ಕಾಳ್ಗಿಚ್ಚು ಹಾಗೂ ಹವಾಮಾನ ವೈಪರಿತ್ಯ ವಿಷವರ್ತುಲಗಳಿದ್ದ ಹಾಗೆ. ಕಾಡು ಕಾಳ್ಗಿಚ್ಚಿಗೆ ತುತ್ತಾದರೆ ವಾತಾವರಣಕ್ಕೆ ಹಸಿರುಮನೆ ಅನಿಲಗಳು ಬಿಡುಗಡೆಯಾಗುತ್ತವೆ. ಈ ಪ್ರಕ್ರಿಯೆಯು ಭೂ ಗ್ರಹವನ್ನು ಬಿಸಿಯಾಗಿಸುತ್ತದೆ. ತಾಪಮಾನ ಏರಿದರೆ ಭೀಕರ ಬರಗಾಲದಂತಹ ಘಟನೆಗಳು ಪದೇ ಪದೇ ಜರುಗುತ್ತವೆ. ಮಳೆಯ ವಿನ್ಯಾಸ ಏರುಪೇರಾಗುತ್ತದೆ.
ಕಾಂಗರೂ ನಾಡು ಆಸ್ಪ್ರೇಲಿಯಾದಲ್ಲಿ ಹಿಂದೆಂದೂ ಕಾಣದಂತಹ ಭೀಕರ ಕಾಳ್ಗಿಚ್ಚು ವ್ಯಾಪಿಸಿದೆ. ಬೆಂಕಿಯ ರುದ್ರ ನರ್ತನಕ್ಕೆ ಇಡೀ ದೇಶ ತತ್ತರಿಸಿದೆ. ಆಸ್ಪ್ರೇಲಿಯಾದ ಮಹಾದುರಂತ ಎಂದೇ ಪರಿಗಣಿಸಲಾಗಿರುವ ಈ ಅಗ್ನಿ ಅನಾಹುತಕ್ಕೆ ಲಕ್ಷಾಂತರ ಎಕರೆ ಕಾಡು ಬೆಂಕಿಗೆ ಆಹುತಿಯಾಗಿದೆ.
ಕೋಟ್ಯಂಟರ ಪ್ರಾಣಿ ಪಕ್ಷಿಗಳು ಅಸುನೀಗಿವೆ. ಜೀವ ಉಳಿಸಿಕೊಳ್ಳಲು ಅತ್ತಿಂದಿತ್ತ ಓಡಾಡುವ ಮುಗ್ಧ ಪ್ರಾಣಿಗಳು ಹಾಗೂ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಸುಟ್ಟು ಕರಕಲಾಗಿರುವ ಪ್ರಾಣಿಗಳ ದೃಶ್ಯ ಮನಕಲಕುವಂತಿದೆ. ಇಷ್ಟಾದರೂ ಅಗ್ನಿಯ ಮುನಿಸು ತಣಿದಿಲ್ಲ. ಆಪೋಷಣೆ ಪಡೆದ ಕಾಡಿಗೂ ಲೆಕ್ಕವಿಲ್ಲ. ಹರಸಾಹಸ ಪಟ್ಟರೂ ಬೆಂಕಿ ನಿಯಂತ್ರಣ ಆಗುತ್ತಿಲ್ಲ.
ಫೈರ್ ಫೈಟರ್ ಅಪ್ಪನ ಫೋಟೋ ಶೇರ್ ಮಾಡಿದ ಮಗಳು: ನೆಟ್ಟಿಗರು ಭಾವುಕ!
ತಾಪಮಾನ ಏರಿಕೆಯೇ ಕಾರಣ
ಆದರೆ ಇದು ದೂರದ ಆಸ್ಪ್ರೇಲಿಯಾದಲ್ಲಿ ನಡೆಯುತ್ತಿರುವ ಘಟನೆ ನಮಗೆ ಸಂಬಂಧ ಇಲ್ಲ ಎಂದು ಕುಳಿತುಕೊಂಡರೆ ಬಹುಶಃ ಮೂರ್ಖತನವಾಗುತ್ತದೆ. ಏಕೆಂದರೆ ಇವತ್ತು ಆಸ್ಪ್ರೇಲಿಯಾ ಹೊತ್ತಿ ಉರಿಯುತ್ತಿದೆ, ಪ್ರಾಣಿ ಪಕ್ಷಿಗಳ ಆಕ್ರಂದನ ಮುಗಿಲುಮುಟ್ಟಿದೆ ಎಂದರೆ ಅದಕ್ಕೆ ನೇರ ಹೊಣೆ ನಾವೇ. ಮಾನವ ನಿರ್ಮಿತ ಜಾಗತಿಕ ತಾಪಮಾನ ಏರಿಕೆಯೇ ಈ ಭೀಕರ ಕಾಳ್ಗಿಚ್ಚಿಗೆ ಕಾರಣ ಎಂದು ವಿಜ್ಞಾನಿಗಳು ನಿಖರವಾಗಿ ಹೇಳುತ್ತಿದ್ದಾರೆ. ಏಕೆಂದರೆ ಕಾಂಗರೂ ನಾಡಿನಲ್ಲಿ ಕಾಳ್ಗಿಚ್ಚು ಹೊಸತೇನಲ್ಲ. ಆದರೆ ಈ ಬಾರಿ ಉಂಟಾಗಿರುವ ಕಾಳ್ಗಿಚ್ಚು ಹಿಂದೆಂದಿಗಿಂತಲೂ ಭಯಾನಕವಾಗಿದೆ.
ಕಳೆದ ವರ್ಷ ಆಸ್ಪ್ರೇಲಿಯಾದಲ್ಲಿ ಉಷ್ಣಾಂಶ ದಾಖಲೆ ಮಟ್ಟದಲ್ಲಿ ಏರಿಕೆಯಾಗಿತ್ತು. ವಾರ್ಷಿಕ ಉಷ್ಣಾಂಶ ಸರಾಸರಿ 2.7 ಡಿಗ್ರಿ ಫ್ಯಾರನ್‌ಹೀಟ್‌ನಷ್ಟುಏರಿಕೆಯಾಗಿತ್ತು. ಡಿಸೆಂಬರ್‌ನಲ್ಲಿ 40.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಈ ರೀತಿ ಉಷ್ಣಾಂಶ ಅಧಿಕವಿದ್ದಾಗ ಬಹುಬೇಗ ಬೆಂಕಿ ಆವರಿಸಿ ವ್ಯಾಪಿಸುತ್ತಾ ಹೋಗುತ್ತದೆ. ಅಲ್ಲದೆ ದಕ್ಷಿಣಾರ್ಧಗೋಳದಲ್ಲಿ ಬೇಸಿಗೆ ಇರುವುದು ಕಾಳ್ಗಿಚ್ಚಿನ ತೀವ್ರತೆಯನ್ನು ಹೆಚ್ಚಿಸಿದೆ. ಆದರೆ ಹೀಗೆ ಉಷ್ಣಾಂಶ ಏರಿಕೆಯಾಗಲು ಕಾರಣ ಮತ್ತದೇ ಮಾನವ.
ಆಸ್ಟ್ರೇಲಿಯಾ ಕಾಡ್ಗಿಚ್ಚು ನಿಯಂತ್ರಣಕ್ಕೆ 1 ಮಿಲಿಯನ್ ನೀಡಿದ ನಟ!
ನಿಸರ್ಗ ಮೇಲೆ ಮಾನವನ ಪ್ರಹಾರ
ಅದರ ಜೊತೆಗೆ ನಿಸರ್ಗದ ಮೇಲೆ ಮಾನವನು ನಡೆಸುತ್ತಿರುವ ಅಟ್ಟಹಾಸವೂ ಮತ್ತೊಂದು ಕಾರಣ. ಜನರು ನಿಸರ್ಗದ ಮೇಲೆ ನಡೆಸಿದ ಪ್ರಹಾರವು ಅನಾಹುತವಾಗಿ ಮಾರ್ಪಡುತ್ತದೆ. ಒಂದು ಕಾಲದಲ್ಲಿ ಜನಸಂಖ್ಯೆ ಕಡಿಮೆ ಇದ್ದು, ಕಾಡನ್ನು ಜನರು ದೇವರೆಂದು ಜತನದಿಂದ ಕಾಪಾಡಿಕೊಂಡು ಬರುತ್ತಿದ್ದರು. ಮರಗಿಡಗಳನ್ನು ಬೆಳೆಸಿ, ಸುತ್ತಮುತ್ತಲಿನ ಪ್ರದೇಶ ಸವಕಳಿಯಾಗದಂತೆ ನೋಡಿಕೊಳ್ಳುತ್ತಿದ್ದರು. ಅಂತರ್ಜಲವು ಭೂಮಿಯನ್ನು ತಂಪಾಗಿಟ್ಟು ಎಲ್ಲೆಲ್ಲೂ ಹಸಿರು ಕಂಗೊಳಿಸುತ್ತತ್ತು. ಆದರೆ ಜನಸಂಖ್ಯೆ ಹೆಚ್ಚಾದಂತೆ ಕೊಳವೆ ಬಾವಿ ತೋಡಿ ಅಂತರ್ಜಲ ಪಾತಾಳಕ್ಕೆ ಕುಸಿಯುತ್ತಿದೆ.
ಹರಿಯುವ ನದಿಗಳಿಗೆ ಅಡ್ಡಲಾಗಿ ಅಣೆಕಟ್ಟೆಕಟ್ಟಿಪ್ರಕೃತಿಯನ್ನೇ ನಿಯಂತ್ರಿಸುವ ಬುದ್ಧಿವಂತಿಕೆ ಮಾನವನಿಗಿದೆ ಎಂದು ಬೀಗುತ್ತಿದ್ದೇವೆ. ಅತಿಯಾದ ಕೈಗಾರಿಕೀಕರಣ, ನಗರೀಕರಣ, ಆಧುನೀಕರಣ ಹಿಂದೆ ಬಿದ್ದು ನಮ್ಮ ಅವನತಿಗೆ ನಾವೇ ಕಾರಣರಾಗುತ್ತಿದ್ದೇವೆ.
ಉಳಿವಿಗೆ ಏನು ಮಾಡುತ್ತಿದ್ದೇವೆ?
ಇತ್ತೀಚೆಗೆ ವಿಶ್ವದ ಅತಿದೊಡ್ಡ ಮಳೆಕಾಡು ಎಂದೇ ಹೆಸರುವಾಸಿಯಾಗಿದ್ದ ಅಮೆಜಾನ್‌ನಲ್ಲಿ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಜಗತ್ತಿಗೆ ಅಗತ್ಯವಿರುವ 20% ಆಮ್ಲಜನಕವನ್ನು ಉತ್ಪಾದಿಸುವ ಅಮೆಜಾನ್ ಕಾಡು ಬೆಂಕಿಗೆ ಆಹುತಿಯಾಗುತ್ತಿರುವಾಗ ಇಡೀ ಜಗತ್ತೇ ‘ಅಮೆಜಾನ್‌ಗಾಗಿ ಪ್ರಾರ್ಥನೆ’ ಎಂದು ಅದರ ಉಳಿವಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರ್ಥಿಸಿತ್ತು. ಅಷ್ಟೇ ಏಕೆ ಕಳೆದ ವರ್ಷ ನಮ್ಮ ಕರ್ನಾಟಕದ ನಾಗರಹೊಳೆ, ಬಂಡೀಪುರ ಅಭಯಾರಣ್ಯದ 20 ಸಾವಿರ ಹೆಕ್ಟೇರ್ ಭೂಮಿ ಬೆಂಕಿಯ ಆವೇಷಕ್ಕೆ ಹೊತ್ತಿ ಉರಿದು ಭಸ್ಮವಾಗಿತು.
ಈ ರೀತಿ ಅಗ್ನಿ ಅನಾಹುತದ ಸಂದರ್ಭಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮರುಗುವ ನಾವು ಮುನ್ನೆಚ್ಚರಿಕಾ ಕ್ರಮವಾಗಿ ಏನು ಮಾಡುತ್ತಿದ್ದೇವೆ, ನಮ್ಮನ್ನು ಆಳುವ ಸರ್ಕಾರಗಳು ಭೂಮಿಯ ಉಳಿವಿಗಾಗಿ ಯಾವ ರೀತಿಯ ತುರ್ತು ಕ್ರಮ ಕೈಗೊಳ್ಳುತ್ತಿವೆ ಎಂದು ಪ್ರಶ್ನಿಸಿಕೊಂಡರೆ ಉತ್ತರ ಶೂನ್ಯವೇ.
ದೊಡ್ಡ ಅನಾಹುತದ ಮುನ್ಸೂಚನೆ
ಜಗತ್ತಿನ ಕೆಲವೆಡೆ ಪದೇ ಪದೇ ತೀವ್ರ ನೆರೆ ಕಾಣಿಸಿಕೊಳ್ಳುತ್ತಿದೆ. ಇನ್ನರ್ಧ ಭಾಗದಲ್ಲಿ ಭೀಕರ ಬರ ಕಾಣಿಸಿಕೊಳ್ಳುತ್ತಿದೆ. ಜೊತೆಗೆ ಬ್ರೆಜಿಲ್ ಆಸ್ಪ್ರೇಲಿಯಾ, ಅಮೆರಿಕ, ಚೀನಾ, ಆಫ್ರಿಕಾ, ಭಾರತ ಹಾಗೂ ಆಗ್ನೇಯ ಏಷ್ಯಾ ಭಾಗಗಳಲ್ಲಿ ಅರಣ್ಯಗಳು ಅಗ್ನಿಗೆ ಆಹುತಿಯಾಗುತ್ತಿವೆ. ಹೀಗೆ ಹರಿದ್ವರ್ಣ ಕಾಡುಗಳು ಬೆಂಕಿಗೆ ಆಹುತಿಯಾಗುತ್ತಿರುವುದು ಜಗತ್ತು ಅತಿ ದೊಡ್ಡ ಅನಾಹುತ ಎದುರಿಸಬೇಕಾದ ಮುನ್ಸೂಚನೆ. ಇದು ಹೀಗೇ ಮುಂದುವರೆದ ಮಾನವ ಸಂಕುಲ, ವೈವಿದ್ಯಮಯ ಜೀವಿ ಸಂಕುಲಗಳು ಆಮ್ಲಜನದ ಕೊರತೆಯಿಂದ ನರಳುವುದಂತೂ ಹೌದು.
ಏಕೆಂದರೆ ಕಾಳ್ಗಿಚ್ಚು ಹಾಗೂ ಹವಾಮಾನ ವೈಪರಿತ್ಯ ವಿಷವರ್ತುಲಗಳಿದ್ದ ಹಾಗೆ. ಕಾಡು ಕಾಳ್ಗಿಚ್ಚಿಗೆ ತುತ್ತಾದರೆ ವಾತಾವರಣಕ್ಕೆ ಹಸಿರುಮನೆ ಅನಿಲಗಳು ಬಿಡುಗಡೆಯಾಗುತ್ತವೆ. ಈ ಪ್ರಕ್ರಿಯೆಯು ಭೂ ಗ್ರಹವನ್ನು ಬಿಸಿಯಾಗಿಸುತ್ತದೆ. ತಾಪಮಾನ ಏರಿದರೆ ಭೀಕರ ಬರಗಾಲದಂತಹ ಘಟನೆಗಳು ಪದೇ ಪದೇ ಜರುಗುತ್ತವೆ. ಮಳೆಯ ವಿನ್ಯಾಸ ಏರುಪೇರಾಗುತ್ತದೆ. ಕುಡಿಯುವ ನೀರು, ಜೀವ ವೈವಿದ್ಯ, ಕೃಷಿ ಹಾಗೂ ಮಾನವನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಅಳಿವು-ಉಳಿವು ನಮ್ಮ ಕೈಲಿದೆ
ವಿಶ್ವಸಂಸ್ಥೆಯ ನಿಯಮಾವಳಿಗಳಂತೆ ಹವಾಮಾನ ವೈಪರಿತ್ಯವನ್ನು ನಿಯಂತ್ರಿಸದಿದ್ದರೆ 2100ರ ವೇಳೆಗೆ ಜಾಗತಿಕ ಸರಾಸರಿ ತಾಪಮಾನವು 3.2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ. ವಿಶ್ವಸಂಸ್ಥೆ ವರದಿ ಪ್ರಕಾರ ಕಳೆದೊಂದು ದಶಕದಲ್ಲಿ ಪ್ರತಿವರ್ಷ ಕಾರ್ಬನ್ ಹೊರಸೂಸುವಿಕೆಯಲ್ಲಿ ಶೇ.1ರಷ್ಟುಏರಿಕೆಯಾಗಿದೆ. ಪರಿಣಾಮವಾಗಿ 55.3 ಗಿಗಾ ಟನ್ ಇಂಗಾಲವು ಶೇಖರಣೆಯಾಗಿದೆ. ಇದೇ ಪ್ರಮಾಣದಲ್ಲಿ ಇಂಗಾಲವನ್ನು ವಾತಾವರಣಕ್ಕೆ ಸೇರಿಸುತ್ತಿದ್ದರೆ 2100ರ ವೇಳೆಗೆ ಜಾಗತಿಕ ತಾಪಮಾನದಲ್ಲಿ 3.2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ.
ಇದರಿಂದ ವಿಶ್ವದ ಭೌಗೋಳಿಕ ನಕ್ಷೆಯೇ ಬದಲಾಗುವ ಅಪಾಯವಿದೆ ಎಂದು ವಿಶ್ವಸಂಸ್ಥೆ ಇತ್ತೀಚೆಗೆ ಎಚ್ಚರಿಸಿದೆ. ಉಷ್ಣತೆ ಒಂದೊಂದು ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೂ ಅದರಿಂದ ಆಗುವ ಅನಾಹುತ ಅಪಾರ. ಧ್ರುವಗಳಲ್ಲಿ ಹಿಮ, ನೀರ್ಗಲ್ಲು ಕರಗಿ ಸಮುದ್ರದ ಮಟ್ಟಏರಿಕೆಯಾಗಬಹುದು, ಕಡಲ ತಡಿಯ ಜನವಸತಿ ಪ್ರದೇಶಗಳು ಮುಳುಗಬಹುದು, ಆಮ್ಲಜನಕವನ್ನು ಒದಗಿಸುವ ಕಾಡು ಅಗ್ನಿಗೆ ಆಹುತಿಯಾಗಬಹುದು, ಆಹಾರ ಉತ್ಪಾದನೆ ಕುಸಿಯಬಹುದು, ಮಳೆ ಏರುಪೇರಾಗಬಹುದು, ಜೀವ ಸಂಕುಲವೇ ಅಳಿವಿನ ಅಂಚಿಗೆ ಸರಿಯಬಹುದು.
ಆಧುನೀಕರಣ, ಯಾಂತ್ರೀಕರಣ, ಕೈಗಾರಿಕೀಕರಣದಲ್ಲಿ ಅನುಸರಿಸುತ್ತಿರುವ ನೀತಿಗಳು ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತಿವೆ. ಇಂಗಾಲದ ಹೊರಸೂಸುವಿಕೆ, ಅರಣ್ಯ ಪ್ರದೇಶಗಳ ನಾಶ ತಾಪಮಾನ ಏರಿಕೆಗೆ ಅತಿ ದೊಡ್ಡ ಕಾಣಿಕೆ ನೀಡುತ್ತಿವೆ. ಇವೆರಡನ್ನೂ ನಿಯಂತ್ರಿಸುವಲ್ಲಿ ಯಶಸ್ಸು ಸಿಕ್ಕರೆ ಅಲ್ಲಿ ಅರ್ಧ ಹಾದಿ ಕ್ರಮಿಸಿದಂತೆ.
ಪ್ಯಾರಿಸ್ ಒಪ್ಪಂದ ಪಾಲಿಸಿದ್ದರೆ..
ಈಗಾಗಲೇ 2015ರ ಪ್ಯಾರಿಸ್ ಒಪ್ಪಂದದಲ್ಲಿ ಹೇಳಿರುವ ಅಂಶಗಳನ್ನು ಪಾಲಿಸಲು 2020ರ ಗಡುವು ನಿಗದಿಪಡಿಸಲಾಗಿತ್ತು. ಆದರೆ ಅದನ್ನು ಪಾಲಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಹೆಜ್ಜೆ ಇರಿಸಿಲ್ಲ. ವಿಶ್ವದಲ್ಲಿ ಅತಿ ಹೆಚ್ಚು ಮಾಲಿನ್ಯ ಹೊರಸೂಸುವ ದೇಶಗಳೆಂದರೆ ಅಮೆರಿಕ, ಚೀನಾ, ಐರೋಪ್ಯ ಒಕ್ಕೂಟ ಮತ್ತು ಭಾರತ. ಆದ್ದರಿಂದ ತಾಪಮಾನ ಏರಿಕೆ ಈಗಿರುವುದಕ್ಕಿಂತ 2 ಡಿಗ್ರಿಯ ಮಿತಿ ದಾಟದಂತೆ ನಿಯಂತ್ರಿಸುವ ದೊಡ್ಡ ಹೊಣೆಗಾರಿಕೆ ಈ ದೇಶಗಳ ಮೇಲಿದೆ.
ದೇಶದಲ್ಲಿರುವ ಉತ್ಪಾದನಾ ವಲಯದ ಉದ್ದಿಮೆಗಳನ್ನು ಮುಂದುವರೆಯುತ್ತಿರುವ ರಾಷ್ಟ್ರಗಳಿಗೆ ಕಳುಹಿಸುವುದರಿಂದ ಇಂಗಾಲ ಹೊರಸೂಸುವಿಕೆಯನ್ನು ನಿಯಂತ್ರಿಸಿದಂತಾಗುವುದಿಲ್ಲ. ಇದರಿಂದ ಭಾರತ, ಚೀನಾ, ಬ್ರೆಜಿಲ… ದಕ್ಷಿಣ ಆಫ್ರಿಕಾದಂತಹ ದೇಶಗಳ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮ ಬೀರಲಿದೆ. ವಿಶ್ವದ ಇಂಗಾಲ ಹೊರಸೂಸುವಿಕೆಯಲ್ಲಿ ಜಿ-20 ರಾಷ್ಟ್ರಗಳ ಪಾಲು ಶೇ.78ರಷ್ಟಿದೆ. ಹೀಗಾಗಿ ಬೃಹತ್ ಆರ್ಥಿಕತೆ ಹೊಂದಿರುವ ರಾಷ್ಟ್ರಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಇಲ್ಲವಾದಲ್ಲಿ ಪರಿಸ್ಥಿತಿ ಎಲ್ಲೆ ಮೀರಿ ಹೋಗಲಿದೆ.