ಹಿಜ್ಬುಲ್ಲಾಗಳ ಪರಮೋಚ್ಚ ನಾಯಕ ಹಸನ್ ನಸ್ರಲ್ಲಾನನ್ನು ಹತ್ಯೆಗೈದಿರುವುದಾಗಿ ಇಸ್ರೇಲ್ ಹೇಳಿಕೆ ಬಿಡುಗಡೆ ಮಾಡಿದೆ. ನಸ್ರುಲ್ಲಾ ಸಾವಿನ ಸುದ್ದಿಯನ್ನು ಓದುವಾಗ ಸುದ್ದಿ ನಿರೂಪಕಿ ಕಣ್ಣೀರು ಹಾಕಿದ್ದಾಳೆ.
ಟೆಲ್ ಅವಿವ್: ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರ ಕಟ್ಟಾ ಬೆಂಬಲಿಗರಾದ ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಉಗ್ರರ ಮೇಲೆ ಕೆಲ ದಿನಗಳಿಂದ ಭೀಕರ ದಾಳಿ ನಡೆಸುತ್ತಿರುವ ಇಸ್ರೇಲ್, ಇದೀಗ ಹಿಜ್ಬುಲ್ಲಾಗಳ ಪರಮೋಚ್ಚ ನಾಯಕ ಹಸನ್ ನಸ್ರಲ್ಲಾ (64)ನನ್ನು ಹತ್ಯೆಗೈದಿರುವುದಾಗಿ ಘೋಷಿಸಿದೆ. ‘ಹಸನ್ ನಸ್ರಲ್ಲಾ ಇನ್ನುಮುಂದೆ ಜಗತ್ತಿನಲ್ಲಿ ಭಯೋತ್ಪಾದನೆ ನಡೆಸಲು ಸಾಧ್ಯವಿಲ್ಲ. ಆದರೆ ಇಲ್ಲಿಗೇ ನಮ್ಮ ಶಸ್ತ್ರಾಸ್ತ್ರಗಳು ಮುಗಿದಿಲ್ಲ. ಇಸ್ರೇಲನ್ನು ಯಾರೇ ಹೆದರಿಸಿದರೂ ಅವರನ್ನು ಮುಗಿಸುವುದು ಹೇಗೆಂಬುದು ನಮಗೆ ಗೊತ್ತಿದೆ’ ಎಂದು ಇಸ್ರೇಲ್ ಮಿಲಿಟರಿಯ ಲೆಫ್ಟಿನೆಂಟ್ ಜನರಲ್ ಹೆರ್ಜಿ ಹಲೇವಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಹಿಜ್ಬುಲ್ಲಾ ಉಗ್ರರ ತಾಣಗಳಾಗಿರುವ ಲೆಬನಾನ್‌ನ ರಾಜಧಾನಿ ಬೈರೂತ್‌ನ ಕೆಲ ಪ್ರದೇಶಗಳ ಮೇಲೆ ಶುಕ್ರವಾರ ಇಸ್ರೇಲ್ ಭಾರೀ ಪ್ರಮಾಣದ ಕ್ಷಿಪಣಿ ಮತ್ತು ಬಾಂಬ್ ದಾಳಿ ನಡೆಸಿತು. ಅದರಲ್ಲಿ ನಸ್ರಲ್ಲಾ, ಆತನ ಪುತ್ರಿ ಜೈನಾಬ್ ಸೇರಿದಂತೆ ಹಿಜ್ಬುಲ್ಲಾಗಳ 6 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಲೆಬನಾನ್‌ನ ‘ಚಾನಲ್ 12’ ವರದಿ ಮಾಡಿದೆ. ಆದರೆ, ನಸ್ರಲ್ಲಾ ಹಾಗೂ ಇತರರ ಸಾವನ್ನು ಹಿಜ್ಬುಲ್ಲಾ ಸಂಘಟನೆ ಖಚಿತಪಡಿಸಿಲ್ಲ. ಲೆಬನಾನ್‌ನ ಆರೋಗ್ಯ ಇಲಾಖೆಯು ಇಸ್ರೇಲ್ ನಡೆಸಿದ ದಾಳಿಯಲ್ಲಿ 6 ಮಂದಿ ಮೃತಪಟ್ಟು, 91 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ. ಈವರೆಗೆ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 720 ಮಂದಿ ಮೃತಪಟ್ಟಿರುವುದಾಗಿ ಲೆಬನಾನ್ ಹೇಳಿಕೊಂಡಿದೆ.
undefined
ಹಿಜ್ಬುಲ್ಲಾ ನಾಯಕ ನಸ್ರಲ್ಲಾನನ್ನು 2006ರಲ್ಲೇ ಹತ್ಯೆಗೈದಿದ್ದಾಗಿ ಇಸ್ರೇಲ್ ಹೇಳಿತ್ತು. ಆದರೆ ಆತ ಮತ್ತೆ ಕಾಣಿಸಿಕೊಂಡು ಇಸ್ರೇಲ್ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿಗಳನ್ನು ನಡೆಸಿದ್ದನು.
ಇಸ್ರೇಲ್ ದಾಳಿಗೆ ಬಲಿಯಾದ ಹಿಜ್ಬುಲ್ಲಾ, ಹಮಾಸ್ ನಾಯಕರು
ಹಿಜ್ಬುಲ್ಲಾ ನಾಯಕರು:
ಹಸನ್ ನಸ್ರಲ್ಲಾ:ಸೆ.27 ರಂದು ಬೈರೂತ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹತ್ಯೆ
ಫೌದ್ ಶುಕುರ್: ಜು.30 ರಂದು ನಡೆದ ದಾಳಿಗೆ ಬಲಿ.
ಮೊಹಮ್ಮದ್ ನಾಸೀರ್: ಜು.3 ರಂದು ನಡೆಸಿದ ವೈಮಾನಿಕ ದಾಳಿಗೆ ಹಿರಿಯ ಹಿಜ್ಬುಲ್ಲಾ ಕಮಾಂಡರ್ ನಾಸೀರ್ ಹತ.
ತಾಲೆಬ್ ಅಬ್ದುಲ್ಲಾ: ಜೂ.12ರಂದು ನಡೆಸಿದ ದಾಳಿಯಲ್ಲಿ ಅಬ್ದುಲ್ಲಾ ಸಾವು.
ಹಮಾಸ್ ನಾಯಕರು:
ಇಸ್ಮಾಯಿಲ್ ಹನಿಯೆ: ಇರಾನ್‌ನಲ್ಲಿ ಜು.31 ರಂದು ಹನಿಯೆಯನ್ನು ಹತ್ಯೆ.
ಮೊಹಮ್ಮದ್ ಡೈಫ್: ಜು.13 ರಂದು ಗಾಜಾದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಬಲಿ
ಸಲೇಹ ಅಲ್ ಅರೂರಿ: ಜ.2 ರಂದು ಬೈರೂತ್‌ನ ದಹಿಯೆಯಲ್ಲಿ ಇಸ್ರೇಲಿ ನಡೆಸಿದ ಡ್ರೋನ್ ದಾಳಿಯಲ್ಲಿ ಸಾವು
ಇಸ್ರೇಲ್ ವಾಯುದಾಳಿಯಲ್ಲಿ ಹೆಜ್ಬುಲ್ಲಾ ನಾಯಕ ನಸ್ರಲ್ಲಾ ಹತ್ಯೆ?
ಇಸ್ರೇಲ್ ಕೊಂದಿದ್ದು ಹೇಡಿತನದ ಸಂಕೇತ
ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾನರನ್ನು ಕೊಂದಿರುವುದಾಗಿ ಇಸ್ರೇಲಿ ಮಿಲಿಟರಿ ಘೋಷಿಸಿದ ಕೆಲವೇ ಕ್ಷಣಗಳಲ್ಲಿ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಇಸ್ರೇಲ್ ವಿರುದ್ಧ ಗುಡುಗಿದ್ದಾರೆ.‘ಝಿಯೋನಿಸ್ಟ್ ಅಪರಾಧಿಗಳು (ಇಸ್ರೇಲ್ ಅನ್ನು ಉಲ್ಲೇಖಿಸಿ) ಹಿಜ್ಬುಲ್ಲಾಗೆ ಹಾನಿ ಮಾಡಲು ತುಂಬಾ ಚಿಕ್ಕವರು. ಈ ಪ್ರದೇಶದ ಎಲ್ಲಾ ಇಸ್ರೇಲ್ ವಿರೋಧಿ ಶಕ್ತಿಗಳು ಹಿಜ್ಬುಲ್ಲಾದ ಪರವಾಗಿ ನಿಂತಿವೆ ಮತ್ತು ಅದನ್ನು ಬೆಂಬಲಿಸುತ್ತವೆ’ ಎಂದಿದ್ದಾರೆ ಹಾಗೂ ಲೆಬನಾನ್‌ನ ನಿರಪರಾಧಿ ಜನರನ್ನು ಇಸ್ರೇಲ್ ಕೊಂದಿದ್ದು ಹೇಡಿತನದ ಸಂಕೇತ ಎಂದು ಟೀಕಿಸಿದ್ದಾರೆ.
ಸುದ್ದಿ ನಿರೂಪಕಿ ಕಣ್ಣೀರು
ಲೆಬನಾನ್‌ನ ಅಲ್-ಮಯಾದೀನ್ ಚಾನೆಲ್‌ನ ಸುದ್ದಿ ನಿರೂಪಕಿಯು ಹಿಜ್ಬುಲ್ಲಾ ಮುಖ್ಯಸ್ಥ ನಸ್ರುಲ್ಲಾ ಸಾವಿನ ಸುದ್ದಿಯನ್ನು ಓದುವಾಗ ಕಣ್ಣೀರು ಹಾಕಿದಳು.