India
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಹಿಂದೂಯೇತರ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಅಥವಾ ರಾಜ್ಯದ ಇತರೆ ಇಲಾಖೆಗಳಿಗೆ ವರ್ಗಾವಣೆಗೊಳ್ಳಲು ಪ್ರಸ್ತಾಪವನ್ನು ಅಂಗೀಕರಿಸಿದೆ.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಈ ಕ್ರಮವನ್ನು ದೃಢಪಡಿಸಿದ್ದಾರೆ. ಮಂದಿರದ ಧಾರ್ಮಿಕ ಗುರುತನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಟಿಟಿಡಿ ಸುಮಾರು 7,000 ಖಾಯಂ ಉದ್ಯೋಗಿಗಳನ್ನು ಹೊಂದಿದೆ. ಇವರಲ್ಲಿ ಸುಮಾರು 300 ಮಂದಿ ವರ್ಗಾವಣೆಯಾಗುವ ಸಾಧ್ಯತೆಯಿದೆ. ಟ್ರಸ್ಟ್ನಲ್ಲಿ ಕೆಲಸ ಮಾಡುವ 14,000 ಗುತ್ತಿಗೆ ಉದ್ಯೋಗಿಗಳ ಮೇಲೂ ಪರಿಣಾಮ ಬೀರಬಹುದು.
ಟಿಟಿಡಿ ಕಾಯ್ದೆ ಮತ್ತು ಆಂಧ್ರಪ್ರದೇಶ ದೇವಾಲಯಗಳ ಕಾಯ್ದೆಯನ್ವಯ, ಮಂದಿರದ ಎಲ್ಲಾ ಉದ್ಯೋಗಿಗಳು ಹಿಂದೂ ಧರ್ಮವನ್ನು ಪಾಲಿಸಬೇಕು. ಈ ಕ್ರಮವು ಆ ನಿಟ್ಟಿನಲ್ಲಿ ಒಂದು ದೊಡ್ಡ ಪ್ರಯತ್ನ.
ಈ ನಿರ್ಧಾರವು ತಿರುಪತಿ ಲಡ್ಡು ವಿವಾದದ ನಡುವೆ ಬಂದಿದೆ. ಹಾಲಿ ಸರ್ಕಾರವು ಹಿಂದಿನ YSRCP ಸರ್ಕಾರದ ಮೇಲೆ ಪ್ರಾಣಿಜನ್ಯ ಕೊಬ್ಬನ್ನು ಬಳಸಲು ಅವಕಾಶ ನೀಡಿದೆ ಎಂದು ಆರೋಪಿಸಿತ್ತು.
ಕೆಲವರು ಇದನ್ನು ಧಾರ್ಮಿಕ ಸ್ವಾತಂತ್ರ್ಯ ಮತ್ತು ಉದ್ಯೋಗ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎನ್ನುತ್ತಿದ್ದಾರೆ. ಆದರೆ ಸಂವಿಧಾನದ 16(5)ನೇ ವಿಧಿ ಮತ್ತು ಆಂಧ್ರ ಸರ್ಕಾರದ ನಿರ್ಧಾರದಿಂದ ಕಾನೂನು ಬೆಂಬಲ ದೊರೆತಿದೆ.
ಟಿಟಿಡಿಯ ನಿರ್ಧಾರವನ್ನು ನೌಕರರ ಸಂಘಗಳು ಸ್ವಾಗತಿಸಿವೆ. ಇದು ಧಾರ್ಮಿಕ ಸಂಸ್ಥೆಗಳ ಪರಿಶುದ್ಧತೆ ಮತ್ತು ಸಂಪ್ರದಾಯ ಕಾಪಾಡುವ ಕ್ರಮ ಎಂದು ಪರಿಗಣಿಸಿವೆ. ವಿಮರ್ಶಕರು ಇದನ್ನು ಉದ್ಯೋಗ ವೈವಿಧ್ಯತೆಗೆ ಸವಾಲು ಎಂದಿದ್ದಾರೆ.
ಟಿಟಿಡಿಯ ನಿರ್ಧಾರವನ್ನು ಮಂದಿರದ ಧಾರ್ಮಿಕ ಗುರುತು ಮತ್ತು ದೀರ್ಘಕಾಲದ ಸಂಪ್ರದಾಯಗಳನ್ನು ಬಲಪಡಿಸುವ ಕ್ರಮವೆಂದು ವ್ಯಾಪಕವಾಗಿ ನೋಡಲಾಗುತ್ತಿದೆ.