2030 ರ ಫಿಫಾ ವಿಶ್ವಕಪ್‌ಗೆ ಮುನ್ನ ಮೊರಾಕೊದಲ್ಲಿ 30 ಲಕ್ಷ ಬೀದಿ ನಾಯಿಗಳನ್ನು ಕೊಲ್ಲುವ ಯೋಜನೆ ವಿರುದ್ಧ ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕ್ರಮವನ್ನು 'ಭಯಾನಕ ಅನಾಗರಿಕ ಕೃತ್ಯ' ಎಂದು ಕರೆದಿರುವ ಪ್ರಾಣಿ ಹಕ್ಕುಗಳ ವಕೀಲೆ ಜೇನ್ ಗುಡಾಲ್, ಫಿಫಾ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ.
2030 ರ ಫಿಫಾ ವಿಶ್ವಕಪ್‌ಗೆ ಮುನ್ನ ತನ್ನ ನಗರಗಳನ್ನು ಸ್ವಚ್ಛಗೊಳಿಸುವ ಭಾಗವಾಗಿ ಮೊರಾಕೊ ದೇಶವೂ ಮೂರು ಮಿಲಿಯನ್(30 ಲಕ್ಷ) ಬೀದಿ ನಾಯಿಗಳನ್ನು ಕೊಲ್ಲಲು ಪ್ಲಾನ್ ಮಾಡಿದೆ ಎಂದು ವರದಿಯಾಗಿದೆ. ಈ ವಿಚಾರವೂ ಈಗ ವಿಶ್ವಾದ್ಯಂತ ಪ್ರಾಣಿಪ್ರಿಯರು ಹಾಗೂ ಪ್ರಾಣಿಗಳ ಹಕ್ಕುಗಳ ಕಾರ್ಯಕರ್ತರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಆ ದೇಶದಲ್ಲಿ ಈಗಾಗಲೇ ಸಾವಿರಾರು ಬೀದಿಬದಿಯ ಪ್ರಾಣಿಗಳನ್ನು ಕೊಲ್ಲಲಾಗಿದೆ ಎಂದು ಪ್ರಾಣಿಪ್ರಿಯರು ಆರೋಪಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಖ್ಯಾತ ಸಂರಕ್ಷಣಾವಾದಿ (conservationist) ಮತ್ತು ಪ್ರಾಣಿ ಹಕ್ಕುಗಳ ವಕೀಲೆ ಜೇನ್ ಗುಡಾಲ್ (Jane Goodall) ಫಿಫಾದ ಪ್ರಧಾನ ಕಾರ್ಯದರ್ಶಿ ಮ್ಯಾಟಿಯಾಸ್ ಗ್ರಾಫ್‌ಸ್ಟ್ರೋಮ್‌ಗೆ (Mattias Grafstrom) ಪತ್ರ ಬರೆದಿದ್ದಾರೆ. ತಾನು 'ಭಯಾನಕ ಅನಾಗರಿಕ ಕೃತ್ಯ' ಎಂದು ಕರೆದದ್ದನ್ನು ಫಿಫಾ ನಿರ್ಲಕ್ಷಿಸಿದೆ ಎಂದು ಜೇನ್ ಗುಡಾಲ್ ಆರೋಪಿಸಿದ್ದಾರೆ. ಮೊರಾಕೊದ ನಾಯಿ ಹತ್ಯೆಯನ್ನು ಫಿಫಾ ನಿರ್ಲಕ್ಷಿಸಿದೆ. ಈ ಕೃತ್ಯಗಳನ್ನು ದಾಖಲಿಸುವ ವಿವರವಾದ ದಾಖಲೆಗಳ ಬಗ್ಗೆ ಅಂತರರಾಷ್ಟ್ರೀಯ ಪ್ರಾಣಿ ಒಕ್ಕೂಟದಿಂದ ತಿಳಿದು ಆಘಾತಕ್ಕೊಳಗಾಗಿದ್ದೇನೆ ಎಂದು ಗುಡಾಲ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಈ ಕ್ರೌರ್ಯದ ಬಗ್ಗೆ ತಿಳಿದಾಗ ಫುಟ್ಬಾಲ್ ಅಭಿಮಾನಿಗಳು ಅವರಲ್ಲಿ ಕೆಲವರು ಪ್ರಾಣಿ ಪ್ರಿಯರು ಆಗಿದ್ದು, ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಜೇನ್ ಗುಡಾಲ್ ಪ್ರಶ್ನಿಸಿದ್ದಾರೆ. ಈ ವಿಚಾರದ ಬಗ್ಗೆ ಕ್ರಮ ಕೈಗೊಳ್ಳಲು ವಿಫಲವಾದರೆ ಫಿಫಾ ಪರಿಶೀಲನೆಗೆ ಒಳಗಾಗಬಹುದು ಮತ್ತು ಅದರ ಖ್ಯಾತಿಗೆ ಹಾನಿಯಾಗಬಹುದು ಎಂದು ಅವರು ಎಚ್ಚರಿಸಿದರು.
ಬೀದಿ ನಾಯಿಗಳನ್ನು ನಿಯಂತ್ರಿಸಲು ಹಲವು ಮಾನವೀಯ ಪರ್ಯಾಯ ವಿಧಾನಗಳಿವೆ
ಈ ವಿಚಾರವೂ ಫಿಫಾವನ್ನು ಮತ್ತೊಮ್ಮೆ ಬೆಳಕಿಗೆ ತರುತ್ತದೆ. ಇತ್ತೀಚಿನ ಹಗರಣಗಳ ನಂತರ ನೀವು ಫಿಫಾದ ಖ್ಯಾತಿಯನ್ನು ಪುನಃಸ್ಥಾಪಿಸಲು ಶ್ರಮಿಸುತ್ತಿದ್ದೀರಿ ಎಂದು ನನಗೆ ತಿಳಿದಿದೆ. ಆದರೂ, ನೀವು ಕ್ರಮ ಕೈಗೊಳ್ಳಲು ವಿಫಲವಾದರೆ, ಫಿಫಾ ನಿಮ್ಮ ಕಣ್ಗಾವಲಿನಲ್ಲಿ ಭಯಾನಕ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಕುಖ್ಯಾತಿಯಾಗುತ್ತದೆ. ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಹಲವು ಮಾನವೀಯ ಪರ್ಯಾಯ ವಿಧಾನಗಳಿವೆ ಮತ್ತು ಅಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಮೊರೊಕನ್ ಅಧಿಕಾರಿಗಳಿಗೆ ಸಹಾಯ ಮಾಡಲು ಸಂತೋಷಪಡುವ ಹಲವಾರು ಪ್ರತಿಷ್ಠಿತ ಅಂತರರಾಷ್ಟ್ರೀಯ ಸಂಸ್ಥೆಗಳು ಇವೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಪ್ರಾಣಿ ಒಕ್ಕೂಟವು ಅಭಿಯಾನ ಆರಂಭಿಸಿದ್ದು ಈ ವಿಚಾರವನ್ನು 'ಮೊರಾಕೊದ ಕೊಳಕು ರಹಸ್ಯ' ಎಂದು ಕರೆದಿದೆ ಎಂದು ಡೈಲಿಮೇಲ್ ವರದಿ ಮಾಡಿದೆ. ನಾಯಿಗಳನ್ನು ಕೊಲ್ಲುವುದಕ್ಕಾಗಿ ಬೀದಿಗಳಲ್ಲಿ ಗಸ್ತು ತಿರುಗುತ್ತಿರುವ ಬಂದೂಕುಧಾರಿಗಳು ನಾಯಿಗಳಿಗೆ ಸ್ಟ್ರೈಕ್ನೈನ್ ವಿಷ ಹಾಕಿ ಗುಂಡು ಹಾರಿಸುತ್ತಾರೆ ಎಂದು ಪ್ರಾಣಿ ಒಕ್ಕೂಟ ಆರೋಪಿಸಿದೆ.
ಹಾಗೆಯೇ ವರದಿಯಾದ ಇತರ ವಿಧಾನಗಳ ಪ್ರಕಾರ ನಾಯಿಗಳನ್ನು ಕ್ಲ್ಯಾಂಪಿಂಗ್ ಸಾಧನಗಳೊಂದಿಗೆ ಬಲೆಗೆ ಬೀಳಿಸಿ ಅಮಾನವೀಯವಾಗಿ ಎಳೆದೊಯ್ದು ಮತ್ತು ಅವುಗಳನ್ನು ಅಮಾನವೀಯವಾಗಿ ಕೊಲ್ಲುವ ಸ್ಥಳಗಳಿಗೆ ಸಾಗಿಸಲಾಗುತ್ತದೆ. ಆಗಸ್ಟ್ 2024 ರಲ್ಲಿ, ಮೊರೊಕನ್ ಅಧಿಕಾರಿಗಳು ಈ ಕ್ರಮವನ್ನು ನಿಲ್ಲಿಸಲಾಗಿದೆ ಎಂದು ಹೇಳಿಕೊಂಡಿದ್ದರು. ಆದರೆ 2023 ರಲ್ಲಿ ಫಿಫಾ ಘೋಷಣೆಯ ನಂತರ ಹತ್ಯೆಗಳು ಹೆಚ್ಚಾಗಿದೆ ಎಂದು ಒಕ್ಕೂಟ ಆರೋಪಿಸಿದೆ. ಆದರೆ ಪ್ರಾಣಿಗಳ ಹತ್ಯೆಯನ್ನು ತಡೆಯಲು ತಕ್ಷಣ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಕು ಎಂದು ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ. ಫುಟ್‌ಬಾಲ್ ಹೆಸರಿನಲ್ಲಿ ನಡೆಸಲಾಗುತ್ತಿರುವ ಕ್ರೌರ್ಯಕ್ಕೆ ಯಾವುದೇ ಕ್ಷಮೆ ಇಲ್ಲ ಎಂದು ಜೇನ್ ಗುಡಾಲ್ ಹೇಳಿದ್ದಾರೆ.