ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಸಮಸ್ಯೆಯೆಂಬುದು ಸಾಮಾನ್ಯವಾಗಿದೆ. ಅದರಲ್ಲೂ ಅಧಿಕ ತೂಕ, ರಕ್ತದೊತ್ತಡದ ಸಮಸ್ಯೆ ಹಲವರನ್ನು ಕಾಡ್ತಿದೆ. ರಾಜ್ಯದಲ್ಲಿ ಬೊಜ್ಜು ಹೊಂದಿದ ಮಹಿಳೆಯರನ್ನು ಗಣನೆಗೆ ತೆಗೆದುಕೊಂಡರೆ, ರಾಜಧಾನಿ ಬೆಂಗಳೂರು ಅಗ್ರಸ್ಥಾನದಲ್ಲಿದೆಯಂತೆ. ಅದಕ್ಕೇನು ಕಾರಣ ?
ಕಾಲ ಬದಲಾದಂತೆ ಕಾಯಿಲೆಗಳು ಹೆಚ್ಚುತ್ತಿವೆ. ಒತ್ತಡದ ಜೀವನಶೈಲಿ (Lifestyle), ಕಳಪೆ ಆಹಾರಪದ್ಧತಿಯಿಂದ ಜನರು ಹೊಸ ಹೊಸ ರೋಗಗಳಿಗೆ ತುತ್ತಾಗುತ್ತಿದ್ದಾರೆ. ವರ್ಷಾನುಗಟ್ಟಲೆ ದುಡಿಮೆ, ನಂತರ ಕಾಯಿಲೆ (Disease)ಯಲ್ಲೇ ಜೀವನ ಮುಗಿದು ಹೋಗುತ್ತಿದೆ. ಅದರಲ್ಲೂ ಬದಲಾದ ಜೀವನಶೈಲಿ ಹೊಸ ಹೊಸ ಕಾಯಿಲೆಗೆ ಮುಖ್ಯ ಕಾರಣವಾಗುತ್ತಿದೆ. ಅಧಿಕ ತೂಕ, ಬೊಜ್ಜು (Obesity), ರಕ್ತದೊತ್ತಡ, ಮಧುಮೇಹ ಮೊದಲಾದ ಕಾಯಿಲೆಗಳು ವಕ್ಕರಿಸಿಕೊಳ್ಳುತ್ತಿವೆ. ಅದರಲ್ಲೂ ಶಾಕಿಂಗ್ ವಿಚಾರವೆಂದರೆ ರಾಜ್ಯದಲ್ಲಿ ಬೊಜ್ಜು ಹೊಂದಿದ ಮಹಿಳೆಯರನ್ನು ಗಣನೆಗೆ ತೆಗೆದುಕೊಂಡರೆ, ರಾಜಧಾನಿ ಬೆಂಗಳೂರು ಅಗ್ರಸ್ಥಾನದಲ್ಲಿದೆಯಂತೆ. ಇದರಿಂದಾಗಿ ಮಹಿಳೆ (Woman)ಯರಲ್ಲಿ ಫಲವಂತಿಕೆ ಸಹ ಕಡಿಮೆಯಾಗುತ್ತಿದೆಯಂತೆ.
ಬೆಂಗಳೂರಿನ ಮಹಿಳೆಯರನ್ನು ಕಾಡ್ತಿದೆ ಬೊಜ್ಜಿನ ಸಮಸ್ಯೆ
ರಾಜ್ಯ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಪ್ರಕಟಿಸಿರುವ 2022ರ ಆರ್ಥಿಕ ಸಮೀಕ್ಷೆಯಲ್ಲಿ ಈ ವಿಚಾರ ತಿಳಿದುಬಂದಿದೆ. 2015-16 ಮತ್ತು 2019-20ರ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ದತ್ತಾಂಶಗಳನ್ನು ತುಲನೆ ಮಾಡಿ ರಾಜ್ಯ ಸರಕಾರ ಆರ್ಥಿಕ ಸಮೀಕ್ಷೆಯಲ್ಲಿ ಇದನ್ನು ಉಲ್ಲೇಖಿಸಿದೆ. ಸಮೀಕ್ಷೆ ಪ್ರಕಾರ, 2015-16ರಲ್ಲಿ ಬೊಜ್ಜು ಹೊಂದಿದ ಮಹಿಳೆಯರ ಸಂಖ್ಯೆ ಶೇ.23ರಷ್ಟಿದ್ದರೆ, 2019-20ರಲ್ಲಿ ಶೇ.30.1ಕ್ಕೆ ಏರಿದೆ. ಪ್ರತಿ ಮಹಿಳೆಗೆ ಜನಿಸುವ ಮಕ್ಕಳ ಫಲವಂತಿಕೆ ದರ ಶೇ.1.8ರಿಂದ 1.7ಕ್ಕೆ ಕುಸಿದಿದೆ. ತೂಕ, ಬೊಜ್ಜು ಶೇ.23ರಿಂದ ಶೇ.30ಕ್ಕೆ, ಮಧುಮೇಹ (Diabetes) ಹರಡುವಿಕೆ ಶೇ.00ಯಿಂದ ಶೇ.14ಕ್ಕೆ ಮತ್ತು ರಕ್ತದೊತ್ತಡ ಶೇ.00ಯಿಂದ ಶೇ.25ಕ್ಕೆ ಏರಿಕೆಯಾಗಿದೆ.
ಟೀ ಕುಡಿದ್ರೆ ಬೊಜ್ಜು ಹೆಚ್ಚುತ್ತಾ? ಅಷ್ಟಕ್ಕೂ ಏನಿರಲಿದೆ ಇದರಲ್ಲಿ ತೂಕ ಹೆಚ್ಚಿಸೋ ಅಂಶ?
ತೂಕ ಹೆಚ್ಚಳಕ್ಕೆ ಕಾರಣವಾಗ್ತಿರೋದೇನು ?
ರಾಜ್ಯದಲ್ಲಿ ಬೊಜ್ಜು ಹೊಂದಿರುವ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಅದರಲ್ಲೂ ಸಂಪೂರ್ಣ ರಾಜ್ಯಕ್ಕೆ ಹೋಲಿಸಿದರೆ ಬೆಂಗಳೂರು ಅಗ್ರಸ್ಥಾನದಲ್ಲಿದೆ. ರಾಜ್ಯ ರಾಜಧಾನಿಯಲ್ಲಿ ಬೊಜ್ಜು ಹೊಂದಿರುವ ಹೆಣ್ಣುಮಕ್ಕಳ ಸಂಖ್ಯೆ ಶೇ.40ರಷ್ಟಿದೆ. ಐದು ವರ್ಷಗಳ ಹಿಂದೆ ಇದರ ಪ್ರಮಾಣ ಶೇ.32ರಷ್ಟಿತ್ತು. ರಾಜ್ಯದ ಸರಾಸರಿ ಬೊಜ್ಜಿನ ಪ್ರಮಾಣ ಶೇ.30ರಷ್ಟಿದ್ದರೆ, ಬೆಂಗಳೂರಲ್ಲಿ ಶೇ.40ರಷ್ಟಿದೆ. ಒತ್ತಡದ ಜೀವನ ಶೈಲಿ, ಅಸಮರ್ಪಕ ಆಹಾರಕ್ರಮ, ದೈಹಿಕ ಚಟುವಟಿಕೆಯ (Exercise) ಕೊರತೆ ಬೊಜ್ಜು ಹೆಚ್ಚಳಲು ಕಾರಣವಾಗ್ತಿದೆ ಅಂತಾರೆ ತಜ್ಞರು.
ಮಹಿಳೆಯರಲ್ಲಿ ಫಲವಂತಿಕೆ ಕುಸಿತವಾಗಿರುವುದು ಯಾಕೆ ?
ಅತಿಯಾದ ಬೊಜ್ಜು ಮಹಿಳೆಯರಲ್ಲಿ ಫಲವಂತಿಕೆ (Fertility) ಕುಸಿತಕ್ಕೆ ಮುಖ್ಯ ಕಾರಣವಾಗುತ್ತಿದೆ. ಮಾತ್ರವಲ್ಲ ತಡವಾಗಿ ಮದುವೆಯಾಗುವುದು, ಮದುವೆಯಾದರೂ ತಡವಾಗಿ ಮಕ್ಕಳನ್ನು ಹೊಂದುವುದು, ಮನೆ-ಕಚೇರಿಯಲ್ಲಿನ ಒತ್ತಡ, ಬಾಡಿಗೆ ತಾಯ್ತನ, ಲಿವಿಂಗ್ ಟುಗೆದರ್, ಗರ್ಭ ನಿರೋಧಕಗಳ ಬಳಕೆ ಮೊದಲಾದ ಕಾರಣವೂ ಫಲವತ್ತತೆ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಅನಕ್ಷರಸ್ಥರಿಗೆ ಹೋಲಿಸಿದರೆ ಸುಶಿಕ್ಷಿತ ಮಹಿಳೆಯರಲ್ಲಿ ಫಲವಂತಿಕೆ ಕಮ್ಮಿಯಾಗಿರುವುದು ಗಮನಾರ್ಹ.
ಬೇಗ ತೂಕ ಇಳಿಸ್ಕೊಳ್ಳಿ, ಅಧಿಕ ತೂಕವಿರೋರನ್ನು ಕಾಡುತ್ತೆ ಪ್ರಿಡಯಾಬಿಟಿಸ್ !
ಫಲವತ್ತತೆ ಹೆಚ್ಚಿಸುವ ಆಹಾರಗಳು :
ಪ್ರೋಟೀನ್ (Protein) : ಗರ್ಭ ಧರಿಸಲು ಪ್ರೋಟೀನ್ ಅತ್ಯಂತ ಮುಖ್ಯವಾಗಿದೆ. ಬೇಳೆಕಾಳುಗಳಿಂದ ಸಮೃದ್ಧ ಪ್ರೊಟೀನ್ ಸಿಗುತ್ತದೆ. ಸಾಕಷ್ಟು ಪ್ರೋಟೀನ್, ಮೊಳಕೆ ಕಾಳುಗಳು, ಮಾಂಸ ಮತ್ತು ಕೋಳಿಗಳಲ್ಲಿ ಕಂಡುಬರುತ್ತದೆ. ಅಮೆರಿಕಾದ ಕಾಲೇಜ್ ಆಫ್ ಫಾರ್ಮಸಿ ಮತ್ತು ನ್ಯೂಟ್ರಿಷನ್‌ನ ಪ್ರೊಫೆಸರ್ ಗಾರ್ಡನ್ ಝೋಲೋ, ಮಹಿಳೆಯರ ಫಲವತ್ತತೆಯ ಮೇಲೆ ದ್ವಿದಳ ಧಾನ್ಯಗಳ ಪರಿಣಾಮವೇನು ಎಂಬುದರ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಮಹಿಳೆಯರಿಗೆ ವಾರಕ್ಕೆ 14 ಬಾರಿ ಬೇಳೆಕಾಳುಗಳಿಂದ ಮಾಡಿದ ಊಟವನ್ನು ನೀಡಲಾಯಿತು. ಈ ಆಹಾರ ಸೇವನೆಯು ಮಹಿಳೆಯರ ಸೊಂಟದ ಕೊಬ್ಬನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸುಧಾರಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಸಮತೋಲಿತ ಹಾರ್ಮೋನುಗಳು ಮತ್ತು ಅಂಡಾಶಯದಲ್ಲಿನ ಕೋಶಕ ಚೀಲಗಳನ್ನು ಕಡಿಮೆ ಮಾಡುತ್ತದೆ ಎಂಬುದು ಬಹಿರಂಗವಾಯಿತು.
ವಿಟಮಿನ್ಸ್ (Vitamins) : ಜೀವಸತ್ವಗಳಿಗಾಗಿ ಕಿತ್ತಳೆ ಮತ್ತು ಪಾಲಕವನ್ನು ತಿನ್ನಬೇಕು. ಹಣ್ಣುಗಳನ್ನು ತಿನ್ನುವುದರಿಂದ ಎಗ್ಸ್ ಗುಣಮಟ್ಟವನ್ನು ಸುಧಾರಿಸಬಹುದು. ವಿಟಮಿನ್ಸ್ ಆಹಾರ ಸೇವನೆ ಮಾಡುವುದ್ರಿಂದ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಬಹುದು.
ವಿಟಮಿನ್ ಬಿ ಎಗ್ಸ್ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಂಡೋತ್ಪತ್ತಿಗೆ ಸಂಬಂಧಿತ ಬಂಜೆತನವನ್ನು ತಡೆಯುತ್ತದೆ. ಇದಲ್ಲದೆ, ವಿಟಮಿನ್ ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ. ಗರ್ಭ ಧರಿಸಲು ಸಮಸ್ಯೆ ಎದುರಿಸುತ್ತಿರುವ ಮಹಿಳೆಯರು ಆಹಾರದಲ್ಲಿ ವಿಟಮಿನ್ ಸಿ, ಫೋಲಿಕ್ ಆಮ್ಲ, ಕಬ್ಬಿಣ, ಒಮೆಗಾ -3 ಕೊಬ್ಬಿನಾಮ್ಲಗಳು, ಸೆಲೆನಿಯಮ್ ಮತ್ತು ಸತುವು ಅಧಿಕವಾಗಿರುವ ಆಹಾರಗಳನ್ನು ಸೇರಿಸಬೇಕು.