ಕಣ್ಣೆದುರೇ ಅಣ್ಣನನ್ನು ಗುಂಡಿಕ್ಕಿ ಕೊಂದರು... 5 ಸಾವಿರ ಅನಾಥ ಶವಗಳಿಗೆ ಮುಕ್ತಿ ತೋರಿದ ಯುವತಿಯ ಕಥೆ ಕೇಳಿ...

By Suchethana D  |  First Published Sep 21, 2024, 3:02 PM IST

ಆಪ್ತ ಸಲಹೆಗಾರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವತಿಯೊಬ್ಬಳು ಇಂದು 5 ಸಾವಿರಕ್ಕೂ ಹೆಚ್ಚು ಅನಾಥ ಶವಗಳಿಗೆ ಮುಕ್ತಿ ತೋರಿಸಿದ್ದಾರೆ! ಕಣ್ಣೆದುರಿಗೇ ಅಣ್ಣನ ಸಾವು ಹೇಗೆ ಅವರ ಜೀವನ ಬದಲಾಯಿಸಿತು ಎನ್ನುವ ಕುತೂಹಲ ಕಥೆಯಿದು...
 


ಸುಮಾರು ಎರಡು ವರ್ಷಗಳ ಹಿಂದಿನ ಘಟನೆಯಿದು. ಕೆಲವು ಅಪರಿಚಿತರ ಜೊತೆ ನನ್ನ ಅಣ್ಣ ಜಗಳವಾಡುತ್ತಿದ್ದ. ನಾನು ಮನೆಯೊಳಕ್ಕೆ ಇದ್ದೆ. ಜಗಳ ವಿಕೋಪಕ್ಕೆ ಹೋಯಿತು. ಅವರನ್ನು ತಡೆಯಲು ಓಡೋಡಿ ಬಂದೆ. ಆದರೆ ಅಲ್ಲಿ ಗುಂಡಿನ ಕಾಳಗವೇ ನಡೆಯುತ್ತಿತ್ತು. ತಿರುಗಿ ನೋಡುವಷ್ಟರಲ್ಲಿಯೇ ನನ್ನ ಅಣ್ಣನ ಎದೆಗೆ ಗುಂಡು ಹೊಕ್ಕಿತು, ಕುಸಿದು ಬಿದ್ದ. ಎಲ್ಲರೂ ಓಡಿಹೋದರು. ನನಗೆ ದಿಕ್ಕೇ ತೋಚದಾಯಿತು. ಒಳಗೆ ಅಪ್ಪ ಇದ್ದರು. ಅವರಿಗೆ ವಿಷಯ ತಿಳಿದರೆ ತಡೆದುಕೊಳ್ಳುವ ಶಕ್ತಿ ಇಲ್ಲವೆಂದು ಒಂದು ಕ್ಷಣವೂ ತಡ ಮಾಡದೇ ಅಣ್ಣನನ್ನು ಆಸ್ಪತ್ರೆಗೆ ಕರೆದೊಯ್ದೆ. ಆದರೆ ಪರೀಕ್ಷೆ ಮಾಡಿದ ವೈದ್ಯರು ಇವನು ಬದುಕಿಲ್ಲ ಎಂದರು. ದಿಕ್ಕೇ ತೋಚದಾಯಿತು. ಏನು ಮಾಡಬೇಕೆಂದೇ ತಿಳಿಯಲಿಲ್ಲ. ಅಳುತ್ತಾ ಕುಳಿತರೆ ಮನೆಯನ್ನು ನೋಡಿಕೊಳ್ಳುವವರು ಯಾರು? ಅಪ್ಪನಿಗೆ ವಿಷಯ ಗೊತ್ತಾದರೆ ಗತಿಯೇನು ಎಂದೆಲ್ಲಾ ಯೋಚಿಸಿದೆ. ಮನೆಗೆ ಓಡಿ ಬಂದೆ. ಆದರೆ ಅಪ್ಪನಿಗೆ ಹೇಗೆ ವಿಷಯ ಹೇಳಬೇಕೋ ತಿಳಿಯಲಿಲ್ಲ. ನನ್ನ ಮುಖ ನೋಡಿ ಏನಾಯ್ತು ಕೇಳಿದರು ಅಪ್ಪ, ನಾನು ಹೇಳಲಿಲ್ಲ. ಆದರೆ ಪಕ್ಕದ ಮನೆಯವರು ಬಂದು ವಿಷಯ ತಿಳಿಸಿಬಿಟ್ಟರು. ಏನಾಗುತ್ತದೆ ಎನ್ನುವ ಭಯವಿತ್ತೋ, ಅದೇ ಆಗಿ ಹೋಯಿತು. ಅಪ್ಪ ಕುಸಿದುಬಿದ್ದರು, ಕೋಮಾಕ್ಕೆ ಹೋದರು... ಎನ್ನುತ್ತಲೇ ಅಂದು ನಡೆದ ಭಯಾನಕ ಘಟನೆಯನ್ನು ವಿವರಿಸಿದ್ದಾರೆ ಆಪ್ತ ಸಲಹೆಗಾರ್ತಿಯಾಗಿ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ದೆಹಲಿಯ ಪೂಜಾ ಶರ್ಮಾ. 

 ಅಣ್ಣನ ಶವ ಸಂಸ್ಕಾರ ನನ್ನ ಹೆಗಲ ಮೇಲೆ ಬಿತ್ತು. ಪಂಡಿತರನ್ನು ಕರೆಸಿದೆ. ಅಂತ್ಯಕ್ರಿಯೆ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿದರು. ಅವರು ಹೇಳಿದ್ದು ಗಂಡಸರು ಯಾರಿದ್ದಾರೆ ಎಂದು. ಆದರೆ ಆಗ ನಾನು ಹಿಂದೆ ಮುಂದೆ ನೋಡಲಿಲ್ಲ. ನಾನೇ ಇದ್ದೇನೆ. ನಾನೇ ಅಣ್ಣನ ಅಂತ್ಯಕ್ರಿಯೆ ಮಾಡುತ್ತೇನೆ ಎಂದೆ. ಅಲ್ಲಿದ್ದವರು ಹುಬ್ಬೇರಿಸಿದರು. ಆದರೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಅಣ್ಣನ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಸಿದೆ. ಮರುದಿನ ಸ್ಮಶಾನದಲ್ಲಿ  ಚಿತಾಭಸ್ಮವನ್ನು ಸಂಗ್ರಹಿಸಲು ಹೋದಾಗ, ಅಲ್ಲಿ ಸಾಕಷ್ಟು ಅಪರಿಚಿತ ಶವಗಳನ್ನು  ನೋಡಿದೆ. ಅವರ ಅಂತ್ಯಸಂಸ್ಕಾರ ಮಾಡಲು ಯಾರೂ ಇರಲಿಲ್ಲ. ಇವರು ಕೂಡ ಯಾರದ್ದೋ ಅಕ್ಕ, ಅಣ್ಣ, ಅಪ್ಪ-ಅಮ್ಮ ಹೀಗೆ ಸಂಬಂಧಿಕರೇ ಇರಬೇಕಲ್ಲವೆ ಎನ್ನಿಸಿತು. ನನ್ನ ಸ್ಥಿತಿಯೇ ಈ ಮನೆಯಲ್ಲಿಯೂ ಯಾಕೆ ಆಗಿರಬಾರದು ಎನ್ನಿಸಿತು. ಆ ಕ್ಷಣವೇ ಒಂದು ನಿರ್ಧಾರಕ್ಕೆ ಬಂದು ಬಿಟ್ಟೆ. ಉದ್ಯೋಗ ತೊರೆದೆ, ಅನಾಥ ಶವಗಳ ಸಂಸ್ಕಾರ ಮಾಡುವುದನ್ನೇ ಕಾಯಕ ಮಾಡಿಕೊಂಡೆ... ಎಂದಿದ್ದಾರೆ ಪೂಜಾ. 

Tap to resize

Latest Videos

ದೃಷ್ಟಿ ಹೀನರೂ ಇನ್ಮುಂದೆ ನೋಡಬಲ್ಲರು! ಹುಟ್ಟು ಕುರುಡರ ಬಾಳಲ್ಲಿ ಎಲಾನ್​ ಮಸ್ಕ್​ ಬೆಳಕು

ನಾನು ಪೊಲೀಸ್ ಠಾಣೆಗಳು ಮತ್ತು ಆಸ್ಪತ್ರೆಗಳೊಂದಿಗೆ ಸಂಪರ್ಕ ಸಾಧಿಸಿದೆ.  ಕೌನ್ಸೆಲಿಂಗ್​ ವೃತ್ತಿ  ತೊರೆದೆ. ನನ್ನೂರಲ್ಲಿ ಇರುವ ಪ್ರತಿ ಸ್ಮಶಾನ ಭೂಮಿಗೆ ಹೋದೆ. ಅಲ್ಲಿರುವ ಅಪರಿಚಿತ ದೇಹಗಳು ಇದ್ದರೆ ಅವುಗಳ ಅಂತ್ಯಕ್ರಿಯೆಯಲ್ಲಿ ತೊಡಗಿದೆ. ಇದರಿಂದ ನನಗೆ ಅದೇನೋ ಶಾಂತಿ ಸಿಕ್ಕಿತು. ಹಾಗೆಂದು ಓರ್ವ ಹುಡುಗಿಯಾಗಿ ಇವೆಲ್ಲಾ ಸುಲಭವೂ ಆಗಿರಲಿಲ್ಲ, ಈಗಲೂ ಇಲ್ಲ. ಹುಡುಗಿಯರು ಇದನ್ನೆಲ್ಲಾ ಮಾಡಬಾರದು ಎನ್ನುತ್ತಲೇ ಇದ್ದಾರೆ. ಹೀಗೆ ಹೆಣ ಸುಡುವವಳನ್ನು ಯಾರು ಮದುವೆಯಾಗುತ್ತಾರೆ ಎಂದು ಈಗಲೂ ಪ್ರಶ್ನಿಸುತ್ತಾರೆ. ಅವುಗಳಿಗೆ  ನಾನು ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೋಮಾದಿಂದ ನನ್ನ ಅಪ್ಪ ಹೊರಕ್ಕೆ ಬಂದು ಗುಣಮುಖರಾದಾಗ ನಿನ್ನ ಜೊತೆ ನಾನಿದ್ದೇನೆ ಎಂದರು. ಅದೊಂದೇ ನನಗೆ ಸಾಕು, ಯಾರು ಏನು ಹೇಳಿದರೂ ಅದನ್ನು ನಾನು ಕೇಳಿಸಿಕೊಳ್ಳುವುದಿಲ್ಲ. ತಲೆ ಕೆಡಿಸಿಕೊಳ್ಳುವುದಿಲ್ಲ. ಅನಾಥ ಶವಗಳಿಗೆ ಮುಕ್ತಿ ತೋರಿದ ನೆಮ್ಮದಿ ನನಗೆ ಸಿಗುತ್ತಿದೆ ಎನ್ನುತ್ತಾರೆ ಪೂಜಾ ಶಾರ್ಮಾ. 

2 ವರ್ಷಗಳು ಕಳೆದಿವೆ ಮತ್ತು ನಾನು ಇಲ್ಲಿಯವರೆಗೆ ಸುಮಾರು 5000 ದೇಹಗಳನ್ನು ಸುಟ್ಟು ಹಾಕಿದ್ದೇನೆ. ಈಗಲೂ ಸಹ, ಸ್ಮಶಾನದ ಮೈದಾನಕ್ಕೆ ಪ್ರವೇಶಿಸುವಾಗ ನಾನು ನನ್ನನ್ನೇ ಕೇಳಿಕೊಳ್ಳುತ್ತೇನೆ. ಮಹಿಳೆಯರು ಇದನ್ನೆಲ್ಲಾ ಮಾಡಬಾರದು ಎಂದು ಎಲ್ಲಿ ಬರೆದಿದೆ ಎಂದು ಪ್ರಶ್ನಿಸಿಕೊಳ್ಳುತ್ತೇನೆ. ಉತ್ತರ ಸಿಗುವುದಿಲ್ಲ. ನನಗೆ ಬೇಕಿರುವುದು ನೆಮ್ಮದಿ, ಅದು ಸಿಕ್ಕಿದೆ. ನನ್ನ ಅಪ್ಪನ ಆಶೀರ್ವಾದ ನನ್ನ ಮೇಲಿದೆ ಎನ್ನು ಪೂಜಾ.  

ಆಕೆ ಬಿಟ್ಟು ಹೋದಾಗ ನನಗೆ 17 ವರ್ಷ, ಕಾರಣ ಇನ್ನೂ ಗೊತ್ತಿಲ್ಲ: ಬಿಗ್​ಬಾಸ್​ ವಿನಯ್​ ಗೌಡ ನೋವಿನ ನುಡಿ

click me!