ಇಡೀ ಮನುಕುಲವನ್ನೇ ನಡುಗಿಸಿದ, ಸುಮಾರು 8 ಕೋಟಿ ಜನರ ಸಾವು-ನೋವು, ನಷ್ಟಕ್ಕೆ ಕಾರಣವಾದ 2ನೇ ಮಹಾಯುದ್ಧ ಅಂತ್ಯಗೊಂಡು ಇಂದಿಗೆ 75 ವರ್ಷ. ಈ ಹಿನ್ನೆಲೆಯಲ್ಲಿ 2ನೇ ಮಹಾಯುದ್ಧದ ಹಿನ್ನೆಲೆ, ಪರಿಣಾಮ ಹಾಗೂ 2ನೇ ವಿಶ್ವಯುದ್ಧದಲ್ಲಿ ಭಾಗವಹಿಸಿದ್ದ ಕರ್ನಾಟಕದ ಯೋಧರ ನೆನಪುಗಳ ಮೆಲುಕು ಇಲ್ಲಿದೆ.
ಮನುಕುಲ ಕಂಡ ಅತ್ಯಂತ ಕರಾಳ ಯುದ್ಧ 2ನೇ ವಿಶ್ವಯುದ್ಧ. ಭಾರತ ಆಗ ಬ್ರಿಟಿಷ್ ವಸಹಾತು ರಾಷ್ಟ್ರವಾಗಿದ್ದರಿಂದ ಮಿತ್ರಪಡೆಯ ಒಕ್ಕೂಟದಲ್ಲಿತ್ತು. ಈ ಸಂದರ್ಭದಲ್ಲಿ ನಾನು ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಗ್ರೇಡ್ ಸಿನಿಮಾ ಆಪರೇಟರ್ ಮತ್ತು ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದೆ. ಹಾಗಾಗಿ ಮಹಾಯುದ್ಧದಲ್ಲಿಯೂ ಪಾಲ್ಗೊಂಡಿದ್ದೆ. ಈ ವೇಳೆ ಬರ್ಮಾ (ಈಗಿನ ಮ್ಯಾನ್ಮಾರ್) ಗಡಿಯಲ್ಲಿ ಯುದ್ಧದಲ್ಲಿ ಪಾಲ್ಗೊಂಡ ಸಿಪಾಯಿಗಳಿಗೆ ಸಿನಿಮಾ ತೋರಿಸುತ್ತಿದ್ದೆ. ಆ ಯುದ್ಧದ ಭೀಕರತೆಯ ವರ್ಣನೆಗೆ ಪದಗಳೇ ಇಲ್ಲ.
ಇತ್ತ ಸಿನಿಮಾ ಪ್ರದರ್ಶನ ನಡೆಯುತ್ತಿದ್ದರೆ ಅತ್ತ ಆಕಾಶದಲ್ಲಿ ಜರ್ಮನಿ ಸೇನೆಯ ವಿಮಾನಗಳು ದಾಳಿ ಸಜ್ಜಾಗಿ ಬರುತ್ತಿದ್ದವು. ಲೈಟ್ ಕಂಡ ಕೂಡಲೇ ಬಾಂಬ್ ದಾಳಿ ಮಾಡುತ್ತಿತ್ತು. ಹಾಗಾಗಿ ವಿಮಾನಗಳು ಬರುವ ವೇಳೆ ನಮಗೆ ಎಚ್ಚರಿಕೆಯ ಸೈರನ್ ಮೊಳಗುತ್ತಿತ್ತು. ತಕ್ಷಣವೇ ಸಿನಿಮಾ ಪ್ರದರ್ಶನ ಬಂದ್ ಮಾಡುತ್ತಿದ್ದೆ. ಇದರಿಂದ ನಾವು ಬದುಕುಳಿದೆವು. ವಿಮಾನ ದೂರ ಹೋದಂತೆ ಮತ್ತೆ ಸಿನಿಮಾ ಪ್ರದರ್ಶನ ಮಾಡುತ್ತಿದ್ದೆ. ಆಗ ಈಗಿನಂತೆ ತಂತ್ರಜ್ಞಾನ ಆವಿಷ್ಕಾರಗೊಂಡಿರಲಿಲ್ಲ. ಹಾಗಾಗಿ ಒಮ್ಮೆ ಸಿನಿಮಾ ಪ್ರದರ್ಶನ ಯಂತ್ರದ ಎಂಜಿನ್‌ಗೆ ಕೈ ಸಿಲುಕಿ ಗಾಯಗೊಂಡು ಆಸ್ಪತ್ರೆಗೂ ದಾಖಲಾಗಿದ್ದೆ.
undefined
'ಯುದ್ಧದಲ್ಲಿ ಪಾಲ್ಗೊಂಡಿದ್ದ ಭಾರತೀಯ ಯೋಧರ ಉಪಚರಿಸಿದ ಭಾಗ್ಯ ನನ್ನದು'
ಬರ್ಮಾ ಗಡಿಯಲ್ಲಿ ಕೆಲಸ
ಕೊಡಗು ಜಿಲ್ಲೆಯ ಗೋಣಿಕೊಪ್ಪ ನನ್ನ ಹುಟ್ಟೂರು. ಮಡಿಕೇರಿಯ ಅಂದಿನ ಸೆಂಟ್ರಲ್ ಸ್ಕೂಲ್‌ನಲ್ಲಿ 5ನೇ ಫಾರಂ ವ್ಯಾಸಂಗ ಮಾಡಿದ್ದು, ಶಾಲೆ ಮುಗಿದಂತೆ ಲೋಕೋಪಯೋಗಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ಬಾಲ್ಯದಿಂದಲೂ ಸೇನೆ ಸೇರಬೇಕೆಂಬುದು ನನ್ನ ಮಹದಾಸೆಯಾಗಿತ್ತು. ಹೀಗೆ ಒಮ್ಮೆ ಸೇನಾ ನೇಮಕಾತಿ ಬಗ್ಗೆ ಪತ್ರಿಕೆಯಲ್ಲಿ ಓದಿ ಬೆಂಗಳೂರಿಗೆ ತೆರಳಿ ಫೆ.8ರಂದು 1943ರಲ್ಲಿ ಸೇನೆಗೆ ಆಯ್ಕೆಯಾದೆ. ಮುಂಬೈನಲ್ಲಿ ಸೇನಾ ತರಬೇತಿ ಪಡೆದೆ. ನಾನು ಬರ್ಮಾ ಗಡಿ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಗಾಂಧೀಜಿ ಅವರು ಭಾಷಣ ಮಾಡಿದ್ದರು. ‘ಯಾರೂ ಹೋಗಬೇಡಿ. ನಮಗೆ ಬ್ರಿಟಿಷರು ಸ್ವಾತಂತ್ರ್ಯ ನೀಡುತ್ತಾರೆ’ ಎಂದಿದ್ದು ನನಗೀಗಲೂ ನೆನಪಿದೆ.
ಮುಂಬೈನಲ್ಲಿ ಸೇನೆಯಲ್ಲಿದ್ದ ಸಂದರ್ಭ ನಾನು ಹಾಕಿ ಆಟವಾಡುತ್ತಿದ್ದೆ. ಇದರಿಂದ ನನ್ನನ್ನು ಭಾರತ ಸೇನೆಯ ಹಾಕಿ ತಂಡದಲ್ಲಿ ಸೇರಿಸಿಕೊಂಡಿದ್ದರು. ಬ್ರಿಟಿಷರೊಂದಿಗೆ ಪಂದ್ಯ ನಡೆಯುತ್ತಿತ್ತು. ಪಂದ್ಯವೊಂದರಲ್ಲಿ ಗೋಲ್ ಬಾರಿಸುವ ವೇಳೆ ಎದುರಾಳಿ ತಂಡದ ಆಟಗಾರ ನನ್ನ ಕಾಲಿಗೆ ಸ್ಟಿಕ್ ಹಾಕಿದ್ದ. ಆಗ ಕಾಲಿಗೆ ಗಾಯವಾಗಿತ್ತು. ಇದಾದ ನಂತರ ಬರ್ಮಾದ ಗಡಿ ಪ್ರದೇಶಕ್ಕೆ ತೆರಳಿದ್ದೆ.
ಯುದ್ಧದಲ್ಲಿ ಪಾಲ್ಗೊಂಡವರಿಗೆ ಸಂಭಾವನೆ
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪಾಲ್ಗೊಂಡ ಕಾರಣ ದುಪ್ಪಟ್ಟು ಸಂಬಳವನ್ನು ಪಡೆದಿದ್ದೇನೆ. ಭಾರತೀಯ ಸೇನಾ ಕ್ಯಾಂಪ್ ವತಿಯಿಂದ 45 ರು. ಮತ್ತು ಕಾಂಬೈಂಡ್ ಸಿನಿಮಾಟೋಗ್ರಫಿ ಸವೀರ್‍ಸ್ ವತಿಯಿಂದ 85 ರು. ಪಡೆದಿದ್ದೇನೆ. ನಿವೃತ್ತಿಯ ಬಳಿಕವೂ ನನಗೆ ಭಾರತೀಯ ಸೇನೆಯಿಂದ ಸಂಭಾವನೆ ಬರುತ್ತಿದೆ. ಆದರೆ ಕಳೆದ 3 ತಿಂಗಳಿಂದ ಅದೂ ಬರುತ್ತಿಲ್ಲ. ಆದರೆ ದಕ್ಷಿಣ ಕೊಡಗಿನ ತಿತಿಮತಿ ಬಳಿ ಅಂದಾಜು 10 ಎಕರೆಯಷ್ಟುಭೂಮಿಯನ್ನು ಸರ್ಕಾರ ಮಂಜೂರು ಮಾಡಿದೆ. ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡವರಿಗೆ ಭಾರತ ಸರ್ಕಾರ 1993ರಿಂದ ಸಂಭಾವನೆಯನ್ನು ನೀಡಲು ಆರಂಭಿಸಿತ್ತು. 300 ರು.ನಿಂದ ಆರಂಭಗೊಂಡು ಕಾಲಕಾಲಕ್ಕೆ ಅಲ್ಪ ಪ್ರಮಾಣದಲ್ಲಿ ಹೆಚ್ಚಳಗೊಂಡು ಈಗ 6 ಸಾವಿರ ರು.ಗೆ ಏರಿದೆ. ನನಗೀಗ 98 ವರ್ಷ. ಮರೆವಿನ ದೌರ್ಬಲ್ಯ ಇದೆ. ಹಾಗಾಗಿ ವಿಶ್ವಯುದ್ಧದ ಬಗ್ಗೆ ಹೆಚ್ಚು ನೆನಪಿಲ್ಲ.
- ಬುಟ್ಟಿಯಂಡ ಎಂ.ಅಪ್ಪಾಜಿ, ನಿವೃತ್ತ ಸೇನಾ ಸಿನಿಮಾ ಆಪರೇಟರ್ ಮತ್ತು ಮೆಕ್ಯಾನಿಕ್
ನಿರೂಪಣೆ: ವಿಘ್ನೇಶ್ ಎಮ ಭೂತನಕಾಡು