ಲಸಿಕೆ ಪಡೆದಿದ್ದರೂ ಲಸಿಕೆ ಪಡೆದಿಲ್ಲವೆಂದೇ ಪರಿಗಣನೆ
ಬ್ರಿಟನ್ ಸರ್ಕಾರದ ಹೊಸ ನಿಯಮ
ಇದು ಜನಾಂಗೀಯ ನಿಂದನೆ: ಜೈರಾಂ, ತರೂರ್ ಖಂಡನೆ
ನವದೆಹಲಿ(ಸೆ.21): ಭಾರತೀಯರು 2 ಡೋಸ್ ಕೋವಿಡ್ ಲಸಿಕೆ ಪಡೆದು ಬ್ರಿಟನ್ನಿಗೆ ಪ್ರಯಾಣಿಸಿದರೂ ಅವರನ್ನು ಲಸಿಕೆ ಪಡೆದಿಲ್ಲದವರು ಎಂದು ಪರಿಗಣಿಸುವ ನಿಯಮವನ್ನು ಬ್ರಿಟನ್ ಜಾರಿಗೊಳಿಸಿದೆ. ಹೀಗಾಗಿ ಭಾರತದಿಂದ ಲಸಿಕೆ ಪಡೆದು ಹೋದವರೂ ಬ್ರಿಟನ್‌ನಲ್ಲಿ 10 ದಿನ ಕಡ್ಡಾಯವಾಗಿ ಕ್ವಾರಂಟೈನ್ ಆಗಬೇಕಾಗುತ್ತದೆ.
ಬ್ರಿಟನ್‌ನ ಆಕ್ಸ್‌ಫರ್ಡ್-ಆಸ್ಟ್ರಾಜೆನೆಕಾ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ತೆಗೆದುಕೊಂಡಿದ್ದರೂ ಅಂತಹ ಭಾರತೀಯರನ್ನು ಲಸಿಕೆ ಪಡೆದಿಲ್ಲದವರು ಎಂದು ಪರಿಗಣಿಸುವ ಬ್ರಿಟಿಷ್ ಸರ್ಕಾರದ ನಿಯಮ ವ್ಯಾಪಕ ಟೀಕೆಗೆ ಗುರಿಯಾಗಿದೆ. ಕಾಂಗ್ರೆಸ್‌ನ ಮಾಜಿ ಕೇಂದ್ರ ಸಚಿವರಾದ ಜೈರಾಂ ರಮೇಶ್ ಹಾಗೂ ಶಶಿ ತರೂರ್ ಅವರು ಇದು ಅಪ್ಪಟ ಜನಾಂಗೀಯ ತಾರತಮ್ಯ ಎಂದು ಕಿಡಿಕಾರಿದ್ದಾರೆ.
ಭಾರತ ಕೆಂಪು ಪಟ್ಟಿಗೆ ಸೇರ್ಪಡೆ:
ಸದ್ಯ ಬ್ರಿಟನ್‌ನಲ್ಲಿ ಹಳದಿ, ಹಸಿರು ಹಾಗೂ ಕೆಂಪು ದೇಶಗಳು ಎಂದು ವಿದೇಶಗಳನ್ನು ಕೋವಿಡ್ ಸುರಕ್ಷತೆಯ ದೃಷ್ಟಿಯಿಂದ ಪಟ್ಟಿಮಾಡಲಾಗಿದೆ. ಅದರಲ್ಲಿ ಹಳದಿ ಪಟ್ಟಿಯಲ್ಲಿ ಭಾರತವಿದೆ. ಈಗ ಅ.4ರಿಂದ ಅನ್ವಯವಾಗುವಂತೆ ಹೊಸ ನಿಯಮ ಜಾರಿಗೊಳಿಸಲಾಗಿದ್ದು, ಅದರಲ್ಲಿ ಹಳದಿ, ಹಸಿರು ಪಟ್ಟಿರದ್ದುಪಡಿಸಿ, ಎಲ್ಲಾ ದೇಶಗಳನ್ನೂ ಕೆಂಪು ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ವಿದೇಶಿಗರು ಬ್ರಿಟನ್ನಿಗೆ ಆಗಮಿಸುವುದಕ್ಕೆ ಬಿಗಿ ಕೋವಿಡ್ ನಿಯಮಗಳನ್ನು ವಿಧಿಸಲಾಗಿದೆ. ಆದರೆ ಕೆಲ ದೇಶಗಳಿಗೆ ಈ ನಿಯಮಗಳಿಂದ ರಿಯಾಯ್ತಿ ನೀಡಲಾಗಿದೆ. ಭಾರತ, ಆಫ್ರಿಕಾ, ದಕ್ಷಿಣ ಆಫ್ರಿಕಾ, ಯುಎಇ, ಟರ್ಕಿ, ಜೋರ್ಡನ್, ಥಾಯ್ಲೆಂಡ್, ರಷ್ಯಾ ಮುಂತಾದ ದೇಶಗಳಿಗೆ ಯಾವುದೇ ವಿನಾಯ್ತಿ ನೀಡಿಲ್ಲ. ಹೀಗಾಗಿ ಈ ದೇಶದ ಜನರು 2 ಡೋಸ್ ಲಸಿಕೆ ಪಡೆದು ಬ್ರಿಟನ್ನಿಗೆ ತೆರಳಿದರೂ ಅವರನ್ನು 10 ದಿನ ಕ್ವಾರಂಟೈನ್ ಮಾಡಲಾಗುತ್ತದೆ.
ಏನೇನು ನಿಯಮ ಪಾಲಿಸಬೇಕು?:
ಭಾರತೀಯರು ಬ್ರಿಟನ್ನಿಗೆ ಹೋಗುವುದಕ್ಕಿಂತ 3 ದಿನದ ಮುಂಚೆ ಕೋವಿಡ್ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ಬಂದಿರಬೇಕು. ನಂತರ ಬ್ರಿಟನ್ನಿಗೆ ತೆರಳಿದ 2 ದಿನದೊಳಗೆ ಹಾಗೂ 8 ದಿನದ ನಂತರ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಮೊದಲೇ ಹಣ ಪಾವತಿಸಬೇಕು. ಪ್ಯಾಸೆಂಜರ್ ಲೊಕೇಟರ್ ಫಾಮ್‌ರ್ ಭರ್ತಿ ಮಾಡಬೇಕು. ಬ್ರಿಟನ್ನಿಗೆ ತೆರಳಿದ ನಂತರ ಸ್ವಂತ ಜಾಗದಲ್ಲಿ 10 ದಿನ ಕ್ವಾರಂಟೈನ್‌ಗೆ ಒಳಗಾಗಬೇಕು. ದೇಶ ಪ್ರವೇಶಿಸಿದ 2 ದಿನದೊಳಗೆ ಹಾಗೂ 8 ದಿನದ ನಂತರ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಬ್ರಿಟನ್‌ನ ಕೆಂಪು ಪಟ್ಟಿಯಿಂದ ರಿಯಾಯ್ತಿ ಪಡೆದಿರುವ ದೇಶದಿಂದ 2 ಡೋಸ್ ಲಸಿಕೆ ಪಡೆದು ವಿದೇಶಿಗರು ಬ್ರಿಟನ್ನಿಗೆ ಹೋದರೆ ಅವರಿಗೆ 10 ದಿನದ ಕ್ವಾರಂಟೈನ್‌ನಿಂದ ವಿನಾಯ್ತಿಯಿದೆ. ಇನ್ನುಳಿದ ಎಲ್ಲಾ ನಿಯಮಗಳನ್ನು ಅವರೂ ಪಾಲಿಸಬೇಕು.
ಭಾರತದಲ್ಲಿ ನೀಡುತ್ತಿರುವ ಕೋವ್ಯಾಕ್ಸಿನ್ ಲಸಿಕೆಗೆ ಇನ್ನೂ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆ ದೊರೆತಿಲ್ಲ. ಹೀಗಾಗಿ ಈ ಲಸಿಕೆಯನ್ನು ಬಹುತೇಕ ದೇಶಗಳು ಒಪ್ಪಿಕೊಳ್ಳುತ್ತಿಲ್ಲ. ಆದರೆ ಕೋವಿಶೀಲ್ಡ್ ಲಸಿಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆಯಿದ್ದರೂ ಬ್ರಿಟನ್ ಮಾನ್ಯತೆ ನೀಡದಿರುವುದು ಅಚ್ಚರಿ ಮೂಡಿಸಿದೆ.