ಚೀನಾದ ಆರ್ಥಿಕಾಭಿವೃದ್ಧಿ ದರ (ಜಿಡಿಪಿ) ಜುಲೈ- ಸೆಪ್ಟೆಂಬರ್ ಅವಧಿಯಲ್ಲಿ ಶೇ.6ಕ್ಕೆ ಕುಸಿತ ಕಂಡಿದೆ. ಇದು ಕಳೆದ ಮೂರು ದಶಕಗಳಲ್ಲೇ ಅತ್ಯಂತ ಕನಿಷ್ಠ ಮಟ್ಟವಾಗಿದೆ.
ಬೀಜಿಂಗ್ [ಅ.22]: ಭಾರತದ ಆರ್ಥಿಕತೆ ಹಿಂಜರಿತಕ್ಕೆ ಒಳಗಾಗಿದೆ ಎಂಬ ವರದಿಗಳ ಬೆನ್ನಲ್ಲೇ ನೆರೆಯ ಚೀನಾದಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ಚೀನಾದ ಆರ್ಥಿಕಾಭಿವೃದ್ಧಿ ದರ (ಜಿಡಿಪಿ) ಜುಲೈ- ಸೆಪ್ಟೆಂಬರ್ ಅವಧಿಯಲ್ಲಿ ಶೇ.6ಕ್ಕೆ ಕುಸಿತ ಕಂಡಿದೆ. ಇದು ಕಳೆದ ಮೂರು ದಶಕಗಳಲ್ಲೇ ಅತ್ಯಂತ ಕನಿಷ್ಠ ಮಟ್ಟವಾಗಿದೆ.
ಮೊದಲ ತ್ರೈಮಾಸಿಕದಲ್ಲಿ ಶೇ.6.4ರಷ್ಟಿದ್ದ ಚೀನಾ ಜಿಡಿಪಿ, ಎರಡನೇ ತ್ರೈಮಾಸಿಕದಲ್ಲಿ ಶೆ.6.2ಕ್ಕೆ ಕುಸಿದಿತ್ತು. ಇದೀಗ ಜುಲೈ- ಸೆಪ್ಟೆಂಬರ್‌ನ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ.6ಕ್ಕೆ ಇಳಿಕೆಯಾಗಿದೆ ಎಂದು ಚೀನಾದ ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ ತಿಳಿಸಿದೆ. 1992ರ ನಂತರ ಚೀನಾ ಸಾಧಿಸುತ್ತಿರುವ ಕನಿಷ್ಠ ಬೆಳವಣಿಗೆ ದರ ಇದಾಗಿದೆ. ಆದಾಗ್ಯೂ ಪ್ರಸಕ್ತ ವರ್ಷ ಜಿಡಿಪಿ ಶೇ.6ರಿಂದ ಶೇ.6.5ರಷ್ಟಿರಬಹುದು ಎಂದು ಸರ್ಕಾರ ನಿರೀಕ್ಷೆ ಹೊಂದಿದೆ. 2018ರಲ್ಲಿ ಜಿಡಿಪಿ ಶೇ.6.6ರಷ್ಟಿತ್ತು.
ಇತ್ತೀಚೆಗೆ ರಾಯಿಟರ್ಸ್ ನಡೆಸಿದ ಸಮೀಕ್ಷೆ ವೇಳೆ 2020ರಲ್ಲಿ ಚೀನಾದ ಜಿಡಿಪಿ ಇನ್ನಷ್ಟುಪಾತಾಳಕ್ಕೆ ಕುಸಿದು ಶೇ.5.9ಕ್ಕೆ ತಲುಪಲಿದೆ ಎಂದು ಹೇಳಲಾಗಿತ್ತು.
ದೇಶೀಯ ಬೇಡಿಕೆ ಕುಸಿತ ಹಾಗೂ ಅಮೆರಿಕದ ವ್ಯಾಪಾರ ಸಮರ ಮುಂದುವರಿದಿರುವುದು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರ ಬೆನ್ನಲ್ಲೇ ಚೀನಾ ಸರ್ಕಾರ ಮಧ್ಯಪ್ರವೇಶ ಮಾಡಿದ್ದು, ತೆರಿಗೆ ಹಾಗೂ ಬಡ್ಡಿ ದರಗಳನ್ನು ಕಡಿತ ಮಾಡಿದೆ. ಷೇರುಪೇಟೆಯಲ್ಲಿ ವಿದೇಶಿ ಹೂಡಿಕೆಗಿದ್ದ ನಿಯಂತ್ರಣಗಳನ್ನು ತೆಗೆದು ಹಾಕಿದೆ. ಅಭಿವೃದ್ಧಿ ಹೆಚ್ಚಳ ಉದ್ದೇಶದಿಂದ ಚೀನಾದ ಕೇಂದ್ರ ಬ್ಯಾಂಕ್ ಸುಮಾರು 2 ಲಕ್ಷ ಕೋಟಿ ರು.ಗಳನ್ನು ಬ್ಯಾಂಕುಗಳ ಮೂಲಕ ಹಣಕಾಸು ವ್ಯವಸ್ಥೆಗೆ ಬಿಡುಗಡೆ ಮಾಡಿದೆ.