ಅಮ್ಮ (Mother) ಎಂಬುದು ಕರುಳಬಳ್ಳಿಯ ನಂಟಿನ ಭಾವನಾತ್ಮಕ ಬಂಧ. ಇದು ತಾಯ್ತನ ಎಂಬ ಜೀವಕಾರುಣ್ಯದ ಮೂಲವೂ ಹೌದು. ಕನ್ನಡ ಸಾಹಿತ್ಯ (Kannada Literature)ದಲ್ಲಿಅಮ್ಮ ಎಂಬ ಶಕ್ತಿಯ ಪ್ರತಿಪಾದನೆ ಅತ್ಯಂತ ಶಕ್ತಿಯಾಲಿಯಾಗಿ ಮೂಡಿಬಂದಿದೆ. ವಿಶೇಷವೆಂದರೆ ಈ ಮೌಲ್ಯವನ್ನು ಮಹಿಳೆ (Woman)ಯರು ವ್ಯಕ್ತಪಡಿಸಿರುವುದಕ್ಕಿಂತ ಪುರುಷರು (Men) ವ್ಯಕ್ತಪಡಿಸಿರುವುದೇ ಹೆಚ್ಚು. ಅದರಲ್ಲೂ ಕನ್ನಡದಲ್ಲಿ ಲಂಕೇಶರ ಅವ್ವ ಕವಿತೆ ಕನ್ನಡದಲ್ಲಿ ತಾಯಿಯ ಕುರಿತು ಬಂದ ಅತ್ಯುತ್ತಮ ಕವಿತೆ ಎಂದೇ ಪ್ರಸಿದ್ಧವಾಗಿದೆ.
ಮೇ 8 ರಂದು ತಾಯಂದಿರ ದಿನ (Mother's Day) ಬರುತ್ತದೆ. ಮಕ್ಕಳಿಗಾಗಿ ಜೀವವನ್ನೇ ಮುಡಿಪಾಗಿರುವ ತಾಯಂದಿರು ಎಲ್ಲರ ಜೀವನದಲ್ಲೂ ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿಯೇ ಪ್ರಪಂಚದಾದ್ಯಂತ ಮದರ್ಸ್ ಡೇ ಆಚರಿಸಲಾಗುತ್ತದೆ. ಮಗುವನ್ನು ಗರ್ಭದಲ್ಲಿ ಹೊತ್ತ ತಾಯಿ ಅಲ್ಲಿಂದ ತೊಡಗಿ ಜೀವನಪೂರ್ತಿ ಮಗುವಿಗಾಗಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಳ್ಳುತ್ತಾಳೆ. ಮಕ್ಕಳ (Children) ಖುಷಿಯಲ್ಲೇ ತನ್ನ ಖುಷಿಯನ್ನು ಕಂಡುಕೊಳ್ಳುತ್ತಾಳೆ.
ಕನ್ನಡ ಸಾಹಿತ್ಯದಲ್ಲಿ ಲಂಕೇಶರ ಅವ್ವ (Mother) ಕವಿತೆ ಕನ್ನಡದಲ್ಲಿ ತಾಯಿಯ ಕುರಿತು ಬಂದ ಅತ್ಯುತ್ತಮ ಕವಿತೆ (Poem) ಎಂದೇ ಪ್ರಸಿದ್ಧವಾಗಿದೆ. ಈ ಕವನದಲ್ಲಿ ಕವಿ ಲಂಕೇಶ್ (Lankesh) ಅವ್ವನೇ ಭೂಮಿಯಾಗುವ ಹಾಗೂ ಭೂಮಿ ಮತ್ತು ತನ್ನ ಅವ್ವನ ಒಡನಾಟ, ಮನೆ ಹಾಗೂ ಹೊಲ, ದನ ಕರು ಸಂಬಂಧಗಳನ್ನು (Relationship) ಓದುಗನ ಎದುರು ಚಿತ್ರ ಕಣ್ಣುಕಟ್ಟುವಂತೆ ಕವಿತೆ ಬರೆಯುತ್ತಾ ಹೋಗುತ್ತಾರೆ. ಭೂಮಿಯ ಪ್ರತಿಯೊಂದು ಸೃಜನ ಕ್ರಿಯೆಯನ್ನು ಲಂಕೇಶರು ಅವ್ವನಲ್ಲಿ ಕಾಣುತ್ತಾ ಹೋಗುತ್ತಾರೆ.. ‘ನನ್ನವ್ವ ಫಲವತ್ತಾದ ಕಪ್ಪು ನೆಲ ಅಲ್ಲಿ ಹಸಿರು ಪತ್ರದ ಹರವು, ಬಿಳಿ ಹೂ ಹಬ್ಬ ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು…' ಎನ್ನುವ ಮೂಲಕ ಹೆತ್ತ ತಾಯಿಯನ್ನು ಭೂತಾಯಿಗೆ ಹೋಲಿಸುತ್ತಾರೆ.
Mother's Day 2022: ವಿಶ್ವ ತಾಯಂದಿರ ದಿನದ ಶುಭಾಶಯಗಳು
ಕವನದ ಶೀರ್ಷಿಕೆ–ಅವ್ವ
ಕವಿ –ಪಿ. ಲಂಕೇಶ್
(ತಮ್ಮ ತಾಯಿ ನಿಧನರಾದಾಗ, ಪಿ.ಲಂಕೇಶರು ಬರೆದ ಕವನ: ‘ಅವ್ವ’)
ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.
ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು,
ಹೆಂಟೆಗೊಂದು ಮೊಗೆ ನೀರು ಹಿಗ್ಗಿ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,
ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿ
ಹೆಸರು ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.
ಸತ್ತಳು ಈಕೆ:
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?
ಎಷ್ಟೋ ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;
ಎಷ್ಟುಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?
ಸತಿ ಸಾವಿತ್ರಿ, ಜಾನಕಿ, ಉರ್ಮಿಳೆಯಲ್ಲ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ;
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ;
ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.
ಬನದ ಕರಡಿಯ ಹಾಗೆ
ಚಿಕ್ಕಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು.
ನೊಂದ ನಾಯಿಯ ಹಾಗೆ ಬೈದು ಗೊಣಗಿ, ಗುದ್ದಾಡಿದಳು;
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ:
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರಿದೆದ್ದಾಳು
ಮಗ ಕೆಟ್ಟರೆ. ಗಂಡ ಬೇರೆ ಕಡೆ ಹೋದಾಗ ಮಾತ್ರ.
ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ,
ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು;
ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟುಹೋದದ್ದಕ್ಕೆ.
ಲಂಕೇಶ್ ಮೇಷ್ಟ್ರು ಬಹುಮುಖ ಪ್ರತಿಭೆ. ಅವರು ಕತೆಗಾರ, ಕಾದಂಬರಿಕಾರ. ಸಂಕ್ರಾತಿ, ಗುಣಮುಖ, ಈಡಿಪಸ್ ನಾಟಕಗಳನ್ನು ಬರೆದ ಅವರು ಕನ್ನಡದ ಪ್ರಭಾವಶಾಲಿ ನಾಟಕಕಾರ ಸಹ ಎನಿಸಿದ್ದರು. ಎಲ್ಲಿಂದಲೋ ಬಂದವರು ಸಿನಿಮಾ ನಿರ್ದೇಶನ ಮಾಡಿ, ಅಲ್ಲಿ ಸಹ ಪ್ರತಿಭೆಯನ್ನು ದಾಖಲಿಸಿದವರು. ಅವರ ಅವ್ವ ಕವಿತೆ ಕನ್ನಡಿಗರನ್ನು ಕಾಡುವ ಕವಿತೆಗಳಲ್ಲಿ ಒಂದಾಗಿದೆ. ಅವ್ವ ಮತ್ತು ಫಲವತ್ತಾದ ಕಪ್ಪು ನೆಲವನ್ನು ಮುಖಾಮುಖಿಯಾಗಿಸಿ ಬೆಳೆಯುತ್ತಾ ಹೋಗುವ ಕವಿತೆ ಏಕಕಾಲದಲ್ಲಿ ರೈತ ಮತ್ತು ಭೂಮಿಯ ಅವಿನಾಭಾವ ಸಂಬಂಧವನ್ನು, ತಾಯಿ-ಮಗನ ಬಾಂಧವ್ಯವನ್ನು ಸಾರುತ್ತದೆ.
Mothers Day 2022: ಅಮ್ಮನನ್ನು ಖುಷಿಪಡಿಸಲು ಈ ರೀತಿ ಸರ್‌ಪ್ರೈಸ್ ನೀಡಿ
ತಾಯಿಯನ್ನು ಕೃತಜ್ಞತೆಯಿಂದ ಸ್ಮರಿಸುವ, ತಾಯಿಯ ಹೆಚ್ಚುಗಾರಿಕೆಯನ್ನು ಹೊಗಳುವ, ತಾಯಿಯನ್ನು ದೇವತೆಯಂತೆ ಪೂಜಿಸುವ ಕವನಗಳಿಗೆ ಸಾಹಿತ್ಯದಲ್ಲಿ ಕೊರತೆ ಇಲ್ಲ. ಆದರೆ ಲಂಕೇಶರ ಈ ಕವನವು ತಾಯಿಯನ್ನು ಚುಚ್ಚುವ ವಾಸ್ತವದಲ್ಲಿ ನೋಡುತ್ತದೆ. ಲಂಕೇಶರ ಅವ್ವ ನಮ್ಮ ನಾಡಿನ ಸಾವಿರಾರು. ಹೀಗಾಗಿಯೇ ಲಂಕೇಶರು ತಮ್ಮ ತಾಯಿಗೆ ಕೊಡುವ ಹೋಲಿಕೆಗಳಂತೂ ಓದುಗನನ್ನು ಬೆಚ್ಚಿ ಬೀಳಿಸುತ್ತವೆ. ಅವಳು ಕಪ್ಪು ಹೊಲ, ಕಾಡು ಕರಡಿ, ನೊಂದ ನಾಯಿ ಹಾಗು ಕೆರೆದಾಡುವ ಕೋತಿ. ಈ ಗುಣಗಳು ಹೆಣ್ಣುಮಗಳೊಬ್ಬಳ ಒಂಟಿ ಹೋರಾಟದ ಬದುಕನ್ನು ತೋರಿಸುತ್ತದೆ.