ಬಿಎಸ್‌ಎನ್‌ಎಲ್‌ ಪುನರುಜ್ಜೀವನಕ್ಕೆ ಕೇಂದ್ರದಿಂದ ಹಲವು ಕ್ರಮ

By Kannadaprabha News  |  First Published Oct 24, 2019, 9:46 AM IST

ಬಿಎಸ್‌ಎನ್‌ಎಲ್‌ ಹಾಗೂ ಎಂಟಿಎನ್‌ಎಲ್‌ಗಳ ಪುನಶ್ಚೇತನಕ್ಕೆ ಕೊನೆಗೂ ಮುಂದಾಗಿರುವ ಕೇಂದ್ರ ಸರ್ಕಾರ, ಈ ಎರಡೂ ಕಂಪನಿಗಳನ್ನು ವಿಲೀನಗೊಳಿಸಲು ನಿರ್ಧರಿಸಿದೆ. 


ನವದೆಹಲಿ [ಅ.24]:  ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿಗಳಾದ ಬಿಎಸ್‌ಎನ್‌ಎಲ್‌ ಹಾಗೂ ಎಂಟಿಎನ್‌ಎಲ್‌ಗಳ ಪುನಶ್ಚೇತನಕ್ಕೆ ಕೊನೆಗೂ ಮುಂದಾಗಿರುವ ಕೇಂದ್ರ ಸರ್ಕಾರ, ಈ ಎರಡೂ ಕಂಪನಿಗಳನ್ನು ವಿಲೀನಗೊಳಿಸಲು ನಿರ್ಧರಿಸಿದೆ. ಅಲ್ಲದೆ ಬಿಎಸ್‌ಎನ್‌ಎಲ್‌ ಪುನರುಜ್ಜೀವನಕ್ಕಾಗಿ ಭರ್ಜರಿ 68751 ಕೋಟಿ ರು.ಗಳ ಪ್ಯಾಕೇಜ್‌ ಕೂಡಾ ಘೋಷಿಸಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೆಲಿಕಾಂ ಸಚಿವ ರವಿಶಂಕರ್‌ ಪ್ರಸಾದ್‌, ಬಿಎಸ್‌ಎನ್‌ಎಲ್‌ ಹಾಗೂ ಎಂಟಿಎನ್‌ಎಲ್‌ಗಳನ್ನು ಮುಚ್ಚುವುದಿಲ್ಲ. ಬಂಡವಾಳ ಹಿಂತೆಗೆಯುವುದಿಲ್ಲ. ಮಾರಾಟ ಮಾಡುವುದಿಲ್ಲ. ಅವುಗಳನ್ನು ವೃತ್ತಿಪರ ಸಂಸ್ಥೆಗಳನ್ನಾಗಿ ಮಾಡಲಾಗುವುದು. ಕಂಪನಿಯ ವೆಚ್ಚ ಕಡಿತಕ್ಕಾಗಿ ಸ್ವಯಂ ನಿವೃತ್ತಿ ಯೋಜನೆ ಆರಂಭಿಸಲಾಗುವುದು. ಆದರೆ ಯಾವ ಉದ್ಯೋಗಿಗಳಿಗೂ ‘ನಿವೃತ್ತಿ ಹೊಂದಿ’ ಎಂದು ಬಲವಂತ ಮಾಡುವುದಿಲ್ಲ ಎಂದು ಹೇಳಿದರು.

Latest Videos

undefined

ದಿಲ್ಲಿ, ಮುಂಬೈನಂತಹ ಮಹಾನಗರಗಳಲ್ಲಿ ಸೇವೆ ನೀಡುವ ಹಾಗೂ ಷೇರುಪೇಟೆಯಲ್ಲಿ ಲಿಸ್ಟ್‌ ಆಗಿರುವ ಎಂಟಿಎನ್‌ಎಲ್‌ ಅನ್ನು ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬಿಎಸ್‌ಎನ್‌ಎಲ್‌ನ ಅಂಗಸಂಸ್ಥೆಯನ್ನಾಗಿ ಮಾಡಲಾಗುವುದು. ಏಕೆಂದರೆ ವಿಲೀನಕ್ಕೆ ಬಹುಸಮಯ ಹಿಡಿಯಲಿದೆ ಎಂದರು.

ಪುನರುಜ್ಜೀವನ ಕ್ರಮ ಹೇಗೆ?:

ಕಂಪನಿಗಳ ಉದ್ಧಾರಕ್ಕೆ ತಕ್ಷಣಕ್ಕೆ ಹಣ ಸಂಗ್ರಹಿಸಲು 15 ಸಾವಿರ ಕೋಟಿ ರು. ಮೌಲ್ಯದ ಬಾಂಡ್‌ಗಳ ಬಿಡುಗಡೆ ಮಾಡಲಾಗುವುದು. 2016ರ ದರದಲ್ಲಿ ಬಿಎಸ್‌ಎನ್‌ಎಲ್‌ 4ಜಿ ಸ್ಪೆಕ್ಟ್ರಂ ಹಂಚಿಕೆ ಮಾಡಿ, 4ಜಿ ಸೇವೆಯನ್ನು ಆರಂಭಿಸಲು ಅವಕಾಶ ಮಾಡಿಕೊಡಲಾಗುವುದು. ಸ್ಪೆಕ್ಟ್ರಂ ಖರೀದಿಗೆ ಸರ್ಕಾರ 20140 ಕೋಟಿ ರು. ಮತ್ತು ಇದಕ್ಕೆ ಸಂಬಂಧಿಸಿದ ಜಿಎಸ್‌ಟಿ ಮತ್ತು ಸೇವಾ ತೆರಿಗೆ ಪಾವತಿಗಾಗಿ 3674 ಕೋಟಿ ರು.ನೀಡಲಾಗುವುದು. ಇನ್ನು ವೆಚ್ಚ ಕಡಿತಕ್ಕೆ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 29937 ಕೋಟಿ ರು. ವಿನಿಯೋಗಿಸಲಾಗುವುದು. ಅಲ್ಲದೆ ಮುಂದಿನ 4 ವರ್ಷದಲ್ಲಿ 38 ಸಾವಿರ ಕೋಟಿ ರು. ಮೌಲ್ಯದ ಆಸ್ತಿ ಮಾರಾಟ ಮಾಡಲಾಗುವುದು.

ಶೇ.50ರಷ್ಟುಸಿಬ್ಬಂದಿಗೆ ವಿಆರ್‌ಎಸ್‌?

ಪ್ರಸಕ್ತ ಯೋಜನೆ ಅನ್ವಯ ಉಭಯ ಕಂಪನಿಗಳ ಶೇ.50ರಷ್ಟುಉದ್ಯೋಗಿಗಳ ಸ್ವಯಂ ನಿವೃತ್ತಿ ಯೋಜನೆಗೆ ಸರ್ಕಾರ 29937 ಕೋಟಿ ರು.ಮೀಸಲಿಟ್ಟಿದೆ. ಬಿಎಸ್‌ಎನ್‌ಎಲ್‌ 1.63 ಲಕ್ಷ ಉದ್ಯೋಗಿಗಳನ್ನು ಹಾಗೂ ಎಂಟಿಎನ್‌ಎಲ್‌ 22 ಸಾವಿರ ನೌಕರರನ್ನು ಹೊಂದಿದೆ. ಈ ಪೈಕಿ ಬಿಎಸ್‌ಎನ್‌ಎಲ್‌ನ ಅರ್ಧದಷ್ಟುನೌಕರರು ಇನ್ನು 5-6 ವರ್ಷದಲ್ಲಿ ನಿವೃತ್ತಿ ಹೊಂದಲಿದ್ದಾರೆ. ಎಂಟಿಎನ್‌ಎಲ್‌ನ 16 ಸಾವಿರ ನೌಕರರರು 4-5 ವರ್ಷದಲ್ಲಿ ನಿವೃತ್ತಿ ಹೊಂದಲಿದ್ದಾರೆ.

ನಷ್ಟದ ಪ್ರಮಾಣ ಎಷ್ಟು?

ಬಿಎಸ್‌ಎನ್‌ಎಲ್‌ 2015-16ರಲ್ಲಿ 4,859 ಕೋಟಿ ರು., 2016-17ರಲ್ಲಿ 4,793 ಕೋಟಿ ರು., 2017-18ರಲ್ಲಿ 7,993 ಕೋಟಿ ರು. ಹಾಗೂ 2018-19ರಲ್ಲಿ 14,202 ಕೋಟಿ ರು. ನಷ್ಟಅನುಭವಿಸಿದೆ. ಕಂಪನಿಯು 13 ಸಾವಿರ ಕೋಟಿ ರು. ಸಾಲವನ್ನೂ ಹೊಂದಿದೆ.

click me!