ತನ್ನ ಬಂಧುಗಳಿಗೆ ಕೋವಿಡ್ ತುರ್ತು ಚಿಕಿತ್ಸೆಗಾಗಿ ಪ್ಲಾಸ್ಮಾ ಪಡೆಯಲು ಟ್ವಿಟರ್‌ನಲ್ಲಿ ತನ್ನ ಫೋನ್ ನಂಬರ್ ಹಾಕಿಕೊಂಡ ಯುವತಿಗೆ ಲಫಂಗ ಪುರುಷರಿಂದ ಆದ ಕಿರುಕುಳ ಏನು ಗೊತ್ತಾ?
ತಮ್ಮ ಒಬ್ಬರು ಬಂಧುವಿಗೆ ಕೋವಿಡ್ ಸೀರಿಯಸ್ ಆದಾಗ, ಅವರಿಗೆ ಪ್ಲಾಸ್ಮಾ ಮತ್ತಿತರ ಎಮರ್ಜೆನ್ಸಿ ಅವಶ್ಯಕತೆಗಳಿಗಾಗಿ ಫೇಸ್‌ಬುಕ್- ಟ್ವಿಟರ್‌ನಲ್ಲಿ ತನ್ನ ಫೋನ್ ನಂಬರ್ ಹಂಚಿಕೊಂಡ ಯುವತಿ ಪ್ರತಿಯಾಗಿ ಪಡೆದದ್ದು ಮಾತ್ರ ಕೆಲವು ಗಂಡಸರ ತೀಟೆಯನ್ನು. ಶಾಶ್ವತಿ ಶಿವ ಎಂಬ ಈ ಮಹಿಳೆ ಹಂಚಿಕೊಂಡ ಈ ಆಘಾತಕಾರಿ ಸಂಗತಿ ಇಲ್ಲಿದೆ.
ಇತ್ತೀಚೆಗೆ ಮುಂಬಯಿಯಲ್ಲಿರು ಶಾಶ್ವತಿ ಅವರ ಕುಟುಂಬದಲ್ಲಿ ಒಬ್ಬರಿಗೆ ಕೋವಿಡ್ ತಗುಲಿತು. ಅವರು ವಯಸ್ಸಾದವರು. ಅಸ್ತಮಾ ಇದ್ದುದರಿಂದ ಉಸಿರಾಟದ ಸಮಸ್ಯೆ ಜೋರಾಯಿತು. ಆಅಸ್ಪತ್ರೆ ಹಾಸಿಗೆಗಳಿಗಾಗಿ, ವೆಂಟಿಲೇಟರ್‌ಗಾಗಿ ಹುಡುಕಾಟ ನಡೆಯಿತು. ಆದರೆ ಎಲ್ಲೂ ಸಿಗಲಿಲ್ಲ. ಎಲ್ಲ ಕಡೆ ಆಕ್ಸಿಜನ್ ಕೊರತೆ. ಶಾಶ್ವತಿ ಅವರು ಕೂಡಲೇ ಆಕ್ಸಿಜನ್‌ಗಾಗಿ ಟ್ವಿಟರ್‌ನಲ್ಲಿ ಮನವಿ ಮಾಡಿದ್ದಲ್ಲದೆ, ತಮ್ಮ ಫೋನ್ ನಂಬರನ್ನೂ ಅದರಲ್ಲಿ ಹಾಕಿದರು. ಇದು ಸಹಾಯವಾಯಿತು. ಆರು ಗಂಟೆಯಲ್ಲಿ ವೆಂಟಿಲೇಟರ್ ದೊರೆಯಿತು. ಅಷ್ಟರ ಮಟ್ಟಿಗೆ ಸಮಸ್ಯೆ ಪರಿಹಾರವಾಯಿತು. ಆದರೆ ಎರಡು ದಿನಗಳಲ್ಲಿ ಸಮಸ್ಯೆ ಬಿಗಡಾಯಿಸಿತು. ಪ್ಲಾಸ್ಮಾ ಚಿಕಿತ್ಸೆಯ ಅಗತ್ಯ ಬಿತ್ತು. ಕೂಡಲೇ ಇವರಿಗೆ ಪರಿಚಯವಿದ್ದ ಕೆಲವು ಸೋಶಿಯಲ್ ಸೆಲೆಬ್ರಿಟಿಗಳ ಅಕೌಂಟ್‌ನಲ್ಲಿ ಶಾಶ್ವತಿ ಅವರ ಮನವಿ ಹಾಗೂ ಫೋನ್ ನಂಬರನ್ನು ಶೇರ್ ಮಾಡಲಾಯಿತು.
undefined
Posted on instagram about the harrasment I faced from men when I put my number out for a Covid emergency. Not only have the "Not All Men" brigade arrived on the comments section, I'm getting harrassed even more.
And then you wonder why victims don't speak up.
MY HEAD HURTS. 😵 pic.twitter.com/sCfcHpru3e
ಅದಾದ ಕೆಲವೇ ಗಂಟೆಗಳಲ್ಲಿ ಅವರಿಗೆ ಫೋನ್‌ಗಳು ಬರಲಾರಂಭಿಸಿದವು, ಪ್ಲಾಸ್ಮಾ ಹುಡುಕುವುದು, ಅದು ಹೊಂದುತ್ತದೆಯೇ ಇಲ್ಲವೇ ಎಂದು ನೋಡುವುದು, ಬ್ಲಾಡ್ ಬ್ಯಾಂಕ್‌ಗಳ ಸಂಪರ್ಕ ಇತ್ಯಾದಿಗಳಲ್ಲಿ ಶಾಶ್ವತಿ ಬ್ಯುಸಿಯಾದರು. ನಿಮಿಷಕ್ಕೆ ಮೂರು ಫೋನ್ ಕಾಲ್‌ಗಳು ಬರತೊಡಗಿದವು. ಇದೆಲ್ಲವೂ ಬಹಳ ಶ್ರಮದಾಯಕ, ಮನಸ್ಸಿನ ಶಕ್ತಿಯನ್ನೆಲ್ಲ ಬಸಿದುಬಿಡುವ ಸಮಯವಾಗಿತ್ತು. ಇದರ ನಡುವೆಯೇ ಒಬ್ಬ ಪುರುಷನ ಕಾಲ್ ಆಕೆಗೆ ಬಂತು. 'ನೀನು ಸಿಂಗಲ್ಲಾ?' ಎಂದು ಆ ಕಡೆಯವನು ಕೇಳಿದ. ಈಕೆಗೆ ಕಿರಿಕಿರಿಯೆನಿಸಿ ಕಾಲ್ ಕಟ್ ಮಾಡಿದಳು.
ಇದಾಗ ಎರಡೇ ನಿಮಿಷದಲ್ಲಿ ಮತ್ತೊಂದು ಕಾಲ್. 'ನನ್ನ ಡಿಪಿ ತುಂಬಾ ಚೆನ್ನಾಗಿದೆ' ಎಂದು ಆ ಕಡೆಯಿಂದ ಇನ್ನೊಬ್ಬ ಗಂಡಸು. ಆ ಕರೆಯನ್ನೂ ಈಕೆ ಕಟ್ ಮಾಡಿ, ನಂಬರನ್ನು ಬ್ಲಾಕ್ ಮಾಡಿದಳು. ಹೀಗೇ ಗಂಡಸರ ಕಾಲ್‌ಗಳು ಬರತೊಡಗಿದವು. ನೀನು ಒಬ್ಬಾಕೇನೇ ಇರ್ತೀಯಾ, ನನ್ಜೊತೆ ಬರ್ತೀಯಾ, ನಿನ್ನ ವಯಸ್ಸು ಎಷ್ಟು, ಎಂದೆಲ್ಲ ಪ್ರಶ್ನೆಗಳು. ಒಬ್ಬಾತ ಕಿಸ್ಸಿಂಗ್ ಸೌಂಡನ್ನೂ ಮಾಡಿದ.
ಮರುದಿನ ಸ್ಥಿತಿ ಇನ್ನೂ ಬಿಗಡಾಯಿಸಿತು. ಶಾಶ್ವತಿ ಪ್ಲಾಸ್ಮಾ ಹೊಂದಿಸಲು ಆಸ್ಪತ್ರೆಗಳಿಗೆ ಓಡಾಡುತ್ತಾ ಹೆಣಗುತ್ತಿದ್ದರೆ. ಇನ್ನೊಂದು ಕಡೆಯಿಂದ ಏಳು ಮಂದಿ ಗಂಡಸರು ಏಕಕಾಲಕ್ಕೆ ವಿಡಿಯೋ ಕಾಲ್ ಮಾಡುತ್ತಿದ್ದರು. ಈಕೆಗೆ ತಡೆಯಲು ಸಾಧ್ಯವಾಗಲೇ ಇಲ್ಲ. ಫೋನ್ ಸೈಲೆಂಟ್ ಮಾಡಿ ಸುಮ್ಮನಾದಳು, ನಂತರ ಆ ಎಲ್ಲ ನಂಬರ್‌ಗಳನ್ನೂ ಬ್ಲಾಕ್ ಮಾಡಿದಳು.
ಆದರೆ ಸಮಸ್ಯೆ ಇನ್ನೊಂದು ರೂಪದಲ್ಲಿ ಉಲ್ಬಣಿಸಿತು. ಫೋನ್ ಕರೆ ಇಲ್ಲವೆಂದು ನಿರಾಳವಾಗಿ ಈಕೆ ವಾಟ್ಸ್ಯಾಪ್ ಓಪನ್ ಮಾಡಿದರೆ, ಅದರಲ್ಲಿ ಹಲವಾರು ಪುರುಷರು ತಮ್ಮ ಶಿಶ್ನದ ಫೋಟೋಗಳನ್ನು ಈಕೆಗೆ ಕಳಿಸಿದ್ದರು! ಇದರಿಂದ ಆಕೆಗೆ ತುಂಬಾ ಶಾಕ್ ಆಗಿಬಿಟ್ಟಿತು. ಅಸಹ್ಯ ಉಕ್ಕಿಬಂತು. ಅಸಹಾಯಕತೆ, ಸಿಟ್ಟು, ವಿಷಾದ, ನೋವು ಎಲ್ಲವೂ ಉಕ್ಕಿಬಂದವು. ಇದೆಲ್ಲದರಿಂದ ಆಳವಾಗಿ ಆಘಾತಗೊಂಡ ಆಕೆ, ಆ ಚಿತ್ರಗಳನ್ನೆಲ್ಲ ಕೂಡಲೇ ಡಿಲೀಟ್ ಮಾಡಿದಳು. ತನ್ನ ಫೋನ್ ನಂಬರ್‌ಗಳಿದ್ದ ಅಕೌಂಟ್ ಹೊಂದಿದವರಿಗೆ ಫೋನ್ ಮಾಡಿ, ತನ್ನ ನಂಬರ್‌ಗಳನ್ನು ಅಲ್ಲಿಂದ ತೆಗೆಸಿಹಾಕಿದಳು. ಅಷ್ಟರಲ್ಲಾಗಲೇ ಆಕೆಗೆ ಬೇಕಾದ ಪ್ಲಾಸ್ಮಾ ಸಿಕ್ಕಿತ್ತು.
ಬಂದುವಿನ ಕೋವಿಡ್‌ಗೇನೋ ಚಿಕಿತ್ಸೆ ಸಿಕ್ಕಿತ್ತು. ಆದರೆ, ಆ ಮೆಡಿಕಲ್ ಎಮರ್ಜೆನ್ಸಿಯ ಒತ್ತಡ ಆತಂಕಗಳ ನಡುವೆಯೇ ಆಕೆಯ ಮೇಲೆ ನಡೆದ ಈ ಮಾನಸಿಕ ಹಲ್ಲೆ, ಆಘಾತವನ್ನು ಹೇಗೆ ವರ್ಣಿಸುವುದು? ಗಂಡಸರು ಯಾಕೆ ಇಷ್ಟೊಂದು ಅಸಹ್ಯಕರವಾಗಿ ನಡೆದುಕೊಳ್ಳುತ್ತಾರೆ, ಯಾಕೆ ಅಸಹಾಯಕತೆಯ ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಆಕೆಗೆ ಉತ್ತರ ಸಿಕ್ಕಿಲ್ಲ. ಶಾಕ್‌ನಿಂದ ಇನ್ನೂ ಆಕೆ ಚೇತರಿಸಿಕೊಂಡಿಲ್ಲ. ಇದನ್ನೆಲ್ಲ ಆಕೆ ಟ್ವಿಟರ್‌ನಲ್ಲಿ ಬರೆದಳು. ಪೊಲೀಸರು ಆಕೆಗೆ ಕರೆ ಮಾಡಿ, ಆಕೆಗೆ ಮೆಸೇಜ್ ಮಾಡಿದ ಫೋನ್ ನಂಬರ್‌ಗಳ ತನಿಖೆ ಮಾಡಲು ಉದ್ದೇಶಿಸಿದರು. ಆದರೆ ಆಕೆ ಕೋವಿಡ್ ಎದುರಿಸುವ ಹೋರಾಟದಲ್ಲಿ ಮಗ್ನಳಾಗಿದ್ದರಿಂದ, ಇನ್ನೊಂದನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧಳಾಗಲಿಲ್ಲ.
ಹೌದು, ಕೆಲವು ಪುರುಷರು ಯಾಕೆ ಹೀಗೆ ಸ್ತ್ರೀಯರ ಸಂಪರ್ಕ ಸಂಖ್ಯೆಗಳ ದುರ್ಬಳಕೆ ಮಾಡುತ್ತಾರೆ? ಇದೊಂದು ಲೈಂಗಿಕ ವಿಕೃತಿ. ಕೆಲವರು ತಮಗಾಗಗ ಮಹಿಳೆಯರು ಫೋನ್ ನಂಬರ್‌ಗಳನ್ನು ಪಬ್ಲಿಕ್ ಫ್ಲ್ಯಾಟ್‌ಫಾರ್ಂಗಳಲ್ಲಿ ಹಂಚಿ, ಆಕೆಗೆ ವಿಕರತ ಕರೆಗಳು ಬರುವುದನ್ನು ನೋಡಿ ಸಂಭ್ರಮಿಸುವುದು ಕೂಡ ಇದೇ ಬಗೆಯ ವಿಕೃತಿ. ಇಂಥವರಿಗೆ ಶಿಕ್ಷೆ, ಶಿಕ್ಷಣ, ಕೌನ್ಸೆಲಿಂಗ್, ಚಿಕಿತ್ಸೆ ಎಲ್ಲವೂ ಅಗತ್ಯವಿದೆ.