ಇಸ್ರೇಲ್ ವಾಯುದಾಳಿಯಲ್ಲಿ ಹೆಜ್ಬುಲ್ಲಾ ನಾಯಕ ನಸ್ರಲ್ಲಾ ಹತ್ಯೆ?

By Anusha KbFirst Published Sep 28, 2024, 4:49 PM IST
Highlights

ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹಾಗೂ ಆತನ ಪುತ್ರಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಬೈರುತ್‌ನಲ್ಲಿರುವ ಹೆಜ್ಬುಲ್ಲಾ ಕೇಂದ್ರ ಕಚೇರಿಯ ಮೇಲೆ ನಡೆಸಿದ ದಾಳಿಯಲ್ಲಿ ನಸ್ರಲ್ಲಾ ಸೇರಿದಂತೆ ಹಲವರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿದೆ.

ಇಸ್ರೇಲ್ ಡಿಫೆನ್ಸ್ ಪೋರ್ಸ್ ಬೈರುತ್ ಮೇಲೆ ನಡೆಸಿದ ದಾಳಿಯಲ್ಲಿ ಲೆಬನಾನ್‌ ಹೆಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾ ಹಾಗೂ ಆತನ ಪುತ್ರಿಯೂ ಹತ್ಯೆಯಾಗಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಕಳೆದ 32 ವರ್ಷಗಳಿಂದಲೂ ಹಸನ್ ನಸ್ರುಲ್ಲಾ ಹೆಜ್ಬುಲ್ಲಾದ ಮುಖ್ಯಸ್ಥರಾಗಿದ್ದರು. ಆದರೆ ಐಡಿಎಫ್‌, ಬೈರುತ್‌ನಲ್ಲಿರುವ ಇರಾನ್ ಬೆಂಬಲಿತ ಸಂಘಟನೆಯ ಕೇಂದ್ರ ಪ್ರಧಾನ ಕಚೇರಿಯ ಮೇಲೆ ನಡೆಸಿದ ಏರ್‌ಸ್ಟ್ರೈಕ್‌ನಲ್ಲಿ ಅವರು ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್‌ ಹೇಳಿದೆ. ಇಸ್ರೇಲಿ ಏರ್ ಫೋರ್ಸ್‌ನ ಫೈಟರ್ ಜೆಟ್‌ಗಳು  ಬೈರೂತ್‌ನಲ್ಲಿರುವ ಹಿಜ್ಬುಲ್ಲಾದ ಕೇಂದ್ರ ಮುಖ್ಯ ಕಚೇರಿ ಮೇಲೆ ಸರಣಿ ದಾಳಿ ನಡೆಸಿದ್ದರು. ಈ ಕೇಂದ್ರ ಮುಖ್ಯ ಕಚೇರಿಯೂ ದಾಹಿಹ್ ಪ್ರದೇಶದಲ್ಲಿ ವಸತಿ ಕಟ್ಟಡದ ಕೆಳಭಾಗದಲ್ಲಿ ನೆಲೆಯಾಗಿತ್ತು. ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೊದಲು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈ ವಾಯುದಾಳಿ ನಡೆಸಲು ಅನುಮತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಇಸ್ರೇಲ್‌,  ಹೆಜ್ಬುಲ್ಲಾ ಭಯೋತ್ಪಾದಕ ಸಂಘಟನೆಯ ನಾಯಕ ಹಾಗೂ ಅದರ ಸಂಸ್ಥಾಪಕರಲ್ಲಿ ಒಬ್ಬರಾದ ಹಸನ್  ನಸ್ರಲ್ಲಾ ಅವರನ್ನು ನಿನ್ನೆ ಹತ್ಯೆ ಮಾಡಲಾಗಿದೆ. ಇವರ ಜೊತೆಗೆ ಹೆಜ್ಬುಲ್ಲಾದ ಸೌತರನ್‌ ಫ್ರಂಟ್‌ನ ಕಮಾಂಡರ್‌ ಅಲಿ ಕರ್ಕಿ ಅವರನ್ನು ಕೂಡ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಡಿಫೆನ್ಸ್ ಫೋರ್ಸ್ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದೆ.  ಈ ಪ್ರದೇಶವನ್ನು ಹಿರಿಯ ಹಿಜ್ಬುಲ್ಲಾ ಕಮಾಂಡರ್‌ಗಳು ನೆಲೆ ಮಾಡಿಕೊಂಡಿದ್ದು, ಇಸ್ರೇಲ್ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ಸಕ್ರಿಯವಾಗಿ ಯೋಜಿಸುತ್ತಿದ್ದಾರೆ ಎಂದು ಇಸ್ರೇಲ್‌ನ ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ ನಂತರ ಇಸ್ರೇಲ್‌ ಸೇನೆ ಆ ಸ್ಥಳದ ಮೇಲೆ ವಾಯುದಾಳಿ ನಡೆಸಿದೆ.  ಹೆಜ್ಬೊಲ್ಲಾದ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಸನ್ ನಸ್ರಲ್ಲಾ ಅವರ 32 ವರ್ಷಗಳ ಅವಧಿಯಲ್ಲಿ ಅವರು ಅನೇಕ ಇಸ್ರೇಲಿ ನಾಗರಿಕರು ಮತ್ತು ಸೈನಿಕರ ಹತ್ಯೆಗೆ ಮತ್ತು ಸಾವಿರಾರು ಭಯೋತ್ಪಾದಕ ಚಟುವಟಿಕೆಗಳ ಯೋಜನೆಗೆ ಕುಮಕ್ಕು ನೀಡಿದ್ದರು ಎಂದು ಇಸ್ರೇಲ್ ಹೇಳಿದೆ. 

Latest Videos

ಇಸ್ರೇಲ್‌ನಿಂದ ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ಭಾರಿ ವಾಯುದಾಳಿ

ನಸ್ರಲ್ಲಾ ಪುತ್ರಿ ಕೂಡ ಸಾವು

ಶುಕ್ರವಾರ ಬೈರೂತ್ ಮೇಲೆ ನಡೆದ ಭಾರಿ ಪ್ರಮಾಣದ ವೈಮಾನಿಕ ದಾಳಿ ಇಡೀ ಲೆಬನಾನ್ ರಾಜಧಾನಿಯನ್ನು ನಡುಗುವಂತೆ ಮಾಡಿದ್ದವು.  ವಾಯುದಾಳಿಯಿಂದಾಗಿ ನಗರದ ತುಂಬೆಲ್ಲಾ ದಟ್ಟವಾದ ಹೊಗೆ ತುಂಬಿದ್ದವು. ಇದು ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸುಮಾರು ಒಂದು ವರ್ಷದ ಸಂಘರ್ಷದ ಅವಧಿಯಲ್ಲಿ ಬೈರುತ್‌ ಮೇಲೆ ನಡೆದ ಅತೀ ದೊಡ್ಡ ದಾಳಿಯಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಕಳೆದ ವಾರದಲ್ಲಿ 700 ಕ್ಕೂ ಹೆಚ್ಚು ಜನರು ಈ ವಾಯುದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಲೆಬನಾನ್ ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ವರದಿಗಳ ಪ್ರಕಾರ, ದಕ್ಷಿಣ ಬೈರೂತ್‌ ಮೇಲೆ ನಡೆದ ಈ ಇಸ್ರೇಲ್ ವಾಯುದಾಳಿಯಲ್ಲಿ ನಸ್ರಲ್ಲಾ ಪುತ್ರಿ ಜೈನಾಬ್ ನಸ್ರಲ್ಲಾ ಕೂಡ ಹತ್ಯೆಯಾಗಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲ್‌ನ ನ್ಯೂಸ್ ಚಾನೆಲ್ 12 ಆಕೆಯ ಸಾವಿನ ಬಗ್ಗೆ ವರದಿ ಮಾಡಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೆಜ್ಬುಲ್ಲಾ ಅಥವಾ ಲೆಬನಾನ್ ಆಡಳಿತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಲೆಬನಾನ್ ಇಸ್ರೇಲ್ ಗಡಿಯಲ್ಲಿ 600 ಭಾರತೀಯ ಯೋಧರ ನಿಯೋಜನೆ

click me!