ಋತು ಬಂಧದ ವೇಳೆ ಮಹಿಳೆಯರು ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ. ಹಾರ್ಮೋನಗಳ ಏರುಪೇರಿನಿಂದಾಗಿ ನಿದ್ರಾಹೀನತೆ ಕೂಡ ಕಾಡುವುದಿದೆ. ಈ ಸಂದರ್ಭದಲ್ಲಿ ದಿಢೀರ್ ಬೆವರುವ ಸಮಸ್ಯೆ ಕೂಡ ಮಹಿಳೆಯರಿಗೆ ಶುರುವಾಗುತ್ತದೆ. ಅದನ್ನು ಹಾಟ್ ಫ್ಲಾಶ್ ಎಂದು ಕರೆಯುತ್ತಾರೆ.
ಋತುಚಕ್ರ ಶುರುವಾದ್ಮೇಲೆ ಋತುಬಂಧ ನಿಶ್ಚಿತ. ವರ್ಷ 40 ದಾಟಿದ ನಂತ್ರ ಯಾವಾಗಲಾದ್ರೂ ಮಹಿಳೆಗೆ ಮುಟ್ಟು ನಿಲ್ಲಬಹುದು. ಋತುಬಂಧದ ಸಂದರ್ಭದಲ್ಲಿ ಮಹಿಳೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಕೆಲವು ಗಂಭೀರ ಸಮಸ್ಯೆಗಳಾಗಿದ್ದರೆ ಮತ್ತೆ ಕೆಲವರು ಕಿರಿಕಿರಿ ನೀಡುತ್ತವೆ. ಈ ಸಂದರ್ಭದಲ್ಲಿ ಮಹಿಳೆಯರು ಬೇಗ ಕೋಪಗೊಳ್ತಾರೆ. ಸಣ್ಣ ವಿಷ್ಯಕ್ಕೆ ಅಳು ಬರುತ್ತದೆ. ಒಂಟಿತನ ಕೆಲ ಮಹಿಳೆಯರನ್ನು ಕಾಡುತ್ತದೆ. ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಹಾಗೆಯೇ ಕೆಲ ಮಹಿಳೆಯರಿಗೆ ಬೆವರುವ ಸಮಸ್ಯೆ ಶುರುವಾಗುತ್ತದೆ. ಅಚಾನಕ್ ಬೆವರುವ ಮಹಿಳೆಯರು ಮತ್ತೆ ಕೆಲ ಸಮಯದಲ್ಲೇ ಶೀತವನ್ನು ಅನುಭವಿಸ್ತಾರೆ. ಇದು ಒಂದು ವರ್ಷದವರೆಗೂ ಕಾಡುವುದಿದೆ. ಇದನ್ನು ಹಾಟ್ ಫ್ಲಾಶ್ ಎಂದು ಕರೆಯಲಾಗುತ್ತದೆ. ಋತುಬಂಧದ ಸಂದರ್ಭದಲ್ಲಿ ಕಾಡುವ ಈ ಹಾಟ್ ಫ್ಲಾಶ್ ಸಮಸ್ಯೆಯನ್ನು ಸಂಪೂರ್ಣವಾಗಿ ಹೊಡೆದೋಡಿಸಲು ಸಾಧ್ಯವಿಲ್ಲ. ಆದ್ರೆ ಮನೆ ಮದ್ದಿನ ಮೂಲಕ ಸ್ವಲ್ಪ ಮಟ್ಟಿಗೆ ನಿಯಂತ್ರಣ ಮಾಡಬಹುದು. ನಾವಿಂದು ಮುಟ್ಟು ನಿಲ್ಲುವ ಸಂದರ್ಭದಲ್ಲಿ ಕಾಡುವ ಹಾಟ್ ಫ್ಲಾಶ್ ಗೆ ಮನೆ ಮದ್ದು ಏನು ಎಂಬುದನ್ನು ಹೇಳ್ತೇವೆ.
ಯಾಕೆ ಕಾಡುತ್ತೆ ಹಾಟ್ ಫ್ಲಾಶ್ (Hot Flashes) : ಮುಟ್ಟು ನಿಲ್ಲುವ (Menopause) ಮುಂಚೆ ಮುಟ್ಟು ಅನಿಯಮಿತವಾಗುತ್ತದೆ. ಇದರಿಂದಾಗಿ ಅಂಡಾಶಯಗಳ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದ್ರಿಂದ ಈಸ್ಟ್ರೊಜೆನ್ (Estrogen) ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಈ ಕಾರಣದಿಂದಾಗಿ ಕೆಲವೊಮ್ಮೆ ದೇಹದ ಮೇಲ್ಭಾಗದಲ್ಲಿ ಶಾಖ ಹೆಚ್ಚಾಗುತ್ತದೆ. ಇದನ್ನು ಹಾಟ್ ಫ್ಲಾಶ್ ಎಂದು ಕರೆಯಲಾಗುತ್ತದೆ. ಹಾಗಾಗಿಯೇ ಬೆವರನ್ನು ನೀವು ಹಣೆ, ಕತ್ತು, ಎದೆ ಮೇಲೆ ಕಾಣಬಹುದು. ಬೆವರು ವಿಪರೀತವಾದಾಗ ಮುಖ ಕೆಂಪಾಗುತ್ತದೆ. ನಂತ್ರ ವೇಗವಾಗಿ ದೇಹ ತಣ್ಣಗಾಗುತ್ತದೆ. ದೇಹ ತಣ್ಣಗಾಗ್ತಿದ್ದಂತೆ ಶೀತದ ಅನುಭವವಾಗುತ್ತದೆ. ಅನೇಕ ಮಹಿಳೆಯರಿಗೆ ರಾತ್ರಿ ಈ ಸಮಸ್ಯೆ ಕಾಡುತ್ತದೆ. ಇದ್ರಿಂದ ನಿದ್ರೆಗೆ ತೊಂದರೆಯಾಗುತ್ತದೆ.
ಹಾಟ್ ಫ್ಲಾಶ್ ಗೆ ಕಾರಣವಾಗುತ್ತೆ ಈ ಆಹಾರ : ಕೆಲ ಆಹಾರ ಕೂಡ ಮಹಿಳೆಯರ ಈ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ಮಸಾಲೆಯುಕ್ತ ಆಹಾರ, ಕಾಫಿ, ಆಲ್ಕೋಹಾಲ್ ಸೇವನೆ ಮಾಡುವವರಿಗೆ ಇದು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಹಾಗೆಯೇ ಒತ್ತಡದಿಂದ ಬಳಲುವ ಮಹಿಳೆಯರು, ಬಿಗಿಯಾದ ಬಟ್ಟೆ ಧರಿಸುವ ಮಹಿಳೆಯರಿಗೆ ಹಾಟ್ ಫ್ಲಾಶ್ ಹೆಚ್ಚಾಗಿ ಕಾಡುತ್ತದೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಬೆಳೆಸುವ ವೇಳೆ ಅಥವಾ ಹೆಚ್ಚು ಮೇಕಪ್ ಬಳಕೆ ಮಾಡುವ ಸಂದರ್ಭದಲ್ಲೂ ಹಾಟ್ ಫ್ಲಾಶ್ ಆಗುವ ಸಾಧ್ಯತೆಯಿದೆ. ಕೋಪಗೊಂಡಿದ್ದರೆ, ಅತೀ ಉತ್ಸಾಹದಲ್ಲಿದ್ದರೂ ಇದು ಸಂಭವಿಸುತ್ತದೆ.
ಹಾಟ್ ಫ್ಲಾಶ್ ನಿಯಂತ್ರಿಸಲು ಮನೆ ಮದ್ದು :
ಉಷ್ಣತೆ ನಿಯಂತ್ರಣ : ನಿಮಗೆ ಹಾಟ್ ಫ್ಲಾಶ್ ಆಗಿದ್ರೆ ತಕ್ಷಣ ಎಸಿ ಹಾಕಿ, ದೇಹ ತಂಪು ಮಾಡುವ ಪ್ರಯತ್ನ ಮಾಡಬೇಡಿ. ಇರುವ ಉಷ್ಣಾಂಶದಲ್ಲಿಯೇ ಇರಿ. ಮನಸ್ಸನ್ನು ಶಾಂತಗೊಳಿಸಿ. ಫ್ಯಾನ್ ಕೆಳಗೆ ನೀವು ಕುಳಿತುಕೊಳ್ಳಬಹುದು.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯವನ್ನು ಮಹಿಳೆ ಮುಚ್ಚಿಡೋದೇಕೆ?
ನೈಸರ್ಗಿಕ ಫೈಬರ್ ಬಟ್ಟೆ ಬೆಸ್ಟ್ : ಹಾಟ್ ಫ್ಲಾಶ್ ನಿಂದ ಬಳಲುವ ಮಹಿಳೆಯರು ಧರಿಸುವ ಬಟ್ಟೆ ಬಗ್ಗೆ ಗಮನ ನೀಡಬೇಕು. ನೈಸರ್ಗೊಕ ಫೈಬರ್ ಬಟ್ಟೆ ಇದಕ್ಕೆ ಒಳ್ಳೆಯದು. ಸಿಥೆಟಿಕ್ ಬಟ್ಟೆ ಬದಲು ಹತ್ತಿ ಅಥವಾ ಉಣ್ಣೆ ಬಟ್ಟೆ ಬೆಸ್ಟ್.
ರಿಲ್ಯಾಕ್ಸ್ ಆಗಲು ವ್ಯಾಯಾಮ ಮಾಡಿ : ಹಾಟ್ ಫ್ಲಾಶ್ ನಿಂದ ಬಳಲುತ್ತಿದ್ದರೆ ಮನಸ್ಸನ್ನು ಶಾಂತಗೊಳಿಸುವ ವ್ಯಾಯಾಮ ಮಾಡಿ. ಅನುಲೋಮ, ವಿಲೋಮ ಮಾಡಿ. ಇದ್ರಿಂದ ನಿಮ್ಮ ಮನಸ್ಸು ಶಾಂತವಾಗುತ್ತದೆ.
ಆಹಾರದ ಮೇಲೆ ನಿಯಂತ್ರಣ : ಈ ಸಂದರ್ಭದಲ್ಲಿ ಎಣ್ಣೆಯುಕ್ತ ಆಹಾರ ಸೇವನೆ ಮಾಡಬೇಡಿ. ಮಸಾಲೆ ಆಹಾರ, ಟೀ, ಕಾಫಿ ಎಲ್ಲವೂ ದೇಹದ ಬಿಸಿ ಹೆಚ್ಚಿಸುತ್ತದೆ. ನೀವು ಬಿಸಿ ಆಹಾರದ ಬದಲು ದೇಹ ತಂಪು ಮಾಡುವ ಆಹಾರ ಸೇವನೆ ಮಾಡಿ. ಕಲ್ಲಂಗಡಿ ಅಥವಾ ನೀರಿರುವ ಹಣ್ಣನ್ನು ಸೇವಿಸಿ. ನಿಂಬೆ ಹಣ್ಣಿನ ಪಾನಕ ಕುಡಿಯಿರಿ.
ಇದನ್ನೂ ಓದಿ: WOMEN HEALTH: ಸುಸ್ತು, ಆಯಾಸ ಎನ್ನೋ ಮಹಿಳೆಯರು ಇದನ್ನೋದಿ
ಸಂತೋಷ ಎಲ್ಲದಕ್ಕೂ ಮದ್ದು : ಸಂತೋಷ ಖರ್ಚಿಲ್ಲದ ಔಷಧಿಯಾಗಿದೆ. ಸದಾ ಒತ್ತಡ, ಕಿರಿಕಿರಿಯಲ್ಲಿದ್ದರೆ ನಿಮ್ಮ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಸಣ್ಣ ವಿಷ್ಯಕ್ಕೂ ಖುಷಿಪಡುತ್ತ, ಆರಾಮವಾಗಿರಲು ಪ್ರಯತ್ನಿಸಿ.