ಹಾಸ್ಟೆಲ್ ಗೆ ಹೋಗಬೇಕಿದ್ದ ಹುಡುಗಿ ಮುಸ್ಲಿಂ ಮಹಿಳೆಯರಿಗೆ ಬೆಳಕಾದಳು!

By Web Desk  |  First Published Jun 9, 2019, 1:08 PM IST

ಪುಲ್ವಾಮಾ ದಾಳಿಯ ನಂತರ ನೇರವಾಗಿ ಅಲ್ಲಿಗೆ ಹೋದ ಹಿರಿಯ ಪತ್ರಕರ್ತ ಬರೆದ ಅನುಭವ ಕಥನದಲ್ಲಿ ಕಾಶ್ಮೀರದ ಸಮಸ್ಯೆಯ ಸಮಗ್ರ ಚಿತ್ರಣವೂ ಇದೆ. 


ಬುರ್ಖಾ ಧರಿಸಿ ಶ್ರೀನಗರದ ಬೀದಿಯಲ್ಲಿ ಬಿರಬಿರನೆ ಹೆಜ್ಜೆ ಹಾಕುತ್ತಿದ್ದ ಆ ಇಬ್ಬರು ಹೆಂಗಸರ ನಡಿಗೆಯಲ್ಲಿ ಅದಮ್ಯ ವಿಶ್ವಾಸವಿತ್ತು. ಒಬ್ಬಾಕೆ ಕುಳ್ಳಗಿದ್ದಳು. ಮತ್ತೊಬ್ಬಾಕೆ ಎತ್ತರಕ್ಕಿದ್ದಳು. ಅವರನ್ನು ನಮ್ಮ ಮಿಲಿಟರಿಯವರು ತಡೆದು ನಿಲ್ಲಿಸಿ ನೀವ್ಯಾರು ಅಂತ ಕೇಳಲು ಸಾಧ್ಯವಿರಲಿಲ್ಲ. ಅದಕ್ಕೆ ಅವರು ಕೊಡುವ ಕಾರಣ ತೀರಾ ಕ್ಷುಲ್ಲಕ. ಆದರೆ ಅವರ ಮಾತಿನಲ್ಲಿ ದೃಢತೆ ಇತ್ತು. ಅಸಲಿಗೆ ಒಬ್ಬ ಮುಸ್ಲಿಂ ಮಹಿಳೆಯು ಕಾಶ್ಮೀರದಲ್ಲಿ ಐಡೆಂಟಿಟಿ ಕಾರ್ಡ್‌ನ್ನು ಇಟ್ಟುಕೊಳ್ಳುವುದಿಲ್ಲ.

ಅಂದಹಾಗೆ ಕುಳ್ಳಗಿದ್ದ ಆ ಹೆಂಗಸಿನ ಹೆಸರು ಆಸಿಯಾ ಅಂದ್ರಾಬಿ. ದುಖ್ತರನ್‌ ಎ ಮಿಲ್ಲತ್‌ ಸಂಘಟನೆಯ ಮುಖ್ಯಸ್ಥೆ. ದುಖ್ತರನ್‌-ಎ-ಮಿಲ್ಲತ್‌ ಅಂದರೆ ‘ನಂಬಿಕೆಯ ಪುತ್ರಿಯರು’ ಎಂಬ ಅರ್ಥ ಬರುತ್ತದೆ. ಉದ್ದಕ್ಕಿದ್ದ ಆ ಮಹಿಳೆಯು ಸಂಘಟನೆಯ ಲೆಫ್ಟಿನೆಂಟ್‌ ಆಗಿದ್ದಳು. ಆಕೆಯ ಗಂಡ ಹಿಜ್ಬುಲ್‌ ಮುಜಾಹಿದೀನ್‌ನಲ್ಲಿದ್ದ. ಮದುವೆ ಯಾಗಿನ್ನೂ ಒಂದೇ ವರ್ಷವಾಗಿತ್ತು. ಭದ್ರತಾ ಪಡೆಗಳು ಅವನನ್ನು ಹೊಡೆದುರುಳಿಸಿದ್ದವು.

Tap to resize

Latest Videos

undefined

ಕಾಶ್ಮೀರ ಕಣಿವೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದವಳು ಆಸಿಯಾ ಅಂದ್ರಾಬಿ. ಆಕೆಯ ಮಹಿಳಾ ಜಿಹಾದಿ ಸಂಘಟನೆಗೆ ವರ್ಚಸ್ಸಿತ್ತು. 2003ರಲ್ಲಿ ದಿಲ್ಲಿ ಪೊಲೀಸರು ಪಾಕಿಸ್ತಾನ ರಾಯಭಾರಿ ಕಚೇರಿ ಬಳಿ ಹುರಿಯತ್‌ ಕಾನ​ರೆನ್ಸ್‌ನ ಮಹಿಳಾ ಕಾರ್ಯಕರ್ತೆ ಯೊಬ್ಬಳನ್ನು ಬಂಧಿಸಿದರು. ಆಕೆ ಪ್ರತ್ಯೇಕತಾವಾದಿಗಳಿಗೆ ನೀಡುವ ಸಲುವಾಗಿ ಬ್ಯಾಗ್‌ ತುಂಬ ಹಣ ಒಯ್ಯುತ್ತಿದ್ದಳು. ಇದರ ಹಿಂದೆ ದುಖ್ತರನ್‌-ಎ -ಮಿಲ್ಲತ್‌ ಸಂಘಟನೆಯ ಪಾತ್ರವಿದೆ ಎಂದು ಬಲವಾಗಿ ಶಂಕೆ ವ್ಯಕ್ತವಾಗಿತ್ತು.

ಒಂದು ಕಾಲಕ್ಕೆ ಈ ಸಂಘಟನೆಯ ಅನೇಕ ಏಜೆಂಟರು ಕಾಶ್ಮೀರದಾದ್ಯಂತ ಆ್ಯಕ್ಟೀವ್‌ ಆಗಿದ್ದರು. ಪಾಕಿಸ್ತಾನದ ಮುಜಾಹಿದೀನ್‌ಗಳಿಗೆ ಗುಪ್ತ ಮಾಹಿತಿಗಳನ್ನು ತಲುಪಿಸುತ್ತಿದ್ದರು. ಮಿಲ್ಲತ್‌ ಸಂಘಟನೆಯ ಗುಪ್ತಚರ ನೆಟ್‌ವರ್ಕ್ ತುಂಬಾ ವಿಸ್ತಾರ ವಾಗಿತ್ತು. ಆಸಿಯಾಳ ಒಳಗೆ ದೃಢ ವಿಶ್ವಾಸವಿತ್ತು. ಅದು ಆಕೆಯ ಕಣ್ಣುಗಳಲ್ಲಿ ಕಾಣುತ್ತಿತ್ತು.

ತಲೆಯಿಂದ ಕಾಲಿನ ತನಕ ಪೂರ್ತಿ ಚಾದೋರ್‌ ಹೊದ್ದುಕೊಳ್ಳುತ್ತಿದ್ದ ಆಕೆ ಕೈಗಳಿಗೂ ಗ್ಲೌಸ್‌ ಧರಿಸುತ್ತಿದ್ದಳು. ಬುರ್ಖಾ ಧರಿಸುವ ವಿಚಾರದಲ್ಲಿ ಆಕೆ ಎಷ್ಟು ಕಟ್ಟುನಿಟ್ಟಾಗಿದ್ದಳು ಅಂದರೆ ಆಕೆಯ ಊರಿನವರಿಗೆ ಆಕೆಯ ಮುಖವೇ ಮರೆತುಹೋಗಿತ್ತು.

1962ನೇ ಇಸವಿಯಲ್ಲಿ ಶ್ರೀನಗರದ ಖಾನಿಯಾರ್‌ನಲ್ಲಿ ಆಸಿಯಾ ಅಂದ್ರಾಬಿ ಜನಿಸಿದಳು. ಫಿಸಿಷಿಯನ್‌ ಡಾ.ಸಯೀದ್‌ ಶಹಾಬುದ್ದಿನ್‌ ಅಂದ್ರಾಬಿಯ ಕೊನೆಯ ಮಗಳು ಇವಳು. ಸಯೀದ್‌ ಶಹಾಬುದ್ದಿನ್‌ಗೆ ಒಟ್ಟು ನಾಲ್ವರು ಹೆಣ್ಣು ಹಾಗೂ ಮೂವರು ಗಂಡು ಮಕ್ಕಳು. ಎಲ್ಲರಿಗಿಂತ ಆಸಿಯಾಳೇ ಚಿಕ್ಕವಳಾಗಿದ್ದರಿಂದ ಆಕೆಯನ್ನು ಎಲ್ಲರೂ ತುಂಬಾನೇ ಮುದ್ದು ಮಾಡುತ್ತಿದ್ದರು. ಅಣ್ಣಂದಿರಿಗಂತೂ ಆಕೆ ಮುದ್ದಿನ ತಂಗಿ.

ನಿಜಕ್ಕೂ ಆಸಿಯಾ ಅನುರೂಪ ಸುಂದರಿ. ಈಗಿನಂತೆ ಆಕೆ ಸದಾ ಬುರ್ಖಾ ತೊಡುತ್ತಿರಲಿಲ್ಲಘಿ. ರೆಬೆಲ್‌ ಆಗಿರಲಿಲ್ಲಘಿ. ತುಂಬಾ ಜಾಲಿ ಹುಡುಗಿಯಾಗಿದ್ದಳು. ಕಾಶ್ಮೀರ ಯೂನಿವರ್ಸಿಟಿಯಲ್ಲಿ ಬಯೋ ಕೆಮಿಸ್ಟ್ರಿ ಕಲಿಯುತ್ತಿದ್ದಳು. ಜೀನ್ಸ್‌ ತೊಡುತ್ತಿದ್ದಳು. ಶ್ರೀನಗರದ ಐಸ್‌ ಕ್ರೀಂ ಅಂಗಡಿಗಳಲ್ಲಿ ಅಡ್ಡೆ ಹಾಕುತ್ತಿದ್ದಳು. ಆಕೆಯತ್ತ ಆಕರ್ಷಿತರಾಗದ ಹುಡುಗರೇ ಇರಲಿಲ್ಲ.

ಇಂತಿಪ್ಪ ಆಸಿಯಾ ತನ್ನ ಪದವಿ ಮುಗಿದ ಬಳಿಕ ಡಾಲ್‌ಹೌಸಿಗೆ ಹೋಗಿ ಮಾಸ್ಟರ್ಸ್‌ ಇನ್‌ ಬಯೋಕೆಮಿಸ್ಟ್ರಿ ಕಲಿಯಲು ನಿರ್ಧರಿಸಿದಳು. ಆದರೆ ಚಿಕ್ಕವಳು ಎಂಬ ಕಾರಣಕ್ಕೆ ಆಕೆಯ ಅಣ್ಣಂದಿರು ಒಪ್ಪಲಿಲ್ಲಘಿ. ಅಲ್ಲೆಲ್ಲೋ ಹೋಗಿ ಆಕೆ ಒಬ್ಬಳೇ ಇರುವ ದರ್ದಾದರೂ ಏನು ಎಂಬುದು ಆಕೆಯ ಕುಟುಂಬಸ್ಥರ ನಿಲುವಾಗಿತ್ತು. ಅದರಲ್ಲೂ ಆಕೆಯದ್ದು ಸಯೀದ್‌ ಕುಟುಂಬ. ಮುಸ್ಲಿಂರಲ್ಲೇ ಸಯೀದ್‌ ಎನ್ನುವುದು ಉನ್ನತ ಪಂಗಡ.

ಭವಿಷ್ಯದ ಬಗ್ಗೆ ಅಭದ್ರತೆ ಕಾಡಿದಾಗಲೆಲ್ಲಾ ಆಸಿಯಾ ‘ಖವಾತೀನ್‌ ಕಿ ದಿಲೋ ಕಿ ಬಾತೇ’ (ಮುಸ್ಲಿಂ ಮಹಿಳೆಯ ಅಂತರಂಗದೊಳಗೆ) ಎಂಬ ಪುಸ್ತಕ ಓದುತ್ತಿದ್ದಳು. ಆ ಪುಸ್ತಕದ ಲೇಖಕರು ಭಾರತದ ಮೈಲ್‌ ಖೇರಾಬಡಿ. ಇಸ್ಲಾಂಗೆ ಮತಾಂತರ ಹೊಂದಿದ ಅಮೆರಿಕನ್‌ ಕ್ರಿಶ್ಚಿಯನ್‌ ಮರಿಯಮ್‌ ಜಮೀಲಾ ಹೇಗೆ ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಳು ಎಂಬ ಬಗೆಗಿನ ಪುಸ್ತಕವದು. ನಿಜಕ್ಕೂ ಈ ಪುಸ್ತಕ ಆಸಿಯಾಳ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿತ್ತು.

ಆಕೆಯಲ್ಲಿ ದೊಡ್ಡದೊಂದು ಬದಲಾವಣೆ ತಂದಿತು. ಒಂದು ದಿನ ಬೆಳಗ್ಗೆ ಪುಸ್ತಕ ಓದಲು ಶುರುಮಾಡಿದಳು. ಕಾಕತಾಳೀಯ ಎಂಬಂತೆ ಸಂಜೆಯ ಆಜಾನ್‌ (ಪ್ರಾರ್ಥನೆಯ ಕರೆ) ವೇಳೆಗೆ ಸರಿಯಾಗಿ ಇಡೀ ಪುಸ್ತಕ ಓದಿ ಮುಗಿಸಿದಳು.

ಅಂದು ಸಂಜೆ ನಮಾಜ್‌ ಮಾಡಲು ಮಂಡಿಯೂರಿ ಕುಳಿತಾಗ ಆಕೆಯಲ್ಲಿ ಒಂದು ವಿಶೇಷ ಬದಲಾವಣೆಯಾಯಿತು. ಅದಕ್ಕೂ ಮೊದಲು ಸಾಕಷ್ಟುಬಾರಿ ನಮಾಜ್‌ ಮಾಡಿದ್ದಳು. ಆದರೆ ಈ ರೀತಿ ಯಾವತ್ತೂ ಆಗಿರಲಿಲ್ಲಘಿ. ಆಕೆಗೆ ತಾನು ತನ್ನ ಆತ್ಮದಿಂದ ನಮಾಜ್‌ ಮಾಡುತ್ತಿದ್ದೇನೇನೋ ಎಂಬ ಭಾವ ಅವಳಲ್ಲಿ ಮೂಡಿತು.

ಅಲ್ಲಿ ತನಕ ಜೀನ್ಸ್‌ ಮತ್ತು ಟೀ ಶರ್ಟ್‌ ತೊಟ್ಟು ಜಾಲಿ ಹುಡುಗಿಯಾಗಿದ್ದ ಆಸಿಯಾ ಸಂಪೂರ್ಣ ಬದಲಾಗಿದ್ದಳು. ಪಕ್ಕಾ ಮುಸ್ಲಿಂ ಪದ್ಧತಿಯಂತೆ ಉಡುಗೆ ತೊಟ್ಟಿದ್ದಳು. ಆಕೆಯ ಮನೆಯವರು ತಮ್ಮ ಕಣ್ಣನ್ನು ತಾವೇ ನಂಬದಾದರು. ಆಸಿಯಾ ‘ಇನ್ಮುಂದೆ ಮುಸ್ಲಿಂ ಆಸಿಯಾ’ ಅಂದಳು. ಈ ಕ್ಷಣದಿಂದ ತಾನು ಇಸ್ಲಾಂ ಬೋಧನೆಯನ್ನು ಚಾಚೂ ತಪ್ಪದೇ ಪಾಲಿಸುವುದಾಗಿ ಹೇಳಿದಳು.

ಕುರಾನ್‌ ಪಠಣ ಮಾಡ್ತೀನಿ ಅಂದಳು. ತನ್ನ ಮಗಳಲ್ಲಿ ಆದ ಈ ಬದಲಾವಣೆ ಕಂಡು ಅಚ್ಚರಿಗೊಂಡ ಡಾ. ಶಹಾಬುದ್ದಿನ್‌. ಚಿಕ್ಕ ಹುಡುಗಿ ಆಸಿಯಾ ಇಷ್ಟುಬೇಗನೆ ಕಟ್ಟರ್‌ ಇಸ್ಲಾಮ್‌ ವಾದಕ್ಕೆ ಜೋತು ಬೀಳುವುದು ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಸ್ಥಳೀಯ ಆಡಳಿತ ಮತ್ತು ಪೊಲೀಸರ ಕಿರುಕುಳದ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿತ್ತು. ಹೆಣ್ಣು ಮಕ್ಕಳಿಗಲ್ಲ ಇದು ಎಂಬ ನಿಲುವು ಅವರದಾಗಿತ್ತು.

ಆದರೂ ಆಸಿಯಾ ಬಿಡಲಿಲ್ಲ. ಧರ್ಮ ಬೋಧನೆ ಕುರಿತು ತಂದೆಯನ್ನು ಪೀಡಿಸತೊಡಗಿದಳು. ಡಾ. ಅಂದ್ರಾಬಿ ಇಸ್ಲಾಂ ಬೋಧನೆಯಲ್ಲಿ ಪಾಂಡಿತ್ಯ ಹೊಂದಿದ್ದ.

ಹಾಸ್ಟೆಲ್‌ ಹೋಗಬೇಕೆಂದುಕೊಂಡಿದ್ದ ಹುಡುಗಿಯು ಮುಸ್ಲಿಂ ಮಹಿಳೆಯರ ಬಾಳಿನಲ್ಲಿ ಬದಲಾವಣೆ ತರುವುದಾಗಿ ನಿಶ್ಚಯಿಸಿದಳು. ಮುಸ್ಲಿಂ ಸಮಾಜದಲ್ಲಿ ಮಹಿಳೆಯರನ್ನು ಪ್ರಾಣಿಗಿಂತ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಕುರಾನ್‌ ಹೀಗೆ ಹೇಳಿಲ್ಲ ಅಂತಿದ್ದಳು ಆಸಿಯಾ. ಪುರುಷ ಮತ್ತು ಮಹಿಳೆಯರು ಸಮಾನರು ಎಂದು ಕುರಾನ್‌ ಹೇಳುತ್ತದೆ. ಕೋ ಎಜುಕೇಷನ್‌ ಬಗ್ಗೆ ಹೇಳಿಲ್ಲವಾದರೂ ಕೂಡ ಧರ್ಮ ಕಾರ್ಯಗಳಲ್ಲಿ ಭಾಗವಹಿಸ ಬಾರದು ಅಂತೇನೂ ಇಲ್ಲಘಿ. ಮಹಿಳೆಯೂ ಮಸೀದಿಗೆ ಹೋಗಬಹುದು ಅನ್ನುತ್ತಿದ್ದಳು.

ಆದರೆ ದಾರಿ ಸುಲಭವಿಲ್ಲ ಎಂಬುದು ಚೆನ್ನಾಗಿ ಗೊತ್ತಿತ್ತು. ಹಾಗಂತ ಅಷ್ಟುಸುಲಭಕ್ಕೆ ಬಿಡುವವಳಾಗಿರಲಿಲ್ಲಘಿ. ಆಕೆಯದ್ದು ದೃಢ ನಿರ್ಧಾರ. 1981ರಲ್ಲಿ ಮುಸ್ಲಿಂ ಹುಡುಗಿಯರಿಗಾಗಿ ಕುರಾನ್‌ ಕಲಿಸುವ ಶಾಲೆಯನ್ನು ಶ್ರೀನಗರದಲ್ಲಿ ತೆರೆದಳು. ನಂತರ ದುಖ್ತರನ್‌-ಎ-ಮಿಲ್ಲತ್‌ ಆರಂಭಿಸಿದ. ಧರ್ಮ ಬೋಧನೆ, ಸಭೆ, ಸೆಮಿನಾರುಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸತೊಡಗಿದಳು. ಮಸೀದಿಗೆ ಹೆಣ್ಣು ಮಕ್ಕಳು ಬರಬೇಕೆಂದು ಬಹಿರಂಗವಾಗಿ ಹೇಳುತ್ತಿದ್ದಳು.

ಮುಸ್ಲಿಂ ಸಮುದಾಯವು ಈಕೆಯ ಈ ಕೆಲಸದಿಂದ ಅಸಮಾಧಾನಗೊಂಡಿತು. ನಿಮ್ಮ ಮಗಳಿಗೆ ಬುದ್ಧಿ ಹೇಳಿ ಅಂದರು ಧಾರ್ಮಿಕ ನಾಯಕರು. ಆದರೆ ಕುರಾನ್‌ನಲ್ಲಿ ಪ್ರವಾದಿ ಮೊಹಮ್ಮದ್‌ರ ಬೋಧನೆಗಳು ಈಕೆಯ ನೆರವಿಗೆ ಬಂದವು. ಕೆಲವೇ ವರ್ಷಗಳಲ್ಲಿ ಇಡೀ ಕಾಶ್ಮೀರದ ಕಣಿವೆ ತುಂಬ ಆಸಿಯಾಳ ಸಂಘಟನೆ ಬೆಳೆದುಬಿಟ್ಟಿತು. ಹೆಚ್ಚಿನ ಸಂಖ್ಯೆಯಲ್ಲಿ ಯುವತಿಯರು ಬರತೊಡಗಿದರು. ಪಿಎಚ್ಡಿ ಮಾಡಿದವರು ಕೂಡ ಈಕೆಯ ಸಂಘಟನೆಗೆ ಕೈಜೋಡಿಸತೊಡ ಗಿದರು.

ಎಷ್ಟೋ ಜನ ಈಕೆಯ ಚಳವಳಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಆಸಿಯಾ ಹೇಳಿದಳು ಎಂಬ ಕಾರಣಕ್ಕೆ ಅನೇಕ ಯುವತಿಯರು ಮುಜಾಹಿದೀನ್‌ಗಳನ್ನ (ಯಾವಾಗ ಬೇಕಾದರೂ ಸಾಯಬಹುದಾದ) ಮದುವೆಯಾದರು. ಭಾರತಕ್ಕೆ ವಿರೋಧ ವಾಗಿ ಈಕೆ ಚಳವಳಿ ನಡೆಸುತ್ತಿದ್ದಾಳೆ ಅಂತ ಬ್ರ್ಯಾಂಡ್‌ ಆದಳು. ಆಸಿಯಾಳ ದೊಡ್ಡಣ್ಣ ಜಮಾಯತ್‌-ಎ-ತಲ್ಬಾ ಎಂಬ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. 1987ರ ನಂತರ ಆಸಿಯಾಳ ಚಳವಳಿ ತೀವ್ರವಾಗಿದ್ದರಿಂದ ಪೊಲೀಸರು ಆಕೆಯ ಮನೆ ಮೇಲೆ ಮುರಕೊಂಡು ಬೀಳತೊಡಗಿದರು.

ಬೌದ್ಧಿಕತೆಯ ಗೂಡಾಗಿತ್ತು ಆಸಿಯಾಳ ಕುಟುಂಬ. ಆದರೆ ಒಬ್ಬರೆಡೆಗೆ ನಿಷ್ಠೆ ಎಂಬುದಿರಲಿಲ್ಲಘಿ. ಆಸಿಯಾಳ ದೊಡ್ಡಣ್ಣ ಡಾ.ಸಯೀದ್‌ ಇನಾಯತುಲ್ಲಾ ಅಂದ್ರಾಬಿ ಭಾಷಾಶಾಸ್ತ್ರದಲ್ಲಿ ಪಿಎಚ್ಡಿ ಮಾಡಿದ್ದಘಿ. ಧಾರ್ಮಿಕ-ರಾಜಕೀಯ ಸಂಘಟನೆಯಾದ ಮಹಾಝೇ ಇಸ್ಲಾಮಿ ಅಧ್ಯಕ್ಷನಾಗಿದ್ದ. ನಂತರ ಅವನನ್ನು ಲಂಡನ್‌ಗೆ ಗಡಿಪಾರು ಮಾಡಲಾಯಿತು. ಆಸಿಯಾಳ ಹಿರಿಯ ಬಾವಾ ಪಾಕಿಸ್ತಾನದಲ್ಲಿ ವೈದ್ಯನಾಗಿದ್ದ. ಆಕೆಯ ಕಿರಿಯ ತಮ್ಮ ಪಾಕಿಸ್ತಾನದಲ್ಲಿ ಪ್ರತ್ಯೇಕತಾವಾದಿಗಳಿಗೆ ಸಹಾಯ ಮಾಡುತ್ತಿದ್ದ.

ಆಸಿಯಾಳ ಎರಡನೇ ಬಾವಾ ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌. ಮತ್ತೊಬ್ಬ ಅಣ್ಣ ಇಂಜಿನೀರ್‌, ಶ್ರೀನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಎಚ್‌ಓಡಿ. ಆಸಿಯಾಳ ಅಣ್ಣಂದಿರು ಪ್ರತ್ಯೇಕತಾವಾದಿಗಳಾಗಿದ್ದರೂ ಕೂಡ ಆಕೆಯನ್ನು ಅದರಿಂದ ದೂರವೇ ಇರಿಸಲಾಗಿತ್ತು. ಆದರೆ ಅವಳು ಸುಮ್ಮನೆ ಕೂರಲಿಲ್ಲ. ಮುಜಾಹಿದೀನ್‌ಗಳ ‘ಹೀರೋಯಿಸಂ’ಗೆ ಆಕರ್ಷಿತಳಾಗಿದ್ದಳು.

ಇಸ್ಲಾಂ ಮೌಲ್ಯಗಳನ್ನು ಎತ್ತಿಹಿಡಿಯುವ ಜಿಹಾದಿಗಳಿಗೆ ಸ್ವರ್ಗ ನಿಶ್ಚಿತ ಅಂತ ನಂಬಿದ್ದಳು. ಪ್ರವಾದಿ ಮೊಹಮ್ಮದನ ಬೋಧನೆಯನುಸಾರ ಈ ಪ್ರಪಂಚ ದಲ್ಲಿ ಸೈತಾನನನ್ನು ನಿರ್ಮೂಲನೆ ಮಾಡಲು ಜಿಹಾದ್‌ ಅತ್ಯಗತ್ಯ ಅಂತ ಪ್ರಬಲವಾಗಿ ನಂಬಿದ್ದಳು. ಇಡೀ ಮಾನವ ಕುಲವೇ ಇಸ್ಲಾಂಗೆ ಮತಾಂತರ ಹೊಂದಿದರೆ ಭೂಮಿ ಮೇಲೆ ಶಾಂತಿ ನೆಲೆಸಲು ಸಾಧ್ಯ ಎಂಬ ಸಾಲುಗಳು ಆಕೆಯ ಮನಸ್ಸಿನಲ್ಲಿ ಆಳವಾಗಿ ಬೇರೂರಿಬಿಟ್ಟಿತ್ತು.

1987ರಲ್ಲಿ ಬಸ್ಸುಗಳಲ್ಲಿ ಮಹಿಳೆಯರಿಗೆ ಇಂತಿಷ್ಟುಸೀಟುಗಳನ್ನು ಕಡ್ಡಾಯವಾಗಿ ಮೀಸಲಿಡಬೇಕು ಎಂಬ ಬೇಡಿಕೆ ಹೊತ್ತು ಅಂದಿನ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಬಳಿ ನಿಯೋಗವೊಂದನ್ನು ಆಸಿಯಾ ಕೊಂಡೊಯ್ದಳು. ಆತ ಬೇಡಿಕೆಗೆ ಒಪ್ಪುವುದಿರಲಿ, ಅಸಲು ಕೇಳಿಸಿಕೊಳ್ಳುವುದಕ್ಕೂ ತಯಾರಿರಲಿಲ್ಲ.

ತುಂಬಿದ ಬಸ್ಸಿನಲ್ಲಿ ಮಹಿಳೆಯರಿಗೆ ಆಗುತ್ತಿದ್ದ ಕಿರುಕುಳಗಳನ್ನು ಸಹ ಕೇಳಿಸಿಕೊಳ್ಳಲು ಆತ ತಯಾರಿರಲಿಲ್ಲಘಿ. ಇಸ್ಲಾಂ ಹೆಸರಿನಲ್ಲಿ ಭಾರತ ವಿರೋಧಿ ಕೆಲಸ ಮಾಡುತ್ತಿರುವೆ, ದುಖ್ತರನ್‌-ಎ-ಮಿಲ್ಲತ್‌ ದೇಶವಿರೋಧಿ ಸಂಘಟನೆ ಅಂತ ಆತ ಆರೋಪಿಸಿದ.

ಮತ್ತೊಮ್ಮೆ ಆಸಿಯಾ ಶ್ರೀನಗರದ ದೂರದರ್ಶನ ಕೇಂದ್ರಕ್ಕೆ ಹೋದಳು. ಹಿಂದಿ ಸಿನೆಮಾ ಮತ್ತು ಚಿತ್ರಹಾರ್‌ ಕಾರ್ಯಕ್ರಮ ಪ್ರಸಾರವನ್ನು ನಿಲ್ಲಿಸಬೇಕು, ಅದರಲ್ಲಿ ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ತೋರಿಸಲಾಗುತ್ತಿದೆ.

ಜಾಹೀರಾತುಗಳಲ್ಲಿ ಹೆಣ್ಮಕ್ಕಳನ್ನು ಶೋಕಿಯ ಬೊಂಬೆಗಳಂತೆ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ, ಫ್ಯಾಷನ್‌ ವಸ್ತುಗಳನ್ನೆಲ್ಲಾ ಬ್ಯಾನ್‌ ಮಾಡಬೇಕು ಅಂತ ಕೂಗಾಡತೊಡಗಿದಳು. ಇದು ಪ್ರಸಾರ ಆಗುತ್ತಿರುವುದು ದಿಲ್ಲಿಯಿಂದ ಅಂತ ದೂರದರ್ಶನ ಕೇಂದ್ರದ ಅಧಿಕಾರಿ ಹೇಳಿದರೂ ಈಕೆ ಕೇಳಲಿಲ್ಲ. 

ದೂರದರ್ಶನ ಕೇಂದ್ರದ ಅಧಿಕಾರಿಯ ಟೇಬಲ್‌ ಮೇಲಿದ್ದ ಟೀ ಕಪ್ಪನ್ನು ತೆಗೆದುಕೊಳ್ಳಲು ಆಸಿಯಾ ತನ್ನ ಕೈಯನ್ನು ಮುಂದಕ್ಕೆ ಚಾಚಿದಳು. ಆಕೆಯ ಉಗುರು ಗಳು ಕ್ಲೀನ್‌ ಆಗಿ ಶೇಪ್‌ ಆಗಿದ್ದವು. ಫೈನ್‌ ಆಗಿ ನೇಲ್‌ ಪಾಲಿಷ್‌ ಹಾಕಿದ್ದಳು. ಇದನ್ನು ಆ ಅಧಿಕಾರಿ ನೋಡಿಬಿಟ್ಟ. ಮರುದಿನದಿಂದಲೇ ಆಸಿಯಾ ನೇಲ್‌ ಪಾಲಿಷ್‌, ಕಿವಿಗೆ ರಿಂಗ್‌ ಹಾಕುವುದನ್ನು ಬಿಟ್ಟುಬಿಟ್ಟಳು.

ಕೆಲ ದಿನಗಳ ಬಳಿಕ ಶ್ರೀನಗರದ ಲಾಲ್‌ಚೌಕ್‌ನಲ್ಲಿ ಸುಮಾರು ಏಳು ಸಾವಿರ ಮಹಿಳೆಯರನ್ನು ಒಗ್ಗೂಡಿಸಿ ಹೋರಾಟದ ರಾರ‍ಯಲಿಯನ್ನು ಏರ್ಪಡಿಸಿದ್ದಳು. ಪೋಸ್ಟರ್‌ಗಳಲ್ಲಿ, ಟಿವಿ ಜಾಹೀರಾತುಗಳಲ್ಲಿ ಮಹಿಳೆಯರನ್ನು ಪ್ರಚೋದನಾತ್ಮಕವಾಗಿ ಚಿತ್ರಿಸುವುದನ್ನು ರದ್ದುಪಡಿಸಬೇಕು ಎಂಬುದು ಹೋರಾಟದ ಉದ್ದೇಶವಾಗಿತ್ತು.

ಇದಾದ ಕೆಲವೇ ದಿನಗಳಲ್ಲಿ ಆಸಿಯಾಳ ಮನೆ ಮೇಲೆ ಪೊಲೀಸರು ರೇಡ್‌ ಮಾಡಿದರು. ಮಗಳಿಗೆ ಬುದ್ಧಿ ಹೇಳುವಂತೆ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಿದರು. ಪೊಲೀಸರ ರೇಡ್‌ ನಡೆದ ನಂತರ ಆಸಿಯಾ ತನ್ನ ಕುಟುಂಬದೊಂದಿಗೆ 21 ದಿನಗಳ ಕಾಲ ಭೂಗತಳಾಗಿದ್ದಳು.

- ರವಿ ಬೆಳಗೆರೆ 
 

click me!