ಚೀನಾದಿಂದ ಉ.ಕೊರಿಯಾಕ್ಕೆ ಹೋದರೆ ಗುಂಡಿಟ್ಟು ಹತ್ಯೆ!| ಏಕೈಕ ಸ್ನೇಹಿತ ರಾಷ್ಟ್ರದ ವಿರುದ್ಧವೇ ಕಿಮ್ ಜಾಂಗ್ ಆದೇಶ
ವಾಷಿಂಗ್ಟನ್(ಸೆ,12): ಉತ್ತರ ಕೊರಿಯಾದಲ್ಲಿ ಯಾರಿಗಾದರೂ ಕೊರೋನಾ ಬಂದರೆ ಅವರನ್ನು ಗುಂಡಿಟ್ಟು ಸಾಯಿಸಿ ಎಂದು ಈ ಹಿಂದೆ ಆದೇಶ ಹೊರಡಿಸಿದ್ದ ಆ ದೇಶದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಈಗ ತನ್ನ ಏಕೈಕ ಸ್ನೇಹಿತ ರಾಷ್ಟ್ರವಾಗಿರುವ ಚೀನಾದಿಂದ ಯಾರಾದರೂ ಗಡಿ ದಾಟಿ ಬರಲು ಯತ್ನಿಸಿದರೆ ಅವರನ್ನೂ ಗುಂಡಿಟ್ಟು ಸಾಯಿಸಿ ಎಂದು ಆದೇಶಿಸಿದ್ದಾನೆ.
ಉತ್ತರ ಕೊರಿಯಾ ತನಗೆ ಅಗತ್ಯವಿರುವ ಬಹುತೇಕ ವಸ್ತುಗಳಿಗೆ ನೆರೆ ರಾಷ್ಟ್ರವಾದ ಚೀನಾವನ್ನೇ ಅವಲಂಬಿಸಿದೆ. ಮತ್ತು ಚೀನಾದ ಜೊತೆಗೆ ಮಾತ್ರ ಸ್ನೇಹ ಹೊಂದಿದೆ. ಆದರೆ, ಚೀನಾದಿಂದ ವೈರಸ್ ಪ್ರವೇಶಿಸಬಹುದು ಎಂಬ ಭೀತಿಯಿಂದ ಕಳೆದ ಜನವರಿ ತಿಂಗಳಲ್ಲೇ ಚೀನಾದ ಗಡಿಯನ್ನು ಕಿಮ್ ಜಾಂಗ್ ಮುಚ್ಚಿದ್ದಾನೆ. ಅಲ್ಲಿ 2 ಕಿ.ಮೀ.ನಷ್ಟುಬಫರ್ ವಲಯ ಸೃಷ್ಟಿಸಿದ್ದು, ಅದನ್ನು ದಾಟಿ ಯಾರಾದರೂ ಬಂದರೆ ಗುಂಡಿಟ್ಟು ಸಾಯಿಸಿ ಎಂದು ಆದೇಶ ಹೊರಡಿಸಿದ್ದಾನೆ. ‘ಕೊರೋನಾ ಪಹರೆ’ಗೆಂದೇ ಅಲ್ಲಿ ‘ಉತ್ತರ ಕೊರಿಯಾ ವಿಶೇಷ ಕಾರ್ಯಾಚರಣೆ ಪಡೆ’ (ಎಸ್‌ಒಎಫ್) ನಿಯೋಜಿಸಿದ್ದಾನೆ ಎಂದು ದಕ್ಷಿಣ ಕೊರಿಯಾದಲ್ಲಿರುವ ಅಮೆರಿಕ ಸೇನೆಯ ಮುಖ್ಯಸ್ಥರು ಹೇಳಿದ್ದಾರೆ.
ಚೀನಾದಿಂದ ಉತ್ತರ ಕೊರಿಯಾಕ್ಕೆ ಮಾಡಿಕೊಳ್ಳುತ್ತಿದ್ದ ಅಗತ್ಯ ವಸ್ತುಗಳ ಆಮದು ಶೇ.85ರಷ್ಟುಕುಸಿದಿದೆ. ಹೀಗಾಗಿ ಅಲ್ಲಿ ಜನರ ಪರದಾಟ ಮಿತಿಮೀರಿದ್ದು, ತುರ್ತು ಸ್ಥಿತಿಯನ್ನೂ ಘೋಷಿಸಲಾಗಿದೆ. ಜೊತೆಗೆ ಇತ್ತೀಚೆಗಷ್ಟೇ ಚಂಡಮಾರುತದಿಂದ 2000ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಹೀಗಾಗಿ ಇಷ್ಟುದಿನ ಅಣ್ವಸ್ತ್ರ ಪರೀಕ್ಷೆ ಹಾಗೂ ಅಮೆರಿಕದ ಮೇಲೆ ದಾಳಿ ನಡೆಸುವುದೂ ಸೇರಿದಂತೆ ನಾನಾ ರೀತಿಯ ಬೆದರಿಕೆಗಳನ್ನು ಹಾಕುತ್ತಿದ್ದ ಕಿಮ್ ಜಾಂಗ್ ಉನ್‌ನ ಹಾರಾಟ ಸದ್ಯಕ್ಕೆ ಬಂದ್ ಆಗಿದೆ ಎಂದು ತಿಳಿಸಿದ್ದಾರೆ.