Russia Ukraine Crisis: ಉಕ್ರೇನ್‌ ಮೇಲೆ ರಷ್ಯಾ ದಾಳಿಗೆ ಕಾರಣವೇನು?

By Kannadaprabha News  |  First Published Feb 25, 2022, 2:20 AM IST

ಇಡೀ ವಿಶ್ವದಲ್ಲಿ ಆತಂಕ ಹುಟ್ಟುಹಾಕಿರುವ ರಷ್ಯಾ-ಉಕ್ರೇನ್‌ ಯುದ್ಧಕ್ಕೆ ಬಹುದೊಡ್ಡ ಇತಿಹಾಸವಿದೆ. ಒಂದೊಮ್ಮೆ ತನ್ನದೇ ಭಾಗವಾಗಿದ್ದ ಉಕ್ರೇನ್‌ ಅನ್ನು ತನ್ನ ಜೊತೆಗೆ ಇಟ್ಟುಕೊಳ್ಳಬೇಕೆಂಬ ಆಶಯದ ಜೊತೆಗೆ ತನ್ನ ದೇಶದ ಗಡಿಯಲ್ಲಿ ಅಮೆರಿಕ ಸೇರಿದಂತೆ ನ್ಯಾಟೋ ದೇಶಗಳ ಪಡೆ ನಿಯೋಜನೆಗೊಳ್ಳಬಾರದು ಎಂಬ ದೊಡ್ಡ ಗುರಿ ರಷ್ಯಾದ್ದು. ಇದಕ್ಕೆಲ್ಲಾ ಸುಮಾರು 3 ದಶಕಗಳ ಇತಿಹಾಸವಿದೆ.


ಇಡೀ ವಿಶ್ವದಲ್ಲಿ ಆತಂಕ ಹುಟ್ಟುಹಾಕಿರುವ ರಷ್ಯಾ-ಉಕ್ರೇನ್‌ ಯುದ್ಧಕ್ಕೆ (Russia Ukraine Crisis) ಬಹುದೊಡ್ಡ ಇತಿಹಾಸವಿದೆ. ಒಂದೊಮ್ಮೆ ತನ್ನದೇ ಭಾಗವಾಗಿದ್ದ ಉಕ್ರೇನ್‌ ಅನ್ನು ತನ್ನ ಜೊತೆಗೆ ಇಟ್ಟುಕೊಳ್ಳಬೇಕೆಂಬ ಆಶಯದ ಜೊತೆಗೆ ತನ್ನ ದೇಶದ ಗಡಿಯಲ್ಲಿ ಅಮೆರಿಕ (America) ಸೇರಿದಂತೆ ನ್ಯಾಟೋ ದೇಶಗಳ ಪಡೆ ನಿಯೋಜನೆಗೊಳ್ಳಬಾರದು ಎಂಬ ದೊಡ್ಡ ಗುರಿ ರಷ್ಯಾದ್ದು. ಇದಕ್ಕೆಲ್ಲಾ ಸುಮಾರು 3 ದಶಕಗಳ ಇತಿಹಾಸವಿದೆ.

* 2 ದಶಕಗಳ ಹಿಂದಿನವರೆಗೂ ಉಕ್ರೇನ್‌ ದೇಶವು, ರಷ್ಯಾ ಪ್ರಮುಖ ಭಾಗವಾಗಿದ್ದ ಸೋವಿಯತ್‌ ಒಕ್ಕೂಟದ ಪ್ರಮುಖ ದೇಶವಾಗಿತ್ತು.

Tap to resize

Latest Videos

* 1991ರಲ್ಲಿ ಉಕ್ರೇನ್‌ ಸ್ವತಂತ್ರ ಪಡೆದುಕೊಂಡಿದ್ದು ಸೋವಿಯತ್‌ ಒಕ್ಕೂಟದ ಪತನಕ್ಕೆ ಪ್ರಮುಖವಾಗಿ ಕಾರಣವಾಗಿತ್ತು. ಇದು ರಷ್ಯಾ ಅಸಮಾಧಾನಕ್ಕೆ ಕಾರಣವಾಗಿತ್ತು.

* ಸೋವಿಯತ್‌ ಒಕ್ಕೂಟ ಪತನದ ಬಳಿಕ 30 ದೇಶಗಳ ರಕ್ಷಣಾ ಒಕ್ಕೂಟವಾದ ನ್ಯಾಟೋ ಪೂರ್ವ ಯುರೋಪ್‌ನ ಹಲವು ಭಾಗಗಳಲ್ಲಿ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿತು.

* 2004ರಲ್ಲಿ ನ್ಯಾಟೋ ಮೈತ್ರಿಕೂಟವು ತನ್ನ ವ್ಯಾಪ್ತಿಗೆ ಸೋವಿಯಲ್‌ ಬಾಲ್ಟಿಕ್‌ ದೇಶಗಳಾದ ಎಸ್ಟೋನಿಯಾ, ಲಾತ್ವಿಯಾ, ಲಿಥುವೇನಿಯಾಗಳನ್ನು ಸೇರ್ಪಡೆ ಮಾಡಿಕೊಂಡಿತು.

* 2008ರಲ್ಲಿ ಉಕ್ರೇನ್‌ ಅನ್ನೂ ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳುವ ಪ್ರಸ್ತಾಪವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿತು. ಇದು ರಷ್ಯಾದ ಆಕ್ರೋಶವನ್ನು ಮತ್ತಷ್ಟುಹೆಚ್ಚಿಸಿತು.

* ಇತ್ತೀಚಿನ ವರ್ಷಗಳಲ್ಲಿ ಉಕ್ರೇನ್‌ ನ್ಯಾಟೋ ಮತ್ತು ಯುರೋಪಿಯನ್‌ ಒಕ್ಕೂಟ ಸೇರುವತ್ತ ಒಲವು ಹೊಂದಿರುವ ಹಲವು ಸೂಚನೆಗಳನ್ನು ನೀಡುತ್ತಲೇ ಬಂದಿದೆ.

* ಆದರೆ, ಉಕ್ರೇನ್‌ ಸಾಂಸ್ಕೃತಿಕವಾಗಿ, ಭಾಷಿಕವಾಗಿ, ರಾಜಕೀಯವಾಗಿ ತನ್ನ ಜೊತೆಗೆ ಹೆಚ್ಚು ನಂಟು ಹೊಂದಿದೆ. ಹೀಗಾಗಿ ಅದು ನ್ಯಾಟೋ ಸೇರಕೂಡದು ಎಂಬುದು ರಷ್ಯಾದ ವಾದ.

* ತನ್ನ ಸುತ್ತಮುತ್ತಲೂ ಅಮೆರಿಕ ಪಾಲುದಾರನಾಗಿರುವ ನ್ಯಾಟೋ ಸೇನಾ ಪಡೆಗಳು ಬೀಡು ಬಿಡುವುದನ್ನು ರಷ್ಯಾ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಿದ್ಧವಿರಲಿಲ್ಲ.

* ಹೀಗಾಗಿಯೇ ಉಕ್ರೇನ್‌ ರಷ್ಯಾ ಪರವಾಗಿಯೇ ಇರಬೇಕೆಂದು ವಾದಿಸುವ ಉಕ್ರೇನ್‌ನ ಬಂಡುಕೋರರಿಗೆ ಕಳೆದ 7-8 ವರ್ಷಗಳಿಂದ ಹಣ, ಸೇನಾ ನೆರವು ನೀಡಿಕೊಂಡುಬಂದಿದೆ.

* 2014ರಲ್ಲಿ ಉಕ್ರೇನ್‌ ಮೇಲೆ ದಾಳಿ ನಡೆಸಿದ ರಷ್ಯಾ, ಹಲವು ಆಯಕಟ್ಟಿನ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತು. ಜೊತೆಗೆ ಪದೇ ಪದೇ ಸೈಬರ್‌ ದಾಳಿ ನಡೆಸುತ್ತಿದೆ.

* ಪರಿಸ್ಥಿತಿ ಹೀಗೆಯೇ ಮುಂದುವರೆದ ಇನ್ನು ಕೆಲವೇ ವರ್ಷಗಳಲ್ಲಿ ಉಕ್ರೇನ್‌ ಕೈತಪ್ಪಲಿದೆ ಎಂಬ ಆತಂಕಕ್ಕೆ ಒಳಗಾಗಿರುವ ರಷ್ಯಾ, ನ್ಯಾಟೋ, ಅಮೆರಿಕವನ್ನು ಬೆದರಿಸಲು ದಾಳಿ ನಡೆಸಿದೆ.

ಭೂಮಿಯ ಮೇಲೆ ವೈರಿ, ಆಗಸದಲ್ಲಿ ಸ್ನೇಹ: 2ನೇ ಮಹಾಯುದ್ಧದ ನಂತರ ರಷ್ಯಾ ಮತ್ತು ಅಮೆರಿಕಗಳ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ. ಹಲವಾರು ವಿಚಾರಗಳಿಗೆ ಉಭಯ ದೇಶಗಳು ಪರಸ್ಪರ ಜಗಳವಾಡುತ್ತಲೇ ಇವೆ. ಈ 2 ಬಲಶಾಲಿ ದೇಶಗಳ ನಡುವಿನ ಶೀತಲ ಸಮರ ಇಡೀ ವಿಶ್ವವನ್ನೇ ಪೂರ್ವ ಮತ್ತು ಪಶ್ಚಿಮದ ದೇಶಗಳು ಎಂದು ವಿಭಾಗಿಸಿದೆ. ವಿಚಿತ್ರವೆಂದರೆ ಭೂಮಿಯಲ್ಲಿ ಪರಸ್ಪರ ಕಚ್ಚಾಡುವ ಈ ಎರಡೂ ದೇಶಗಳು ಆಗಸದಲ್ಲಿ ಸ್ನೇಹಿತರು. ಭೂಮಿಯ ಮೇಲೆ ಪರಸ್ಪರ ಹಲವು ಯುದ್ಧ ನಡೆಸಿರುವ ಈ ದೇಶಗಳು, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಮಿತ್ರರು. 

ಹೌದು. ಆದರೆ 1998 ನ.20ರಂದು ರಷ್ಯಾ, ಅಮೆರಿಕ, ಯುರೋಪ್‌, ಜಪಾನ್‌ ಮತ್ತು ಕೆನಡಾ ದೇಶಗಳು ಸೇರಿ ಸ್ಥಾಪಿಸಿದ ಅಂತಾರಾಷ್ಟ್ರೀಯ ಸ್ಪೇಸ್‌ ಸ್ಟೇಶನ್ನಲ್ಲಿ ಪ್ರಸ್ತುತ ಉಭಯ ದೇಶಗಳ ಗಗನಯಾತ್ರಿಗಳು ಸ್ನೇಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಭೂಮಿಯ ಮೇಲೆ ಸದಾ ಯುದ್ಧದ ಮನೋಭಾವದಲ್ಲೇ ಇರುವ 2 ದೇಶಗಳು ಅಂತರಿಕ್ಷದಲ್ಲಿ ಪರಸ್ಪರ ಸಹಕಾರದಿಂದ ಕೆಲಸ ಮಾಡುತ್ತಿವೆ. ಪ್ರಸ್ತುತ ಅಂತಾರಾಷ್ಟ್ರೀಯ ಸ್ಪೇಸ್‌ ಸ್ಟೇಶನ್‌ನಲ್ಲಿ ರಷ್ಯಾ, ಅಮೆರಿಕ ಮತ್ತು ಯುರೋಪ್‌ನ 7 ಗಗನಯಾತ್ರಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ.

click me!