ಒಂದು ಕಾಲದಲ್ಲಿ ಸಂಕೋಚದಿಂದ, ಅಂಜಿಕೆಯಿಂದ ಮತ್ತು ಬಹಿಷ್ಕೃತಗೊಳ್ಳುವ ಭಯದಿಂದ ರಂಗಭೂಮಿಯಲ್ಲಿ ನಟಿಸುತ್ತಿದ್ದ ಮಹಿಳೆ ಇವತ್ತು ಅಲ್ಲಿ ದಿಟ್ಟತನದಿಂದ ತನ್ನ ಅಸ್ಮಿತೆಯನ್ನು ತೋರುತ್ತಿರುವುದನ್ನು ಕಾಣಬಹುದು. ನಾಡಿದ್ದು, ಭಾನುವಾರ ಮಹಿಳಾ ದಿನ. ಈ ಹಿನ್ನೆಲೆಯಲ್ಲಿ ಚಿತ್ರರಂಗದ ಕೆಲವರು ತಮ್ಮ ನಿಲುವುಗಳನ್ನು ಹೇಳಿಕೊಂಡಿದ್ದಾರೆ.
ಅದಿತಿ ಪ್ರಭುದೇವ್, ನಟಿ
ಮಹಿಳಾ ದಿನಾಚರಣೆ ಅಂದ್ರೆ ಇದು ಮಹಿಳೆಯರ ಹಬ್ಬದ ದಿನ. ಅದಕ್ಕಾಗಿಯೇ ನನಗಿದು ಹೆಮ್ಮೆಯ ದಿನ. ಹೆಣ್ಣಾಗಿ ಹುಟ್ಟಿದ್ದಕ್ಕೆ ಸಂಭ್ರಮಿಸುವ ಕ್ಷಣ. ಈ ಸಂಭ್ರಮ ನನಗಿರುವ ಸ್ವಾತಂತ್ರ್ಯ, ನನ್ನ ಕೆಲಸ ಕಾರ್ಯಗಳಿಗೆ, ನನ್ನ ಬದುಕಿಗೆ ಕುಟುಂಬದಿಂದ ಸಿಕ್ಕ ಬೆಂಬಲದ ಮೂಲಕ ಆಚರಿಸ್ಪಡುತ್ತದೆ ಎನ್ನುವುದು ನನ್ನಭಾವನೆ. ಹಾಗಂತ ಇಡೀ ಮಹಿಳೆಯರ ಬದುಕು ನನ್ನಂತೆಯೇ ಇದೆ ಎಂದು ನಾನು ಭಾವಿಸುವುದಿಲ್ಲ. ವಾಸ್ತವ ಬೇರೆಯೇ ಇದೆ. ಅನಾದಿ ಕಾಲದಿಂದ ಹೆಣ್ಣನ್ನು ಶಕ್ತಿಶಾಲಿ ಅಂತಲೇ ಬಿಂಬಿಸಲಾಗಿದೆ. ಹೆಣ್ಣು ಅಂದ್ರೆ ಭೂಮಿತಾಯಿ, ಹೆಣ್ಣು ಅಂದ್ರೆ ದುರ್ಗಮಾತೆ, ಹೆಣ್ಣು ಅಂದ್ರೆ ಆದಿಶಕ್ತಿ ಅಂತ ಪುರಾಣಗಳಲ್ಲೆ ವರ್ಣಿಸಲಾಗಿದೆ. ಅದೇ ಭಾವನೆ ಆಚರಣೆಯಲ್ಲೂ ಬಂದಿದ್ದರೆ, ಹೆಣ್ಣು ಅದೃಷ್ಟವಂತೆ ಆಗಿರುತ್ತಿದ್ದಳು. ಜಗತ್ತು ಕೂಡ ಸುಭೀಕ್ಷವಾಗಿರುತ್ತಿತ್ತೆನೋ, ಆದರೆ ವಾಸ್ತವ ಬೇರೆಯೇ ಇದೆ. ಸಾಮಾಜಿಕ ನಿರ್ಬಂಧ ಹೇರಿ ಅವಕಾಶಗಳಿಂದಲೂ ಹೆಣ್ಣು ವಂಚಿತಳನ್ನಾಗಿ ಮಾಡಿದ್ದು ದುರಾದೃಷ್ಟವೇ ಹೌದು. ಮಹಿಳಾ ದಿನಾಚರಣೆಗೆ ನಾನು ಸಂಭ್ರಮಿಸುವಂತಹ ವ್ಯವಸ್ಥೆ , ಸಮಸ್ತ ಮಹಿಳಾ ಲೋಕಕ್ಕೂ ಸಿಗಬೇಕಾದ್ರೆ, ಹೆಣ್ಣನ್ನು ಕೆಟ್ಟದಾಗಿ ನೋಡುವ ಮನೋಭಾವ ಬದಲಾಗಬೇಕು. ಅಸಮಾನತೆ ಹೋಗಬೇಕು. ಹೆಣ್ಣನ್ನು ಗೌರವದಿಂದ, ಮಮತೆಯಿಂದ, ಪ್ರೀತಿಯಿಂದ ನೋಡುವ ಸಮಾಜ ನಿರ್ಮಾಣ ಆಗಬೇಕು. ಆ ನಿಟ್ಟಿನಲ್ಲಿ ಮಹಿಳಾ ದಿನಾಚರಣೆ ಅರ್ಥಪೂರ್ಣವಾಗಲಿ ಎನ್ನುವುದು ನನ್ನ ಆಶಯ.
ನನಗಂತೂ ಕನ್ನಡ ಚಿತ್ರರಂಗದಲ್ಲಿ ಯಾವ ಕೆಟ್ಟ ಅನುಭವ ಆಗಿಲ್ಲ: ಭಾವನಾ ರಾವ್
ಖುಷಿ, ನಟಿ
ಮಹಿಳೆಯರಿಗಂತಲೇ ವಿಶೇಷವಾದ ದಿನ ಇದೆ ಎನ್ನುವುದೇ ವಿಶೇಷ. ಇದು ನನ್ನ ದಿನ ಎಂದುಕೊಳ್ಳುವುದೇ ಒಂಥರ ಖುಷಿ. ಇದು ಕೇವಲ ಸಂಭ್ರಮದ ಆಚರಣೆಗೆ ಸಿಮೀತವಾಗದೆ, ಅರ್ಥಪೂರ್ಣವಾಗಬೇಕು. ಮಹಿಳಾ ದಿನದ ಹುಟ್ಟಿನ ಉದ್ದೇಶ ಪ್ರತಿಯೊಬ್ಬರಿಗೂ ತಿಳಿಯಬೇಕು.ಆಗಲೇ ಇದು ಪ್ರತಿಯೊಬ್ಬರ ದಿನ ಆಗಲು ಸಾಧ್ಯ. ಇನ್ನು ನನಗೆ ನಾನು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಸಿಕ್ಕಿರುವುದಕ್ಕೂ ಖುಷಿಯಿದೆ. ಓದಿನ ಜತೆಗೆ ಸಿನಿಮಾ ನಟಿ ಆಗಬೇಕೆನ್ನುವುದು ನನ್ನಾಸೆ ಆಗಿತ್ತು. ಅಂದುಕೊಂಡಂತೆ ಅಲ್ಲಿಗೆ ಬರುವುದು ನನ್ನ ಸ್ವಾತಂತ್ರ್ಯ. ಅದಕ್ಕೆ ಯಾರು ಕೂಡ ಅಡ್ಡಿ ಪಡಿಸಿಲ್ಲ. ಇದು ನಟಿಯಾಗುವು ವಿಚಾರ ಮಾತ್ರವಲ್ಲ, ನನ್ನ ಆಸೆ, ಆಕಾಂಕ್ಷೆಗಳ ವಿಚಾರದಲ್ಲೂ ಕೂಡ. ನನ್ನ ಮನೆಯವರ ವಿಶಾಲ ಮನಸ್ಥಿತಿಯಿಂದ ಇದು ಸಾಧ್ಯವಾಯಿತು. ಇದೇ ವಾತಾವರಣ ಎಷ್ಟುಮನೆಗಳಲ್ಲಿ ಇರಲು ಸಾಧ್ಯ? ಹತ್ತು ಹಲವು ಕಟ್ಟುಪಾಡುಗಳು, ನಿರ್ಬಂಧಗಳ ಒಳಗೆ ಬದುಕುತ್ತಿರುವ ಮಹಿಳೆಯ ಸಂಖ್ಯೆ ಹೆಚ್ಚಿದೆ. ಹಳ್ಳಿ ಗಾಡಿನ ಮಹಿಳೆಗೆ ನಿಜವಾದ ಸ್ವಾತಂತ್ರ್ಯ ಇವತ್ತಿಗೂ ಸಿಕ್ಕಿಲ್ಲ. ಇದು ಸರಿ ಹೋಗಬೇಕು. ತಮ್ಮಷ್ಟೇ ಮಹಿಳೆ ಕೂಡ ಸಮಾನಳು, ಸ್ವಾತಂತ್ರ್ಯಳು ಎನ್ನುವ ಮನೋಭಾವ ಪುರುಷರಿಗೂ ಬರಬೇಕು. ಆಘ ಮಾತ್ರ ಮಹಿಳಾ ದಿನಾಚರಣೆ ಪ್ರತಿಯೊಬ್ಬ ಮಹಿಳೆಯ ದಿನವಾಗಲೂ ಸಾಧ್ಯ.
ರಿಷಿಕಾ ಶರ್ಮಾ, ನಟಿ ಹಾಗೂ ನಿರ್ದೇಶಕಿ
ಸಂಗೀತಾ, ಡ್ರಮ್ ಮತ್ತು ಪ್ರಿಯಾ ಆ್ಯಂಡ್ರ್ಯೂ
ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯ. ಮಾಚ್‌ರ್ 8 ತುಂಬಾ ಮಹತ್ವದ ದಿನ. ಪ್ರತಿ ದಿನವೂ ಮುಖ್ಯವೇ. ಆದರೆ ಇದೊಂದು ದಿನ ಮಹಿಳೆಯರ ಸಂಭ್ರಮಕ್ಕೆ ಮೀಸಲಾಗಿದ್ದು ವಿಶೇಷ. ಅದರ ಸಂಭ್ರಮದಲ್ಲಿ ಒಬ್ಬಳಾಗುವ ನಾನು ಮಹಿಳೆಯಾಗಿ ಹುಟ್ಟಿದ್ದಕ್ಕೆ ತುಂಬಾ ಹೆಮ್ಮೆ ಇದೆ. ಹಾಗಂತ ನಾನು ಪುರುಷ ವಿರೋಧಿ ಅಲ್ಲ. ನಾನು ಇಷ್ಟುದೂರ ಬರುವುದಕ್ಕೆ ಅಮ್ಮ ಕಾರಣವಾಗಿರುವ ಹಾಗೆಯೇ ಅಜ್ಜ, ಅಜ್ಜಿ, ಅಮ್ಮ, ಅಪ್ಪ, ಅಣ್ಣ , ತಮ್ಮ , ತಂಗಿ ಸೇರಿ ಎಲ್ಲರೂ ಕಾರಣರು. ಇದರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚಿದೆ. ಜಗತ್ತಿಗೆ ನಾವೇನು ಕೊಡುತ್ತೇವೋ , ಅದನ್ನು ಜಗತ್ತು ಕೊಡುತ್ತದೆ. ಅದು ಅಪ್ಪ, ಅಣ್ಣ, ತಮ್ಮ ನ ಪ್ರೀತಿಯ ವಿಚಾರದಲ್ಲೂ ಕೂಡ. ನಾವೆಲ್ಲ ಇಲ್ಲಿ ಶಾಶ್ವತ ಇರಲು ಬಂದಿಲ್ಲ. ಅಂತಿಮವಾಗಿ ಉಳಿಯುವುದು ನಮ್ಮ ಕೆಲಸ ಮತ್ತು ಸಾಧನೆ. ಆ ನಿಟ್ಟಿನಲ್ಲಿ ನಮ್ಮ ಹೆಜ್ಜೆಗಳು ಇರಬೇಕು ಅಂತ ಪಾಸಿಟಿವ್ ಆಗಿ ಯೋಚಿಸಲು ಹೊರಟರೆ, ತರಾತಮ್ಯಗಳು ತಾವಾಗಿಯೇ ದೂರವಾಗುವುದಕ್ಕೆ ಸಾಧ್ಯ. ಮಹಿಳಾ ದಿನಾಚರಣೆಯ ಮಹತ್ವ ಕೂಡ ಆ ನಿಟ್ಟಿನಲ್ಲೇ ಇರಬೇಕಿದೆ.
ಆರೋಹಿ ನಾರಾಯಣ್, ನಟಿ
ಎಲ್ಲರಿಗೂ ಎಲ್ಲ ದಿನವೂ ಮುಖ್ಯವೇ. ಆದ್ರೂ, ಮಹಿಳಾ ದಿನಾಚರಣೆಗೆ ಅಂತಲೇ ಒಂದು ದಿನ ಮೀಸಲಾಗಿದ್ದು ದೊಡ್ಡ ಉದ್ದೇಶ ಮತ್ತು ಹಿನ್ನೆಲೆಯ ಮೂಲಕ. ಆ ನೆಪದಲ್ಲಿ ನಮಗೊಂದು ವಿಶೇಷವಾದ ದಿನ ಸಿಕ್ಕಿರುವುದು ನಿಜಕ್ಕೂ ಖುಷಿ ವಿಚಾರ. ಹಾಗೆಯೇ ಹೆಣ್ಣಾಗಿ ಹುಟ್ಟಿದ್ದಕ್ಕೂ ನನಗೆ ಹೆಮ್ಮೆಯಿದೆ. ಇನ್ನು ನನ್ನ ಸ್ವಾತಂತ್ರ್ಯದ ವಿಚಾರದಲ್ಲಿ ಅದೃಷ್ಟವಂತೆ. ಯಾಕಂದ್ರೆ, ಅದರ ಪೂರ್ಣ ಪ್ರಮಾಣದ ಪಾಲುದಾರಳು ನಾನು. ಅದಕ್ಕೆ ಕಾರಣ ನನ್ನ ಕುಟುಂಬ ಮತ್ತು ನನ್ನ ಸುತ್ತಲ ಪರಿಸರ. ಸಹಜವಾಗಿ ಹೆಣ್ಣು ಮಕ್ಕಳಿಗೆ ಇಂತಹದೊಂದು ಮುಕ್ತ ಅವಕಾಶ ಸಿಗುವುದಕ್ಕೆ ಮೊದಲು ಮನೆ ಕಾರಣವಾಗಬೇಕು. ಆನಂತರ ಸಮಾಜ. ಆಗಲೇ ಮನೆ ಮತ್ತು ಸಮಾಜದಲ್ಲಿ ಹೆಣ್ಣಿಗೆ ಗೌರವ ಮತ್ತು ಮರ್ಯಾದೆ ಸಿಗಲು ಸಾಧ್ಯ. ಈ ವಿಚಾರದಲ್ಲಿ ನನಗೆ ಬಯಸಿದಷ್ಟುಸ್ವಾತಂತ್ರ್ಯ ಸಿಕ್ಕಿದೆ. ಸುರಕ್ಷತೆ ವಿಚಾರದಲ್ಲಿ ಮನೆಯವರು ಸದಾ ಎಚ್ಚರ ವಹಿಸಿದರೂ, ಇಷ್ಟೇ ಹೊತ್ತಿಗೆ ಬರಬೇಕು, ಇಲ್ಲಿಗೆ ಹೋಗಬೇಕು ಅಂತೆಲ್ಲ ಯಾವತ್ತಿಗೂ ನಿರ್ಬಂಧ ಹಾಕಿಲ್ಲ. ಜತೆಗೆ ಇಂತಹದ್ದನ್ನೇ ಮಾಡಬೇಕು ಅಂತಲೂ ಷರತ್ತು ಹಾಕಿಲ್ಲ. ಹಾಗಾಗಿ ನಾನು ಬಯಸಿದಂತೆ ನಟಿಯಾಗಿ ಸಿನಿಮಾ ರಂಗಕ್ಕೆ ಬರಲು ಸಾಧ್ಯವಾಯಿತು. ಸಮಾಜ ಕೂಡ ಹೆಣ್ಣನ್ನು ಇಷ್ಟೇ ವಿಶಾಲ ಮನಸ್ಥಿತಿ ನೋಡಿದರೆ ಆಕೆ ತನ್ನಾಸೆಗಳ ಹಾಗೆ ಸಾಧನೆ ಮಾಡುವುದಕ್ಕೂ ಸಾಧ್ಯ.
ಮಿಲನಾ ನಾಗರಾಜ್, ನಟಿ
ಮಹಿಳಾ ದಿನಾಚರಣೆ ಶುರುವಾಗಿದ್ದೇ ಸಮಾನ ವೇತನ, ಸಮಾನ ಅವಕಾಶಗಳಿಗೆ ಶುರುವಾದ ಮಹಿಳಾ ಹೋರಾಟದ ಮೂಲಕ. ಅಂತಹ ವ್ಯವಸ್ಥೆಗಾಗಿ ಅವತ್ತು ಮಹಿಳೆಯರು ಧ್ವನಿ ಎತ್ತಿದ್ದಕ್ಕಾಗಿ ಅವರಿಗೆ ನಾವು ಗೌರವ ಸಲ್ಲಿಸಬೇಕು. ಅದಕ್ಕೆ ಈ ಮಹಿಳಾ ದಿನಾಚರಣೆ ಕಾರಣವಾಗಬೇಕು. ಹಾಗೆಯೇ ನಮ್ಮನ್ನು ನಾವು ಕಂಡುಕೊಳ್ಳುವುದಕ್ಕೂ ಇದು ಪ್ರೇರಣೆ ಆಗಬೇಕು. ಈ ನಿಟ್ಟಿನಲ್ಲಿ ಇದು ನನ್ನ ದಿನ ಅಂತ ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆಯಿದೆ. ಇನ್ನು ನನ್ನ ಸ್ವಾತಂತ್ರ್ಯ ಅಂತ ಬಂದಾಗ ನನ್ನಿಷ್ಟದಂತೆಯೇ ಇಲ್ಲಿ ತನಕ ಬಂದಿದ್ದೇನೆ. ಒಬ್ಬ ಕ್ರೀಡಾಪಟು ಆಗಿದ್ದೂ ಕೂಡ ಅದಕ್ಕೆ ಕಾರಣವಾಗಿರಬಹುದೇನೋ. ಅದು ನನ್ನ ಆಸಕ್ತಿಯ ಕ್ಷೇತ್ರವಾಗಿತ್ತು. ಮನೆಯವರು ಅದಕ್ಕೆ ಬೆಂಬಲವಾಗಿ ನಿಂತರು. ಅಲ್ಲಿಂದ ನನ್ನ ಆಸೆ, ಆಕ್ಷಾಂಕ್ಷೆಗಳ ಹಾಗೆಯೇ ಬೆಳೆಯುತ್ತಾ ಬಂದೆ. ಅಂದುಕೊಂಡಂತೆಯೇ ಮುಂದೆ ಸಿನಿಮಾ ಜಗತ್ತಿಗೂ ಕಾಲಿಟ್ಟೆ. ಇಲ್ಲಿಗೆ ಹೋಗಬಾರದು ಅಂತ ಯಾರು ಕೂಡ ಹೇಳಿಲ್ಲ. ಇಲ್ಲಿಗೆ ಬರಬೇಡಿ ಅಂತಲೂ ಯಾರು ಹೇಳಿಲ್ಲ. ಇದೆಲ್ಲ ನನ್ನದೇ ಸ್ನಾತಂತ್ರ್ಯದ ಜಗತ್ತು. ಆರಂಭಿಕ ಕಷ್ಟಎನಿಸಿತ್ತು. ಈಗ ಒಂದಷ್ಟುಗೆಲವು, ಸಂಭ್ರಮ ಸಿಕ್ಕಿದೆ. ಇದು ಸಾಧ್ಯವಾಗುವುದು ನನ್ನದೇ ಸ್ವಾತಂತ್ರ್ಯ ಇದ್ದ ಕಾರಣಕ್ಕೆ. ಹೆಣ್ಣಿಗಾಲಿ, ಗಂಡಾಗಲಿ ಅವರವರ ಆಸಕ್ತಿ, ಅಭಿರುಚಿಯ ಬದುಕಿಗೆ ಇಂತಹ ಸ್ವಾತಂತ್ರ್ಯ ಬೇಕು. ಸಾಮಾನ್ಯವಾಗಿ ಗಂಡಿಗೆ ಅಂತಹ ಅವಕಾಶ ಸುಲಭವಾಗಿರುತ್ತೆ. ಹೆಣ್ಣಿಗೆ ಕಷ್ಟ. ಅದಕ್ಕೆ ಹಲವು ಕಾರಣ. ಆಕೆ ಮನೆಯಿಂದ ಹೊರ ಹೋಗುವುದಕ್ಕೆ ನಿರ್ಬಂಧ ಇರುತ್ತೆ. ಅಂತಹದರಲ್ಲಿ ಅಂದುಕೊಂಡಂತೆ ಸಾಧನೆ ಮಾಡಬೇಕು ಅಂತ ಹೊರಟರೆ ನಿರ್ಬಂಧಗಳೇ ಹೆಚ್ಚಿರುತ್ತವೆ. ಇದು ಇರಬಾರದು.
ನಿವೇದಿತಾ, ನಟಿ
ಆರಂಭದಲ್ಲಿ ನನಗೆ ಏನೀದು ಎಲ್ಲದಕ್ಕೂ ಒಂದು ದಿನ ಅಂತ ಫಿಕ್ಸ್ ಮಾಡ್ಬೇಕು ಅಂತೆನಿಸುತ್ತಿತ್ತು. ಅದು ಮಹಿಳಾ ದಿನಾಚರಣೆ ವಿಚಾರದಲ್ಲೂ ಇತ್ತು. ಆನಂತರ ಅದರ ಮಹತ್ವ ತಿಳಿಯಿತು. ಅವತ್ತಾದರೂ ಅದಕ್ಕೆ ಸಂಬಂಧಪಟ್ಟಂತೆ ಒಂದಷ್ಟುಕೆಲಸ ಆಗುತ್ತವೆ, ಚರ್ಚೆ, ವಿಚಾರಗಳು ನಡೆಯುತ್ತವೆ. ಆ ನಂತರ ಅದು ನನ್ನ ದಿನ ಅಂತೆನಿಸಿದ್ದು ನಿಜವೂ ಹೌದು. ಈ ನೆಪದಲ್ಲಾದರೂ ನಮ್ಮೊಳಗಿನ ಹೆಣ್ತವನ್ನು ನೋಡಿಕೊಳ್ಳೋಣ ಅಂತೆನಿಸುತ್ತೆ. ಇನ್ನು ನನ್ನ ಸ್ವಾತಂತ್ರ್ಯ ಅಂತ ಬಂದಾಗ ಅದರ ಇರುವಿಕೆಯ ಬಗ್ಗೆಯೇ ನನಗೆ ಅರಿವಿಲ್ಲ. ಸ್ವಾತಂತ್ರ್ಯದ ಕೊಟ್ಟು, ತೆಗೆದುಕೊಳ್ಳುವ ಪರಿವೆಯೇ ಅರ್ಥ ಆಗುತ್ತಿಲ್ಲ. ಹಾಗೆಲ್ಲ ಯಾರೋ ಸ್ವಾತಂತ್ರ್ಯ ಕೊಡುತ್ತಾರೆ ಆ ಪ್ರಕಾರ ಬದುಕಬೇಕು ಅಂತೆಲ್ಲ ನಾನು ಬೆಳೆದವಳಲ್ಲ. ಇಷ್ಟಕ್ಕೂ ಹಾಗೆಲ್ಲ ಇದೆಯಾ ಎನ್ನುವುದು ನನ್ನ ಪ್ರಶ್ನೆ. ನನ್ನ ಮನೆಯಲ್ಲಿ ನೀನು ಹುಡುಗಿ ಹಾಗೆಲ್ಲ ಇರಬಾರದು, ಹೀಗೆ ಇರಬೇಕು ಎನ್ನುವ ಮಾತೇ ಉದ್ಭವಿಸಿಲ್ಲ. ನನ್ನ ಬದುಕು, ನನ್ನ ಪ್ರಕಾರ ಬದುಕುತ್ತಾ ಬಂದೆ. ಕೆಲವೊಮ್ಮೆ ಹಾಗೆಲ್ಲ ಮಾತುಗಳು ಕೇಳಿ ಬಂದಿತ್ತು, ಸಿನಿಮಾಕ್ಕೆ ಬರಲು ನಿಮಗೆ ಸ್ವಾತಂತ್ರ್ಯ ಇದೆಯಾ , ಮನೆಯವರು ಕೊಟ್ಟಿದ್ದಾರಾ ಅಂತೆಲ್ಲ ಕೇಳಿದ್ದಾರೆ. ಹಾಗೆಲ್ಲ ಕೇಳಿ ಬರಬೇಕು ಅಂತೆಲ್ಲ ನನಗೆ ಯಾವತ್ತು ಅನಿಸಿಲ್ಲ. ಮನೆಯವರು ಕೂಡ ಪರವಾನಿಗೆ ಪಡೆದುಕೊಂಡು ಹೋಗಬೇಕು ಅಂತಲೂ ನಿರ್ಬಂಧ ಹಾಕಿಲ್ಲ. ಇದು ನನ್ನ ಬದುಕು. ಬಹುಶಃ ಹಿಂದಿನ ಪೀಳಿಗೆಯಲ್ಲಿ ಹೆಣ್ಣಿಗಿದ್ದ ನಿರ್ಬಂಧಗಳನ್ನು ನೋಡಿ, ನಮನ್ನು ಕೇಳಿತ್ತಿರಬಹುದೋ ಏನೋ. ಆದರೆ ನನಗೆ ಹಾಗೆಲ್ಲ ಯಾರೋ ಸ್ವಾತಂತ್ರ್ಯ ಕೊಡುತ್ತಾರೆ, ಆ ಪ್ರಕಾರ ಬದುಕಬೇಕು ಅಂತೆನಿಸಿಲ್ಲ.