ಕೆನಡಾದಲ್ಲಿ ದಿಢೀರ್‌ ಬಿಸಿ ಗಾಳಿಗೆ 500 ಸಾವು: ಕಂಡು ಕೇಳರಿಯದ ವಿದ್ಯಮಾನ!

By Kannadaprabha News  |  First Published Jul 2, 2021, 7:38 AM IST

* ಬ್ರಿಟಿಷ್‌ ಕೊಲಂಬಿಯಾ ಪ್ರಾಂತ್ಯದಲ್ಲಿ ಕಂಡು ಕೇಳರಿಯದ ವಿದ್ಯಮಾನ

* ಸಾವಿನ ಸಂಖ್ಯೆ ಇನ್ನಷ್ಟು ಏರುವ ಆತಂಕ

* ಕೆನಡಾದಲ್ಲಿ ದಿಢೀರ್‌ ಬಿಸಿ ಗಾಳಿಗೆ 500 ಸಾವು

* ಚಳಿಗಾಲದಲ್ಲಿ ಉಷ್ಣಾಂಶ ಹಠಾತ್‌ 25 ಡಿಗ್ರಿ ಸೆಲ್ಸಿಯಸ್‌ ಏರಿಕೆ

* ಜನರು ತತ್ತರ: ಆಸ್ಪತ್ರೆ, ಹೋಟೆಲ್‌ಗಳಿಗೆ ದಾಖಲು


ಒಟ್ಟಾವಾ(ಜು.02): ಹಿಂದೆಂದೂ ಕೇಳರಿಯದ ಬೆಳವಣಿಗೆಯೊಂದರಲ್ಲಿ ತೀವ್ರ ಚಳಿಯಿರುವ ದೇಶ ಕೆನಡಾದಲ್ಲಿ ದಿಢೀರ್‌ ಉಷ್ಣ ಮಾರುತ ಕಾಣಿಸಿಕೊಂಡಿದ್ದು, ಎರಡೇ ದಿನದಲ್ಲಿ ಸುಮಾರು 500 ಜನರು ಮೃತಪಟ್ಟಿದ್ದಾರೆ. ಬ್ರಿಟಿಷ್‌ ಕೊಲಂಬಿಯಾ ಪ್ರಾಂತ್ಯದ ಲಿಟ್ಟನ್‌ ಎಂಬ ಊರಿನಲ್ಲಿ ಈ ಬಿಸಿ ಗಾಳಿ ಎದ್ದಿದೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ ಇನ್ನಷ್ಟುಹೆಚ್ಚುವ ಆತಂಕವಿದೆ ಎಂದು ಕೆನಡಾ ಸರ್ಕಾರ ಹೇಳಿದೆ.

Tap to resize

Latest Videos

ಕೆನಡಾದಲ್ಲಿ ಬಹುತೇಕ ಯಾವಾಗಲೂ ಚಳಿಯ ವಾತಾವರಣ ಇರುತ್ತದೆ. ಅದರಂತೆ ಬ್ರಿಟಿಷ್‌ ಕೊಲಂಬಿಯಾದಲ್ಲೂ ಸಾಮಾನ್ಯವಾಗಿ ಜೂನ್‌-ಜುಲೈ ತಿಂಗಳಿನಲ್ಲಿ ಚಳಿಯಿರುತ್ತದೆ. ಆದರೆ, ಮಂಗಳವಾರದಿಂದ ಈಚೆಗೆ ಏಕಾಏಕಿ ವಾತಾವರಣ ಬಿಸಿಯಾಗಿ, ಕೆಲವೆಡೆ ಉಷ್ಣಾಂಶ 49.5 ಡಿಗ್ರಿ ಸೆಲ್ಸಿಯಸ್‌ (121 ಡಿಗ್ರಿ ಫ್ಯಾರನ್‌ಹೀಟ್‌)ಗೆ ಏರಿದೆ. ಇದು ಈ ಸಮಯದಲ್ಲಿ ಇರುತ್ತಿದ್ದ ಸಾಮಾನ್ಯ ಉಷ್ಣಾಂಶಕ್ಕಿಂತ ಸುಮಾರು 25 ಡಿಗ್ರಿ ಸೆಲ್ಸಿಯಸ್‌ನಷ್ಟುಅಧಿಕವಾಗಿದೆ. ಇದರಿಂದಾಗಿ ಚಳಿಯಲ್ಲಿದ್ದು ಅಭ್ಯಾಸವಾಗಿದ್ದ ಜನರು ತೀವ್ರ ಕಂಗಾಲಾಗಿದ್ದು, ನೂರಾರು ಜನರು ಉಷ್ಣ ಗಾಳಿಯ ಹೊಡೆತಕ್ಕೆ ಸಿಲುಕಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಮನೆ, ಕಟ್ಟಡಗಳಿಗೆ ಬೆಂಕಿ:

ಲಿಟ್ಟನ್‌ ಪಟ್ಟಣದಲ್ಲಿ ಅನೇಕ ಮನೆಗಳು ಹಾಗೂ ಕಟ್ಟಡಗಳಿಗೆ ಉಷ್ಣ ಮಾರುತದಿಂದಾಗಿ ಬೆಂಕಿ ಬಿದ್ದಿದೆ. ಹೀಗಾಗಿ ಇಡೀ ಊರನ್ನು ತೆರವುಗೊಳಿಸಲು ಮೇಯರ್‌ ಆದೇಶಿಸಿದ್ದಾರೆ. ಅನೇಕರು ಮನೆಯಲ್ಲೇ ಸುಟ್ಟು ಕರಕಲಾಗಿರುವ ಸಾಧ್ಯತೆಯೂ ಇದೆ. ಸಾಕು ಪ್ರಾಣಿಗಳು ಕೂಡ ಬೆಂಕಿಗೆ ಆಹುತಿಯಾಗಿವೆ.

ಎ.ಸಿ. ಹೋಟೆಲ್‌ಗಳಿಗೆ ಜನರ ದೌಡು:

ಚಳಿಯಿರುವುದರಿಂದ ಕೆನಡಾದ ಮನೆಗಳಲ್ಲಿ ಎ.ಸಿ., ಕೂಲರ್‌ಗಳು ಇರುವುದು ಕಡಿಮೆ. ಈಗ ದಿಢೀರ್‌ ಉಷ್ಣ ಮಾರುತದಿಂದಾಗಿ ಎಲ್ಲೆಡೆ ಎ.ಸಿ.ಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಅಂಗಡಿಗಳಲ್ಲಿ ಎ.ಸಿ. ಸಿಗುತ್ತಿಲ್ಲ. ಹೀಗಾಗಿ ಜನರು ಮನೆ ತೊರೆದು ಎ.ಸಿ. ಇರುವ ಹೋಟೆಲ್‌ಗಳಿಗೆ ಹೋಗಿ ನೆಲೆಸತೊಡಗಿದ್ದಾರೆ. ಹೋಟೆಲ್‌ಗಳಲ್ಲಿ ಕೊಠಡಿಗಳಿಗೆ ಅಭಾವ ಎದುರಾಗಿದ್ದು, ಹೋಟೆಲ್‌ಗಳ ಮುಂದೆ ಜನರ ಸಾಲು ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ ಕೆಲವು ನೂರು ಡಾಲರ್‌ಗಳಿಗೆ ಸಿಗುತ್ತಿದ್ದ ಎ.ಸಿ. ಕೂಲರ್‌ಗಳ ಬೆಲೆ 2000 ಡಾಲರ್‌ಗೆ ಏರಿಕೆಯಾಗಿದೆ. ವಿದ್ಯುತ್‌ ಬಳಕೆ ಸಾರ್ವಕಾಲಿಕ ದಾಖಲೆ ಪ್ರಮಾಣಕ್ಕೆ ಏರಿಕೆಯಾಗಿದೆ.

ಅಮೆರಿಕದಲ್ಲೂ ಬಿಸಿ ಗಾಳಿ

ಕೆನಡಾದ ಜೊತೆಗೆ ಗಡಿ ಹಂಚಿಕೊಂಡಿರುವ ಅಮೆರಿಕದ ಕೆಲ ಪ್ರದೇಶ ಹಾಗೂ ರಾಜ್ಯಗಳಲ್ಲೂ ಉಷ್ಣ ಮಾರುತದ ಪ್ರಭಾವ ಕಾಣಿಸಿಕೊಂಡಿದೆ. ವಿಶೇಷವಾಗಿ ವಾಷಿಂಗ್ಟನ್‌ ಮತ್ತು ಒರೆಗಾನ್‌ನಲ್ಲಿ ಉಷ್ಣತೆ ಜಾಸ್ತಿಯಾಗಿದೆ.

ಸಾರ್ವಕಾಲಿಕ ದಾಖಲೆ ಉಷ್ಣಾಂಶ

ಕೆನಡಾದ ಕೆಲ ಪ್ರದೇಶಗಳಲ್ಲಿ ಜೂನ್‌-ಜುಲೈ ತಿಂಗಳಿನಲ್ಲಿ ಉಷ್ಣ ಮಾರುತಗಳು ಕಾಣಿಸಿಕೊಳ್ಳುವುದು ಇದೇ ಮೊದಲಲ್ಲ. ಈ ಹಿಂದೆಯೂ ಉಷ್ಣ ಮಾರುತ ಕಾಣಿಸಿಕೊಂಡಿದ್ದು, ಆಗೆಲ್ಲ 5-6 ದಿನಗಳಲ್ಲಿ ಸರಾಸರಿ 165 ಜನರು ಸಾವನ್ನಪ್ಪಿದ್ದಾರೆ. ಆದರೆ, ಈ ಬಾರಿ ಎರಡೇ ದಿನದಲ್ಲಿ 500 ಜನರು ಸಾವನ್ನಪ್ಪಿದ್ದಾರೆ. ಇನ್ನು, ಈ ಬಾರಿಯ ಉಷ್ಣಾಂಶವು ಕೆನಡಾದ ಇತಿಹಾಸದಲ್ಲಿ ದಾಖಲಾದ ಸಾರ್ವಕಾಲಿಕ ದಾಖಲೆಯ ಉಷ್ಣಾಂಶವಾಗಿದೆ.

ದಿಢೀರ್‌ ಬಿಸಿ ಗಾಳಿಗೆ ಏನು ಕಾರಣ?

ಜಾಗತಿಕ ತಾಪಮಾನ ಏರಿಕೆಯ ಪರಿಣಾಮವಾಗಿ ಕೆನಡಾದಲ್ಲಿ ಬಿಸಿ ಗಾಳಿ ಕಾಣಿಸಿಕೊಂಡಿದೆ ಎಂದು ಊಹಿಸಲಾಗುತ್ತಿದೆ. ಆದರೆ ತಜ್ಞರು, ಕೇವಲ ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ಅಲ್ಲ, ‘ಹೀಟ್‌ ಡೋಮ್‌’ ವಿದ್ಯಮಾನದಿಂದಾಗಿ ಹೀಗಾಗಿದೆ ಎಂದು ಹೇಳುತ್ತಿದ್ದಾರೆ. ಹೀಟ್‌ ಡೋಮ್‌ ಅಂದರೆ ಒಂದೇ ಪ್ರದೇಶದಲ್ಲಿ ಗಾಳಿಯ ಅತ್ಯಧಿಕ ಒತ್ತಡದ ಸ್ಥಳಗಳು ನಿರ್ಮಾಣವಾಗುವುದು ಮತ್ತು ಅಲ್ಲಿ ಬಿಸಿ ಗಾಳಿಯು ಸಾಂದ್ರೀಕೃತವಾಗುವುದು. ಉದಾಹರಣೆಗೆ, ನಾವು ಸೈಕಲ್‌ ಚಕ್ರಕ್ಕೆ ಹೆಚ್ಚೆಚ್ಚು ಗಾಳಿ ತುಂಬಿದಷ್ಟೂಅದರೊಳಗೆ ಒತ್ತಡ ಜಾಸ್ತಿಯಾಗಿ, ಗಾಳಿಯ ಉಷ್ಣಾಂಶ ಹೆಚ್ಚಾಗುತ್ತದೆ. ಇಂತಹುದೇ ವಿದ್ಯಮಾನ ಬ್ರಿಟಿಷ್‌ ಕೊಲಂಬಿಯಾದಲ್ಲಿ ಉಂಟಾಗಿದೆ ಎಂದು ಹೇಳಲಾಗಿದೆ.

click me!