5 ದಿನದಲ್ಲಿ 5 ಸಾವಿರ ಒಂಟೆಗಳ ವಧೆ!

By Suvarna NewsFirst Published Jan 15, 2020, 9:54 AM IST
Highlights

ಬರಪೀಡಿತ ಆಸ್ಪ್ರೇಲಿಯಾ 5 ಸಾವಿರ ಒಂಟೆಗಳ ವಧೆ| ಹೆಲಿಕಾಪ್ಟರ್‌ ಮೂಲಕ ಸ್ನೈಪರ್‌ಗನ್‌ ಬಳಸಿ ಹತ್ಯೆ| ಬರದಿಂದ ದೇಶ ತತ್ತರಿಸಿರುವಾಗ ಒಂಟೆಗಳ ಹಾವಳಿ ತೀವ್ರ| ಭಾರೀ ಪ್ರಮಾಣದ ನೀರು ಸೇವಿಸಿ ಜನರಿಗೆ ನೀರಿಲ್ಲದಂತೆ ಮಾಡುತ್ತಿದ್ದ ಒಂಟೆಗಳು| ಅಪಾರ ಪ್ರಮಾಣದ ಬೆಳೆ ಹಾನಿಯನ್ನೂ ಮಾಡುತ್ತಿದ್ದವು| ಅದಕ್ಕೆಂದೇ 5 ದಿನಗಳ ಕಾರ್ಯಾಚರಣೆಯಲ್ಲಿ 5000 ಒಂಟೆಗಳ ವಧೆ

ಸಿಡ್ನಿ[ಜ.15]: ಇತ್ತೀಚೆಗೆ ಕಾಡ್ಗಿಚ್ಚಿಗೆ ಗುರಿಯಾಗಿದ್ದ ಬರಪೀಡಿತ ಆಸ್ಪ್ರೇಲಿಯಾದಲ್ಲಿ ಕಳೆದ 5 ದಿನಗಳಲ್ಲಿ 5 ಸಾವಿರ ಒಂಟೆಗಳನ್ನು ವಧಿಸಲಾಗಿದೆ. ದಕ್ಷಿಣ ಆಸ್ಪ್ರೇಲಿಯಾ ಒಂದರಲ್ಲೇ ಇಷ್ಟೊಂದು ಹತ್ಯೆಗಳು ನಡೆದಿವೆ.

‘ಭಾರೀ ಕ್ಷಾಮಕ್ಕೆ ತುತ್ತಾಗಿರುವ ಪ್ರದೇಶಗಳಲ್ಲಿ ಒಂಟೆಗಳು ಜಲಮೂಲಗಳ ಮೇಲೆ ದಾಳಿ ಮಾಡಿ ಯಥೇಚ್ಛವಾಗಿ ನೀರು ಕುಡಿಯುವುದರ ಜತೆಗೆ, ಬೆಳೆಗಳನ್ನು ಹಾನಿ ಮಾಡಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡುತ್ತಿವೆ. ಸತ್ತು ಬಿದ್ದ ಒಂಟೆಗಳು ಜಲಮೂಲಗಳನ್ನು ಕಲುಷಿತಗೊಳಿಸುತ್ತಿವೆ. ಇವು ಈಗಾಗಲೇ ಅನಾವೃಷ್ಟಿಯಿಂದ ಸಂಕಷ್ಟಕ್ಕೆ ಸಿಕ್ಕಿರುವ ಜನಸಮುದಾಯದ ಸಂಕಷ್ಟತೀವ್ರಗೊಳಿಸಿವೆ’ ಎಂದು ಸರ್ಕಾರವೇ ಒಂಟೆಗಳನ್ನು ಕೊಲ್ಲಲು ಆದೇಶಿಸಿತ್ತು. ಅಲ್ಲದೆ, ಈ ಒಂಟೆಗಳು ಆಹಾರ ಹಾಗೂ ನೀರು ಅರಸಿ ಊರುಗಳತ್ತ ನುಗ್ಗುತ್ತಿದ್ದು, ಇದು ಬುಡಕಟ್ಟು ಗ್ರಾಮೀಣ ಜನರಿಗೆ ಅಪಾಯ ಸೃಷ್ಟಿಸಿತ್ತು ಎಂದು ಸ್ಥಳೀಯ ಮುಖಂಡರು ಹೇಳಿದ್ದಾರೆ.

‘ಎಪಿವೈ ಲ್ಯಾಂಡ್ಸ್‌’ ಎಂಬ 2,300 ಮೂಲನಿವಾಸಿಗಳು ಇರುವ ಪ್ರದೇಶದಲ್ಲಿ ಒಂಟೆಗಳ ವಧೆ ನಡೆದಿದ್ದು, ಭಾನುವಾರ ಕಾರಾರ‍ಯಚರಣೆ ಅಂತ್ಯಗೊಂಡಿದೆ. ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಸ್ನೈಪರ್‌ಗನ್‌ ಮೂಲಕ ಒಂಟೆಗಳಿಗೆ ಶೂಟ್‌ ಮಾಡಲಾಗಿದೆ.

ಹತ್ಯೆಗೆ ಸಮರ್ಥನೆ:

ಪ್ರಾಣಿಪ್ರೇಮಿಗಳ ವಿರೋಧದ ನಡುವೆಯೂ ಒಂಟೆ ವಧೆ ನಡೆದಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಎಪಿವೈ ಲ್ಯಾಂಡ್‌ನ ಜನರಲ್‌ ಮ್ಯಾನೇಜರ್‌ ರಿಚರ್ಡ್‌ ಕಿಂಗ್‌, ‘ಪ್ರಾಣಿ ಹಕ್ಕು ಕಾರ್ಯಕರ್ತರ ಕಳವಳದ ನಾವು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಆದರೆ ಒಂಟೆಗಳ ಹತ್ಯೆ ಅನುವಾರ್ಯವಾಗಿತ್ತು. ಏಕೆಂದರೆ ಇದು ಭೂಮಿಯ ಅತ್ಯಂತ ಬರಪೀಡಿತ ಪ್ರದೇಶವಾಗಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

5 ದಿನದೊಳಗೆ 10 ಸಾವಿರ ಒಂಟೆ ಕೊಲ್ಲಲು ಆದೇಶ: ಕಾರಣ ಹೀಗಿದೆ!

‘ಈ ಒಂಟೆಗಳ ಮೂಲ ಆಸ್ಪ್ರೇಲಿಯಾ ಅಲ್ಲ. ದುರ್ಬಲವಾಗಿರುವ ಒಂಟೆಗಳು ಜಲಮೂಲಗಳಲ್ಲಿ ಸಿಕ್ಕಿಹಾಕಿಕೊಂಡು ಸಾಯುತ್ತಿದ್ದವು. ಹೀಗಾಗಿ ಇಲ್ಲಿನ ಜನರಿಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ಅಗತ್ಯವಾದ ಜಲಮೂಲಗಳು ಮಲಿನವಾಗುತ್ತಿದ್ದವು. ಆದ್ದರಿಂದ ಇಲ್ಲಿನ ಜಲಮೂಲಗಳು, ಜನರು ಹಾಗೂ ಪರಿಸರ ರಕ್ಷಣೆ ಉದ್ದೇಶದಿಂದ ಒಂಟೆಗಳ ಸಮಸ್ಯೆ ತಡೆಯಲು ಇದು ಅನಿವಾರ್ಯವಾಗಿತ್ತು’ ಎಂದು ಅವರು ಹೇಳಿದ್ದಾರೆ.

ಭಾರತದಿಂದ 20 ಸಾವಿರ ಒಂಟೆ:

1840ರಲ್ಲಿ ಮೊದಲ ಬಾರಿಗೆ ಅಸ್ಪ್ರೇಲಿಯಾಕ್ಕೆ ಒಂಟೆಗಳನ್ನು ತರಲಾಗಿತ್ತು. ನಂತರದ 6 ದಶಕಗಳಲ್ಲಿ ಭಾರತದಿಂದಲೇ 20000ಕ್ಕೂ ಹೆಚ್ಚು ಒಂಟೆಗಳನ್ನು ಆಸ್ಪ್ರೇಲಿಯಾ ಸರ್ಕಾರ ತರಿಸಿಕೊಂಡಿತ್ತು. ಪ್ರಸಕ್ತ ದೇಶದಲ್ಲಿ ಸುಮಾರು 10 ಲಕ್ಷ ಕಾಡು ಒಂಟೆಗಳಿವೆ ಎಂಬ ಅಂದಾಜಿದೆ.

ಆಸ್ಪ್ರೇಲಿಯಾದಲ್ಲಿ ಪ್ರಾಣಿಗಳ ಹತ್ಯೆ ಹೊಸದೇನಲ್ಲ. ಅಲ್ಲಿ ಕಾಂಗರೂಗಳ ಹಾವಳಿ ಎಷ್ಟಿದೆಯೆಂದರೆ, ಪ್ರತಿ ವರ್ಷ ಸರ್ಕಾರವೇ ಲಕ್ಷಾಂತರ ಸಂಖ್ಯೆಯಲ್ಲಿ ಕಾಂಗರೂಗಳನ್ನು ಹತ್ಯೆ ಮಾಡುತ್ತದೆ.

click me!