ಟ್ರಂಪ್ ತಲೆಗೆ ಇರಾನ್ 576 ಕೋಟಿ ರೂ. ಸುಪಾರಿ!| ಸುಲೈಮಾನಿ ಹತ್ಯೆ ಮಾಡಿದ್ದಕ್ಕೆ ಪ್ರತೀಕಾರದ ಹೇಳಿಕೆ| ಟ್ರಂಪ್ ಹಂತಕರಿಗೆ ಹಣ: ಇರಾನ್ ಸರ್ಕಾರಿ ಚಾನಲ್
ಟೆಹ್ರಾನ್[ಜ.07]: ತನ್ನ ಸೇನೆಯ ಪ್ರಮುಖ ಕಮಾಂಡರ್ ಆಗಿದ್ದ ಖಾಸಿಂ ಸುಲೈಮಾನಿಯನ್ನು ಕೊಲ್ಲಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಲೆಗೆ ಇರಾನ್ ಬರೋಬ್ಬರಿ 576 ಕೋಟಿ ರು. ಬಹುಮಾನ ಘೋಷಿಸಿದೆ. ಟ್ರಂಪ್ ಅವರನ್ನು ಯಾರೇ ಹತ್ಯೆ ಮಾಡಿದರೂ ಈ ಹಣ ನೀಡುವುದಾಗಿ ಪ್ರಕಟಿಸಿದೆ.
ಸುಲೈಮಾನಿ ಅವರ ಅಂತಿಮ ಯಾತ್ರೆ ಸಂದರ್ಭದಲ್ಲಿ ಇರಾನ್‌ನ ಸರ್ಕಾರಿ ಸ್ವಾಮ್ಯದ ಚಾನಲ್‌ನಲ್ಲಿ ಈ ಕುರಿತು ಪ್ರಕಟಣೆ ಹೊರಡಿಸಲಾಗಿದೆ. ಇರಾನ್‌ನಲ್ಲಿ 8 ಕೋಟಿ ನಾಗರಿಕರಿದ್ದಾರೆ. ಪ್ರತಿ ವ್ಯಕ್ತಿಯ ಹೆಸರಿನಲ್ಲಿ 1 ಅಮೆರಿಕನ್ ಡಾಲರ್ (72 ರು.) ತೆಗೆದಿರಿಸಲಾಗುತ್ತದೆ. ಸಂಗ್ರಹವಾಗುವ ಒಟ್ಟಾರೆ 8 ಕೋಟಿ ಡಾಲರ್ (576 ಕೋಟಿ ರು.) ಹಣವನ್ನು ಟ್ರಂಪ್‌ರನ್ನು ಹತ್ಯೆ ಮಾಡಿದವರಿಗೆ ನೀಡಲಾಗುತ್ತದೆ ಎಂದು ಇರಾನ್ ಪ್ರಕಟಿಸಿದೆ ಎಂದು ಬ್ರಿಟನ್‌ನ ಮಾಧ್ಯಮವೊಂದು ವರದಿ ಮಾಡಿದೆ.
ಸುಲೈಮಾನಿ ಅಂತ್ಯಸಂಸ್ಕಾರ:
ಇರಾಕ್‌ನಲ್ಲಿ ಶುಕ್ರವಾರ ಅಮೆರಿಕ ನಡೆಸಿದ ಡ್ರೋನ್ ದಾಳಿಗೆ ಬಲಿಯಾದ ಖಾಸಿಂ ಸುಲೈಮಾನಿ ಅವರ ಮೃತದೇಹ ಸೋಮವಾರ ಇರಾನ್ ರಾಜಧಾನಿ ಟೆಹ್ರಾನ್‌ಗೆ ಆಗಮಿಸಿದೆ. ಈ ವೇಳೆ ಕಿಕ್ಕಿರಿದು ಸೇರಿದ್ದ ಅಸಂಖ್ಯ ಇರಾನ್ ಪ್ರಜೆಗಳು ಅಮೆರಿಕ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಲೈಮಾನಿ ಸಾವಿಗೆ ಕಂಬನಿ ಮಿಡಿದಿದ್ದಾರೆ. ಈ ವೇಳೆ ಇರಾನ್ ಪರಮೋಚ್ಛ ಧಾರ್ಮಿಕ ನಾಯಕ ಆಯತೊಲ್ಲಾ ಅಲಿ ಖೊಮೇನಿ, ಅಗಲಿದ ನಾಯಕನ ನೆನೆದು ಕಣ್ಣೀರಿಟ್ಟಘಟನೆಯೂ ನಡೆಯಿತು. ಬಳಿಕ ಲಕ್ಷಾಂತರ ಜನರ ಸಮ್ಮುಖದಲ್ಲಿ ಸುಲೈಮಾನಿ ಅಂತ್ಯಸಂಸ್ಕಾರ ನಡೆಸಲಾಯಿತು.
ದಾಳಿ ಮಾಡಿದರೆ ಕಠಿಣ ತಿರುಗೇಟು: ಟ್ರಂಪ್
ವಾಷಿಂಗ್ಟನ್: ಇರಾನ್ ಏನಾದರೂ ಅಮೆರಿಕ ಮೇಲೆ ದಾಳಿ ನಡೆಸಿದರೆ ಬೃಹತ್ ತಿರುಗೇಟು ಕೊಡಬೇಕಾಗುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ಇರಾನ್ ಸಾಂಸ್ಕೃತಿಕ ತಾಣಗಳ ಮೇಲೂ ದಾಳಿ ನಡೆಸುವ ಸುಳಿವನ್ನು ಅವರು ಕೊಟ್ಟಿದ್ದಾರೆ.