ಕೋವಿಡ್‌ ಆಯ್ತು, ಈಗ ಚಿಕಿತ್ಸೆಯೇ ಇಲ್ಲದ ಹೊಸ ವೈರಸ್‌ ಪತ್ತೆ..!

By Kannadaprabha News  |  First Published Aug 11, 2022, 8:07 AM IST

ಚೀನಾದಲ್ಲಿ ಹೊಸ ವೈರಾಣು ‘ಲಂಗ್ಯಾ ವೈರಸ್‌’ ಪತ್ತೆ, ಕೊರೋನಾ ಜನಿಸಿದ ಚೀನಾದಲ್ಲಿ ಮತ್ತೊಂದು ಆತಂಕಕಾರಿ ವ್ಯಾಧಿ


ಬೀಜಿಂಗ್‌(ಆ.11):  ಕೊರೋನಾ ವೈರಸ್‌ ಹಾವಳಿ ಆಯ್ತು, ಈಗ ಚೀನಾದಲ್ಲಿ ‘ಲಂಗ್ಯಾ ಹೆನಿಪಾವೈರಸ್‌’ ಅಥವಾ ‘ಲೇಯ್‌ವಿ’ ಎಂಬ ಹೊಸ ವೈರಸ್‌ ಕಾಣಿಸಿಕೊಂಡಿದೆ. ಪೂರ್ವ ಚೀನಾದಲ್ಲಿ 35 ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಸೋಂಕು ಪ್ರಾಣಿಗಳು ಹಾಗೂ ಮಾನವರಲ್ಲಿ ಗಂಭೀರ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಯಾವುದೇ ಪ್ರಮಾಣೀಕೃತ ಔಷಧವಾಗಲಿ ಅಥವಾ ಲಸಿಕೆಯಾಗಲಿ ಇಲ್ಲ.

ಲಂಗ್ಯಾ ವೈರಸ್‌ ಅಂದರೇನು?:

Tap to resize

Latest Videos

ಹೆನಿಪಾವೈರಸ್‌ ಕಾಣಿಸಿಕೊಳ್ಳುವುದು ಇದು ಮೊದಲೇನಲ್ಲ. ಹೆಂಡ್ರಾ, ನಿಪಾ, ಸೆಡಾರ್‌, ಮೋಜಿಯಾಂಗ್‌ ಹಾಗೂ ಘಾನಾ ಬ್ಯಾಟ್‌ ವೈರಸ್‌ ಹೆಸರಿನಲ್ಲಿ ಇದು ಕಾಣಿಸಿಕೊಂಡಿತ್ತು. ಸೆಡಾರ್‌ ಘಾನಾ ಬ್ಯಾಟ್‌ ವೈರಸ್‌ ಹಾಗೂ ಮೋಜಿಯಾಂಗ್‌ಗಳು ಮಾನವರಲ್ಲಿ ಕಾಣಿಸಿರಲಿಲ್ಲ. ಪ್ರಾಣಿಗಳಲ್ಲಿ ಮಾತ್ರ ಕಾಣಿಸಿತ್ತು. ಆದರೆ ಹೆಂಡ್ರಾ ಹಾಗೂ ನಿಪಾ ವೈರಸ್‌ಗಳು ಮಾನವರಲ್ಲಿ ಕಾಣಿಸಿಕೊಂಡಿದ್ದವು. ಆದರೆ ಹೊಸ ‘ಲಂಗ್ಯಾ ಹೆನಿಪಾವೈರಸ್‌’ ಈ ಎಲ್ಲ ವೈರಸ್‌ಗಳಿಗಿಂತ ತೀವ್ರತರದಲ್ಲಿ ಜ್ವರ ತಂದೊಡ್ಡುತ್ತದೆ. ಪ್ರಾಣಿ ಹಾಗೂ ಮನುಷ್ಯರಿಬ್ಬರಲ್ಲೂ ಕಾಣಿಸುತ್ತದೆ.

ಚೀನಾದಲ್ಲಿ ಹೊಸ ಸೋಂಕು, ಝೂನೋಟಿಕ್ ಲ್ಯಾಂಗ್ಯಾ ವೈರಸ್ ಅಲರ್ಟ್‌ !

ಲಂಗ್ಯಾ ವೈರಸ್‌ ಪತ್ತೆ ಆಗಿದ್ದು ಹೇಗೆ?:

ಪೂರ್ವ ಚೀನಾದಲ್ಲಿ ಕೆಲವು ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಮೊದಲು ‘ಲಂಗ್ಯಾ ಹೆನಿಪಾವೈರಸ್‌’ ಪತ್ತೆಯಾಗಿದೆ. ಈ ರೋಗಿಗಳು ಪ್ರಾಣಿಗಳ ಸಂಪರ್ಕಕ್ಕೆ ಬಂದವರಾಗಿದ್ದರು. ಈವರೆಗೆ 35 ಸೋಂಕಿತರು ಶಾಂಡಾಂಗ್‌ ಹಾಗೂ ಹೆನಾನ್‌ ಪ್ರಾಂತ್ಯದಲ್ಲಿ ಪತ್ತೆಯಾಗಿದ್ದಾರೆ. ಇವರಲ್ಲಿ 26 ಮಂದಿಯಲ್ಲಿ ‘ಲಂಗ್ಯಾ ಹನಿಪಾವೈರಸ್‌’ ಹಾಗೂ ಇತರರಲ್ಲಿ ಅನ್ಯ ಹನಿಪಾವೈರಸ್‌ಗಳು ದೃಢಪಟ್ಟಿವೆ.

ಲಂಗ್ಯಾ ವೈರಸ್‌ ಲಕ್ಷಣಗಳೇನು?

- ಜ್ವರ, ಸುಸ್ತು, ಕೆಮ್ಮು, ವಾಕರಿಕೆ, ವಾಂತಿ, ತಲೆನೋವು ಇದರ ಮುಖ್ಯ ಲಕ್ಷಣಗಳು
- ಶೇ.35 ಸೋಂಕಿತರ ಶ್ವಾಸಕೋಶಕ್ಕೆ ಸೋಂಕು, ಶೇ.8 ಸೋಂಕಿತರ ಮೂತ್ರಪಿಂಡಕ್ಕೆ ಸೋಂಕು ಬಾಧೆ
- ಬಿಳಿ ರಕ್ತ ಕಣದಲ್ಲಿ ಕುಸಿತ; ಇದರಿಂದ ರೋಗನಿರೋಧಕ ಶಕ್ತಿ ಕುಂಠಿತ

ಚೀನಾದಲ್ಲಿ ಲಾಕ್‌ಡೌನ್‌ನಿಂದ 80 ಸಾವಿರ ಪ್ರವಾಸಿಗರಿಗೆ ದಿಗ್ಬಂಧನ, ಭಾರತದಲ್ಲಿ ಕೋವಿಡ್ 4ನೇ ಅಲೆ ಭೀತಿ!

ಲಂಗ್ಯಾ ವೈರಸ್‌ ಮೂಲವೇನು?

ಲಂಗ್ಯಾ ಹೆನಿಪಾವೈರಸ್‌ ಮೂಲವೆಂದರೆ ‘ಪ್ರಾಣಿಗಳು’ ಎಂದು ಅಧ್ಯಯನ ಹೇಳಿದೆ. ಈ ಬಗ್ಗೆ ಕಾಡುಪ್ರಾಣಿಗಳು ಹಾಗೂ ಸಾಕು ಪ್ರಾಣಿಗಳ ಸೀರೋ ಸರ್ವೇ ನಡೆಸಿದಾಗ ಮೂಗಿಲಿಗಳಲ್ಲಿ ಹಾಗೂ ಸಾಕು ಪ್ರಾಣಿಗಳಾದ ನಾಯಿ ಹಾಗೂ ಮೇಕೆಗಳಲ್ಲಿ ಲಂಗ್ಯಾ ಹೆನಿಪಾವೈರಸ್‌ ಪತ್ತೆಯಾಗಿದೆ.

ಮಾನವರಿಂದ ಮಾನವರಿಗೆ ಹರಡುತ್ತದೆಯೇ?

ಪ್ರಾಣಿಗಳಿಂದ ಮಾನವರಿಗೆ ಇದು ಹರಡುವುದು ಕಂಡುಬಂದಿದೆಯಾದರೂ ಮಾನವರಿಂದ ಮಾನವರಿಗೆ ಇದು ಹರಡುತ್ತದೆಯೇ ಎಂಬುದು ದೃಢಪಟ್ಟಿಲ್ಲ. 35 ಸೋಂಕಿತರನ್ನೂ ಪರೀಕ್ಷಿಸಿದಾಗ ಮಾನವರಿಂದ ಮಾನವರಿಗೆ ಹರಡಿರುವುದು ಕಂಡುಬಂದಿಲ್ಲ. ಆದರೆ ‘35 ಸ್ಯಾಂಪಲ್‌ ಆಧಾರದಲ್ಲಿ ಏನೂ ಹೇಳಲಾಗದು. ಇನ್ನಷ್ಟುಅಧ್ಯಯನ ಅಗತ್ಯ’ ಎನ್ನುತ್ತಾರೆ ತಜ್ಞರು.
 

click me!