ನೀವು ಸೆಲ್ಫಿ ತೆಗಿವಾಗ ವಿಕ್ಟರಿ ಸಿಂಬಲ್ ತೋರಿಸ್ತೀರಲ್ಲ, ತಂತ್ರಜ್ಞಾನ ಬಳಸಿ ಅದರಿಂದ ಆರಾಮಾಗಿ ನಿಮ್ಮ ಫಿಂಗರ್ ಪ್ರಿಂಟನ್ನು ಎತ್ತಿಕೊಳ್ಳಬಹುದೇ?
ಮಧು ವೈ ಎನ್
ಇತ್ತೀಚೆಗೆ ನಮ್ಮ ಲೇಔಟಿನ ವಾಟ್ಸಾಪ್ ಗ್ರೂಪಿನಲ್ಲಿ ಒಂದು ಮೆಸೇಜು ಕಂಡೆ. ನೀವು ಸೆಲ್ಫಿ ತೆಗಿವಾಗ ವಿಕ್ಟರಿ ಸಿಂಬಲ್ ತೋರಿಸ್ತೀರಲ್ಲ, ಅದರಿಂದ ಆರಾಮಾಗಿ ನಿಮ್ಮ ಫಿಂಗರ್ ಪ್ರಿಂಟನ್ನು ಎತ್ತಿಕೊಳ್ಳಬಹುದು ಎಂದು.
ತಕ್ಷಣಕ್ಕೆ ಇದು ವಾಟ್ಸಾಪ್ ಯೂನಿವರ್ಸಿಟಿ ಸುದ್ದಿ ಅನ್ನಿಸಿತು. ಆದರೆ ಒಂದಷ್ಟು ಮಾಹಿತಿ ಕಲೆಹಾಕಿದಾಗ, ಇಲ್ಲ ಇದು ಜಪಾನಿನ ಒಂದು ಯುನಿವರ್ಸಿಟಿಯಲ್ಲಿ ನಡೆದ ಸಂಶೋಧನೆಯ ಫಲ ಎಂದು ಗೊತ್ತಾಯಿತು. 2017ರಲ್ಲಿ ಜಪಾನಿನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಟಿಕ್ಸ್ ಎಂಬ ವಿಶ್ವವಿದ್ಯಾನಿಲಯದ ಸಂಶೋಧಕರು ಮೂರು ಮೀಟರುಗಳಷ್ಟು ದೂರದಿಂದ ತೆಗೆದ ಸೆಲ್ಫಿಗಳಿಂದಲೂ ನಿಮ್ಮ ಫಿಂಗರ್ ಪ್ರಿಂಟುಗಳನ್ನು ಎತ್ತಿಕೊಳ್ಳಬಹುದು ಎಂದಿದ್ದಾರೆ.
undefined
ಅರೆ ಇದು ಇಷ್ಟು ಸುಲಭವಾಯಿತಾ?
ಒಂದು ವೇಳೆ ನಿಮ್ಮ ಸ್ನೇಹಿತನಿಗೆ ನಿಮ್ಮ ಹಣ-ಆಸ್ತಿ ಮೇಲೆ ಸಿಕ್ಕಾಪಟ್ಟೆ ಅಸೂಯೆ ಹುಟ್ಟಿ ಒಂದಿನ ಈ ಸ್ನೇಹದಿಂದ ಏನೂ ಗಿಟ್ಟಲ್ಲ, ಬದಲಾಗಿ ಅದಕ್ಕೆ ತಿಲಾಂಜಲಿ ಇಟ್ಟು ದಿಢೀರ್ ಶ್ರೀಮಂತನಾಗೋಣ ಎಂದು ಯೋಚಿಸಿ- 'ಗೆಳೆಯಾ ನಿಂದು ಅಂಗೈ ಫೋಟೋ ಕಳಿಸು, ನಿನ್ನ ಜಾತಕ ಹೇಳ್ತೀನಿ' ಎಂದು ಕೇಳಿದರೆ? ನೀವು ಪಾಪ ಫ್ರೆಂಡೆಂದು ಬಗೆದು ನಿಮ್ಮ ಅಂಗೈ ಫೋಟೋ ಕಳಿಸಿದರೆ(ಅಷ್ಟು ಹತ್ತಿರದಿಂದ!)?
ಫಿಂಗರ್ ಪ್ರಿಂಟುಗಳ ತಂತ್ರಜ್ಞಾನದಲ್ಲಿ ಎರಡು ವಿಧ.
ಒಂದು- ಆಪ್ಟಿಕಲ್ ಸ್ಕಾನರುಗಳು
ಇನ್ನೊಂದು- ಕೆಪಾಸಿಟಿವ್ ಸ್ಕಾನರುಗಳು.
ಆಪ್ಟಿಕಲ್ ಎಂದರೆ ನೀವು ಆಧಾರ್ ಕಾರ್ಡಿಗೆ ಹೆಬ್ಬೆರಳು ಇಡ್ತೀರಲ್ಲ, ಆ ಟೈಪು. ಗಾಜಿನ ಮೇಲೆ ಬೆರಳಿಡ್ತೀರಿ. ಕೆಳಗೆ ಹಸಿರು ಬಣ್ಣದ ಸ್ಕಾನರ್ ನಿಮ್ಮ ಬೆರಳನ್ನು ಸ್ಕಾನ್ ಮಾಡಿಕೊಳ್ಳುತ್ತದೆ. ಕೆಪಾಸಿಟಿವ್ ಎಂದರೆ ನಿಮ್ಮ ಮೊಬೈಲ್ ಫೋನುಗಳ ಸ್ಕ್ರೀನುಗಳು. ಬೆರಳನ್ನು ಒತ್ತಿ ಲಾಗಿನ್ ಆಗ್ತೀರಲ್ಲ ಅದು.
ಆಪ್ಟಿಕಲ್ ತಂತ್ರಜ್ಞಾನವನ್ನು ಸೂರ್ಯ ಮತ್ತು ಭೂಮಿಗೆ ಹೋಲಿಸಿಕೊಳ್ಳಿ. ಸೂರ್ಯ ಸ್ಕಾನರು, ಭೂಮಿ ನಿಮ್ಮ ಬೆರಳು. ಸ್ಕಾನರುಗಳು ಗಾಢ ಕತ್ತಲೆ ಸೃಷ್ಟಿಸಿ ತೀಕ್ಷ್ನವಾದ ಬೆಳಕನ್ನು ಬೆರಳ ಮೇಲೆ ಹರಿಸುತ್ತವೆ. ಆಗ ನಿಮ್ಮ ಬೆರಳಿನ ಬೆಟ್ಟದ ಸಾಲು ಬಿದ್ದ ಬೆಳಕನ್ನು ಪ್ರತಿಫಲಿಸಿದರೆ ಬೆಟ್ಟಗಳ ನಡುವಿನ ಕಣಿವೆಗಳು ಬೆಳಕನ್ನು ಹೀರಿಕೊಳ್ಳುತ್ತವೆ. ಅರೆ ಎರಡೂ ಚರ್ಮವೇ ಆಗಿದ್ದು ಅದು ಹೇಗೆ ಒಂದು ಪ್ರತಿಫಲಿಸಿ ಇನ್ನೊಂದು ಹೀರಿಕೊಳ್ತದೆ ಅನಿಸಬಹುದು. ಆಕ್ಚುವಲಿ ಹೀರಿಕೊಳ್ಳುವುದು ಎಂದರೆ.. ಕಣಿವೆಗಳು ಆಳದಲ್ಲಿರೋದರಿಂದ ಅಲ್ಲಿಗೆ ಹೆಚ್ಚು ಬೆಳಕು ಬೀಳಲ್ಲ, ಮತ್ತು ಬಿದ್ದದ್ದೂ ಬೆಟ್ಟಗಳಷ್ಟು ತೀಕ್ಷ್ಣವಾಗಿ ಪ್ರತಿಫಲಿಸಲಾಗದೇ ಬೆಳಕು ಅಲ್ಲಲ್ಲೆ ಚದುರಿ ಚೆಲ್ಲಾಪಿಲ್ಲಿಯಾಗುತ್ತದೆ. ಹೀಗೆ ಮಾಡಿ ಸ್ಕಾನರು ನಿಮ್ಮ ಬೆರಳಿನ ಅಚ್ಚನ್ನು ಮುದ್ರಿಸಿಕೊಳ್ಳುತ್ತದೆ.
ಕೆಪಾಸಿಟಿವ್ ಸ್ಕಾನರುಗಳಲ್ಲಿ ಬೇರೆ ಥರ. ಇದನ್ನು ಉಲ್ಟಾ ಕಲ್ಪಿಸಿಕೊಳ್ಳಿ. ಭಗವಂತನು ತನ್ನ ಬೃಹತ್ತಾದ ಬೆರಳನ್ನು ಭೂಮಿಗೆ ಒತ್ತಿದಂಗೆ ಭಾವಿಸಿ. ಬೃಹತ್ತಾದ ಬೆರಳನ್ನು ಭೂಮಿಗೆ ಒತ್ತಿದಾಗ ಬೆರಳಲ್ಲಿನ ಬೆಟ್ಟಗಳಷ್ಟೇ ಭೂಮಿಗೆ ತಗುಲಿ ಅದಷ್ಟೇ ಸ್ಪರ್ಷಕ್ಕೆ ಸಿಕ್ಕಿ ಬೆಟ್ಟ ಯಾವುದು ಕಣಿವೆ ಯಾವುದು, ಯಾವುದು ಎಷ್ಟಗಲ ಎಷ್ಟೆತ್ತರ ಎಂಬ ಮಾಹಿತಿ ಸಿಕ್ಕಿಬಿಡುತ್ತದೆ. ಫೋನುಗಳ ಟಚ್ ಸ್ಕ್ರೀನು ಭೂಮಿಯ ಮೇಲ್ಪದರದಂತಿದ್ದು ಅಡಿಯಲ್ಲಿ ಸಣ್ಣಾತಿಸಣ್ಣ ಲಕ್ಷಾಂತರ ಕೆಪಾಸಿಟರುಗಳು ಅಂಟಿಕೊಂಡಿರುತ್ತವೆ. ಈ ಕೆಪಾಸಿಟರುಗಳು ಕರೆಂಟಿಂದ ಚಾರ್ಜ್ ಆಗಿರುತ್ತವೆ. ಯಾವಾಗ ನೀವು ಬೆರಳನ್ನು ಸ್ಕ್ರೀನಿನ ಮೇಲೆ ಅಂದರೆ ಲಕ್ಷೋಪಲಕ್ಷ ಕೆಪಾಸಿಟುಗರಗಳ ಮೇಲೆ ಒತ್ತುತ್ತೀರೋ ಆಗ ಬೆರಳಿನ ಬೆಟ್ಟಗಳು ತಟ್ಟಿದ ಕೆಪಾಸಿಟರುಗಳು ಮುಟ್ಟಿದರೆ ಮುನಿಯಂತೆ ಮುದುಡಿ ಓ ಇದು ಬೆಟ್ಟ ಇದು ಕಣಿವೆ ಎಂದು ಫೋನಿಗೆ ಗೊತ್ತಾಗುತ್ತದೆ.
ಅರೆ ಇಷ್ಟೇ ಆಗಿದ್ದರೆ ಹೌದಲ್ಲ, ಫೋಟೋಗಳಲ್ಲಿ ನಮ್ಮ ಇಡೀ ಬೆರಳಿನ ಬೆಟ್ಟ ಕಣಿವೆಗಳು ಕಾಣಿಸುತ್ತವಲ್ಲ, ಕಾಪಿ ಮಾಡಬಹುದಲ್ಲ?
ಇಲ್ಲೇ ವಿಷಯ ಅಡಗಿರುವುದು. ಈ ಆಪ್ಟಿಕಲ್ ಮತ್ತು ಕೆಪಾಸಿಟಿವ್ ಸ್ಕಾನರುಗಳು ಮೈಕ್ರೋಸ್ಕೋಪಿಕ್ ವಿವರಗಳನ್ನು ಕಾಪಿ ಮಾಡಿಕೊಳ್ಳುತ್ತವೆ. ಅರ್ಥಾತ್ ನಮ್ಮ ಕಣ್ಣಿಗೆ ಗೋಚರಿಸುವ ಬೆಟ್ಟ ಕಣಿವೆಗಳಷ್ಟೇ ಅಲ್ಲ, ಬೆಟ್ಟದ ಮೇಲಿನ ಕಲ್ಲುಗುಡ್ಡಗಳ, ಕಣಿವೆಗಳಲ್ಲಿನ ಗುಂಡಿ ಗುದ್ದರಗಳ ವಿವರಗಳನ್ನೂ ಕಾಪಿ ಮಾಡಿಕೊಳ್ಳುತ್ತವೆ!
ವಿಷಯ ಹೀಗಿರುವಾಗ ನೀವು ಸೆಲ್ಫೀಗೆ ವಿಕ್ಟರಿ ಸಿಂಬಲ್ ಹಿಡಿದಾಕ್ಷಣ, ಅಥವಾ ಬಸ್ಸಲ್ಲಿ ಕಂಬಿ ಹಿಡಿದಾಕ್ಷಣ ಅದರಿಂದ ನಿಮ್ಮ ಬೆರಳಚ್ಚನ್ನು ನಕಲಿಸಿ ಮರುಬಳಸಲಾಗಲ್ಲ! ಫೋಟೋಗಳಲ್ಲಿ ಅಥವಾ ಬಸ್ಸಿನ ಕಂಬಿಗಳಲ್ಲಿ ಅಷ್ಟೆಲ್ಲ ವಿವರಗಳು ಸೆರೆಯಾಗಿರಲ್ಲ.
ಇದೆಲ್ಲ ಸರಿ, ಆದರೇ ಈ ಪೊಲಿಸರು ಕ್ರೈಂ ಸೀನ್ ನಡೆದಾಗ ಧೂಳು ಕೊಡವಿ ಮುಟ್ಟಿದ ಜಾಗದ ಮಹಜರು ಮಾಡ್ತಾರಲ್ಲ?
ಪ್ರಶ್ನೆ ಸರಿಯಿದೆ. ಆದರೆ ಅದೆಲ್ಲ ಇದು ಇಂಥವರ ಬೆರಳಚ್ಚು ಎಂದು ಗುರುತಿಸಲೇ ಹೊರತು ಅದರಿಂದ ಬೇರೆಲ್ಲೊ ಆ ವ್ಯಕ್ತಿಯ ಬೆರಳಚ್ಚು ಮರುಸೃಷ್ಟಿಸಿ ಲಾಗಿನ್ ಆಗಲು ಸಾಧ್ಯವಿಲ್ಲ.
ಆದ್ದರಿಂದ ನಿಶ್ಚಿಂತೆಯಾಗಿ ನೀವು ಫೋಟೋಗಳಲ್ಲಿ ವಿಕ್ಷರಿ ಸಿಂಬಲ್ ತೋರಿಸಬಹುದು. ಇನ್ನೊಬ್ಬರಿಗೆ ಅಂಗೈ ಸಹ ತೋರಿಸಬಹುದು. ಅಥವಾ ಭಯ ಬೀಳದೆ ಎಲ್ಲಿ ಬೇಕಾದರೂ ಮುಟ್ಟಬಹುದು.
ಜಪಾನ್ ಸಂಶೋಧಕರು ಒಂದು ಲ್ಯಾಬ್ ಸಿಚುವೇಶನ್ ಸೃಷ್ಟಿಸಿ ಸಾಧ್ಯತೆಯನ್ನು ತೋರಿಸಿದ್ದರು ಮಾತ್ರ. ದೈನಂದಿನ ಬದುಕಲ್ಲಿ ಹಾಗೆಲ್ಲ ಎಲ್ಲಾ ಕಡೆ ಲ್ಯಾಬಿನ ವಾತಾವರಣ ಇರಲ್ಲ.