
ನವದೆಹಲಿ (ಜ.15): ಪಾಕಿಸ್ತಾನದಲ್ಲಿ ದಿನನಿತ್ಯದ ಬದುಕು ಇನ್ನಷ್ಟು ಕಷ್ಟವಾಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್‌ನಲ್ಲಿ ಒಂದು ಡಜನ್ ಮೊಟ್ಟೆಗೆ ಭಾನುವಾರ 400 ಪಾಕಿಸ್ತಾನಿ ರೂಪಾಯಿಗಳಿಗೆ ಏರಿದೆ ಎಂದು ಸ್ಥಳೀಯ ಮಾರುಕಟ್ಟೆ ಮೂಲಗಳು ತಿಳಿಸಿವೆ. 400 ಪಾಕಿಸ್ತಾನಿ ರೂಪಾಯಿ ಎಂದರೆ, ಭಾರತೀಯ ದರದಲ್ಲಿ 120 ರೂಪಾಯಿ ಆಗಿದೆ. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿರುವ ಕಾರಣ ಸ್ಥಳೀಯ ಆಡಳಿತಗಳು ಸರ್ಕಾರದ ದರಪಟ್ಟಿಯನ್ನು ಜಾರಿಗೊಳಿಸಲು ಕೂಡ ವಿಫಲವಾಗಿದೆ. ಇನ್ನು ಪಾಕಿಸ್ತಾನಿ ಜನರ ನಿತ್ಯ ಬಳಕೆಯ ಪ್ರಮುಖ ವಸ್ತುವಾಗಿರುವ ಈರುಳ್ಳಿ ಬೆಲೆ ಪ್ರತಿ ಕೆಜಿಗೆ 230 ರಿಂದ 250 ರೂಪಾಯಿಗೆ (ಭಾರತೀಯ ದರದಲ್ಲಿ 75 ರೂಪಾಯಿ) ಏರಿಕೆಯಾಗಿದೆ. ಪಾಕಿಸ್ತಾನಿ ಸರ್ಕಾರ ಈರುಳ್ಳಿಯನ್ನು ಪ್ರತಿ ಕೆಜಿಗೆ 175 ಪಾಕಿಸ್ತಾನಿ ರೂಪಾಯಿಯಂತೆ ಮಾರಾಟ ಮಾಡಬೇಕು ಎಂದು ನಿಗದಿ ಮಾಡಿತ್ತು. ಲಾಹೋರ್‌ನಲ್ಲಿ ಒಂದು ಡಜನ್ ಮೊಟ್ಟೆ 400 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಒಂದು ಕೆಜಿ ಚಿಕನ್‌ಗೆ 615 ರೂಪಾಯಿ ಆಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದೆ.
ಕಳೆದ ತಿಂಗಳು, ಆರ್ಥಿಕ ಸಮನ್ವಯ ಸಮಿತಿಯು (ಇಸಿಸಿ) ರಾಷ್ಟ್ರೀಯ ಬೆಲೆ ಮೇಲ್ವಿಚಾರಣಾ ಸಮಿತಿಗೆ (ಎನ್‌ಪಿಎಂಸಿ) ಬೆಲೆ ಸ್ಥಿರತೆಯನ್ನು ನಿಯಂತ್ರಿಸಲು ಮತ್ತು ಸಂಗ್ರಹಣೆ ಮತ್ತು ಲಾಭದಾಯಕತೆಯನ್ನು ಪರಿಶೀಲಿಸುವ ಕ್ರಮಗಳಿಗಾಗಿ ಪ್ರಾಂತೀಯ ಸರ್ಕಾರಗಳೊಂದಿಗೆ ನಿಯಮಿತ ಸಮನ್ವಯವನ್ನು ಮುಂದುವರಿಸಲು ನಿರ್ದೇಶನ ನೀಡಿತ್ತು. ಸಂಪುಟ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ಹಣಕಾಸು, ಕಂದಾಯ ಮತ್ತು ಆರ್ಥಿಕ ವ್ಯವಹಾರಗಳ ಉಸ್ತುವಾರಿ ಫೆಡರಲ್ ಸಚಿವ ಶಂಶಾದ್ ಅಖ್ತರ್ ವಹಿಸಿದ್ದರು ಎಂದು ಹಣಕಾಸು ಸಚಿವಾಲಯದ ಪತ್ರಿಕಾ ಹೇಳಿಕೆಯನ್ನು ಉಲ್ಲೇಖಿಸಿ ಎಆರ್‌ವೈ ನ್ಯೂಸ್ ವರದಿ ಮಾಡಿದೆ.
ಈ ನಡುವೆ 2023-24 ರ ಆರ್ಥಿಕ ವರ್ಷದಲ್ಲಿ ಕಳೆದ ವರ್ಷ ನವೆಂಬರ್ ಅಂತ್ಯದ ವೇಳೆಗೆ ಪಾಕಿಸ್ತಾನದ ಮೇಲಿನ ಒಟ್ಟು ಸಾಲದ ಹೊರೆ 63,399 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ (PKR) ಏರಿದೆ ಎಂದು ARY ನ್ಯೂಸ್ ವರದಿ ಮಾಡಿದೆ. ಪಿಡಿಎಂ ಮತ್ತು ಉಸ್ತುವಾರಿ ಸರ್ಕಾರದ ಅವಧಿಯಲ್ಲಿ ಪಾಕಿಸ್ತಾನದ ಒಟ್ಟು ಸಾಲವು 12.430 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಿಂತ ಹೆಚ್ಚಾಗಿದೆ. 40.956 ಟ್ರಿಲಿಯನ್ ದೇಶೀಯ ಸಾಲಗಳು ಮತ್ತು 22.434 ಟ್ರಿಲಿಯನ್ ಅಂತಾರಾಷ್ಟ್ರೀಯ ಸಾಲಗಳು ಸೇರಿದಂತೆ ಒಟ್ಟಾರೆ ಸಾಲದ ಹೊರೆಯು 63.390 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗೆ ಏರಿದೆ.
ಉಗ್ರರ ಸಾಕಿ ಪಾತಾಳಕ್ಕೆ ಕುಸಿದ ಪಾಕಿಸ್ತಾನ, ದೇಶದ ಕಡುಬಡತನ ಜನಸಂಖ್ಯೆ ಶೇ.40ಕ್ಕೆ ಏರಿಕೆ!
ಇತ್ತೀಚೆಗೆ ವಿಶ್ವಬ್ಯಾಂಕ್ ಕೂಡ ಪಾಕಿಸ್ಥಾನದ ಆರ್ಥಿಕ ಅಭಿವೃದ್ಧಿ ಗಣ್ಯರಿಗೆ ಮಾತ್ರವೇ ಸೀಮಿತವಾಗಿದೆ ಎಂದು ಹೇಳಿದೆ. ದೇಶದ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು, ಇದೇ ರೀತಿಯಲ್ಲಿರುವ ಇತರ ದೇಶಗಳಿಗಿಂತಲೂ ಪಾಕಿಸ್ತಾನ ಹಿಂದುಳಿದಿದೆ ಎಂದು ಪಾಕ್ ವರ್ನಾಕ್ಯುಲರ್ ಮೀಡಿಯಾ ವರದಿ ಮಾಡಿದೆ. ವಿಶ್ವಬ್ಯಾಂಕ್‌ನ ಪಾಕಿಸ್ತಾನದ ನಿರ್ದೇಶಕರಾದ ನಾಜಿ ಬೆನ್‌ಹಾಸಿನ್, ಪಾಕಿಸ್ತಾನದ ಆರ್ಥಿಕ ಮಾದರಿಯು "ನಿಷ್ಪರಿಣಾಮಕಾರಿ"ಯಾಗಿದೆ ಮತ್ತು ಬಡತನವು ಹೆಚ್ಚಾಗಲು ಪ್ರಾರಂಭಿಸಿದೆ. ಪಾಕಿಸ್ತಾನದಲ್ಲಿ ಆರ್ಥಿಕ ಅಭಿವೃದ್ಧಿ ಸುಸ್ಥಿರವಾಗಿಲ್ಲ ಎಂದು ಹೇಳಿದ್ದರು.
ಪಾಕ್‌ನಲ್ಲಿ ಒಂದು ತೊಲ ಬಂಗಾರದ ಬೆಲೆಗೆ ಸಿಗುತ್ತೆ ಕಾರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ