ಓದುವುದಕ್ಕಾಗಿ ಜಮೀನು ಮಾರಿ ಮಗನ ವಿದೇಶಕ್ಕೆ ಕಳುಹಿಸಿದ ರೈತ: ಅಲ್ಲಿ ಭಾರತೀಯರಿಂದಲೇ ವಿದ್ಯಾರ್ಥಿ ಕೊಲೆ

By Suvarna NewsFirst Published May 9, 2024, 9:25 AM IST
Highlights

ಆಸ್ಪ್ರೇಲಿಯಾದಲ್ಲಿ ಭಾರತ ಮೂಲದ 22 ವರ್ಷ ವಿದ್ಯಾರ್ಥಿಯೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣ ಮೂಲದ ಇಬ್ಬರು ಸೋದರರನ್ನು ಆಸ್ಟೇಲಿಯಾ ಪೊಲೀಸರು ಬಂಧಿಸಿದ್ದಾರೆ.

ನವದೆಹಲಿ: ಆಸ್ಪ್ರೇಲಿಯಾದಲ್ಲಿ ಭಾರತ ಮೂಲದ 22 ವರ್ಷ ವಿದ್ಯಾರ್ಥಿಯೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣ ಮೂಲದ ಇಬ್ಬರು ಸೋದರರನ್ನು ಆಸ್ಟೇಲಿಯಾ ಪೊಲೀಸರು ಬಂಧಿಸಿದ್ದಾರೆ.  ಮೆಲ್ಬೋರ್ನ್ ಉಪನಗರ ಒರ್ಮಂಡ್‌ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ನವಜೀತ್ ಸಂಧು ಅವರ ಕೊಲೆ ನಡೆದಿತ್ತು. ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ನವಜೀತ್  ಸಂಧು ಅವರನ್ನು ಹತ್ಯೆ ಮಾಡಿದ್ದರು. ಘಟನೆ ನಡೆದು ಎರಡು ದಿನಗಳ ನಂತರ ಭಾರತೀಯರೇ ಆಗಿರುವ ಹರ್ಯಾಣ ಮೂಲದ ಇಬ್ಬರು ಸೋದರರನ್ನು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಬಂಧಿತರನ್ನು ಅಭಿಜಿತ್ ಹಾಗೂ ರಾಬಿನ್ ಗಾರ್ಟನ್ ಎಂದು ಗುರುತಿಸಲಾಗಿದೆ. ಎನ್‌ಎಸ್‌ಡ್ಬಲ್ಯು ಪೊಲೀಸರ ನೆರವಿನೊಂದಿಗೆ ನ್ಯೂ ಸೌತ್ ವೇಲ್ಸ್‌ನ ಗೌಲ್ಬರ್ನ್‌ನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿಕ್ಟೋರಿಯಾ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕೊಲೆಯಾದ ನವಜೀತ್ ಸಂಧು ಹಾಗೂ ಆರೋಪಿಗಳಾದ ಅಭಿಜಿತ್ ಮತ್ತು ರಾಬಿನ್ ಗಾರ್ಟನ್ ಈ ಮೂವರು ಹರ್ಯಾಣದ ಕರ್ನಾಲ್ ಮೂಲದವರಾಗಿದ್ದಾರೆ. ಕೊಲೆಯಾದ ಯುವಕನ ಅಂಕಲ್ ಹೇಳುವಂತೆ, ಭಾರತೀಯ ವಿದ್ಯಾರ್ಥಿಗಳ ಗುಂಪಿನ ನಡುವೆ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದ್ದು, ಎರಡು ತಂಡಗಳ ಮಧ್ಯೆ ಮಧ್ಯಸ್ಥಿಕೆ ನಡೆಸಲು ಪ್ರಯತ್ನಿಸುತ್ತಿದ್ದಾಗ ಸಂಧುವನ್ನು ಇನ್ನೊಬ್ಬ ವಿದ್ಯಾರ್ಥಿಯು ಚಾಕುವಿನಿಂದ ಎದೆಗೆ ಇರಿದು ಮಾರಣಾಂತಿಕವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆಯಲ್ಲಿ ನವಜೀತ್ ಅವರ 30 ವರ್ಷದ ಸ್ನೇಹಿತನಿಗೂ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ನವಜೀತ್‌ ಬಳಿ ಕಾರು ಇದ್ದಿದ್ದರಿಂದ ನವಜೀತ್‌ನ ಸ್ನೇಹಿತನಾಗಿದ್ದ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಆತನ ಬಳಿ ತಾನು ವಾಸವಿದ್ದ ಮನೆಯಲ್ಲಿದ್ದ ತನ್ನ ಸಾಮಾನುಗಳನ್ನು ಶಿಫ್ಟ್ ಮಾಡಿ ತರುವುದಕ್ಕೆ ಆ ಮನೆಗೆ ಹೋಗುವಂತೆ ಕೇಳಿದ್ದ. ಹೀಗಾಗಿ ಸ್ನೇಹಿತ ವಾಸವಿದ್ದ ಮನೆಗೆ ನವಜೀತ್ ಹೋಗಿದ್ದು, ಅಲ್ಲಿ ಹೋದಾಗ ರೂಮ್‌ ಮೇಟ್ಸ್ ಮಧ್ಯೆ ಜಗಳವಾಗುತ್ತಿರುವುದು ಕಂಡಿದೆ. ಮಧ್ಯಪ್ರವೇಶಿಸಿದ ನವಜೀತ್ ಜಗಳವಾಡಬೇಡಿ ಎಂದು ಹೇಳಿದಾಗ ಈಗಾಗಲೇ ಆಕ್ರೋಶಗೊಂಡಿದ್ದ ವಿದ್ಯಾರ್ಥಿಗಳ ಗುಂಪು ಆತನಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ನವಜೀತ್ ಸಂಧು ಚಿಕ್ಕಪ್ಪ ಯಶ್ಬೀರ್ ಹೇಳಿದ್ದಾರೆ.

ನವಜೀತ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಜುಲೈನಲ್ಲಿ ರಜೆಯಲ್ಲಿ ಭಾರತಕ್ಕೆ ಬಂದು ಕುಟುಂಬವನ್ನು ಸೇರುವವನಿದ್ದ, ಒಂದೂವರೆ ವರ್ಷದ ಹಿಂದಷ್ಟೇ ಅಧ್ಯಯನ ವೀಸಾದಲ್ಲಿ ಆಸ್ಟ್ರೇಲಿಯಾಗೆ ಹೋಗಿದ್ದ. ಇತ್ತ ಆತನ ತಂದೆ ಕೃಷಿಕರಾಗಿದ್ದು, ಮಗನ ಓದಿಗಾಗಿ ಒಂದೂವರೆ ಎಕರೆ ಭೂಮಿಯನ್ನು ಮಾರಾಟ ಮಾಡಿದ್ದರು ಎಂದು ನವಜೀತ್ ಚಿಕ್ಕಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಕೊಲೆಯ ನಂತರ ವಿಕ್ಟೋರಿಯಾ ಪೊಲೀಸರು ಇಬ್ಬರು ಶಂಕಿತ ಆರೋಪಿಗಳ ಫೋಟೋ ಬಿಡುಗಡೆ ಮಾಡಿದ್ದರು. 

click me!