉಕ್ರೇನಿನಲ್ಲಿದ್ದ ರಾಯಭಾರ ಕಚೇರಿಯನ್ನು ಕೆಲವು ದಿನಗಳ ಹಿಂದೆ ಪೋಲೆಂಡಿನ ರಾಜಧಾನಿ ವಾರ್ಸಾಗೆ ಸ್ಥಳಾಂತರಿಸಲಾಗಿತ್ತು. ಗುರುವಾರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಉಕ್ರೇನಿನಲ್ಲಿ ಇನ್ನೂ ಹಲವಾರು ಭಾರತೀಯರಿದ್ದಾರೆ. ಅವರಲ್ಲಿ 15 ರಿಂದ 20 ಜನರು ಭಾರತಕ್ಕೆ ಮರಳಲು ಬಯಸಿದ್ದಾರೆ. ಇವರನ್ನು ದೇಶಕ್ಕೆ ಕರೆತರುವ ಪ್ರಯತ್ನ ಮುಂದುವರೆಯಲಿದೆ’ ಎಂದು ಹೇಳಿದ್ದರು.
ಈ ಹಿನ್ನಲೆಯಲ್ಲಿ ರಾಯಭಾರ ಕಚೇರಿ ಹೊಸ ಮಾರ್ಗಸೂಚಿ ಹೊರಡಿಸಿದ್ದು, ‘ಸಂಘರ್ಷ ವಲಯದಲ್ಲಿರುವ ಭಾರತೀಯರು ಸಹಾಯವಾಣಿಯನ್ನು ಸಂಪರ್ಕಿಸಬಹುದು. +380933559958, +919205290802, +917428022564 ಈ ಸಂಖ್ಯೆಗಳಿಗೆ ವಾಟ್ಸಾಪ್ ಮಾಡಿಯೂ ನೆರವು ಕೇಳಬಹುದು’ ಎಂದು ತಿಳಿಸಿದೆ.