ಗಂಡ ರಾತ್ರಿ ಮನೆಯಿಂದ ಹೊರ ಹಾಕಿದ್ರೆ ಅಳ್ತಾ ಕೂರಬೇಕಾಗಿಲ್ಲ. ಪತಿಯಿಂದ ದೂರ ಇರುತ್ತೀರಿ ಎಂದಾದ್ರೆ ತವರಿಗೆ ಹೋಗ್ಬೇಕಾಗಿಲ್ಲ. ನಿಮಗೂ ಕಾನೂನಿನಲ್ಲಿ ರಕ್ಷಣೆಯಿದೆ. ಕಾನೂನು, ನಿಮ್ಮ ಹಕ್ಕು ತಿಳಿದ್ರೆ ನ್ಯಾಯಕ್ಕೆ ಹೋರಾಡಬಹುದು.
ಎಲ್ಲರ ಮನೆ ದೋಸೇನೂ ತೂತೆ. ಪ್ರತಿಯೊಬ್ಬರ ಮನೆಯಲ್ಲೂ ಸಣ್ಣದರಿಂದ ಹಿಡಿದು ದೊಡ್ಡ ವಿಷ್ಯದವರೆಗೆ ಗಲಾಟೆ, ಜಗಳ ನಡೆಯುತ್ತಿರುತ್ತದೆ. ಕೌಟುಂಬಿಕ ಗಲಾಟೆ ಸ್ವಲ್ಪ ಹೆಚ್ಚು. ಪತಿ – ಪತ್ನಿ ಮಧ್ಯೆ ನಡೆಯುವ ಜಗಳ ಅನೇಕ ಬಾರಿ ಬೀದಿಗೆ ಬಂದಿರುತ್ತದೆ. ನಮ್ಮ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿನಲ್ಲಿ ರಕ್ಷಣೆಯಿದೆ. ಹಾಗೆಯೇ ಮಹಿಳೆಯರಿಗೂ ಸಾಕಷ್ಟು ಕಾನೂನು ಜಾರಿಗೆ ಬಂದಿದೆ. ಕುಟುಂಬ ಜಗಳ ಮಿತಿ ಮೀರಿದ್ದರೆ, ಮಹಿಳೆ ಮೇಲೆ ದೌರ್ಜನ್ಯವಾಗ್ತಿದ್ದರೆ ಆಕೆ ಕಾನೂನಿನ ನೆರವು ಪಡೆಯಬಹುದು. ನ್ಯಾಯಕ್ಕಾಗಿ ಹೋರಾಟ ನಡೆಸಬಹುದು. ಇವೆಲ್ಲಕ್ಕಿಂತ ಮೊದಲು ಮಹಿಳೆಗೆ ಕಾನೂನಿನ ಬಗ್ಗೆ ಸ್ವಲ್ಪ ಮಟ್ಟಿಗೆ ಜ್ಞಾನವಿರಬೇಕು. ಇಂದು ನಾವು ಕುಟುಂಬದಲ್ಲಿ ಜಗಳವಾದ್ರೆ ಮಹಿಳೆ ಯಾವೆಲ್ಲ ಕಾನೂನಿನ ನೆರವು ಪಡೆಯಬಹುದು ಎಂಬುದನ್ನು ಹೇಳ್ತೆವೆ.
ಮಹಿಳೆ (Woman) ಯರಿಗಿದೆ ಈ ಎಲ್ಲ ಹಕ್ಕು (Right) :
ಮನೆಯಲ್ಲಿ ವಾಸಿಸುವ ಹಕ್ಕು : ಕೌಟುಂಬಿಕ ದೌರ್ಜನ್ಯ (Domestic Violence) ಹೊಸತಲ್ಲ. ಅನೇಕ ಕಾರಣಕ್ಕೆ ಗಂಡ ಅಥವಾ ಆತನ ಮನೆಯವರು ಮಹಿಳೆಯನ್ನು ಮಧ್ಯ ರಾತ್ರಿ ಮನೆಯಿಂದ ಹೊರ ಹಾಕಿದ ಪ್ರಕರಣಗಳಿವೆ. ಆದ್ರೆ ಗಂಡನಾಗಿರಲಿ ಇಲ್ಲ ಅತ್ತೆ ಮನೆಯವರಾಗಿರಲಿ ಮಹಿಳೆಯನ್ನು ಮನೆಯಿಂದ ಹೊರ ಹಾಕುವ ಅಥವಾ ತವರಿಗೆ ಕಳುಹಿಸುವ ಅಧಿಕಾರ ಹೊಂದಿಲ್ಲ. ಮನೆ ಗಂಡನ ಹೆಸರಿನಲ್ಲಿರಲಿ ಬಿಡಲಿ, ಗಂಡ ಇರಲಿ ಇಲ್ಲ ಸಾವನ್ನಪ್ಪಿರಲಿ, ಅದು ಸ್ವಂತ ಮನೆ ಅಥವಾ ಬಾಡಿಗೆ ಮನೆಯಾಗಿರಲಿ, ಯಾವುದಾದ್ರೂ ಮಹಿಳೆಯನ್ನು ಮನೆಯಿಂದ ಓಡಿಸಲು ಸಾಧ್ಯವಿಲ್ಲ.
ಗಂಡನಿಂದ ಮನೆ ಕೇಳುವ ಹಕ್ಕು : ಗಂಡ ಮತ್ತು ಹೆಂಡತಿ ಬೇರ್ಪಟ್ಟರೆ, ಕಾನೂನಿನ ಪ್ರಕಾರ ಹೆಂಡತಿಗೆ ತನ್ನ ಪತಿಯಿಂದ ಪ್ರತ್ಯೇಕ ಮನೆಯನ್ನು ಕೇಳುವ ಹಕ್ಕಿದೆ. ಹಿಂದೂ ವಿವಾಹ ಕಾಯಿದೆ 1955 ರ ನಿಯಮದ ಪ್ರಕಾರ, ಪತ್ನಿ ತನ್ನ ಹೆತ್ತವರ ಮನೆಯಲ್ಲಿ ಬಲವಂತವಾಗಿ ವಾಸಿಸಬೇಕಾಗಿಲ್ಲ. ಆಕೆ ಬಯಸಿದ್ರೆ ತವರಿನಲ್ಲಿ ಇರಬಹುದು. ಇಲ್ಲವೆಂದಾದ್ರೆ ಆಕೆ ಪತಿಗೆ ಮನೆ ನೀಡುವಂತೆ ಬೇಡಿಕೆ ಇಡಬಹುದು.
ಸ್ತ್ರೀಧನದ ಹಕ್ಕು : ಸ್ತ್ರೀ ಧನ ಎಂದರೆ ಮಹಿಳೆ ಮದುವೆಗೆ ಮೊದಲು, ಮದುವೆಯ ಸಮಯದಲ್ಲಿ, ಗರ್ಭಾವಸ್ಥೆಯಲ್ಲಿ ಮತ್ತು ಮದುವೆಯ ನಂತರ ಪಡೆದ ಎಲ್ಲಾ ಉಡುಗೊರೆಗಳು, ನಗದು ಮತ್ತು ಆಭರಣಗಳು. ಕಾನೂನಿನ ಪ್ರಕಾರ, ಆಕೆಗೆ ಮಾತ್ರ ಆಕೆ ಪಡೆದ ಉಡುಗೊರೆ ಮೇಲೆ ಹಕ್ಕಿದೆ. ಅದು ಯಾವುದೇ ರೂಪದಲ್ಲಿದ್ದರೂ ಅದ್ರೆ ಮೇಲೆ ಆಕೆಗೆ ಮಾತ್ರ ಹಕ್ಕಿರುತ್ತದೆ. ಪತಿ ಮತ್ತು ಅತ್ತೆ ಮನೆಯವರು ನೀಡುವ ಉಡುಗೊರೆ ಮೇಲೂ ಪತ್ನಿಗೆ ಹಕ್ಕಿರುತ್ತದೆ.
ಕೌಟುಂಬಿಕ ಹಿಂಸೆಯ ವಿರುದ್ಧ ಹೋರಾಡುವ ಅಧಿಕಾರ : ಕೌಟುಂಬಿಕ ಹಿಂಸಾಚಾರ ಕಾಯಿದೆ 2005 ರ ಅಡಿಯಲ್ಲಿ, ಮಹಿಳೆ ಯಾವುದೇ ಸಂದರ್ಭಗಳಲ್ಲಿ ಕೌಟುಂಬಿಕ ದೌರ್ಜನ್ಯದ ವಿರುದ್ಧ ದೂರು ನೀಡಬಹುದು. ದೈಹಿಕ ಹಿಂಸೆ, ಭಾವನಾತ್ಮಕ ಹಿಂಸೆ, ಲೈಂಗಿಕ ಹಿಂಸೆ, ಆರ್ಥಿಕ ಹಿಂಸೆ, ಆಸ್ತಿ, ಹಣ ಮತ್ತು ಆಭರಣ ಇತ್ಯಾದಿಗಳನ್ನು ಬಲವಂತವಾಗಿ ಕಸಿದುಕೊಂಡಿದ್ದರೆ ಇದೆಲ್ಲವೂ ಈ ಕಾನೂನಿನಡಿ ಬರುತ್ತದೆ.
ಯೋನಿಯ ಆರೋಗ್ಯಕ್ಕೆ ಸಂಬಂಧಿಸಿದ ಈ ತಪ್ಪು ಮಾಡ್ಬೇಡಿ
ವರದಕ್ಷಿಣೆ ಮತ್ತು ಕಿರುಕುಳ ಕಾನೂನು : ವರದಕ್ಷಿಣೆ ನಿಷೇಧ ಕಾಯಿದೆ 1961ರ ಅಡಿಯಲ್ಲಿ ವರದಕ್ಷಿಣೆಯನ್ನು ನಿಷೇಧಿಸಲಾಗಿದೆ. ಮದುವೆಗೆ ಮೊದಲು ಅಥವಾ ನಂತರ ವರದಕ್ಷಿಣೆಗಾಗಿ ಹೆಂಡತಿಗೆ ಕಿರುಕುಳ ನೀಡಿದರೆ, ಆಕೆ ದೂರು ನೀಡುವ ಅಧಿಕಾರ ಹೊಂದಿದ್ದಾಳೆ. ಅತ್ತೆ, ಮಾವನ ವಿರುದ್ಧವೂ ಆಕೆ ದೂರು ನೀಡಬಹುದು.
Breast tape ಧರಿಸೋ ಮೂಲಕ ಬ್ರಾ ಧರಿಸೋ ಕಿರಿಕಿರಿ ದೂರ ಮಾಡಿ
ಮಹಿಳೆಯರ ರಕ್ಷಣೆಗಾಗಿ ಇಂತಹ ಅನೇಕ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೆ ಯಾರಾದರೂ ಈ ಕಾನೂನನ್ನು ದುರುಪಯೋಗಪಡಿಸಿಕೊಂಡರೆ ಕಾನೂನಿನ ಪ್ರಕಾರ ಶಿಕ್ಷೆ ನೀಡಲಾಗುತ್ತದೆ. ಕಾನೂನುಗಳು ರಕ್ಷಣೆಗಾಗಿಯೇ ಹೊರತು ಶೋಷಣೆಗಲ್ಲ ಎಂಬುದು ಎಲ್ಲರಿಗೂ ತಿಳಿದಿರಬೇಕು.